»   »  ವೈಎಸ್ಆರ್ ಮೂಕಿ ಚಿತ್ರ ಕಡೆಗೂ ತೆರೆ ಕಾಣಲಿಲ್ಲ

ವೈಎಸ್ಆರ್ ಮೂಕಿ ಚಿತ್ರ ಕಡೆಗೂ ತೆರೆ ಕಾಣಲಿಲ್ಲ

Posted By: * ದಟ್ಸ್ ಸಿನಿ ಡೆಸ್ಕ್
Subscribe to Filmibeat Kannada

ರಾಜಕೀಯ ಕ್ಷೇತ್ರದಲ್ಲಿ ಒಂದೇ ಒಂದು ಕ್ಷಣ ಬಿಡುವಿಲ್ಲದಂತೆ ಕಳೆದ ವೈ.ಎಸ್.ರಾಜಶೇಖರ ರೆಡ್ಡಿ ಕಳೆದ ಚುನಾವಣೆಗೂ ಮುನ್ನ ಕ್ಯಾಮೆರಾ ಮುಂದೆ ಬಂದಿದ್ದರು. ಆ ಚಿತ್ರದಲ್ಲೂ ಸಹ ಅವರು ಮುಖ್ಯಮಂತ್ರಿಯಾಗಿಯೇ ಅಭಿನಯಿಸಿದ್ದರು. ವಿಸು ಫಿಲಂಸ್ ಸಂಸ್ಥೆ ಈ ಚಿತ್ರವನ್ನು ನಿರ್ಮಿಸಿತ್ತು. ಆಂಧ್ರದ ಹಾಸ್ಯ ನಟ ಬ್ರಹ್ಮಾನಂದಂ ಅವರೊಂದಿಗೆ ವೈಎಸ್ ಆರ್ ಕೆಲವೊಂದು ಸನ್ನಿವೇಶಗಳಲ್ಲಿ ನಟಿಸಿದ್ದರು. ಇನ್ನೂ ಹೆಸರಿಡದ ಅದರ ಚಿತ್ರೀಕರಣ ಪೂರ್ಣಗೊಂಡಿರಲಿಲ್ಲ.

ಸರಕಾರದ ಕಾರ್ಯಕ್ರಮಗಳು, ಗಿರಿಜನರ ಸಮಸ್ಯೆಗಳ ಬಗ್ಗೆ ಚರ್ಚಿಸುವ ಕಥಾಹಂದರವನ್ನು ಈ ಚಿತ್ರ ಒಳಗೊಂಡಿತ್ತು. ಅರುಣ್ ಪ್ರಸಾದ್ ಈ ಚಿತ್ರದ ನಿರ್ದೇಶಕರು. ಇನ್ನೂ ಕೆಲವೊಂದು ಸನ್ನಿವೇಶಗಳ ಚಿತ್ರೀಕರಣ ನಡೆಯಬೇಕಾಗಿತ್ತು. ಅಷ್ಟರಲ್ಲಿ ಚುನಾವಣೆಗಳು ಆರಂಭವಾದ ಕಾರಣ ತಾತ್ಕಾಲಿಕವಾಗಿ ಚಿತ್ರೀಕರಣಕ್ಕೆ ತೆರಬಿದ್ದಿತ್ತ್ತು.ಇಷ್ಟಕ್ಕೂ ಈ ಚಿತ್ರದಲ್ಲಿ ಅಭಿನಯಿಸುವಂತೆ ವೈಎಸ್ಆರ್ ಅವರನ್ನು ಹೇಗೆ ಒಪ್ಪಿಸಿದ್ದರು? ಅವರು ಕ್ಯಾಮೆರಾ ಮುಂದೆ ಹೇಗಿದ್ದರು? ಎಂಬ ವಿವರಗಳನ್ನು ನಿರ್ದೇಶಕ ಅರುಣ್ ಪ್ರಸಾದ್ ತಿಳಿಸಿದ್ದಾರೆ.

*ವೈಎಸ್ಆರ್ ಅವರ ಸಚಿವಾಲಯಕ್ಕೆ ಹೋಗಿ ಚಿತ್ರಕತೆಯನ್ನು ಹೇಳಿದೆ. ಎಲ್ಲಾ ಕೇಳಿದ ಬಳಿಕ ''ನಾನ್ಯಾಕಯ್ಯಾ? ನಿಮ್ಮ ನಟರೇ ಇರುತ್ತಾರಲ್ಲಾ...ಅವರನ್ನು ಬಳಸಿಕೊಳ್ಳಬಹುದುದಲ್ಲಾ?'' ಎಂದರು. 'ನೀವು ನಟಿಸಿದರೆ ಸಹಜವಾಗಿರುತ್ತದೆ ಸಾರ್' ಎಂದೆ. ನಿಜ ಹೇಳಬೇಕೆಂದರೆ ನಮ್ಮ ಚಿತ್ರದಲ್ಲಿ ಅವರು ಅಭಿನಯಿಸುವುದರಿಂದ ಹೆಚ್ಚಿನದೇನು ಲಾಭವಿರಲಿಲ್ಲ. ಗಿರಿಜನರ ಸಮಸ್ಯೆಗಳ ಕಡೆಗೆ ಸರಕಾರ ಗಮನಹರಿಸುತ್ತಿಲ್ಲ ಎಂಬ ಅಪವಾದದ ಚಿತ್ರ.ನಿಜಕ್ಕೂ ಅವರಿಗೆ ಅದು ಮೈನಸ್ ಆಗುತ್ತದೆ. ಆದರೂ ಚಿತ್ರದಲ್ಲಿ ನಟಿಸುತ್ತೇನೆ ಎಂದರು. ಕತೆ ತುಂಬಾ ಚೆನ್ನಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದರು.

*ಇದೊಂದು ಮೂಕಿ ಚಿತ್ರ. ಆದರೆ ಒಂದು ಕಡೆ ಮಾತ್ರ ಟಿವಿಯಲ್ಲಿ ಸಿಎಂ ಮಾತನಾಡುವ ಸನ್ನಿವೇಶ ಇರುತ್ತದೆ. ಇದಕ್ಕಾಗಿ ನಾವು ಓಟಿನ ಬಗ್ಗೆ ಬರೆದಿದ್ದೆವು. ''ಓಟಿನ ಬಗ್ಗೆ ಬೇಡ. ನೀನೇನೋ ಸಿನಿಮಾವನ್ನು ನನಗಾಗಿಯೇ ತೆಗೆಯುತ್ತಿರುವಂತಿದೆ. ಇದು ಹಾಸ್ಯ ಪ್ರಧಾನವಾಗಿ ಸಾಗುವ ಚಿತ್ರವಾದ ಕಾರಣ...ಇಲ್ಲಿ ನಾನೇ ಡೈಲಾಗ್ ಹೇಳುತ್ತೇನೆ'' ಎಂದು ನಿರರ್ಗಳವಾಗಿ ಸಿನಿಮಾ ಡೈಲಾಗ್ ಗಳನ್ನು ಹೇಳಿದರು. ಅವುಗಳನ್ನು ಕೇಳಿ ಚಿತ್ರತಂಡದ ಎಲ್ಲರಿಗೂ ಆಶ್ಚರ್ಯವಾಗಿತ್ತು.

*ವೈಎಸ್ಆರ್ ನಮ್ಮ ಚಿತ್ರದಲ್ಲಿ ಮೇಕಪ್ ಇಲ್ಲದೆಯೇ ನಟಿಸಿದ್ದರು. ಮೊದಲ ದೃಶ್ಯಕ್ಕಾಗಿ ವಿಶೇಷವಾಗಿ ಏನನ್ನೂ ಸಿದ್ಧ ಮಾಡಿಕೊಂಡಿರಲಿಲ್ಲ. ಅವರು ಕ್ಯಾಂಪ್ ಆಫೀಸಿನಿಂದ ನಡೆಯುತ್ತಾ ಬರುವ ದೃಶ್ಯವನ್ನು ಚಿತ್ರೀಕರಿಸಿಕೊಂಡೆವು. ಹಾಗೆ ನಡೆಯುತ್ತಾ ಬರಬೇಕಾದರೆ ನನ್ನನ್ನು ನೋಡಲು ಹೋದರು. ''ನನ್ನ ಕಡೆ ನೋಡಬೇಡಿ ಸಾರ್'' ಎಂದೆ. ತಕ್ಷಣ ಅರ್ಥ ಮಾಡಿಕೊಂಡ ಅವರು ಕೂಡಲೆ ಕ್ಯಾಮೆರಾ ಕಡೆಗೆ ನೋಡುತ್ತಾ ನಡೆದು ಬಂದರು.

*ಹೀಗೆ ಮೊದಲ ದೃಶ್ಯವನ್ನು ಚಿತ್ರೀಕರಿಸಿದೆವು. ಅವರೊಂದಿಗೆ ನಾಲ್ಕುವರೆ ದಿನಗಳ ಕಾಲ ಚಿತ್ರೀಕರಣದೊಂದಿಗೆ ಕಳೆದಿದ್ದೆ. ಚುನಾವಣೆಗಳು ಮುಗಿದ ಕೂಡಲೆ ಉಳಿದ ಭಾಗವನ್ನು ಚಿತ್ರೀಕರಿಸೋಣ ಎಂದಿದ್ದರು. ಈ ನಡುವೆ ಮತ್ತೆ ಭೇಟಿಯಾದಾಗ ಇನ್ನ್ನೊಂದು ತಿಂಗಳ ನಂತರ ಪೂರ್ಣಗೊಳಿಸೋಣ ಎಂದು ಭರವಸೆ ನೀಡಿದ್ದರು.

*ನಮ್ಮ ಸಿನಿಮಾಗಾಗಿ ಹೆಲಿಕಾಪ್ಟರ್ ಸನ್ನಿವೇಶಗಳನ್ನು ಚಿತ್ರೀಕರಿಸಿದೆವು. ಹೆಲಿಕಾಪ್ಟರ್ ಅಬ್ಬರದ ಧ್ವನಿ ಮಾಡುತ್ತಾ ಗಿರಿಜನ ಪಾತ್ರಧಾರಿ ಬ್ರಹ್ಮಾನಂದಂ ಅವರೊಂದಿಗೆ ಸಿಎಂ ಹೊರಡುತ್ತಿದ್ದರೆ ಆತ ಭಯಬೀತಗೊಂಡುಸಿಎಂರನ್ನು ಗಟ್ಟಿಯಾಗಿ ತಬ್ಬಿಕೊಳ್ಳುತ್ತಾನೆ. ನಂತರ ಸಿಎಂ ಧೈರ್ಯ ತುಂಬಿ ಮೇಲಿನಿಂದ ಅವರ ಗುಡಿಸಲುಗಳನ್ನು ತೋರಿಸುವ ಸನ್ನಿವೇಶಗಳನ್ನು ಚಿತ್ರೀಕರಿಸಿಕೊಂಡಿದ್ದೆವು. ನಮ್ಮ ಸೀನಿಮಾದ ರೀತಿಯಲ್ಲೇ ಕಾಡಿನಲ್ಲಿ ಅವರು ಹೆಲಿಕಾಪ್ಟರ್ ನಲ್ಲಿ ಪಯಣಿಸುತ್ತಾ ಹೀಗೆ ದುರಂತ ಸಂಭವಿಸಿದ್ದು ದುರದೃಷ್ಟಕರ ಎನ್ನುತ್ತಾರೆ ನಿರ್ದೇಶಕ ಅರುಣ್ ಕುಮಾರ್.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada