»   »  ಈ ವಾರ ತೆರೆಗೆ ಪರಿಚಯ ಜತೆ ಮೂರು ಚಿತ್ರಗಳು

ಈ ವಾರ ತೆರೆಗೆ ಪರಿಚಯ ಜತೆ ಮೂರು ಚಿತ್ರಗಳು

Posted By:
Subscribe to Filmibeat Kannada

ಕನ್ನಡ ಚಿತ್ರರಂಗದಲ್ಲಿ ಬಹಳಷ್ಟು ನಿರೀಕ್ಷೆ ಹುಟ್ಟಿಸಿರುವ ಚಿತ್ರ 'ಪರಿಚಯ' ಸೇರಿದಂತೆ ಮೂರು ಗುಟ್ಟು ಒಂದು ಸುಳ್ಳು ಒಂದುನಿಜ, ಭಯ ಡಾಟ್ ಕಾಂ ಹಾಗೂ 10ನೇ ಕ್ಲಾಸ್ ಎ ಸೆಕ್ಷನ್ ಚಿತ್ರಗಳು ಈ ವಾರ(ನ.6) ಒಟ್ಟಿಗೆ ತೆರೆಗೆ ಅಪ್ಪಳಿಸುತ್ತಿವೆ. ಈ ನಾಲ್ಕು ಚಿತ್ರಗಳು ವಿಭಿನ್ನವಾಗಿರುವುದು ಮತ್ತೊಂದು ವಿಶೇಷ. ಪ್ರೇಮ, ಹಾಸ್ಯ, ಭಯ, ಹುಡುಗಾಟ ಈ ವಾರ ಬಿಡುಗಡೆಯಾಗುತ್ತಿರುವ ಚಿತ್ರಗಳ ಮುಖ್ಯವಸ್ತು.

ಪರಿಚಯ
ಸ್ವೀಟ್ ಮತ್ತು ಸಾಫ್ಟ್ ಪ್ರೇಮಕತೆಯನ್ನು ಹೊಂದಿರುವ ಚಿತ್ರ ಪರಿಚಯ. ಜೆಸ್ಸಿ ಗಿಫ್ಟ್ ಸಂಗೀತ ನಿರ್ದೇಶನದ ಹಾಡುಗಳು ಈಗಾಗಲೇ ಸಾಕಷ್ಟು ಜನಪ್ರಿಯತೆಯನ್ನು ಗಳಿಸಿಕೊಂಡಿವೆ. ಚಿತ್ರದ ಪ್ರಚಾರಕ್ಕಾಗಿ ನಾಯಕಿ ರೇಖಾ ಈಗಾಗಲೇ ಮುಂಬೈನಿಂದ ಬೆಂಗಳೂರಿಗೆ ಆಗಮಿಸಿದ್ದಾರೆ. ಚಿತ್ರದ ಧ್ವ್ವನಿಸುರುಳಿ ಈಗಾಗಲೇ ಜನಪ್ರಿಯವಾಗಿದೆ.

ಎಸ್.ಜಿ.ಕೆ.ಪ್ರೊಡಕ್ಷನ್ ಲಾಂಛನದಲ್ಲಿ ಎಸ್.ಜಿ.ಕೃಷ್ಣಮೂರ್ತಿ ನಿರ್ಮಿಸುತ್ತಿರುವ 'ಹುಡುಗಾಟ' ಕೆ.ಸಂಜಯ್ ನಿರ್ದೇಶನದ ಪರಿಚಯ ಚಿತ್ರ ನ.6ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತದೆ. ಕಣ್ಣಿಗೆ ತಂಪೇರುವ ದೃಶ್ಯಗಳು, ಕಿವಿಗೆ ಇಂಪಾದ ಹಾಡುಗಳನ್ನೊಳಗೊಂಡ ಸಿಂಪ್ಲಿ ಪ್ರೇಮಕಥೆಯೇ ಪರಿಚಯ. ಈ ಚಿತ್ರದ ಛಾಯಾಗ್ರಹಣ ಪಿ.ಕೆ.ಹೆಚ್.ದಾಸ್, ಸಂಗೀತ: ಜಸ್ಸಿ ಗಿಫ್ಟ್, ಸಂಭಾಷಣೆ: ಮಳವಳ್ಳಿ ಸಾಯಿ ಕೃಷ್ಣ, ಸಂಕಲನ: ಹುಡುಗಾಟ ಕೆ.ಎಂ.ಪ್ರಕಾಶ್, ಸಹ ನಿರ್ದೇಶನ : ಜಿ.ಭಾಸ್ಕರ್, ಕಲೆ : ಇಸ್ಮಾಯಿಲ್, ನಿರ್ವಹಣೆ : ಶಶಿಧರ್.ಬಿ., ಡಿ.ರಮೇಶ್, ಈ ಚಿತ್ರದಲ್ಲಿ ತರುಣ್, ರೇಖಾ, ಅವಿನಾಶ್, ಶೋಭರಾಜ್, ಸುಧಾ ಬೆಳವಾಡಿ, ಕಾಶೀ ಕೋಮಲ್, ಆನಂದ್, ಕರಿವಸವಯ್ಯ, ಭಾರ್ಗವಿ ನಾರಾಯಣ್, ಪುಷ್ಪಾ ಸ್ವಾಮಿ, ಸಿಂಧು, ಸ್ಮಿತಾ, ಮೋನಿಷಾ ಮುಂತಾದವರು ಅಭಿನಯಿಸಿದ್ದಾರೆ.

10ನೇ ಕ್ಲಾಸ್ ಎ ಸೆಕ್ಷನ್
ವಿದ್ಯಾರ್ಥಿ ಜೀವನ, ಬಂಗಾರದ ಜೀವನ. ಮನುಷ್ಯನ ಜೀವನದ ಪ್ರಮುಖ ಘಟ್ಟ ಸಹ. ಈ ಸಮಯದಲ್ಲಿ ಮನುಷ್ಯ ತನ್ನ ಮನಸ್ಸನ್ನು ಹತೋಟಿಯಲ್ಲಿಟ್ಟುಕೊಳ್ಳದಿದ್ದರೆ ಜೀವನದಲ್ಲಿ ಆತ ಮುಂದೆ ತುಂಬಾ ಕಷ್ಟಪಡಬೇಕಾಗುತ್ತದೆ. ಇದೇ ಅಂಶವನ್ನು ಪ್ರಮುಖವಾಗಿಟ್ಟುಕೊಂಡು ಕಲ್ಕೆರೆ ಪ್ರಕಾಶ್ ಹಾಗೂ ರಾಕಿ ನಿರ್ಮಿಸಿರುವ 10ನೇ ಕ್ಲಾಸ್ ಎ ಸೆಕ್ಷನ್ ಚಿತ್ರ ಈ ವಾರ ರಾಜ್ಯಾದ್ಯಂತ ಬಿಡುಗಡೆ ಕಾಣುತ್ತಿದೆ.

ಎಸ್ಸೆಸ್ಸೆಲ್ಸಿಓದುವಾಗ ಪ್ರೀತಿಸಿ ಮನೆಬಿಟ್ಟು ಓಡಿಹೋಗಿ ಮದುವೆಯಾದ ನಾಯಕ-ನಾಯಕಿಗೆ ಹಿರಿಯರ ಸಂಪರ್ಕವಿಲ್ಲದ ಜೀವನ ನಡೆಸುವುದು ಎಷ್ಟು ಕಷ್ಟ ಎಂಬ ಸತ್ಯವನ್ನು ನಿರ್ದೇಶಕರಾದ ದಿಲ್ ಸತ್ಯ ಇಲ್ಲಿ ನಿರೂಪಿಸಿದ್ದಾರೆ. ನವೀನ್ ಹಾಗೂ ಪ್ರಿಯಾಂಕ ಆ ಯುವ ಜೋಡಿಯಾಗಿ ನಟಿಸಿದ್ದು, ಪೃಥ್ವಿ, ಪ್ರೀತಿ, ಲಿಖಿತ, ಜೈಜಗದೀಶ್, ವಿನಯಾಪ್ರಸಾದ್, ಸತ್ಯಜಿತ್,ಬ್ಯಾಂಕ್ ಜನಾರ್ಧನ್, ಕರಿಬಸಯ್ಯ, ಡಿಂಗ್ರಿ ನಾಗರಾಜ್, ಕಾಶಿ, ನಟಿಸಿರುವ ಈ ಚಿತ್ರಕ್ಕೆ ಆರ್.ಎನ್. ಅಭಿಲಾಷ್ ಅವರ ಸಂಗೀತ, ಹಸೀಬ್‌ರವರ ಛಾಯಾಗ್ರಹಣ, ರಾಜಶೇಖರ್ ರೆಡ್ಡಿ ಅವರ ಸಂಕಲನ, ಡಿಫರೆಂಟ್ ಡ್ಯಾನಿಯವರ ಸಾಹಸ ಸಂಯೋಜನೆ ಈ ಚಿತ್ರಕ್ಕಿದೆ.

ಮೂರು ಗುಟ್ಟು ಒಂದು ಸುಳ್ಳು ಒಂದು ನಿಜ
ಶ್ರೀ ಮೂಕಾಂಬಿಕಾ ಫಿಲಂಸ್ ಲಾಂಛನದಲ್ಲಿ ರಾಜೀವ್ ಹಾಗೂ ವೆಂಕಟೇಶ್ ನಾಯ್ಕ ನಿರ್ಮಿಸಿರುವ, ದಿನೇಶ್‌ಬಾಬು ನಿರ್ದೇಶನದ ಚಿತ್ರ ಮೂರು ಗುಟ್ಟು, ಒಂದು ಸುಳ್ಳು, ಒಂದು ನಿಜ ಈ ವಾರ ರಾಜ್ಯಾದ್ಯಂತ ಬಿಡುಗಡೆ ಕಾಣುತ್ತಿದೆ. ಇದೊಂದು ಪೂರ್ಣ ಪ್ರಮಾಣದ ಹಾಸ್ಯ ಚಿತ್ರವಾಗಿದ್ದು, ಅಮೃತವರ್ಷಿಣಿಯಲ್ಲಿ ರಮೇಶ್ ಅರವಿಂದ್‌ಗೆ, ಮಿ.ಗರಗಸದಲ್ಲಿ ಕೋಮಲ್‌ಗೆ ಬ್ರೇಕ್ ಕೊಟ್ಟಂತಹ ದಿನೇಶ್ ಬಾಬು ನಿರ್ದೇಶನದ ಚಿತ್ರ ಇದಾಗಿದೆ.

ಕಥೆ-ಚಿತ್ರಕಥೆ ಬರೆದು ಛಾಯಾಗ್ರಹಣ ಹಾಗೂ ನಿರ್ದೇಶನದ ಜವಾಬ್ದಾರಿಯನ್ನು ದಿನೇಶ್ ಬಾಬು ಅವರೇ ನಿರ್ವಹಿಸಿದ್ದಾರೆ. ಗಾಯಕ ಎಲ್.ಎನ್. ಶಾಸ್ತ್ರಿಯವರ ಪತ್ನಿ ಸುಮಾ ಶಾಸ್ತ್ರಿ ಪ್ರಥಮ ಬಾರಿಗೆ ಈ ಚಿತ್ರಕ್ಕೆ ಸಂಗೀತ ಸಂಯೋಜನೆ ಮಾಡಿದ್ದಾರೆ. ಈ ಚಿತ್ರದಲ್ಲಿರುವುದು ಒಂದೇ ಹಾಡು. ಫೈವ್ ಸ್ಟಾರ್ ಗಣೇಶ್‌ರ ನೃತ್ಯ ಸಂಯೋಜನೆ ಇದ್ದು, ರಮೇಶ್ ಅರವಿಂದ್, ಕೋಮಲ್, ನಂದಿನಿ, ಮಧು ಹೆಗ್ಡೆ, ಸುಧಾ ಬೆಳವಾಡಿ, ಶರಣ್, ಬೇಬಿ ಶ್ರೇಯ, ಶ್ರೀನಿವಾಸಮೂರ್ತಿ, ಪ್ರವೀಣ್ ಹಾಗೂ ನ್ಯಾನ್ಸಿ ಕಕ್ಕಡ್ ಪ್ರಮುಖ ತಾರಾಗಣದಲ್ಲಿದ್ದಾರೆ.

www.bhaya.com
ಎಸ್ ವಿ ಎಸ್ ಮೂವೀಸ್ ಲಾಂಛನದಲ್ಲಿ ನಿರ್ಮಾಣವಾಗಿರುವ 'ಭಯ ಡಾಟ್ ಕಾಂ' ಚಿತ್ರ ಈ ವಾರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಅನುನಾರಾಯಣ್ ನಿರ್ಮಿಸಿರುವ ಈ ಚಿತ್ರ ಮೂವರು ನಾಯಕ,ನಾಯಕಿಯರ ಸುತ್ತ ಹೆಣೆದಿರುವ ವಿಶಿಷ್ಟ ಕಥಾನಕ. ಸಂತೋಷ, ಮಧುಸಾಗರ್, ವಿಕ್ರಂಸೂರಿ, ಮೇಘನ, ರೋಷಿನಿ, ಜಿ.ಕೆ.ಗೋವಿಂದರಾವ್, ಸುಂದರರಾಜ್, ಶಂಕರ್‌ಅಶ್ವತ್, ಸಿದ್ದರಾಜು, ಕಲ್ಯಾಣ್‌ಕರ್, ಭರತ್‌ಭಾಗವತರ್ ಮುಂತಾದವರ ಅಭಿನಯವಿರುವ ಈ ಚಿತ್ರವನ್ನು ವೇಮಗಲ್ ಜಗನ್ನಾಥರಾವ್ ನಿರ್ದೇಶಿಸಿದ್ದಾರೆ.

ನಿರ್ದೇಶಕರೇ ಕತೆ, ಚಿತ್ರಕತೆ, ಸಂಭಾಷಣೆ ಬರೆದಿರುವ ಈ ಚಿತ್ರಕ್ಕೆ ಉದಯಹೆಗ್ಡೆ ಅವರ ಸಂಕಲನವಿದೆ. ಸುರೇಶ್, ಚಂದ್ರಕುಮಾರ್ ನೃತ್ಯ, ರಾಜೇಶ್‌ರಾಮನಾಥ್ ಸಂಗೀತ ಹಾಗೂ ರಾಜಶೇಖರ್ ಛಾಯಾಗ್ರಹಣ 'ಭಯ ಡಾಟ್ ಕಾಂ'ಗಿದೆ.

(ದಟ್ಸ್ ಕನ್ನಡ ಚಿತ್ರವಾರ್ತೆ)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada