ಕನ್ನಡ ಸಿನಿಮಾ 75ಕ್ಕೆ 75ಪುಸ್ತಕ: ಜಯಮಾಲಾ
ಕನ್ನಡ ಚಿತ್ರರಂಗದ ಅಮೃತಮಹೋತ್ಸವ ಸಂದರ್ಭದಲ್ಲಿ 75 ಪುಸ್ತಕಗಳು ಪ್ರಕಟಣೆಗೆ ಸಜ್ಜಾಗುತ್ತಿವೆ. ಕನ್ನಡ ಚಿತ್ರರಂಗ ಕುರಿತಾದ ಮಾಹಿತಿ ಬರವನ್ನು ತುಂಬಲಿರುವ ಈ 75 ಪುಸ್ತಕಗಳಿಗೆ ಸ್ವಾಗತ. ನಮ್ಮ ಚಿತ್ರರಂಗದ ಬಗೆಗಿನ ಲಭ್ಯ ಆಕರ ಗ್ರಂಥಗಳು ತೀರಾತೀರ ಕಡಿಮೆ. ಇಂಥ ಮಾಹಿತಿ ಅಭಾವದ ಸನ್ನಿವೇಶದಲ್ಲಿ ಆಗಿಹೋದ ಮಹಾನುಭಾವರುಗಳ ಬಗೆಗಿನ ವಿವರಗಳನ್ನು ಕಲೆಹಾಕಿ ಪುಸ್ತಕ ಬರೆಯುವಾಗ ಒಂದೆರಡು ತಪ್ಪುಗಳಾದರೂ ಆದೀತು. ಅದನ್ನೇ ಹಿಡಕೊಂಡು ಹಾದಿರಂಪ ಬೀದಿರಂಪ ಮಾಡಬಾರದಾಗಿ ಕೋರಿಕೆ.
*ಶಾಮಿ

ಈಚಿನ ವರ್ಷಗಳಲ್ಲಿ ಮೊದಲ ಬಾರಿಗೆ ತಕ್ಕಡಿ ಬದಿಗಿಟ್ಟಿರುವ ವಾಣಿಜ್ಯ ಮಂಡಳಿ ಅರ್ಥಪೂರ್ಣ ಸಾಂಸ್ಕೃತಿಕ ಸಾಹಸವೊಂದಕ್ಕೆ ಕೈಹಾಕಿದೆ. ಅದು ಪುಸ್ತಕ ಪ್ರಕಟಣೆಗೆ ಸಂಬಂಧಿಸಿದ ಸಾಹಸ. ಕನ್ನಡ ಚಿತ್ರರಂಗ ಅಮೃತ ಮಹೋತ್ಸವದ ಸಂಭ್ರಮದಲ್ಲಿದೆಯಲ್ಲ; ಇದರ ಭಾಗವಾಗಿ ಎಪ್ಪತ್ತೈದು ಪುಸ್ತಕಗಳನ್ನು ಪ್ರಕಟಿಸುವುದು ಮಂಡಳಿಯ ಯೋಜನೆ.
ಬರುವ ಫೆಬ್ರುವರಿ ಮಾರ್ಚ್ ತಿಂಗಳಲ್ಲಿ ಮಂಡಳಿ ವತಿಯಿಂದ ಕನ್ನಡ ಚಿತ್ರರಂಗ-75 ಕಾರ್ಯಕ್ರಮಗಳು ನಡೆಯಲಿವೆ. ಈ ಉತ್ಸವದ ಒಂದು ಭಾಗ ಪುಸ್ತಕ ಬಿಡುಗಡೆ. ಕನ್ನಡ ಚಿತ್ರರಂಗವನ್ನು ಬೆಳೆಸಿದ ಎಪ್ಪತ್ತೈದು ಮಹಾನುಭಾವರನ್ನು ಪರಿಚಯಿಸುವ ಪುಸ್ತಕಗಳಿವು. ಗುಬ್ಬಿ ವೀರಣ್ಣ, ಪಂತುಲು, ನಾಗೇಂದ್ರರಾವ್, ರಾಜಕುಮಾರ್ ಅವರಿಂದ ಶಂಕರನಾಗ್, ಮಂಜುಳಾವರೆಗೆ ಅನೇಕ ಕಲಾವಿದರ ಬದುಕು ಸಾಧನೆಯನ್ನು ಚಿತ್ರಿಸುವ ಪುಸ್ತಕಗಳು ಈಗ ಬರವಣಿಗೆಯ ಹಂತದಲ್ಲಿವೆ. ಗಮನಿಸಿ : ಈಗ ನಮ್ಮೊಡನಿಲ್ಲದ ಚೇತನಗಳ ಕುರಿತಷ್ಟೇ ಪುಸ್ತಕ ಬರೆಸಲಾಗುತ್ತಿದೆ. ಕಲಾವಿದರ ಜೊತೆಗೆ ವಿವಿಧ ತಂತ್ರಜ್ಞರ ಹೆಸರುಗಳೂ 75ರ ಪಟ್ಟಿಯಲ್ಲಿವೆ.
ಹಿರಿಯ ಲೇಖಕ ಹಾಗೂ ಸಿನಿಮಾ ನಿರ್ದೇಶಕ ಬರಗೂರು ರಾಮಚಂದ್ರ ಈ ಪುಸ್ತಕ ಮಾಲಿಕೆಯ ಪ್ರಧಾನ ಸಂಪಾದಕರು. ಪತ್ರಕರ್ತರಾದ ಪಿ.ಜಿ.ಶ್ರೀನಿವಾಸಮೂರ್ತಿ, ಗಂಗಾಧರ ಮೊದಲಿಯಾರ್, ಮಲ್ಲಿಗೆ ಶ್ರೀಧರಮೂರ್ತಿ ಮುಂತಾದವರು ಸಂಪಾದಕೀಯ ಮಂಡಳಿಯಲ್ಲಿದ್ದಾರೆ.
ಕನ್ನಡ ಚಿತ್ರರಂಗದ ಬಗೆಗಿನ ಮಾಹಿತಿ ಕ್ಷಾಮದ ಸಂದರ್ಭದಲ್ಲಿ ಈ ಎಪ್ಪತ್ತೈದು ಪುಸ್ತಕಗಳ ಪ್ರಕಟಣೆ ಸ್ವಾಗತಾರ್ಹ ಸಂಗತಿ. ಮಂಡಳಿಗೆ ಅಭಿನಂದನೆಗಳು. ಡಾ.ಜಯಮಾಲ, ಕಂಗ್ರ್ಯಾಜುಲೇಶನ್ಸ್. ಹೌದು, ಜಯಮಾಲ ಕೂಡ ಒಂದು ಪುಸ್ತಕ ಬರೆಯುತ್ತಿದ್ದಾರೆ!


Click it and Unblock the Notifications











