»   » ಕಡ್ಡಿಪುಡಿ ಆಡಿಯೋ ವಿಮರ್ಶೆ: ಮನದಲಿ ಹಾಡುಗಳು ಅಮರ

ಕಡ್ಡಿಪುಡಿ ಆಡಿಯೋ ವಿಮರ್ಶೆ: ಮನದಲಿ ಹಾಡುಗಳು ಅಮರ

By: ಪ್ರಶಾಂತ್ ಇಗ್ನೇಷಿಯಸ್
Subscribe to Filmibeat Kannada

ಸಾಮಾನ್ಯ ಗೀತೆಗಳಿಗಿಂತ ವಿಭಿನ್ನವಾಗಿರುವುದರಿಂದ ಹಾಡುಗಳನ್ನು ಚಿತ್ರ ಪ್ರೇಮಿಗಳು ಹೇಗೆ ಸ್ವೀಕರಿಸುತ್ತಾರೆ ಎಂಬ ಕುತೂಹಲವಿದೆ ಎಂಬರ್ಥದ ಸಾಲುಗಳನ್ನು 'ಕಡ್ಡಿಪುಡಿ' ಚಿತ್ರ ಫೇಸ್ ಬುಕ್ಕಿನಲ್ಲಿ ಹಾಕಿತ್ತು.

ಆಗಲೇ, ಚಿತ್ರದ ಹಾಡುಗಳ ಬಗ್ಗೆ ಕುತೂಹಲ ಮುಗಿಲು ಮುಟ್ಟಿತ್ತು. ಅದೂ ಬುಡುಬುಡುಕೆ ಹಾಡು ಸೂಪರ್ ಹಿಟ್ಟಾಯಿತೋ ಕುತೂಹಲ ಇನ್ನೂ ಹೆಚ್ಚಾಯಿತು. ಈಗ ಆ ಕುತೂಹಲಕ್ಕೆ ತೆರೆಬಿದ್ದಿದೆ. ಹಾಡುಗಳು ನಿಜಕ್ಕೂ ವಿಭಿನ್ನವಾಗಿದೆ.

ಈಗಿನ ಟ್ರೆಂಡಿಗಿಂತ ಭಿನ್ನವಾದ ಹಾಡುಗಳಿಗೆ ಸೂರಿ ಮತ್ತು ಭಟ್ಟರ ಸಹಾಯ ದೊರಕಿದೆ. ಇತ್ತೀಚಿನ ಹರಿಕೃಷ್ಣರ ಹಾಡುಗಳು ಏಕಾನತೆಯಿಂದ ಕೂಡಿವೆ ಎಂಬ ಮಾತುಗಳಿಗೆ ಹರಿಕೃಷ್ಣ ಭರ್ಜರಿಯಾಗಿಯೇ ತಿರುಗೇಟು ನೀಡಿದ್ದಾರೆ.

ಹೆಚ್ಚಾಗಿ ಮಾಸ್ ಸಾಹಿತ್ಯಕ್ಕೆ ಎತ್ತಿದ ಕೈಯಾಗಿದ್ದ ಭಟ್ರು ಕ್ಲಾಸ್ ಸಾಹಿತ್ಯ ಬರೆದು ಮತ್ತೆ ಮಿಂಚಿದ್ದಾರೆ. ಶಿವಣ್ಣ ಚಿತ್ರವೆಂದ ಮೇಲೆ ಅಭಿಮಾನಿಗಳ ನಿರೀಕ್ಷೆ ಸಹಜವೇ. ಇನ್ನು ಸೂರಿ- ಶಿವಣ್ಣ ಜೋಡಿಯೆಂದ ಮೇಲೆ ಆ ನಿರೀಕ್ಷೆಯೇ ಒಂದು ದೊಡ್ಡ ಭಾರ. ಅದನ್ನು ಮೀರಿ ಗೆಲ್ಲುವಂಥ ಹಾಡುಗಳು ಚಿತ್ರದಲ್ಲಿದೆ. ಕೇಳುಗ ಒಪ್ಪಿಕೊಳ್ಳುವುದೊಂದೇ ಬಾಕಿ.

ಕಡ್ಡಿಪುಡಿ ಚಿತ್ರದ ಗ್ಯಾಲರಿ

ಬುಡ್ ಬುಡುಕೆ

ಸಾಹಿತ್ಯ : ಯೋಗರಾಜ್ ಭಟ್
ಹಾಡಿರುವವರು : ಹರಿಕೃಷ್ಣ, ಯೋಗರಾಜ್ ಭಟ್

ಈ ರೀತಿಯ ಒಂದು ಗೀತೆ ಹರಿಕೃಷ್ಣ ಮತ್ತು ಯೋಗರಾಜ್ ಭಟ್ ಅವರಿಂದ ಮಾತ್ರ ಸಾಧ್ಯವೇನೋ. ತುಂಟತನದ ಪರಮಾವಧಿ ಮುಟ್ಟಿರುವ ಭಟ್ರ ಸಾಹಿತ್ಯಕ್ಕೆ ಅಷ್ಟೇ ತುಂಟತನದಿಂದ ಹರಿ ಸಂಗೀತ ಸಂಯೋಜಿಸಿದ್ದಾರೆ. ವಿಭಿನ್ನವಾದ ಸಾಹಿತ್ಯ ಸಂಗೀತ ಈ ಜೋಡಿಯದೇ ಆಗಿರುವುದರಿಂದ ಅವರುಗಳ ಧ್ವನಿಯಿಂದ ಮಾತ್ರವೇ ಈ ಹಾಡಿಗೆ ಜೀವ, ನ್ಯಾಯವೆಂಬಂತೆ ಹಾಡಿದೆ ಹರಿಭಟ್ಟರ ಜೋಡಿ.ಪಕ್ಕಾ ಮಾಸ್ ಎಂಬಂತೆ ಕಂಡರೂ ಎಲ್ಲರಿಗೂ ಈ ಬುಡ್ ಬುಡುಕೆ ಇಷ್ಟವಾಗಬಹುದು. ಸಂಗೀತ, ಸಾಹಿತ್ಯ, ವಾದ್ಯಗಳು, ಉರ್ದು, ವ್ಯಂಗ್ಯ, ಲೋಕಲ್ ಟಚ್, ಧ್ವನಿ ಎಲ್ಲವೂ ಸಕತ್ತಾಗಿಯೇ ಮಿಕ್ಸ್ ಆಗಿರುವುದರಿಂದ ಕೇಳುಗರಿಗೆ ಕಿಕ್ ಕೊಡುವುದರಲ್ಲಿ ಸಂದೇಹವೇ ಇಲ್ಲ. ಕೇಳಿರಿ ಕೇಳಿರಿ ಈ ಬುಡುಬುಡಿಕೆ, ಹರಿ ಭಟ್ಟರ ಬಡಬಡಿಕೆ, ಉರ್ದು ಕನ್ನಡದ ಖಾನಾವಳಿ, ಮಿಸ್ಸೆ ಇಲ್ಲ ನಿಮಗೆ ಕಚಗುಳಿ.

ಸೌಂದರ್ಯ ಸಮರ ಸೋತವನೇ ಅಮರ

ಸಾಹಿತ್ಯ : ಯೋಗರಾಜ್ ಭಟ್
ಹಾಡಿರುವವರು : ಸೋನು ನಿಗಂ


ಸಂಗೀತ ಸಾಹಿತ್ಯ ಮಾಧುರ್ಯದ ಸಮರ, ಕೇಳುಗನ ಮನದಲ್ಲಿ ಹಾಡು ಅಮರ. ಇದು ಈ ಹಾಡಿನ ಎರಡು ಸಾಲಿನ ವಿಮರ್ಶೆ. ಹರಿಯ ಸಂಗೀತದಿಂದ ಇಷ್ಟವಾಗುವ ಈ ಹಾಡನ್ನು ಸೋನು ನಿಗಮ್ ಮನಸ್ಸಿಗೆ ಮತ್ತಷ್ಟು ಹತ್ತಿರವಾಗಿಸುತ್ತಾರೆ. ಇಷ್ಟು ಒಳ್ಳೆಯ ಸಂಗೀತ ಸಿಕ್ಕ ಮೇಲೆ ಒಳ್ಳೆಯ ಸಾಹಿತ್ಯ ಸೃಷ್ಠಿಯಾಗಲು ಮತ್ತೇನು ಬೇಕು? ಭಟ್ಟರ ಮಾಸ್ ಹಾಡುಗಳ ಸಾಹಿತ್ಯದ ಟೀಕೆಗಳಿಗೆ ಇದು ಸವಿ ಉತ್ತರ. ಹಾಡಿನ ಪ್ರಾರಂಭದ ಸಾಲುಗಳೇ ಕೇಳುಗನನ್ನು ಸೆರೆ ಹಿಡಿಯುತ್ತದೆ. ಹಾಡು ಮುಗಿಯುವ ವರೆಗೂ ಆ ಮೋಡಿಯಿಂದ ಬಿಡುಗಡೆ ಸಾಧ್ಯವೇ ಇಲ್ಲ. ಇದು ಖಂಡಿತ.

ಹೆದರಬ್ಯಾಡ್ರಿ ಅಂಥಾ

ಸಾಹಿತ್ಯ : ಜನಪದ
ಹಾಡಿರುವವರು : ಶಬಿನಾ

ಜಾನಪದ ಹಾಡುಗಳು ಸಿನಿಮಾದಲ್ಲಿ ಬಳಕೆಯಾದಾಗ ತನ್ನ ಮೂಲ ರೂಪ, ಸೌಂದರ್ಯ ಹಾಗೂ ಮಣ್ಣಿನ ಸೊಗಡನ್ನು ಕಳೆದುಕೊಳ್ಳುವುದು ಸಾಮಾನ್ಯವಾಗಿ ಕಾಣಸಿಗುವ ಸಂಗತಿ. ಆದರೆ ಇಲ್ಲಿ ಒಳ್ಳೆಯ ಸಂಗೀತ, ಆಲಾಪನೆ ದೊರಕಿರುವುದರಿಂದ ಅದು ತನ್ನತನವನ್ನು ಉಳಿಸಿಕೊಂಡಿದೆ. ಶಬೀನಾರ ಧ್ವನಿ ಸಾಹಿತ್ಯಕ್ಕೆ ಪೂರಕವಾಗಿದೆ.

ಬೇರೆ ಯಾರೋ ಬರೆದಂತಿದೆ

ಸಾಹಿತ್ಯ : ಜಯಂತ್ ಕಾಯ್ಕಿಣಿ
ಹಾಡಿರುವವರು : ವಾಣಿ ಹರಿಕೃಷ್ಣ


‘ಬೆಲ್ಲದ ಹಾಗೆಯೇ ಕಲ್ಲೆದೆ ಕರಗುವ ಬೇಗುದಿ ಇದೇತಕೋ' ಎನ್ನುವಂಥ ಸಾಲುಗಳಿರುವ ವಾಣಿಯವರ ಧ್ವನಿಯ ಈ ಹಾಡಿನ ಬಗ್ಗೆ ಹೇಳಬಹುದಾದ ಒಂದೇ ವಾಕ್ಯ ‘ಆಹ್ಲಾದಕರ'. ವಾಣಿ ಹರಿಕೃಷ್ಣರ ಮುಂಜಾನೆಯ ಸಂಗೀತ ಅಭ್ಯಾಸ ಕೇಳಿಯೇ ಎಷ್ಟೋ ಹಾಡುಗಳಿಗೆ ಸ್ಪೂರ್ತಿ ಪಡೆದ ಬಗ್ಗೆ ಹರಿ ಕೆಲವೊಂದು ಕಡೆ ಹೇಳಿಕೊಂಡಿದ್ದಾರೆ. ಈ ಹಾಡಿಗೂ ಅದೇ ಸ್ಪೂರ್ತಿಯೇನೋ ಎಂಬ ಭಾವ ಮೂಡಿ ಬರುತ್ತದೆ. ನಸುಕಿನ ಮುಂಜಾನೆ ಅಥವಾ ಇಳಿ ಸಂಜೆಯಲ್ಲಿ ಹುಟ್ಟಿಕೊಂಡ ಹಾಡೇನೋ ಎಂಬ ಸಂದೇಹವೂ ಬರುತ್ತದೆ. ಹ್ಯಾಟ್ಸ್ ಹಾಫ್ ಟು ಹರಿ. ಚಿತ್ರಕ್ಕೆ ಬಳಸಿಕೊಂಡ ನಿರ್ದೇಶಕ ಸೂರಿಯವರ ಅಭಿರುಚಿಯೂ ಅಭಿನಂದನಾರ್ಹ. ಜಯಂತ್ ಕಾಯ್ಕಿಣಿ ಸಾಹಿತ್ಯಕ್ಕೆ ಹೇಳಿ ಮಾಡಿಸಿದ ಸಂಗೀತ ಪರಿಸರ ಹಾಡಿಗಿದೆ.

ಜಿಂಕೆ ಬೆದರಿರುವಾಗ

ಸಾಹಿತ್ಯ : ಯೋಗರಾಜ್ ಭಟ್
ಹಾಡಿರುವವರು : ಪ್ರಿಯದರ್ಶಿನಿ


ಆಲ್ಬಮ್‍ನ ಕೊನೆಯಲ್ಲಿ ಬರುವ ಸಣ್ಣ ಬಿಟ್ ಇದು. ಕೆಲವೇ ವಾದ್ಯಗಳ ಬಳಕೆಯಿಂದಾಗಿ ಭಟ್ಟರ ಸಾಹಿತ್ಯಕೆ ಕಳೆ ಬಂದು ಎದ್ದು ಕೇಳುತ್ತದೆ. ಉತ್ತಮವಾದ ಸಂಗೀತ ಸಂಯೋಜನೆಯಿಂದಾಗಿ ಹಾಡು ಕೇಳಲು ಮಧುರವಾಗಿದೆ. ಪ್ರಿಯ ದರ್ಶಿನಿಯವರ ಧ್ವನಿ ಹಾಡಿಗೆ ವಿಭಿನ್ನವಾದ ರೂಪ ನೀಡುತ್ತದೆ. ಇಂಥಹ ಸಣ್ಣ ಬಿಟ್‍ಗಳನ್ನು ಕೊಡುವುದರಲ್ಲಿ ಎತ್ತಿದ ಕೈ ಆಗಿದ್ದ ಹಂಸಲೇಖರ ನೆನಪಾಗುವುದು ಈ ಹಾಡಿನ ಹೆಗ್ಗಳಿಕೆ.

English summary
Duniya Soori and Shivaraj Kumar combination 'Kaddipudi' audio review. Album has five songs.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada