ಶೂಟಿಂಗ್ ವೇಳೆ ಬಿದ್ದು ಪೃಥ್ವಿರಾಜ್ ಸುಕುಮಾರನ್‌ಗೆ ಗಂಭೀರ ಪೆಟ್ಟು: ಇಂದು ಶಸ್ತ್ರ ಚಿಕಿತ್ಸೆ
ಮಲಯಾಳಂನ 'ವಿಲಾಯತ್ ಬುದ್ಧ್' ಸಿನಿಮಾ ಚಿತ್ರೀಕರಣದ ವೇಳೆ ಅವಘಡ ಸಂಭವಿಸಿದೆ. ಒಂದು ಆಕ್ಷನ್ ಸೀಕ್ವೆನ್ಸ್ ಶೂಟಿಂಗ್ ವೇಳೆ ನಟ ಪೃಥ್ವಿರಾಜ್ ಸುಕುಮಾರನ್ ಗಾಯಗೊಂಡಿದ್ದಾರೆ. ಅವರ ಕಾಲಿಗೆ ಶಸ್ತ್ರ ಚಿಕಿತ್ಸೆ ಮಾಡಬೇಕೆಂದು ವೈದ್ಯರು ಹೇಳಿರುವುದಾಗಿ ವರದಿಯಾಗಿದೆ. ಪೃಥ್ವಿರಾಜ್ ನಟನಾಗಿ ಮಾತ್ರವಲ್ಲದೇ ನಿರ್ದೇಶಕರಾಗಿ ನಿರ್ಮಾಪಕರಾಗಿ ಗುರ್ತಿಸಿಕೊಂಡಿದ್ದಾರೆ. ಪರಭಾಷಾ ಸಿನಿಮಾಗಳಲ್ಲೂ ಕೂಡ ಅವರು ನಟಿಸಿ ಪ್ರೇಕ್ಷಕರ ಮನಗೆದ್ದಿದ್ದಾರೆ.
ಕೇರಳದ ಆರ್‌ಟಿಸಿ ಬಸ್‌ನಲ್ಲಿ ಚಿತ್ರದ ಅದ್ಧೂರಿ ಆಕ್ಷನ್ ಸೀಕ್ವೆನ್ಸ್ ಚಿತ್ರೀಕರಣ ನಡೀತಿತ್ತು. ಈ ವೇಳೆ ಪೃಥ್ವಿರಾಜ್ ಬಸ್‌ನಿಂದ ಜಾರಿ ಬಿದಿದ್ದಾರೆ. ಮರಯೂರು ಬಸ್ ನಿಲ್ದಾಣದಲ್ಲಿ ಅಪಘಾತ ಸಂಭವಿಸಿದೆ. ತಕ್ಷಣ ಪೃಥ್ವಿರಾಜ್ ಅವರನ್ನು ಕೊಚ್ಚಿಯ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಪರೀಕ್ಷೆ ನಡೆಸಿದ ವೈದ್ಯರು ಶಸ್ತ್ರಚಿಕಿತ್ಸೆಗೆ ಸೂಚಿಸಿದ್ದಾರೆ. ಇಂದು(ಜೂನ್ 26) ಪೃಥ್ವಿರಾಜ್ ಕಾಲಿಗೆ ಶಸ್ತ್ರ ಚಿಕಿತ್ಸೆ ಮಾಡಿಸಿಕೊಳ್ಳಲಿದ್ದಾರೆ. ಮೂರು ತಿಂಗಳು ಬೆಡ್ ರೆಸ್ಟ್ ತೆಗೆದುಕೊಳ್ಳಬೇಕಾಗುತ್ತದೆ ಎಂದು ಗೊತ್ತಾಗಿದೆ. ಗಾಯಗೊಂಡಿರುವ ಪೃಥ್ವಿರಾಜ್ ಅಭಿಮಾನಿಗಳು ಶೀಘ್ರ ಗುಣಮುಖರಾಗಲಿ ಎಂದು ಪ್ರಾರ್ಥಿಸುತ್ತಿದ್ದಾರೆ.

ಪೃಥ್ವಿರಾಜ್ ಸುಕುಮಾರನ್‌ಗೆ ಹೊಂಬಾಳೆ ಫಿಲ್ಮ್ಸ್ ಸಂಸ್ಥೆ ಜೊತೆ ಆತ್ಮೀಯ ಒಡನಾಟವಿದೆ. 'KGF', 'ಕಾಂತಾರ', 'ಧೂಮಮ್' ಸಿನಿಮಾಗಳನ್ನು ಕೇರಳದಲ್ಲಿ ಪೃಥ್ವಿರಾಜ್ ವಿತರಣೆ ಮಾಡಿದ್ದರು. ಸದ್ಯ ಹೊಂಬಾಳೆ ಸಂಸ್ಥೆ ನಿರ್ಮಾಣದ 'ಸಲಾರ್' ಹಾಗೂ 'ಟೈಸನ್' ಸಿನಿಮಾಗಳಲ್ಲಿ ಕೆಲಸ ಮಾಡುತ್ತಿದ್ದಾರೆ. 'ಸಲಾರ್' ಚಿತ್ರದಲ್ಲಿ ಪ್ರಭಾಸ್ ಎದುರು ವಿಲನ್ ಆಗಿ ಅಬ್ಬರಿಸುತ್ತಿದ್ದು 'ಟೈಸನ್' ಚಿತ್ರವನ್ನು ನಿರ್ದೇಶಿಸಿ ನಟಿಸುತ್ತಿದ್ದಾರೆ.
ಸದ್ಯ ಶಸ್ತ್ರ ಚಿಕಿತ್ಸೆ ಬಳಿಕ 3 ತಿಂಗಳ ಕಾಲ ರೆಸ್ಟ್ ಮಾಡುವಂತೆ ವೈದ್ಯರು ಸೂಚಿಸಿರುವುದಾಗಿ ಹೇಳಲಾಗುತ್ತಿದೆ. ಇದರಿಂದ ಪೃಥ್ವಿರಾಜ್ ಒಪ್ಪಿಕೊಂಡಿರುವ ಸಿನಿಮಾಗಳಿಗೆ ಸಮಸ್ಯೆ ಆಗುವ ಸಾಧ್ಯತೆಯಿದೆ. 'ಸಲಾರ್' ಸಿನಿಮಾ ಸೆಪ್ಟೆಂಬರ್ 28ಕ್ಕೆ ತೆರೆಗೆ ಬರಬೇಕಿದೆ. ಈ ಚಿತ್ರದಲ್ಲಿ ಪೃಥ್ವಿರಾಜ್ ಭಾಗದ ಚಿತ್ರೀಕರಣ ಮುಗಿದಿರುವ ಸಾಧ್ಯತೆಯಿದೆ. 'ಬಡೇಮಿಯಾ ಚೋಟೇಮಿಯಾ' ಎನ್ನುವ ಹಿಂದಿ ಚಿತ್ರದಲ್ಲೂ ನಟಿಸ್ತಿದ್ದಾರೆ.
More from Filmibeat