»   » ಮಾಲಾಶ್ರೀ ನಾನ್ ವೆಜ್ ಹಾಡಿಗೆ ಹೊಸ ಮಸಾಲೆ

ಮಾಲಾಶ್ರೀ ನಾನ್ ವೆಜ್ ಹಾಡಿಗೆ ಹೊಸ ಮಸಾಲೆ

Posted By:
Subscribe to Filmibeat Kannada

ಇಪ್ಪತ್ತು ವರ್ಷಗಳ ಹಿಂದೆ ತೆರೆಕಂಡ ಮಾಲಾಶ್ರೀ ಅಭಿನಯದ 'ರಾಣಿ ಮಹಾರಾಣಿ' ಚಿತ್ರದ ನಾನ್ ವೆಜ್ ಹಾಡು ನೆನಪಿರಬೇಕಲ್ಲ. ಕೂಗೋ ಕೋಳಿಗೆ ಖಾರ ಮಸಾಲೆ...ಎಂದು ಮಾಲಾಶ್ರೀ ಕೈಯಲ್ಲಿ ಚಿಕನ್ ಪೀಸ್ ಹಿಡಿದು ಹಾಡುತ್ತಿದ್ದರೆ ಚಿಕನ್ ಪ್ರಿಯರ ಬಾಯಲ್ಲಾ ನೀರಾಗುತ್ತಿತ್ತು.

ಈ ಹಾಡು ಅಂದಿಗೆ ಬಹಳಷ್ಟು ಜನಪ್ರಿಯವಾಗಿತ್ತು. ಬಳಿಕ ಮಾಲಾಶ್ರೀಯೂ ಮಹಾರಾಣಿಯಾಗಿ ಮೆರೆದಾಡಿದ್ದರು. ಇದೀಗ ಇದೇ ಹಾಡನ್ನು ಪೂಜಾಗಾಂಧಿ ಅಭಿನಯಿಸುತ್ತಿರುವ 'ನೀ ರಾಣಿ ನಾ ಮಹಾರಾಣಿ' ಚಿತ್ರಕ್ಕೆ ಪುನಃ ಬಳಸಿಕೊಳ್ಳುತ್ತಿದ್ದಾರೆ ಚಿತ್ರದ ನಿರ್ದೇಶಕ ಬಿ ರಾಮಮೂರ್ತಿ. ಈಗಿನ ಕಾಲಕ್ಕೆ ತಕ್ಕಂತೆ ಈ ಹಾಡು ಪರಿವರ್ತಿಸಿಕೊಂಡು ಹೊಸ ಮಸಾಲೆಯೊಂದಿಗೆ ಹಾಡು ಹೊರಬರಲಿದೆ.

ನಾನ್ ವೆಜ್ ಜೊತೆಗೆ ಗುಂಡುನ ಗಮ್ಮತ್ತು ಹಾಡಿನಲ್ಲಿ ಬೆರೆತಿದೆಯೋ ಇಲ್ಲವೋ ಸದ್ಯಕ್ಕೆ ಸಸ್ಪೆನ್ಸ್ ಆಗಿಟ್ಟಿದ್ದಾರೆ ಚಿತ್ರದ ನಿರ್ದೇಶಕರು. ಮೂಲದ ಚಿತ್ರದ ಈ ಹಾಡಿಗೆ ಹಂಸಲೇಖ ಸಾಹಿತ್ಯ, ಸಂಗೀತ ಒದಗಿಸಿದ್ದರು. ಹೊಸ ಚಿತ್ರದಲ್ಲಿ ವಿನಯ್ ಚಂದ್ರ ಸಂಗೀತ ನೀಡಲಿದ್ದಾರೆ. ಇವರು ಹಂಸಲೇಖ ಅವರ ಶಿಷ್ಯ ಎಂಬುದು ವಿಶೇಷ.

ಚಿತ್ರದ ನಿರ್ಮಾಪಕರು ಬಿ ಸತ್ಯನಾರಾಯಣ. ಅಕ್ಷಯ್ ಮತ್ತು ಆರ್ ಅಕ್ಷಯ್ ಎಂಬ ಇಬ್ಬರು ನಾಯಕರು ಚಿತ್ರದಲ್ಲಿದ್ದಾರೆ. ರಮೇಶ್ ಭಟ್, ಸುಂದರರಾಜ್, ಪ್ರಮೀಳಾ ಜೋಷಾಯ್, ಬ್ಯಾಂಕ್ ಜನಾರ್ದನ್, ಡಿಂಗ್ರಿ ನಾಗರಾಜ್, ಹೊನ್ನವಳ್ಳಿ ಕೃಷ್ಣ, ಮೋಹನ್ ಜುನೇಜಾ, ಪ್ರೇಮಲತಾ ಪೋಷಕ ಪಾತ್ರಗಳಲ್ಲಿ ಕಾಣಿಸಲಿದ್ದಾರೆ.

ಸಂಭಾಷಣೆ ಎಸ್ ವಿ ಉದಯ್, ಥ್ರಿಲ್ಲರ್ ಮಂಜು ಸಾಹಸ, ಸೌಂದರರಾಜ್ ಸಂಕಲನ ಚಿತ್ರಕ್ಕಿದೆ. 30 ದಿನಗಳ ಕಾಲ ಬೆಂಗಳೂರು, ದೇವರಾಯನ ದುರ್ಗ, ಚಿಕ್ಕಮಗಳೂರು, ಸಕಲೇಶಪುರ ಮೊದಲಾದ ಕಡೆ ಚಿತ್ರೀಕರಣ ನಡೆಯಲಿದೆ. ರಾಣಿ ಮಹಾರಾಣಿ ಚಿತ್ರದ ಮೂಲಕಥೆಯನ್ನು ಸಮಕಾಲೀನಗೊಳಿಸಿ 'ನಾ ರಾಣಿ ಮಹಾರಾಣಿ' ಚಿತ್ರವನ್ನು ಹೆಣೆಯುತ್ತಿದ್ದಾರೆ ಬಿ ರಾಮಮೂರ್ತಿ.

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada