For Quick Alerts
  ALLOW NOTIFICATIONS  
  For Daily Alerts

  ಕನ್ನಡ,ತಮಿಳು ಸಂಬಂಧಕ್ಕೆ ಕಲ್ಲು ಹಾಕಬೇಡಿ:ಕಮಲ್

  By Staff
  |
  ತಮಿಳು ಲಿಪಿಯಲ್ಲಿ ಬರೆದುಕೊಂಡು ಬಂದಿದ್ದಕನ್ನಡ ಭಾಷಣವನ್ನು ಓದುವ ಮೂಲಕ ಬಹುಭಾಷಾ ನಟ ಕಮಲ ಹಾಸನ್ ಅಮೃತ ಮಹೋತ್ಸವದಲ್ಲಿ ಅಚ್ಚರಿ ಮೂಡಿಸಿದರು. ಕನ್ನಡ ವಾಕ್ಚಿತ್ರದ ಅಮೃತ ಮಹೋತ್ಸವಕ್ಕೆ ಗೌರವ ಅತಿಥಿಯಾಗಿ ಆಗಮಿಸಿದ್ದ ಅವರು ಮಾತನಾಡುತ್ತಾ, ಪ್ರೀತಿ ಉಕ್ಕಿ ಬಂದಾಗ ಭಾಷೆ ಅಡ್ಡ ಬರಬಾರದು. ಲಕ್ಷಾಂತರ ಮಂದಿ ನೆರೆದಿರುವ ಈ ಸಮಾರಂಭವೇ ಇದಕ್ಕೆ ಸಾಕ್ಷಿ. ಕನ್ನಡ ಚಿತ್ರರಂಗ ಎಂಬುದು ತಮಿಳು ಚಿತ್ರರಂಗದ ಸಹೋದರಿ ಇದ್ದಂತೆ. ನಾನು ತಮಿಳಿನವ ಅದನ್ನು ಬದಲಾಯಿಸಲು ಸಾಧ್ಯವಿಲ್ಲ. ಸಾಹುಕಾರ್ ಜಾನಕಿ, ಸರೋಜಾದೇವಿ ಅವರು ನಮ್ಮ ಆಸ್ತಿ ಎಂದು ಪರಿಗಣಿಸುವ ತಮಿಳಿಗ ನಾನು ಎಂದು ಅವರು ಎದೆತುಂಬಿ ಮಾತನಾಡಿದರು.

  ಕಲೆ ಬೇರೆ ರಾಜಕೀಯ ಬೇರೆ. ದಯವಿಟ್ಟು ಎರಡನ್ನು ಬೆರೆಸಬೇಡಿ. ಕಲೆಯೆಂಬ ಕೊಳದಲ್ಲಿ ರಾಜಕೀಯ ಬೆರೆಸಿ ಅದನ್ನು ಹೊಲಸು ಮಾಡಿ ಅದರಿಂದ ಲಾಭ ಪಡೆದುಕೊಳ್ಳಲು ಪ್ರಯತ್ನಿಸಬೇಡಿ. ಈ ಮಾತನ್ನು ಹೇಳುವ ಸಲುವಾಗಿ ನಾನು ಈ ಸಮಾರಂಭಕ್ಕೆ ಬಂದಿದ್ದೇನೆ.ಕಲೆಗೆ ಭಾಷೆ, ಜಾತಿ ಅಥವಾ ಪ್ರದೇಶ ಎದುರಾಗಬಾರದು. ನನ್ನ ವೃತ್ತಿಜೀವನದ ಈ ಸುದೀರ್ಘ ಅವಧಿಯಲ್ಲಿ ನಾನು ಎಂದು ಅಭಿಮಾನಿಗಳನ್ನು ಮತ್ತು ಸ್ನೇಹಿತರ ಒಡನಾಟವನ್ನು ಮರೆತಿಲ್ಲ ಎಂದರು.

  ರಾಜಣ್ಣ ನನ್ನ ಮೇಲೆ ಅಪಾರ ಪ್ರೀತಿ ಇಟ್ಟಿದ್ದರು. ಅದೆಷ್ಟೋ ಬಾರಿ ಚಿತ್ರೀಕರಣದ ವೇಳೆ ನನ್ನನ್ನು ಹುಡುಕಿಕೊಂಡು ಸ್ಟುಡಿಯೋಗೆ ಬಂದು ಮಾತನಾಡಿಸುತ್ತಿದ್ದರು. ನನ್ನ ನಟನೆಯ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡುತ್ತಿದ್ದರು. ಅವರು ನನ್ನ ಮೇಲೆ ತೋರಿಸುತ್ತಿದ್ದ ಪ್ರೀತಿ ಅಪಾರ.ನಾನು ಅವರ ಒಡಹುಟ್ಟಿದ ತಮ್ಮ ಎಂದು ನೆನೆಪಿಸಿಕೊಳ್ಳುತ್ತೇನೆ. ನಿಮ್ಮೆಲ್ಲರ ಮೆಚ್ಚುಗೆ ಗಳಿಸಲು ನಾನು ಈ ಮಾತನ್ನು ಹೇಳುತ್ತಿಲ್ಲ. ವೇದಿಕೆಯಲ್ಲಿ ಉಪಸ್ಥಿತರಿರುವ ನನ್ನ ಅಕ್ಕ (ಪಾರ್ವತಮ್ಮ ರಾಜಕುಮಾರ್) ಹಾಗು ಅಣ್ಣನ ಮಕ್ಕಳೇ ಇದಕ್ಕೆ ಸಾಕ್ಷಿ ಎಂದು ಭಾವೋದ್ವೇಗದಿಂದ ನುಡಿದರು.

