»   »  ಹೊಸ ನಿರ್ದೇಶಕರ ಕಥೆಗಳ ಕಗ್ಗೊಲೆ

ಹೊಸ ನಿರ್ದೇಶಕರ ಕಥೆಗಳ ಕಗ್ಗೊಲೆ

Subscribe to Filmibeat Kannada

ನಾನು ಒಬ್ಬ ಸಿನೆಮಾ ನಿರ್ದೇಶಕ. ನಿಮ್ಮ ವೆಬ್ಬಿನಲ್ಲಿ ಬಂದ 'ಹೊಸ ನಿರ್ದೇಶಕರಿಗೆ ಕಿವಿಮಾತು' ಲೇಖನವನ್ನು ಓದಿ ಅದಕ್ಕೆ ಪ್ರತಿಕ್ರಿಯಿಸಿದ್ದೇನೆ. ನೀವು ನಿಷ್ಪಕ್ಷಪಾತವಾಗಿ ನನ್ನ ಅಭಿಪ್ರಾಯವನ್ನು ಪ್ರಕಟಿಸುತ್ತೀರೆಂದು ನಂಬಿದ್ದೇನೆ.

ಇಂತು ವಿಶ್ವಾಸಿ
ವಿಜಯ್

ಸ್ವಾಮಿ. ನಿಮ್ಮ ಕಿವಿಮಾತಿಗೆ ಧನ್ಯವಾದಗಳು. ಆದರೆ ಇಲ್ಲಿ ಕೆಲವೊಂದು ಅಂಶ ನಿಮ್ಮ ಗಮನ ಬಿಟ್ಟು ಹೋಗಿರುವಂತೆ ಕಾಣುತ್ತದೆ. ಅದನ್ನೂ ಹೇಳಿ ಬಿಡೋಣ ಅಂತ ಬರೀತಿದೇನೆ. ನನ್ನದು ತಪ್ಪಾದರೆ ಕ್ಷಮಿಸಿಬಿಡಿ. ಕಥೆ ಹೇಳುವ ತವಕ ನಮ್ಮಲ್ಲಿ ಪ್ರತಿಯೊಬ್ಬರಿಗೂ ಇದ್ದದ್ದೇ. ಅದು ಇಂದಿನ ಆಸೆಯಲ್ಲ. ಸಿನೆಮಾ ಆರಂಭವಾದಾಗಿನಿಂದ ಆ ಮಾಧ್ಯಮವನ್ನು ಬಳಸಿಕೊಂಡು ಕಥೆ ಹೇಳುವ ಪ್ರಯತ್ನ ಜನ ಮಾಡುತ್ತಲೇ ಬಂದಿದ್ದಾರೆ. ಮುಂದೆ ಮಾಧ್ಯಮ ಶಕ್ತವಾದಂತೆಲ್ಲಾ, ಅದರಲ್ಲಿ ನಾಯಕರು ಅಧಿಪತ್ಯವಹಿಸಿಕೊಂಡರು. ಅವರ ನಿರ್ಧಾರಕ್ಕೇ ಬೆಲೆ ಬಂತು.

ಇನ್ನು ಕೆಲವು ದೇಶಗಳಲ್ಲಿ ಸ್ಟೂಡಿಯೋ ಸಿಸ್ಟಂ ಬಂತು. ನಮ್ಮಲ್ಲಿ ಇಂದಿಗೂ ನಿರ್ದೇಶಕ ಅದರಲ್ಲೂ ಹೊಸ ನಿರ್ದೇಶಕನಂತೂ ತನ್ನ ಕನಸುಗಳನ್ನು ನಿಜರೂಪದಲ್ಲಿ ತೆರೆಗಿಳಿಸಲು ಸಾಧ್ಯವೇ ಇಲ್ಲದಂಥಾ ಪರಿಸ್ಥಿತಿ ಇದೆ. ಮುಂಗಾರು ಮಳೆ, ದುನಿಯಾ ಯಶಸ್ಸಿನ ನಂತರ ಹಣ ಹೂಡುವವರಲ್ಲಿ ಒಂದು ಹೊಸ ಆಸೆ ಉಂಟಾಯ್ತು. ಹೊಸಬರ ಚಿತ್ರಗಳು ಓಡುತ್ತವೆ ಎಂದು. ನೀವು ಗಾಂಧಿ ನಗರ ಎಂದು ಹೇಳುವ ಸ್ಥಳದಲ್ಲಿ ಹಣ ಹೂಡುವ ಹೆಚ್ಚಿನವರು ಬರೇ ಅಂಕಿ ಅಂಶಗಳ ಸರದಾರರು. ಸಿದ್ಧ ಸೂತ್ರಗಳಿಗಾಗಿ ಸದಾ ತವಕಿಸುವವರು. ಇವರು ಹೀಗಂದುಕೊಂಡದ್ದರಲ್ಲಿ ಏನೂ ವಿಶೇಷವಿಲ್ಲ.

ಇದರಿಂದಾಗಿ ಬಹಳ ಕಾಲದಿಂದ ತಮ್ಮೊಳಗಿನ ಕಥೆ ಹೇಳುವ ಆಸೆಯನ್ನು ಹತ್ತಿಕ್ಕಿ ಕೂತಿದ್ದ ಯುವ ನಿರ್ದೇಶಕರ ಮುಂದೆ ಎರಡು ದಾರಿಗಳು ಮೂಡಿ ಬಂದವು. ಒಂದೋ ಹಣ ಹೂಡುವವರು ಹೇಳುವಂತೆ ಚಿತ್ರ ಮಾಡಿ ಮೊದಲು ಚಿತ್ರರಂಗದಲ್ಲಿ ಒಂದು ಹೆಸರು ಮಾಡಿಕೊಳ್ಳುವುದು. ಇಲ್ಲಾ... ನನ್ನ ಕನಸಿನ ಚಿತ್ರವನ್ನೇ ಮಾಡುತ್ತೇನೆ. ಸದಭಿರುಚಿಯನ್ನೇ ತೆರೆಗೆ ತರುತ್ತೇನೆ ಎಂದು ಕಾಯುವುದು. 5-10 ವರುಷಗಳಿಂದ ಕಾಯುತ್ತಾ ಇದ್ದ ಯುವಕರಿಗೆ ಮುದುಕರಾಗುವ ಭಯ ಕಾಡದೇ ಇರುತ್ತಾ ಸ್ವಾಮಿ? ಹೆಚ್ಚಿನವರು ಮೊದಲನೆಯ ದಾರಿ ಹಿಡಿದರು. ಕೆಲವರು ಯಶಸ್ಸೂ ಆದರು, ಹೆಚ್ಚಿನವರು ವಿಫಲರಾದರು.

ಮತ್ತೆ ಗೊತ್ತಲ್ಲಾ.. ಚಿತ್ರ ಗೆದ್ದರೆ ಹಣಹೂಡಿದವರು, ನಾಯಕರು. ಚಿತ್ರ ಸೋತರೆ ಅದು ಕೆಟ್ಟ ಕಥೆ, ಕೆಟ್ಟ ನಿರ್ದೇಶನ! ನಾನು ಹೇಳಿದ ಮಾತು ಎಲ್ಲಾ ಹೊಸ ನಿರ್ದೇಶಕರಿಗೆ ಅನ್ವಯವಾಗುವುದಿಲ್ಲ. ಎಲ್ಲಾ ಹೊಸತಳಿ ಉತ್ತಮ ಫಲಕೊಡುತ್ತೆ ಎಂದಲ್ಲ. ಆದರೆ ಅವಕ್ಕೆ ನೀರು, ಗೊಬ್ಬರವೇ ಸರಿಯಿಲ್ಲದಿದ್ದರೆ, ಗಿಡದ್ದೇನು ತಪ್ಪು ಸ್ವಾಮಿ? ಯುವನಿರ್ದೇಶಕರಿಗೆ ಕಿವಿಮಾತು ಹೇಳುವುದು ಸುಲಭ. ಆದರೆ ಇನ್ನೊಮ್ಮೆ ಗಾಂಧೀನಗರದಲ್ಲಿ ಒಂದು ಸುತ್ತು ಬನ್ನಿ. ಸವಕಲು ಗ್ಲಾಸುಗಳಲ್ಲಿ ಟೀ ಕುಡಿಯುತ್ತಾ ಹೋಟೇಲ್ ರೂಮಿನಿಂದ ಇನ್ನೊಂದಕ್ಕೆ ಓಡುತ್ತಾ, ನನ್ನತ್ರ ಒಂದು ಕಥೆ ಇದೆ ಸಾರ್ ಎನ್ನುವ ಕಥೆ ಹೇಳುವ ತವಕದಲ್ಲಿ ಕಾಯುತ್ತಿರುವ ಯುವಕರ ಕಡೆಗೊಮ್ಮೆ ಕಣ್ಣುಹಾಯಿಸಿ ಬನ್ನಿ.

ಗಬ್ಬು ನಾಥದ ಗೋಡೆಗಳ ಮೇಲೆ ರಾತ್ರಿ ಹಚ್ಚಿದ ತಾಜಾ ಪೋಸ್ಟರ್ ನೋಡಿ ಛೇ! ನನ್ನ ಪೋಸ್ಟರ್ ಹೀಗೆ ಗೋಡೆಯ ಮೇಲೆ ಬಂದಾಗ ಎಷ್ಟು ಚೆನ್ನಾಗಿರುತ್ತಲ್ಲಾ ಎಂದು ಕನಸುಕಾಣುವ ಕಥೆಗಾರರೆಡೆಗೊಮ್ಮೆ ನೋಡಿ ಬನ್ನಿ. ಆಗ ನಿಮ್ಮ ಅಭಿಪ್ರಾಯ ಬದಲಾಗಬಹುದು.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada