»   » ಖುಷ್ಬು ಸಹೋದರನ ಚೊಚ್ಚಲ ಕಾಣಿಕೆ 'ಜನನಿ'

ಖುಷ್ಬು ಸಹೋದರನ ಚೊಚ್ಚಲ ಕಾಣಿಕೆ 'ಜನನಿ'

Posted By:
Subscribe to Filmibeat Kannada

ಹಲವು ವರ್ಷಗಳ ನಂತರ 'ಜನನಿ' ಚಿತ್ರದ ಧ್ವನಿಸುರುಳಿಗಳು ಶನಿವಾರ ಬಿಡುಗಡೆ ಭಾಗ್ಯ ಕಂಡಿವೆ. ಹಣಕಾಸಿನ ಕೊರತೆಯಿಂದ ಧ್ವನಿಸುರುಳಿ ತಡವಾಗಿ ಬಿಡುಗಡೆಯಾಗುತ್ತಿದೆ ಎಂಬುದನ್ನು ಚಿತ್ರದ ನಾಯಕ ಕಮ್ ಖುಷ್ಬು ಸಹೋದರ ಶಿವ ಅಲಿಯಾಸ್ ಅಬ್ದುಲ್ಲಾ ತಿಳಿಸಿದರು. ಅಂದಹಾಗೆ 'ಜನನಿ' ಅಬ್ದುಲ್ಲಾ ನಟಿಸುತ್ತಿರುವ ಚೊಚ್ಚಲ ಚಿತ್ರ.

2003ರಲ್ಲಿ 'ಜನನಿ' ಚಿತ್ರಕ್ಕೆ ನಟಿ ಖುಷ್ಬು ಚಾಲನೆ ನೀಡಿದ್ದರು. ಧ್ವನಿಸುರುಳಿ ಬಿಡುಗಡೆ ಕಾರ್ಯಕ್ರಮಕ್ಕೂ ಅಷ್ಟೇ ಒಂದೂವರೆ ಗಂಟೆ ತಡವಾಗಿ ಆಗಮಿಸಿದರು ಖುಷ್ಬು. ತನ್ನ ಚೊಚ್ಚಲ ಚಿತ್ರಕ್ಕೆ ಅಬ್ದುಲ್ಲಾ ಕನ್ನಡ ಚಿತ್ರವನ್ನು ಆಯ್ಕೆ ಮಾಡಿಕೊಂಡ ಬಗ್ಗೆ ಖುಷ್ಬು ಖುಷಿಯಾಗಿದ್ದರು. ಜನನಿ ನನ್ನ ಹೃದಯಕ್ಕೆ ಹತ್ತಿರವಾದ ಚಿತ್ರ. 'ಜನನಿ' ಚಿತ್ರ ಗೆದ್ದ ಬಳಿಕ ಆ ಸಂಭ್ರಮವನ್ನು ಹಂಚಿಕೊಳ್ಳಲು ಮತ್ತೆ ನಿಮ್ಮೊಂದಿಗೆ ನಾನಿರುತ್ತೇನೆ ಎಂದು ಖುಷ್ಬು ಆಶಾಭಾವ ವ್ಯಕ್ತಪಡಿಸಿದರು.

ಚಿತ್ರಕತೆ ಅದ್ಭುತವಾಗಿದೆ. 'ಜನನಿ' ಚಿತ್ರ ಇಂದಿಗೂ ಪ್ರಸ್ತುತ. ನಾನು ಉತ್ತಮ ನಟನಲ್ಲದಿದ್ದರೂ ಖಂಡಿತಾ ಕೆಟ್ಟ ನಟನಲ್ಲ ಎಂದು 'ಜನನಿ' ಕುರಿತು ಅಬ್ದುಲ್ಲಾ ಒಂದೆರಡು ಮಾತುಗಳನ್ನು ಹೇಳಿದರು. ಈ ಚಿತ್ರಕ್ಕೆ ಆಕ್ಷನ್, ಕಟ್ ಹೇಳುತ್ತಿರುವವರು ದಿವಂಗತ ನಿರ್ಮಾಪಕ ಚಂದುಲಾನ್ ಜೈನ್ ಅವರ ಮಗ ರಾಜಕುಮಾರ್.

ರಾಜಕುಮಾರ್ ನಿರ್ದೇಶಿಸುತ್ತಿರುವ ನಾಲ್ಕನೆಯ ಇದಾಗಿದೆ. ಈ ಹಿಂದೆ ಅವರು ಸಂಗ್ರಾಮ, ಅಭಿಜಿತ್ ಮತ್ತು ಯುದ್ಧಕಾಂಡ ಚಿತ್ರಗಳನ್ನು ನಿರ್ದೇಶಿಸಿದ್ದರು. ಚಿತ್ರ ಬಿಡುಗಡೆಯಾಗುತ್ತಿರುವ ಬಗ್ಗೆ ನಿರ್ದೇಶಕರ ಮುಖದಲ್ಲಿ ಸಮಾಧಾನವಿತ್ತು. ಕೇವಲ ರು.68 ಲಕ್ಷದಲ್ಲಿ ಚಿತ್ರ ಸಿದ್ಧವಾಗಿದೆ ಎಂಬ ಅಂಶವನ್ನು ಅವರು ಹೇಳಿದರು. ಸೆನ್ಸಾರ್ ಮಂಡಳಿ ಚಿತ್ರಕ್ಕೆ ಯು/ಎ ಪ್ರಮಾಣಪತ್ರವನ್ನು ನೀಡಿದೆ.

ವಿಭಾರಾಣಿ ಚಿತ್ರದ ನಾಯಕಿ. ನಟಿ ಜಯಸುಧಾ, ಪ್ರಕಾಶ್ ರೈ ಹಾಗೂ ಖುಷ್ಬು ಸಹ ಚಿತ್ರದ ತಾರಾಗಣದಲ್ಲಿದ್ದಾರೆ. ಧ್ವನಿಸುರುಳಿಯನ್ನು ಲಹರಿ ಆಡಿಯೋ ಕಂಪನಿ ಹೊರತಂದಿದೆ. ಚಿತ್ರಕ್ಕೆ ಬಂಡವಾಳ ಹೂಡಿದವರು ಬಿ ಎನ್ ಗಂಗಾಧರ್.

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada