ಚಂದ್ರು 'ಚಾರ್ಮಿನಾರ್' ನಾಯಕ ಪ್ರೇಮ್, ನೆನಪಿರಲಿ
ನೆನಪಿರಲಿ...,ಕೆಲವು ಕಾಲಗಳ ಹಿಂದೆ ವೃತ್ತಿಜೀವನದ ಹಾವು-ಏಣಿ ಆಟದಲ್ಲಿ ಸ್ವಲ್ಪ ಕೆಳಗಿಳಿದಿದ್ದ ಪ್ರೇಮ್, ಇದೀಗ ಸಾಕಷ್ಟು ಎತ್ತರೆತ್ತರಕ್ಕೆ ಏರುತ್ತಿದ್ದಾರೆ. ರೂಪಾ ಅಯ್ಯರ್ 'ಚಂದ್ರ'ನಿಂದ ರಮ್ಯಾರನ್ನು ಹೊರಹಾಕಿದರೂ ಪ್ರೇಮ್ ಬೇಕೇ ಬೇಕು ಎಂದು ಅವರನ್ನು ಉಳಿಸಿಕೊಂಡಿದ್ದಾರೆ. ಹೀಗಾಗಿ ಪ್ರೇಮ್ ಅವರಿಗೆ ಶುಕ್ರದೆಸೆ ಪ್ರಾರಂಭವಾಗಿದೆ ಎನ್ನಬಹುದು. ನಿರ್ದೇಶಕ ಚಂದ್ರು ತಮ್ಮ ಚಿತ್ರದ ನಾಯಕ ಪ್ರೇಮ್ ರನ್ನು ಹೈದರಾಬಾದ್ ಗೂ ಕರೆದುಕೊಂಡು ಹೋಗಿಬಂದಿದ್ದಾರೆ.
"ಪ್ರೇಮ್ ಅವರಿಗೆ 'ಚಾರ್ಮಿನಾರ್' ಕಥೆ ಇಷ್ಟವಾಗಿದೆ. 'ತಾಜ್ ಮಹಲ್' ರೀತಿಯದ್ದೇ ವಿಭಿನ್ನ ಕಥೆಯನ್ನೀಗ ಸಿನಿಮಾ ಮಾಡುತ್ತಿದ್ದೇನೆ. ಇದು ನಾಲ್ಕು ಕಂಬಗಳ ಮಹತ್ವವನ್ನು ಸಾರುವ ಚಿತ್ರ. ಪ್ರತಿಯೊಬ್ಬರ ಜೀವನದಲ್ಲೂ ಇರೋ ನಾಲ್ಕು ಕಂಬಗಳನ್ನು ಭಾವನಾತ್ಮಕವಾಗಿ ತಟ್ಟುವಂತೆ ಹೇಳುತ್ತೇನೆ" ಎಂದಿದ್ದಾರೆ ಚಂದ್ರು. ಪ್ರೇಕ್ಷಕರು 'ಕೋಕೋ' ರೀತಿ ಮಾಡದಿದ್ದರೆ ಸಾಕು ಎನ್ನುತ್ತಿದ್ದಾರೆ ಎಂಬುದು ಚಂದ್ರು ಕಿವಿಗೆ ಬಿದ್ದರೆ ಒಳ್ಳೆಯುದು ಎನ್ನತ್ತಿದೆ ಗಾಂಧಿನಗರ.
ಸದ್ಯಕ್ಕೆ ನಾಯಕರಾಗಿ ಪ್ರೇಮ್ ಆಯ್ಕೆಯಾಗಿದ್ದು, ನಾಯಕಿ ಹುಡುಕಾಟ ನಡೆದಿದೆ. ಪ್ರೇಮಕಥೆಗೆ ಹೊಂದುವ ನಾಯಕಿಗಾಗಿ ಶೋಧ ನಡೆದಿದೆ. ಚಿತ್ರ ನೋಡುವ ಪ್ರೇಕ್ಷಕರ ಕಣ್ಣಲ್ಲಿ ಕನಿಷ್ಠ ನಾಲ್ಕು ಹನಿ ಕಣ್ಣೀರು ಹೊರ ತರಿಸಿದರೆ ನನಗೆ ಸಮಾಧಾನ" ಎಂದಿದ್ದಾರೆ ಚಂದ್ರು. ನೆನಪಿರಲಿ, ಜೊತೆ ಜೊತೆಯಲಿ, ಜೊತೆಗಾರ, ಮತ್ತೆ ಬನ್ನಿ ಪ್ರೀತ್ಸೋಣ ಅಂತಹ ಸದಭಿರುಚಿಯ ಚಿತ್ರಗಳಲ್ಲಿ ಗಮನ ಸೆಳೆದ ಪ್ರೇಮ್ 'ಚಾರ್ಮಿನಾರ್' ಮೂಲಕ ಮತ್ತಷ್ಟು ಎತ್ತರಕ್ಕೇರುವುದು ಗ್ಯಾರಂಟಿ ಎನ್ನಲಾಗುತ್ತಿದೆ. (ಒನ್ ಇಂಡಿಯಾ ಕನ್ನಡ)


Click it and Unblock the Notifications












