»   »  ನಾಗತಿಹಳ್ಳಿ ಒಲವೇ ಜೀವನ ಲೆಕ್ಕಾಚಾರ ಸಾಕ್ಷಾತ್ಕಾರ!

ನಾಗತಿಹಳ್ಳಿ ಒಲವೇ ಜೀವನ ಲೆಕ್ಕಾಚಾರ ಸಾಕ್ಷಾತ್ಕಾರ!

Posted By:
Subscribe to Filmibeat Kannada
'ಒಲವೇ ಜೀವನ ಲೆಕ್ಕಾಚಾರ' ಚಿತ್ರ ತೊಂಬತ್ತರ ದಶಕದಲ್ಲಿ ಬರೆದ ಸಣ್ಣಕತೆಯಾಧಾರಿತವಾಗಿದ್ದು, ಸತ್ಯ ಘಟನೆಗಳಿಂದ ಕೂಡಿದೆ. ಈ ಸಣ್ಣಕತೆ ನನ್ನನ್ನು ಇಕ್ಕಟ್ಟಿಗೂ ಸಿಲುಕಿಸಿತ್ತು. ಕತೆಗೆ ಸಂಬಂಧಿಸಿದ ಜನ ನನ್ನ ಮೇಲೆ ಮಾನನಷ್ಟ ಮೊಕದ್ದಮೆ ಹೂಡಿದ್ದರು ಎನ್ನುತ್ತಾರೆ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್.

ಸೂಕ್ಷ್ಮವಾಗಿರುವ ಈ ಕತೆಯನ್ನು ತೆರೆಗೆ ತರಬೇಕಾದರೆ ಸಾಕಷ್ಟು ಜಾಗ್ರತೆಯನ್ನು ತೆಗೆದುಕೊಂಡಿದ್ದೇನೆ. ಕತೆ ಓದುವುದಕ್ಕಿಂತಲೂ ದೃಶ್ಯ ಮಾಧ್ಯಮ ತುಂಬಾ ಪ್ರಭಾವಶಾಲಿಯಾದದ್ದು. ಬೆಳ್ಳಿತೆರೆಗೆ ಈ ಕತೆಯನ್ನು ಅಳವಡಿಸಿಕೊಳ್ಳಲು ಎಲ್ಲಾ ಎಚ್ಚರಿಕೆಗಳನ್ನು ತೆಗೆದುಕೊಂಡಿದ್ದೇನೆ. ಕೊನೆಗೆ ಚಿತ್ರವನ್ನು ನೋಡಿದಾಗ ನಿಜಕ್ಕೂ ತೃಪ್ತಿಯಾಯಿತು ಎಂದು ತಮ್ಮ ಚಿತ್ರದ ಬಗ್ಗೆ ವಿವರ ನೀಡಿದ್ದಾರೆ.

ಹಾಗಂತ ಒಲವೇ ಜೀವನ ಲೆಕ್ಕಾಚಾರ ಗಂಭೀರ ಸ್ವಭಾವದ್ದಲ್ಲ. ಒಟ್ಟಾರೆ ಸನ್ನಿವೇಶಗಳನ್ನು ವಿಡಂಬನಾತ್ಮಕವಾಗಿ ತೋರಿಸಲು ಪ್ರಯತ್ನಿಸಿದ್ದೇನೆ. ಆರ್ ಎಸ್ ಎಸ್ ಅಥವಾ ನಕ್ಸಲ್ ಸಂಘಟನೆಗಳ ಹಿಂದಿರುವ ತತ್ವಗಳನ್ನು ಅರ್ಥಮಾಡಿಕೊಳ್ಳದೆ ಯುವಕರು ಸೇರ್ಪಡೆಯಾಗುತ್ತಿರುವುದನ್ನು ನಾವಿಂದು ನೋಡುತ್ತಿದ್ದೇವೆ. ನಂತರ ಅವರಿಗೆ ಸತ್ಯ ಅರಿವಾಗಿ ಅಲ್ಲಿಂದ ಹೊರಬರಲು ಪ್ರಯತ್ನಿಸುತ್ತಾರೆ. ಆದರೆ ಸಾಧ್ಯವಾಗುವುದಿಲ್ಲ.

ಈ ಹಿನ್ನೆಲೆಯಲ್ಲಿ ನನ್ನ ಚಿತ್ರ ಯಾವುದೇ ಸಿದ್ಧಾಂತ ಅಥವಾ ನಾಯಕತ್ವ ಶ್ರೇಷ್ಠವಲ್ಲ ಎಂಬುದನ್ನು ಯುವಕರಿಗೆ ಮನದಟ್ಟು ಮಾಡಲು ಪ್ರಯತ್ನಿಸುತ್ತದೆ ಎನ್ನುತ್ತಾರೆ ನಾಗತಿಹಳ್ಳಿ. ಚಿತ್ರದಲ್ಲಿ ಶ್ರೀನಗರ ಕಿಟ್ಟಿ, ರಾಧಿಕಾ ಪಂಡಿತ್, ಡೈಸಿ ಬೋಪಣ್ಣ ಮತ್ತು ರಂಗಾಯಣ ರಘು ಲೆಕ್ಕಾಚಾರದ ನಟನೆ ಜೊತೆಗಿದೆ.

(ದಟ್ಸ್ ಕನ್ನಡ ಚಿತ್ರವಾರ್ತೆ)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada