»   »  ರಾಕ್ ಪ್ರಿಯರೇ ಸ್ವರಾತ್ಮ ಅಲ್ಬಂ ಕೇಳಿ: ಮನೋಮೂರ್ತಿ

ರಾಕ್ ಪ್ರಿಯರೇ ಸ್ವರಾತ್ಮ ಅಲ್ಬಂ ಕೇಳಿ: ಮನೋಮೂರ್ತಿ

By: *ಮಲೆನಾಡಿಗ
Subscribe to Filmibeat Kannada
ಬೆಂಗಳೂರು ಮೂಲದ ಸ್ವರಾತ್ಮ ರಾಕ್/ಫ್ಯೂಷನ್ ಬ್ಯಾಂಡ್ ತನ್ನ ಮೊತ್ತಮೊದಲ ಮ್ಯೂಸಿಕ್ ಅಲ್ಬಂ ಅನ್ನು ಹೊರತಂದಿದೆ. ಸೋಮವಾರ ನಗರದ ಪ್ಯಾಲೇಸ್ ಮೈದಾನದ ಬಳಿಯ ಒಪಾಸ್ ನಲ್ಲಿ ನಡೆದ ವರ್ಣರಂಜಿತ ಕಾರ್ಯಾಕ್ರಮದಲ್ಲಿ ಸ್ವರಾತ್ಮ ತಂಡದ ಅಲ್ಬಂ ಅನ್ನು ಅನಾವರಣಗೊಳಿದವರು ಮುಂಗಾರು ಮಳೆ ಖ್ಯಾತಿಯ ಸಂಗೀತ ನಿರ್ದೇಶಕ ಮನೋಮೂರ್ತಿ. ತಂಡಕ್ಕೆ ಶುಭ ಹಾರೈಸಲು ಮತ್ತೊಬ್ಬ ಜನಪ್ರಿಯ ಸಂಗೀತ ನಿರ್ದೇಶಕ ಗುರುಕಿರಣ್ ಆಗಮಿಸಿದ್ದರು.

ಸ್ವರಾತ್ಮ ವಿಡಿಯೋ ಆಲ್ಬಂ ಕೂಡ ಹೊರ ತರುವ ಚಿಂತನೆಯಲ್ಲಿದೆ. ಈ ಹೊಚ್ಚ ಹೊಸ ಧ್ವನಿಸುರಳಿಯಲ್ಲಿ 8 ಹಾಡುಗಳಿವೆ. ಇದರಲ್ಲಿ 7 ಹಿಂದಿ ಹಾಗೂ 1 ಕನ್ನಡ ಹಾಡಿದೆ. ಎಲ್ಲವೂ ಒರಿಜಿನಲ್ ಯಾವುದೇ ಹಳೆ ಹಾಡಿನ ರಿಮಿಕ್ಸ್ ಮಾಡಿಲ್ಲ. ಬೆಂಗಳೂರಿನಲ್ಲಿ ಧ್ವನಿಸುರಳಿ ಅನಾವರಣಗೊಂಡ ನಂತರ, ಪ್ರಚಾರಕ್ಕಾಗಿ ಪುಣೆ(ಜ.7), ಮುಂಬೈ(ಜ.8) ಮತ್ತು ದೆಹಲಿ(ಜ.10)ಗೆ ಹೊರಡುತ್ತಿದ್ದೇವೆ. ರೇಡಿಯೋ ಸಿಟಿ ಸಹಕಾರ ಅಮೂಲ್ಯವಾದುದು. ಇಎಂಐ ವರ್ಜಿನ್ ರೆಕಾರ್ಡ್ ಅವರೊಡನೆ ಒಪ್ಪಂದದಂತೆ ಧ್ವನಿಸುರಳಿ ಹೊರಬಂದಿದೆ ಎನ್ನುತ್ತಾರೆ ತಂಡದ ಬೇಸ್ ಗಿಟಾರಿಸ್ಟ್ ಹಾಗೂ ವಕ್ತಾರ ಜಿಷ್ಣು ದಾಸ್ ಗುಪ್ತ

ತಂಡಕ್ಕೆ ಶುಭ ಹಾರೈಸಿದ ಮನೋಮೂರ್ತಿ ಅವರು ಮಾತನಾಡುತ್ತಾ, ಹೊಸ ಹೊಸ ಪ್ರತಿಭೆಗಳು ಬರಬೇಕು. ಸಂಗೀತ ಯಾವತ್ತೂ ಹೊಸತನವನ್ನು ಬಯಸುತ್ತದೆ. ಬೆಂಗಳೂರಿಗರು ಎಲ್ಲಾ ಬಗೆಯ ಸಂಗೀತವನ್ನು ಆಸ್ವಾದಿಸುತ್ತಾರೆ ಎಂಬುದರಲ್ಲಿ ಸಂಶಯವಿಲ್ಲ. ಸ್ವರಾತ್ಮ ತಂಡ ಇನ್ನೂ ಹೆಚ್ಚಿನ ಯಶಸ್ಸು ಕಾಣಲಿ ಎಂದರು.

swarathma music band
ಸ್ವರಾತ್ಮ- ಕಿರು ಪರಿಚಯ:
ರೇಡಿಯೋ ಸಿಟಿ ಲೈವ್ 2006 ನ ಸ್ಪರ್ಧೆಯಲ್ಲಿ ವಿಜೇತರಾಗಿ ಬೆಂಗಳೂರು ಮೂಲದ ಸ್ವರಾತ್ಮ ತಂಡಬೆಳಕಿಗೆ ಬಂದಿತು. " ಈ ಭೂಮಿ" ಎಂದು ಹಾಡಿ ಕನ್ನಡ ರಾಕ್ ಮ್ಯೂಸಿಕ್ ಗೆ ನಾಂದಿ ಹಾಡಿದರು. ಮೈಸೂರಿನಲ್ಲಿ 2002ರಲ್ಲೇ ಪ್ರಾರಂಭವಾದರೂ ಬೆಳಕಿಗೆ ಬಂದದ್ದು ತಡವಾಗಿ. ಆದರೂ ಮೊಟ್ಟಮೊದಲ ದೇಸಿ ರಾಕ್/ಫ್ಯೂಷನ್ ಬ್ಯಾಂಡ್ ಇದೇ ಎನ್ನಬಹುದು. ಗಾಯಕ/ಗಿಟಾರಿಸ್ಟ್ ವಾಸು ದೀಕ್ಷಿತ್ ಹಾಗೂ ಅಭಿನಾಥ್ ಕುಮಾರ್ ಬ್ಯಾಂಡ್ ಹುಟ್ಟು ಹಾಕಿದ ಮೂಲ ಪುರುಷರು.ನಂತರಪವನ್ ಕುಮಾರ್ (ಹಿನ್ನೆಲೆ ಗಾಯನ), ಮಾಂಟ್ರೆ ಮ್ಯಾನುಯಲ್( ಡ್ರಮ್ಸ್), ವರುಣ್ (ಮುಖ್ಯ ಗಿಟಾರಿಸ್ಟ್) , ಸಂಜೀವ್ ನಾಯಕ್( ಪಿಟೀಲು) ಹಾಗೂ ಜಿಷ್ಣು ದಾಸ್ ಗುಪ್ತ( ಬೇಸ್ ಗಿಟಾರ್ ಮತ್ತು ಹಿನ್ನೆಲೆ ಗಾಯನ) ತಂಡವನ್ನು ಸೇರಿಕೊಂಡರು.

ಮೈಸೂರಿನ ಯುವದಸರಾ-07ದಲ್ಲಿ ಖ್ಯಾತ ಗಾಯಕಿ ಉಷಾ ಉತ್ತುಪ್ ಹಾಗೂ ಸುನೀಧಿ ಚೌಹನ್ ಅವರೊಡನೆ ರಸಸಂಜೆ ನೀಡಿ ಸ್ವರಾತ್ಮ ರಂಜಿಸಿದೆ. ಜಾಕ್ ಡೇನಿಯಲ್ಸ್ ಇಂಡಿಯನ್ ರಾಕ್ ಬ್ಯಾಂಡ್ ಪ್ರಶಸ್ತಿಯ 8 ವಿಭಾಗಗಳಲ್ಲಿ 3 ವಿಭಾಗಗಳಲ್ಲಿ ನಾಮಾಂಕಿತವಾಗಿದ್ದು ಸಾಧನೆ. ಅದರಲ್ಲೂ ಕನ್ನಡದ ಹಾಡೊಂದು ಆ ಮಟ್ಟಕ್ಕೇರಿದ್ದು ಅದೇ ಮೊದಲು ಎನ್ನಲಾಗಿದೆ. ಉಳಿದಂತೆ ಬೆಂಗಳೂರಿನ ನಾನಾ ಕಡೆ ಸೇರಿದಂತೆ ದೆಹಲಿಯಲ್ಲೂ ರಸಸಂಜೆ ಕಾರ್ಯಕ್ರಮ ನೀಡಿಯಾಗಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲೂ ಸುದ್ದಿ ಮಾಡಿರುವ ಸ್ವರಾತ್ಮ ಸಿಂಗಪುರದಲ್ಲಿ ನಡೆದ ಪ್ಯಾನ್ ಏಷ್ಯ ಪ್ರತಿಭಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಬಂದಿದೆ. ಬಿಟ್ರಿಷ್ ಕೌನ್ಸಿಲ್ ಪ್ರಾಯೋಜಕತ್ವದ ಆಲ್ಬಂನಲ್ಲೂ ತನ್ನ ಸಂಗೀತದ ರಸಧಾರೆ ಹರಿಸಿದೆ. ಇದರ ರೆಕಾರ್ಡಿಂಗ್ ಯಶ್ ರಾಜ್ ಸ್ಟುಡಿಯೋದಲ್ಲಿ ನಡೆದಿದ್ದು ವಿಶೇಷ.

ಸ್ವರಾತ್ಮ ಅಪ್ಪಟ ಹಿಂದಿ ರಾಕ್ ಬ್ಯಾಂಡ್ ಆದರೂ ವಾಸು ದೀಕ್ಷಿತ್ ಅವರು ಬರೆವ ಹಾಡುಗಳಲ್ಲಿ ಕನ್ನಡದವು ಹೆಚ್ಚಿನ ಸಂಖ್ಯೆಯಲ್ಲಿರಲಿ. ಸಂಗೀತ ಲಹರಿ ಹೀಗೆ ಮುಂದುವರೆಯಲಿ ಎಂದು ಹಾರೈಸೋಣ

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada