For Quick Alerts
  ALLOW NOTIFICATIONS  
  For Daily Alerts

  ಬೆಳ್ಳಿ ಹೆಜ್ಜೆಯಲ್ಲಿ ಅಮ್ಮ ಲೀಲಾವತಿ

  By Prasad
  |

  ಕನ್ನಡ ಚಿತ್ರರಂಗ ಕಂಡ ಅಪ್ರತಿಮ ಕಲಾವಿದೆ ಮತ್ತು ರಾಜ್ ಕುಮಾರ್ ಅವರೊಂದಿಗೆ ನಾಯಕಿಯಾಗಿ ಅತಿಹೆಚ್ಚು ಚಿತ್ರಗಳಲ್ಲಿ ಮಿಂಚಿರುವ ಲೀಲಾವತಿ ಅವರೊಂದಿಗೆ ಬೆಳ್ಳಿಹೆಜ್ಜೆ'ಯಲ್ಲಿ ಸಂವಾದ ಕಾರ್ಯಕ್ರಮವನ್ನು ಕರ್ನಾಟಕ ಚಲನಚಿತ್ರ ಅಕಾಡೆಮಿ ಜೂನ್ 12ರಂದು ಆಯೋಜಿಸಿದೆ.

  ಬೆಂಗಳೂರು ಮಹಾನಗರ ಪಾಲಿಕೆಯ ಎದುರಿಗಿರುವ ಬಾದಾಮಿ ಹೌಸ್ ನ ಪ್ರಿಯದರ್ಶಿನಿ ಚಿತ್ರಮಂದಿರದಲ್ಲಿ ಜೂನ್ 12ರ ಸಂಜೆ 4.30ಕ್ಕೆ 'ಮುಖಾಮುಖಿ' ಸಂವಾದ ನಡೆಯಲಿದೆ. ವಾರ್ತಾ ಇಲಾಖೆಯ ವತಿಯಿಂದ ಲೀಲಾವತಿ ಅವರ ಕುರಿತು ಕಿರುಚಿತ್ರ ಕೂಡ ಈ ಸಂದರ್ಭದಲ್ಲಿ ಪ್ರಸಾರವಾಗಲಿದೆ. ಕರ್ನಾಟಕ ಚಲನಚಿತ್ರ ಅಕಾಡೆಮಿಯ ಅಧ್ಯಕ್ಷ ಟಿಎಸ್ ನಾಗಾಭರಣ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.

  ಲೀಲಾವತಿ ಚಿತ್ರಜೀವನ : ಅತ್ಯಂತ ಸಹಜವಾದ ಅಭಿನಯದಿಂದ ಚಿತ್ರಪ್ರೇಮಿಗಳ ಮನಸೆಳೆದಿದ್ದ ಲೀಲಾವತಿ ಅವರ ನಿಜ ನಾಮಧೇಯ ಲೀಲಾ ಕಿರಣ್.

  ಅವರು 1949ರಲ್ಲಿ 'ನಾಗಕನ್ನಿಕಾ' ಚಿತ್ರದಲ್ಲಿ ಸಖಿಯ ಪಾತ್ರದ ಮುಖಾಂತರ ಕನ್ನಡ ಚಿತ್ರರಂಗ ಪ್ರವೇಶಿಸಿದರು. ಸುಬ್ಬಯ್ಯ ನಾಯ್ಡು ಅವರು ಸಂಸ್ಥೆಯಲ್ಲಿ ರಂಗಭೂಮಿ ಕಲಾವಿದೆಯಾಗಿದ್ದ ಲೀಲಾವತಿ ಅವರು ಕಯಾದುವಿನ ಸಖಿಯಾಗಿ ಅಭಿನಯಿಸಿದ್ದರು. ನಾಯಕಿಯಾಗಿ ಅವರು ಅಭಿನಯಿಸಿದ ಪ್ರಥಮ ಚಿತ್ರ 'ಮಾಂಗಲ್ಯ ಯೋಗ.' ಡಾ. ರಾಜ್ ಕುಮಾರ್ ಅವರೊಂದಿಗೆ ನಟಿಸಿದ ಮೊದಲ ಚಿತ್ರ 'ರಣಧೀರ ಕಂಠೀರವ.'

  'ರಾಣಿ ಹೊನ್ನಮ್ಮ' ಚಿತ್ರದ ಯಶಸ್ಸಿನ ನಂತರ ರಾಜ್ ಕುಮಾರ್ ಮತ್ತು ಲೀಲಾವತಿ ಅವರ ಜೋಡಿ ಜನಪ್ರಿಯತೆ ಗಳಿಸುತ್ತಾ ಸಾಗಿತು. 70ರ ದಶಕದ ನಂತರ ನಾಯಕಿ ಪಾತ್ರಗಳಿಂದ ಹಿಂದೆ ಸರಿದು ಪೋಷಕ ಪಾತ್ರಗಳಲ್ಲಿ ಲೀಲಾವತಿಯವರು ತಮ್ಮನ್ನು ತೊಡಗಿಸಿಕೊಂಡರು. ನಾಯಕಿಯಾಗಿ, ಮಮತಾಮಯಿ ಅಮ್ಮನಾಗಿ, ಅಜ್ಜಿಯಾಗಿ ನಾನಾಬಗೆಯ ಪಾತ್ರಗಳಲ್ಲಿ ಅನೇಕ ಪಾತ್ರಗಳಿಗೆ ಜೀವ ತುಂಬಿದ್ದಾರೆ.

  'ಗೆಜ್ಜೆ ಪೂಜೆ', 'ಸಿಪಾಯಿ ರಾಮು', ಮತ್ತು 'ಡಾಕ್ಟರ್ ಕೃಷ್ಣ' ಚಿತ್ರಗಳಲ್ಲಿನ ಮನೋಜ್ಞ ಅಭಿನಯಕ್ಕಾಗಿ ಲೀಲಾವತಿಯವರು ಅತ್ಯುತ್ತಮ ಪೋಷಕ ನಟಿ ರಾಜ್ಯ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಸುಮಾರು 300 ಚಿತ್ರಗಳಿಗಿಂತಲೂ ಹೆಚ್ಚು ಚಿತ್ರಗಳಲ್ಲಿ ನಟಿಸಿರುವ ಲೀಲಾವತಿಯವರು ನಿರ್ಮಾಪಕಿಯಾಗಿಯೂ ಚಿತ್ರರಂಗಕ್ಕೆ ಅನನ್ಯ ಕಾಣಿಕೆ ನೀಡಿದ್ದಾರೆ. ಲೀಲಾವತಿಯವರಿಗೆ 'ಡಾ. ರಾಜ್ ಕುಮಾರ್' ಪ್ರಶಸ್ತಿ ನೀಡುವ ಮೂಲಕ ರಾಜ್ಯ ಸರಕಾರ ಗೌರವಿಸಿದೆ.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X