»   » 20 ರೂಪಾಯಿ ಸಂಭಾವನೆ ಪಡೆಯುತ್ತಿದ್ದ ಹೊನ್ನವಳ್ಳಿ ಕೃಷ್ಣ ಈಗ ಸಾವಿರ ಚಿತ್ರಗಳ ಸರದಾರ

20 ರೂಪಾಯಿ ಸಂಭಾವನೆ ಪಡೆಯುತ್ತಿದ್ದ ಹೊನ್ನವಳ್ಳಿ ಕೃಷ್ಣ ಈಗ ಸಾವಿರ ಚಿತ್ರಗಳ ಸರದಾರ

Posted By:
Subscribe to Filmibeat Kannada

ಜೀವನದಲ್ಲಿ ಒಂದೇ ಒಂದು ಸಿನಿಮಾ ಮಾಡಿದರೆ ಸಾಕು ಎಂಬುದು ಕೆಲವರ ಆಸೆ. ದೊಡ್ಡ ಪರದೆ ಮೇಲೆ ಒಮ್ಮೆ ಕಾಣಿಸಿಕೊಳ್ಳಬೇಕು ಎಂಬುದು ಎಷ್ಟೋ ಜನರ ಬಯಕೆ. ಆದರೆ ಆ ರೀತಿ ಯಾವುದೇ ಆಸೆ ಇಟ್ಟುಕೊಳ್ಳದೆ, ಚಿತ್ರರಂಗಕ್ಕೆ ಕಾಲಿಟ್ಟ ನಟ ಹೊನ್ನವಳ್ಳಿ ಕೃಷ್ಣ ಈಗ ಬರೋಬ್ಬರಿ ಸಾವಿರ ಸಿನಿಮಾ ಮಾಡಿದ್ದಾರೆ.!

ಡಾ.ರಾಜ್ ಕುಮಾರ್ ಸಿನಿಮಾದಿಂದ ಶುರುವಾದ ಅವರ ಸಿನಿಮಾ ಯಾನ ವಿನಯ್ ರಾಜ್ ಕುಮಾರ್ ಸಿನಿಮಾಗಳವರೆಗೆ ಮುಂದುವರೆದಿದೆ. 'ಭೂತಯ್ಯನ ಮೊಮ್ಮಗ ಅಯ್ಯು' ಚಿತ್ರ ಹೊನ್ನವಳ್ಳಿ ಕೃಷ್ಣ ಅವರ 1000ನೇ ಚಿತ್ರವಾಗಿದೆ. ಸಾವಿರ ಸಿನಿಮಾಗಳ ಸರದಾರರಾಗಿರುವ ಹಿರಿಯ ಪೋಷಕ ನಟ ಹೊನ್ನವಳ್ಳಿ ಕೃಷ್ಣ ಅವರ ವಿಶೇಷ ಸಂದರ್ಶನದ ಆಯ್ದ ಭಾಗ ಇಲ್ಲಿದೆ ಓದಿ...

ಸಂದರ್ಶನ : ನವೀನ.ಎಂ.ಎಸ್

ಒಂದು ಸಾವಿರ ಸಿನಿಮಾಗಳನ್ನು ಮಾಡಿದ್ದೀರಿ. ಹೇಗಿದೆ ನಿಮ್ಮ ಸಿನಿ ಪಯಣ?

- ಖುಷಿಯಾಗುತ್ತದೆ... ಸಾವಿರ ಸಿನಿಮಾ ಆದರೂ ಈಗಲೂ ಅವಕಾಶಗಳನ್ನು ಕೇಳುತ್ತಿರುತ್ತೇನೆ. ಸಿನಿಮಾ ಮಾಡುತ್ತಿರುತ್ತೇನೆ. ಇಂದಿಗೂ ನಮ್ಮನ್ನು ಗುರುತಿಸಿ ನಿರ್ಮಾಪಕರು ಅವಕಾಶ ನೀಡುತ್ತಿದ್ದಾರೆ. ಜನ ನಮಗೆ ಇಷ್ಟೊಂದು ಪ್ರೀತಿ ತೋರಿಸಿದ್ದಾರೆ ಅವರಿಗೆ ನಾನು ಶರಣು ಎನ್ನುತ್ತೇನೆ.

ಮೊದಲ ಅವಕಾಶ.. ನಿಮ್ಮ ಮೊದಲ ಸಿನಿಮಾದ ಬಗ್ಗೆ ಹೇಳಿ...

- 'ನ್ಯಾಯವೇ ದೇವರು' ನನ್ನ ಮೊದಲ ಸಿನಿಮಾ. ಡಾ.ರಾಜ್ ಕುಮಾರ್ ಅಣ್ಣ, ಮತ್ತು ಆರತಿ ಅವರು ಚಿತ್ರದಲ್ಲಿದ್ದರು. ಸಿದ್ಧಲಿಂಗಯ್ಯ ಚಿತ್ರದ ನಿರ್ದೇಶಕರಾಗಿದ್ದರು. ಅಣ್ಣಾವ್ರನ್ನು ನೋಡಬೇಕು ಎಂದು ಹಳ್ಳಿಯಿಂದ ಬೆಂಗಳೂರಿಗೆ ಬಂದೆ. ಅವರು ಬೆಂಗಳೂರಿನಲ್ಲಿ ಇಲ್ಲ, ಮದ್ರಾಸ್ ನಲ್ಲಿ ಇದ್ದಾರೆ ಅಂತ ಗೊತ್ತಾಗಿ ಅಲ್ಲಿಗೆ ಹೋದೆ. ನಂತರ ಅಲ್ಲಿ ಅಣ್ಣಾವ್ರುನ್ನು ಭೇಟಿ ಮಾಡಿ ಅವರ ಪರಿಚಯ ಆದ ಮೇಲೆ ಚಿತ್ರದಲ್ಲಿ ನಟಿಸಿದೆ.

ಹಳ್ಳಿಯಲ್ಲಿ ಹುಟ್ಟಿದ ನಿಮ್ಮಲ್ಲಿ ಸಿನಿಮಾ ಕನಸು ಹುಟ್ಟಿದ್ದು ಹೇಗೆ..?

- ನಮ್ಮ ಊರು ಹೊನ್ನವಳ್ಳಿ, ಅಲ್ಲಿ ಒಂದು ಪತ್ರಿಕೆ ಬರುತ್ತಿತ್ತು. ಅದರಲ್ಲಿ ರಾಜ್ ಕುಮಾರ್ ಸೇರಿದಂತೆ ಸಿನಿಮಾ ನಟರ ಫೋಟೋಗಳು ಇರುತ್ತಿತ್ತು. ಆಗ ರಾಜ್ ಕುಮಾರ್ ನೋಡಬೇಕೆಂದು ದೊಡ್ಡ ಆಸೆ ಇತ್ತು. ಹೋಟೆಲ್ ನಲ್ಲಿ ಕೆಲಸ ಮಾಡಿದ ದುಡ್ಡಿನಿಂದ ಮದ್ರಾಸ್ ಗೆ ಹೋದೆ. ಅಲ್ಲಿಯವರೆಗೂ ನನಗೆ ಮದ್ರಾಸ್ ನಲ್ಲಿ ತಮಿಳು ಮಾತನಾಡುತ್ತಾರೆ ಎನ್ನುವುದು ತಿಳಿದಿರಲಿಲ್ಲ. ಆಗ ಕಷ್ಟ ಪಟ್ಟು ರಾಜ್ ಕುಮಾರ್ ಅವರ ಶೂಟಿಂಗ್ ನಡೆಯುತ್ತಿದ್ದ ಜಾಗ ಹುಡುಕಿದೆ. ಅವರನ್ನು ಮೊದಲು ನಾನು ಅಲ್ಲಿಯೇ ಭೇಟಿ ಆಗಿದ್ದು. ನಂತರ ಆಕಸ್ಮಿಕವಾಗಿ ಚಿತ್ರದಲ್ಲಿ ಸಣ್ಣ ಪಾತ್ರ ಮಾಡಿದೆ.

ನಿಮ್ಮ ಮೊದಲ ಸಂಭಾವನೆ ಎಷ್ಟಿತ್ತು?

- ಆ ದಿನದಲ್ಲಿ ನನ್ನ ಮೊದಲ ಸಂಭಾವನೆ 20 ರೂಪಾಯಿ ಆಗಿತ್ತು.

ಅಣ್ಣಾವ್ರ ಇಡೀ ಕುಟುಂಬದ ಜೊತೆ ನಟಿಸಿರುವ ಖ್ಯಾತಿ ನಿಮ್ಮದು ಆ ಬಗ್ಗೆ ಹೇಳಿ..

- ರಾಜ್ ಕುಮಾರ್ ರಿಂದ ಶುರು ಮಾಡಿ ಶಿವರಾಜ್ ಕುಮಾರ್, ರಾಘವೇಂದ್ರ ರಾಜ್ ಕುಮಾರ್, ಪುನೀತ್ ರಾಜ್ ಕುಮಾರ್ ಮತ್ತು ಅಣ್ಣಾವ್ರ ಮೊಮ್ಮಗ ವಿನಯ್ ಜೊತೆ ಕೂಡ ಸಿನಿಮಾ ಮಾಡಿದ್ದೇನೆ ಅದೇ ನನಗೆ ಖುಷಿ..

ಇಂದಿನ ದಿನದಲ್ಲಿ ಹಳೆಯ ಪೋಷಕ ನಟರಿಗೆ ಸರಿಯಾದ ಅವಕಾಶ ಸಿಗುತ್ತಿಲ್ಲ ಎನಿಸುತ್ತದೆಯಾ?

- ಆ ರೀತಿ ಏನೂ ಇಲ್ಲ... ನಮ್ಮ ಪ್ರಯತ್ನ ನಾವು ಮಾಡಬೇಕು. ಉಳಿದದ್ದು ಭಗವಂತನ ಇಚ್ಛೆ. ಅವಕಾಶ ಇದ್ದಾಗ ಹಿಗ್ಗಬಾರದು. ಅವಕಾಶ ಇಲ್ಲದಾಗ ಕುಗ್ಗಬಾರದು... ಪ್ರಯತ್ನ ಮಾಡುತ್ತಿರಬೇಕು.

ನಿಮ್ಮ ಮರೆಯಲಾಗದ ಸಿನಿಮಾ ಯಾವುದು?

- ಶೃತಿ ಸಿನಿಮಾ... ಈ ಚಿತ್ರವನ್ನು ನಾನು ಮರೆಯುವುದಕ್ಕೆ ಸಾಧ್ಯ ಇಲ್ಲ. ಸಿನಿಮಾದಲ್ಲಿ ನಾಲ್ಕು ಜನ ನಾಯಕರಾಗಿದೆವು. ಆದರೆ ಈಗ, ನಾನು ಹಾಗೂ ಶೃತಿ ಇಬ್ಬರೇ ಇದ್ದೇವೆ.

ಸಿನಿಮಾ ಮತ್ತು ರಂಗಭೂಮಿ ಎರಡರಲ್ಲಿಯೂ ಇರುವ ವ್ಯತ್ಯಾಸ ಏನು?

- ನಾಟಕದಲ್ಲಿ ಒನ್ಸ್ ಮೋರ್... ಸಿನಿಮಾದಲ್ಲಿ ಒನ್ ಮೋರ್.. ಸಿನಿಮಾ ಮತ್ತು ರಂಗಭೂಮಿ ಎರಡೂ ಒಂದೇ ನಾಣ್ಯದ ಎರಡು ಮುಖಗಳು.

ನಿಮ್ಮ ಮಗ ಈಗ ಏನ್ ಮಾಡುತ್ತಿದ್ದಾರೆ?

- ಮಗನಿಗೆ ನಟನೆಗಿಂತ ನಿರ್ದೇಶನ ಇಷ್ಟ. ಈಗ 'ಪಾಂಡುಪುರದ ಪ್ರಚಂಡರು' ಎಂಬ ಸಿನಿಮಾವನ್ನು ನಿರ್ದೇಶನ ಮಾಡುತ್ತಿದ್ದಾನೆ.

ಇಂದಿನ ಯುವ ಸಿನಿಮಾ ಮಂದಿಗೆ ಏನು ಹೇಳುತ್ತೀರಾ?

- ಆಗ ರಾಜ್ ಕುಮಾರ್, ವಿಷ್ಣುವರ್ಧನ್, ಶಂಕರ್ ನಾಗ್... ನಾವು ಎಲ್ಲರೂ ಸ್ನೇಹಿತರಾಗಿದ್ದೆವು. ಈಗ ಕೂಡ ಅದೇ ರೀತಿಯಲ್ಲಿ ಎಲ್ಲರೂ ಸ್ನೇಹ ಭಾವನೆಯಿಂದ ಒಟ್ಟಿಗೆ ಇರಬೇಕು.

ನಿಮ್ಮ ಸಿನಿಮಾ ಜರ್ನಿಯಲ್ಲಿ ಸಿಹಿ ಹೆಚ್ಚಿದೆಯೋ ಕಹಿ ಹೆಚ್ಚಿದೆಯೋ?

- ನಾನು ಜೀವನದಲ್ಲಿ ಎಲ್ಲವನ್ನೂ ಸಮನಾಗಿ ನೋಡುತ್ತೇನೆ. ಕಷ್ಟ, ನೋವು, ಸುಖ, ನಗು ಎಲ್ಲವನ್ನು ಹಾಗೆ ಸ್ವೀಕರಿಸುತ್ತೇನೆ.

ಚಿತ್ರರಂಗ ಪೋಷಕ ನಟರನ್ನು ಅವರ ಕೊನೆಯ ದಿನಗಳಲ್ಲಿ ಕೈ ಹಿಡಿಯುವುದಿಲ್ಲ ಎನಿಸುತ್ತದೆಯಾ?

- ಇಲ್ಲ.. ಒಳ್ಳೆಯತನವನ್ನು ಬೆಳೆಸಿಕೊಳ್ಳುವುದು.. ಉಳಿಸಿಕೊಳ್ಳುವುದು.. ಎಲ್ಲ ನಮ್ಮ ಕೈನಲ್ಲಿಯೇ ಇದೆ. ಒಳ್ಳೆಯದಕ್ಕೆ ಕೆಟ್ಟದಕ್ಕೆ ಎರಡಕ್ಕೂ ನಾವೇ ಕಾರಣ ಆಗಿರುತ್ತೇವೆ. ಅದಕ್ಕೆ ನಾವು ಯಾರ ಮೇಲೆಯೂ ಗೂಬೆ ಕೂರಿಸಬಾರದು.

English summary
Kannada Actor Honnavalli Krishna Interview.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X