»   »  ಅಶೋಕ್ ಖೇಣಿ ಹುಟ್ಟುಹಬ್ಬಕ್ಕೆ ರಜನಿಕಾಂತ್

ಅಶೋಕ್ ಖೇಣಿ ಹುಟ್ಟುಹಬ್ಬಕ್ಕೆ ರಜನಿಕಾಂತ್

Posted By:
Subscribe to Filmibeat Kannada

ಉದ್ಯಮಿ ಅಶೋಕ್ ಖೇಣಿ ಅವರ 60ನೇ ಹುಟ್ಟುಹಬ್ಬ ಸಂಭ್ರಮ ಮೈಸೂರಿನಲ್ಲಿ ವಿಜೃಂಭಣೆಯಿಂದ ನಡೆಯಿತು. ತಮಿಳು ಸೂಪರ್ ಸ್ಟಾರ್ ರಜನಿಕಾಂತ್ ಸೇರಿದಂತೆ ಕನ್ನಡ ಚಿತ್ರರಂಗದ ಬಹುತೇಕ ನಟರು ಹುಟ್ಟುಹಬ್ಬ ಸಮಾರಂಭದಲ್ಲಿ ಪಾಲ್ಗೊಂಡಿದ್ದರು. ಮಹಾರಾಜ ಕಾಲೇಜು ಮೈದಾನದಲ್ಲಿ ಸರಿ ಸುಮಾರು 30,000ಕ್ಕೂ ಹೆಚ್ಚು ಅಶೋಕ್ ಖೇಣಿ ಅಭಿಮಾನಿಗಳ ಜಾತ್ರೆಯೇ ನೆರೆದಿತ್ತು.

ಭಾನುವಾರ ಮಂಡ್ಯದಲ್ಲಿ ಹುಟ್ಟುಹಬ್ಬ ಆಚರಿಸಿಕೊಂಡ ಅಶೋಕ್ ಖೇಣಿ ಸೋಮವಾರ ಮೈಸೂರಿನಲ್ಲಿ ಹುಟ್ಟುಹಬ್ಬ ಆಚರಿಸಿಕೊಂಡು ಸಂಭ್ರಮಿಸಿದರು. ಅಖಿಲ ಕರ್ನಾಟಕ ಅಶೋಕ್ ಖೇಣಿ ಯುವಕರ ಪಡೆ ಈ ಅದ್ದೂರಿ ಸಮಾರಂಭವನ್ನು ಮೈಸೂರು ಮಹಾರಾಜ ಕಾಲೇಜಿನ ಮೈದಾನದಲ್ಲಿ ಆಯೋಜಿಸಿತ್ತು.

ಸ್ವಿಚ್ ಆನ್ ಮಾಡುವ ಮೂಲಕ ಅರುವತ್ತು ವಿದ್ಯುತ್ ದೀಪಗಳನ್ನು ಬೆಳಗಿಸಿ ವಿಶಿಷ್ಟವಾಗಿ ಖೇಣಿ ಹುಟ್ಟುಹಬ್ಬಕ್ಕೆ ಪೇಜಾವರ ವಿಶ್ವೇಶ್ವರತೀರ್ಥ ಸ್ವಾಮೀಜಿಗಳು ಚಾಲನೆ ನೀಡಿದರು. ಇತ್ತ ದೀಪಗಳು ಝಗಮಗಿಸುತ್ತಿದ್ದಂತೆ ಆಗಸದಿಂದ ಹೂಗಳ ಸುರಿಮಳೆಯಾಯಿತು. ಹೆಲಿಕಾಪ್ಟರ್ ಮೂಲಕ ಗುಲಾಬಿ ಹೂವಿನ ಪಕಳೆಗಳನ್ನು ಸುರಿಯಲಾಯಿತು.

ಸೂಪರ್ ಸ್ಟಾರ್ ರಜನಿಕಾಂತ್ ಮಾತನಾಡುತ್ತಾ, ಅಶೋಕ್ ಖೇಣಿ ಅವರು ರಾಜಕಾರಣಿಯೂ ಅಲ್ಲ, ಸಿನಿಮಾ ಸ್ಟಾರು ಅಲ್ಲ, ಕ್ರೀಡಾಕಾರರು ಅಲ್ಲದಿದ್ದರೂ ಇಷ್ಟೊಂದು ಅಭಿಮಾನಿಗಳು ಸಮಾರಂಭಕ್ಕೆ ಆಗಮಿಸಿರುವುದು ನನಗೆ ಖುಷಿ ಕೊಟ್ಟಿದೆ ಎಂದರು. ರಾಕ್ ಲೈನ್ ವೆಂಕಟೇಶ್, ಅಂಬರೀಷ್ ಸೇರಿದಂತೆ ಬಹುತೇಕ ಕನ್ನಡ ನಟರು ಸಮಾರಂಭದಲ್ಲಿ ಉಪಸ್ಥಿತರಿದ್ದರು.

ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ರಾಮಚಂದ್ರಪುರ ಮಠದ ರಾಘವೇಂದ್ರ ಭಾರತಿ ಸ್ವಾಮೀಜಿ, ಮೈಸೂರಿನ ಬಿಷಪ್ ಡಾ.ಥಾಮಸ್ ವಾಝಪಿಲ್ಲಿ, ಮೈಸೂರಿನ ಖಾಜಿ ಮೌಲಾನಾ ಆಜಾದ್ ಮೊಹಮ್ಮದ್ ಉಸ್ಮಾನ್ ಷರೀಪ್, ಮಾಜಿ ಮೇಯರ್ ದಕ್ಷಿಣ ಮೂರ್ತಿ, ಸಂಸದ ಎಚ್ ವಿಶ್ವನಾಥ್, ಶಾಸಕ ರೇಣುಕಾಚಾರ್ಯ ಉಪಸ್ಥಿತಿಯಲ್ಲಿ ಖೇಣಿ ಹುಟ್ಟುಹಬ್ಬ ಸರ್ವಧರ್ಮ ಪೀಠಾಧಿಪತಿಗಳ ಸಮ್ಮುಖದಲ್ಲಿ ನಡೆಯಿತು.

ಈ ವಿಭಿನ್ನ, ವಿಶಿಷ್ಟ ಹುಟ್ಟುಹಬ್ಬ ಸಮಾರಂಭಕ್ಕೆ 100ಕ್ಕೂ ಹೆಚ್ಚು ಸ್ವಾಮೀಜಿಗಳು ಆಗಮಿಸಿದ್ದರು. 150.x200 ಅಡಿಗಳ ಭವ್ಯ ವೇದಿಕೆಯನ್ನು ಅತಿಥಿ, ಅಭ್ಯಾತರಿಗಾಗಿ ನಿರ್ಮಿಸಲಾಗಿತ್ತು. ಬಣ್ಣಬಣ್ಣದ ಪುಷ್ಪಗಳಿಂದ ಕಂಗೊಳಿಸುತ್ತಿದ್ದ ವೇದಿಕೆಯಲ್ಲಿ ಖೇಣಿ ವಿರಾಜಮಾನರಾಗಿದ್ದರು. 25ಕ್ಕೂ ಹೆಚ್ಚು ಎಲ್ ಸಿಡಿ ಪರದೆಗಳ ಮೂಲಕ ಹುಟ್ಟುಹಬ್ಬದ ದೃಶ್ಯಾವಳಿಗಳನ್ನು ಪ್ರದರ್ಶಿಸಲಾಯಿತು. ಒಟ್ಟು ಐದು ಪ್ರವೇಶದ್ವಾರಗಳಲ್ಲಿ ಇಬ್ಬಿಬ್ಬರು ಪೊಲೀಸರ ವ್ಯವಸ್ಥೆ ಮಾಡಲಾಗಿತ್ತು. ಮೆಟಲ್ ಡಿಟೆಕ್ಟರ್ ಗಳ ಮೂಲಕ ಹದ್ದಿನಕಣ್ಣನ್ನೂ ಇಡಲಾಗಿತ್ತು.

ಮೈಸೂರು, ಚಾಮರಾಜನಗರ ಮತ್ತು ಬೆಂಗಳೂರು ಜಿಲ್ಲೆಗಳಿಂದ ಅಭಿಮಾನಿಗಳನ್ನು ಕರೆತರಲು 300 ಕೆಎಸ್ಸಾರ್ಟಿಸಿ ಬಸ್ಸುಗಳನ್ನು ಏರ್ಪಾಟು ಮಾಡಲಾಗಿತ್ತು. ಮೈಸೂರನ್ನು ತಲುಪುವ ಎಲ್ಲಾ ರಸ್ತೆಗಳು ಖೇಣಿ ಅವರ ಹುಟ್ಟುಹಬ್ಬ ಸಮಾರಂಭದ ಸ್ಥಳಕ್ಕೆ ಸೂಚನೆ ನೀಡುತ್ತಿದ್ದವು.

(ದಟ್ಸ್ ಕನ್ನಡ ಚಿತ್ರವಾರ್ತೆ)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada