'ಬಂದ ನೋಡು ಪೈಲ್ವಾನ್' : ಚಿತ್ರದ ಮೊದಲ ಹಾಡು ರಿಲೀಸ್
ಕಿಚ್ಚ ಸುದೀಪ್ ಅಭಿನಯದ ಬಹುನಿರೀಕ್ಷೆಯ 'ಪೈಲ್ವಾನ್' ಚಿತ್ರದ ಮೊದಲ ಹಾಡು ರಿಲೀಸ್ ಆಗಿದೆ. ಈಗಾಗಲೆ ಟೀಸರ್ ಮತ್ತು ಪೋಸ್ಟರ್ ಗಳ ಮೂಲಕ ಸದ್ದು ಮಾಡುತ್ತಿದ್ದ 'ಪೈಲ್ವಾನ್' ಈಗ ಟೈಟಲ್ ಸಾಂಗ್ ಮೂಲಕ ಅಭಿಮಾನಿಗಳ ಮುಂದೆ ಬಂದಿದೆ.
'ಪೈಲ್ವಾನ್ ತೋಳು ನೋಡು ಉಕ್ಕು, ಒಂದೇ ಏಟು ಸಾಕು, ದೇವ್ರೆ ನಿಂಗೆ ದಿಕ್ಕು, ಬಂದ ನೋಡು ಪೈಲ್ವಾನ್' ಎನ್ನುವ ಸಾಲುಗಳಿಂದ ಪ್ರಾರಂಭವಾಗುವ ಈ ಹಾಡು ಅಭಿಮಾನಿಗಳನ್ನು ಹುಚ್ಚೆದ್ದು ಕುಣಿಯುವಂತೆ ಮಾಡಿದೆ. ಕುಸ್ತಿ ಅಖಾಡಕ್ಕೆ ಕಿಚ್ಚನ ಜಬರ್ದಸ್ತ್ ಎಂಟ್ರಿಗೆ ನೋಡುಗರು ಬೆರಗಾಗಿದ್ದಾರೆ.
ಹುರಿಗೊಳಿಸಿದ ಕಟ್ಟುಮಸ್ತಾದ ದೇಹ, ಉಕ್ಕಿನ ತೋಳುಗಳನ್ನು ನೋಡುತ್ತಿದ್ರೆ ನಿಜಕ್ಕು ಎದುರಾಳಿಗಳು ನೆಲಸಮ ಆಗುವುದ್ರಲ್ಲಿ ಯಾವುದೆ ಅನುಮಾನವಿಲ್ಲ. 'ಪೈಲ್ವಾನ್' ಗೆಟಪ್ ನ ಕಿಚ್ಚನ ಲುಕ್ ಅಭಿಮಾನಿಗಳಿಗೆ ಕಿಕ್ ಏರಿಸುತ್ತಿದೆ. ಮೊದಲ ಬಾರಿಗೆ ಸುದೀಪ್ ಈ ಪರಿ ವರ್ಕೌಟ್ ಮಾಡಿ ಕುಸ್ತಿ ಅಖಾಡದಲ್ಲಿ ಕಾಣಿಸಿಕೊಂಡಿದ್ದಾರೆ. ಮಾಣಿಕ್ಯನ ಶ್ರಮ ಇಲ್ಲಿ ಎದ್ದು ಕಾಣುತ್ತಿದೆ.

ಅಂದ್ಹಾಗೆ ಈ ಅದ್ಧೂರಿ ಹಾಡಿಗೆ ಅರ್ಜುನ್ ಜನ್ಯ ಸಂಗೀತ ಸಂಯೋಜನೆ ಮಾಡಿದ್ದಾರೆ. ವ್ಯಾಸ ರಾಜ್ ಕಂಠದಲ್ಲಿ ಮೂಡಿ ಬಂದಿರುವ ಈ ಹಾಡಿನ ಸಾಹಿತ್ಯವನ್ನು ವಿ ನಾಗೇಂದ್ರ ಪ್ರಸಾದ್ ರಚಿಸಿದ್ದಾರೆ. ಕೃಷ್ಣ ಸಾರಥ್ಯದಲ್ಲಿ ಮೂಡಿ ಬಂದಿರುವ 'ಪೈಲ್ವಾನ್' ಸಿನಿಮಾದ ಎಲ್ಲಾ ಹಾಡುಗಳು ಇದೇ ತಿಂಗಳು 27ಕ್ಕೆ ರಿಲೀಸ್ ಆಗಲಿದೆ. ದಿನದಿಂದ ದಿನಕ್ಕೆ ಕುತೂಹಲ ಹೆಚ್ಚಿಸುತ್ತಲೆ ಇರುವ 'ಪೈಲ್ವಾನ್' ಆಗಸ್ಟ್ ಕೊನೆಯಲ್ಲಿ ತೆರೆಗೆ ಬರುವ ಸಾಧ್ಯತೆ ಇದೆ.


Click it and Unblock the Notifications