  ಭಾಷಣದ ಮಧ್ಯೆ "ಮುಂದ" ಎನ್ನುವ 'ರಾಮ ಶ್ಯಾಮ ಭಾಮ' ಚಿತ್ರದ ಪದ ಬಳಸಿ ಮಾತನಾಡುತ್ತಾ, ಕನ್ನಡ ವಾಕ್ಚಿತ್ರದ ಶತಮಾನೋತ್ಸವ ನಡೆಯಲಿ. ಆಗ ನಾನು ಬದುಕಿದ್ದರೆ ಆ ಸಮಾರಂಭಕ್ಕೂ ಬಂದು ಮಾತನಾಡುತ್ತೇನೆ. ಇಲ್ಲಿನ ನೆರೆದಿರುವ ಅಪಾರ ಜನಸ್ತೋಮವನ್ನು ಕಂಡು ನಾನು ಮೂಕವಿಸ್ಮಿತನಾಗಿದ್ದೇನೆ. ಕಲೆ ಬೆಳೆಯಲಿ, ಚಿತ್ರರಂಗ ಉದ್ಧಾರವಾಗಲಿ, ಇದನ್ನೇ ನಂಬಿ ಕೊಂಡಿರುವ
  ಕಲಾವಿದರಿಗೆ ಒಳ್ಳೆದಾಗಲಿ. ಮತ್ತೆ ಮತ್ತೆ ಹೇಳುತ್ತಿದ್ದೇನೆ ಕಲೆಯಲ್ಲಿ ರಾಜಕೀಯ ಬೆರೆಸುವಂತಹ, ಹುಳಿ ಹಿಂಡುವ ಕೆಲಸ ಮಾಡಬೇಡಿ ಎಂದು ಅವರು ತಮ್ಮ್ಮ ಅಂತರಂಗವನ್ನು ಎಳೆಎಳೆಯಾಗಿ ಬಿಚ್ಚಿಟ್ಟರು.

  ಭಾಷಣದ ಕೊನೆಯಲ್ಲಿ ಅವರು, ನಾನು ತಮಿಳಿನಲ್ಲಿ ಹೇಳಿದ ಭಾಷಣವನ್ನು ಕನ್ನಡಕ್ಕೆ ತರ್ಜುಮೆ ಮಾಡಿಕೊಟ್ಟ ತಮ್ಮ ಗೆಳೆಯ ರಮೇಶ್ ಅರವಿಂದ್ ಅವರಿಗೆ ಕೃತಜ್ಞತೆಗಳನ್ನು ತಿಳಿಸಲು ಮರೆಯಲಿಲ್ಲ. ಕಮಲ ಹಾಸನ್ ಭಾಷಣದಲ್ಲಿ ಗೋಪಾಲ ಕೃಷ್ಣ ಅಡಿಗರ ಕವನದ ಸಾಲುಗಳು, ಕನ್ನಡ ಚಿತ್ರರಂಗಕ್ಕೆ ಪಿ.ಲಂಕೇಶ್, ಅನಂತಮೂರ್ತಿ,ಗಿರೀಶ್ ಕಾರ್ನಾಡ್, ಕಾಸರವಳ್ಳಿ ಅವರು ಕೊಟ್ಟ ಕೊಡುಗೆಯನ್ನು ಸ್ಮರಿಸಿದರು.

  ಬಿ.ವಿ.ಕಾರಂತ್ ನನಗೆ ಸೋದರರಾಗಿದ್ದರು. ರಜನಿಕಾಂತ್ ನನ್ನ ಸಹಸ್ಪರ್ಧಿ, ಸಹ ಕಲಾವಿದ. ಕನ್ನಡಿಗರು ನನ್ನ ಬಗ್ಗೆ ಇಟ್ಟುಕೊಂಡಿರುವ ಪ್ರೀತಿಗೆ ನಾನೂ ಯಾವತ್ತೂ ಚಿರಋಣಿ. ಕಲಾವಿದರಿಗೆ ಭಾಷೆ ಯಾವತ್ತೂ ಅಡ್ಡಗೋಡೆಯಾಗಬಾರದು ಎಂದು ಹೇಳಿ ತಮ್ಮ ಭಾಷಣಮುಗಿಸಿದಾಗ ಸಭಿಕರಿಂದ ಚಪ್ಪಾಳೆಯ ಸುರಿಮಳೆಯಾಯಿತು.

  (ದಟ್ಸ್ ಕನ್ನಡ ಚಿತ್ರವಾರ್ತೆ)

  ಪೈರಸಿ ತಡೆಗೆ ಶೀಘ್ರ ಕಾನೂನು: ಯಡಿಯೂರಪ್ಪ
  ಎಪ್ಪತ್ತೈದರ ಯೌವನದಲ್ಲಿ ಕನ್ನಡ ಚಿತ್ರರಂಗ
  ರವಿಚಂದ್ರನ್ ಗರಡಿಯಲ್ಲಿ ಸುಂದರ ಸುಂದರಿಯರು!
  ಅಮೃತ ಪುಸ್ತಕ ಪಟ್ಟಿಯಲ್ಲಿ ಯಾರ್ಯಾರಿಗೆ ಸ್ಥಾನ?

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X