For Quick Alerts
  ALLOW NOTIFICATIONS  
  For Daily Alerts

  ಹಿರಿಯ ಸಿನಿಮಾ ಪತ್ರಕರ್ತ ಶ್ರೀನಿವಾಸಮೂರ್ತಿ ಇನ್ನಿಲ್ಲ

  By Rajendra
  |

  ನಡೆದಾಡುವ ಕನ್ನಡ ಸಿನಿಮಾ ವಿಶ್ವಕೋಶ ಎಂದೇ ಖ್ಯಾತರಾಗಿದ್ದ ಹಿರಿಯ ಸಿನಿಮಾ ಪತ್ರಕರ್ತ ಪಿ ಜಿ ಶ್ರೀನಿವಾಸಮೂರ್ತಿ ಅವರು ಮಂಗಳವಾರ (ಅ.12) ಮುಂಜಾನೆ ನಿಧನರಾದರು. ಅವರಿಗೆ 79 ವರ್ಷ ವಯಸ್ಸಾಗಿತ್ತು. ಇಬ್ಬರು ಪುತ್ರರು ಹಾಗೂ ಪತ್ನಿಯನ್ನು ಅವರು ಅಗಲಿದ್ದಾರೆ.

  ಸರಿಸುಮಾರು ಐದು ದಶಕಗಳಿಗೂ ಹೆಚ್ಚು ಕಾಲ ಸಿನಿಮಾ ಪತ್ರಿಕೋದ್ಯಮದಲ್ಲಿ ಅವಿರತವಾಗಿ ಶ್ರಮಿಸಿದ ಅವರು ನಡೆದಾಡುವ ಕನ್ನಡ ಸಿನಿಮಾ ವಿಶ್ವಕೋಶ ಎಂದೇ ಜನಜನಿತರಾಗಿದ್ದರು. ಮೈಸೂರು ವಿಶ್ವವಿದ್ಯಾಲಯದ ಪದವೀಧರರಾಗಿದ್ದ ಅವರು 'ಗೋಕುಲ' ಸಾಪ್ತಾಹಿಕಕ್ಕೆ ಬರೆಯುವ ಮೂಲಕ ಸಿನಿಮಾ ಪತ್ರಿಕೋದ್ಯಮಕ್ಕೆ ಅಡಿಯಿಟ್ಟಿದ್ದರು.

  1966 ರಿಂದ 1989ತನಕ ಮದ್ರಾಸ್‌ನ ಯುಎಸ್‌ಐಎಸ್ ನಲ್ಲಿದ್ದ ಅವರು 'ಪ್ರಜಾವಾಣಿ' ಬಾತ್ಮೀದಾರರಾಗಿ ಕಾರ್ಯನಿರ್ವಹಿಸಿದ್ದಾರೆ. ಸಿನಿಮಾ ಪತ್ರಕರ್ತರಾಗಿ ಸೇವೆ ಸಲ್ಲಿಸುತ್ತಿದ್ದ ಅವರು ಸಂಗೀತ ವಿಮರ್ಶಕರಾಗಿ ಗುರುತಿಸಿಕೊಂಡಿದ್ದರು. 1975ರಲ್ಲಿ 'ಚಂದಮಾಮ' ಬಳಗದ 'ವಿಜಯ ಚಿತ್ರ' ಮತ್ತು 'ವನಿತಾ' ಸಾಪ್ತಾಹಿಕಗಳಿಗೆ ಕೆಲವರ್ಷಗಳ ಕಾಲ ಕೆಲಸ ಮಾಡಿದ್ದಾರೆ.

  ಕನ್ನಡ ಚಿತ್ರೋದ್ಯಮದ ಆಳ ಅಗಲಗಳ ಬಗ್ಗೆ ಅವರಿಗೆ ಸಾಕಷ್ಟು ಅರಿವಿತ್ತು. ಯುವ ಪತ್ರಕರ್ತರ ಬರವಣಿಗಗಳಲ್ಲಿ ಏನಾದರೂ ಕೊಂಚ ತಪ್ಪಾದರೂ ಶ್ರೀನಿವಾಸಮೂರ್ತಿ ಕ್ಷಮಿಸುತ್ತಿರಲಿಲ್ಲ. ಕನ್ನಡ ಚಿತ್ರಗಳ ಬಗೆಗಿನ ಮುತುವರ್ತಿ, ಕಾಳಜಿ ಅವರ ಬರವಣಿಗೆಗಳಲ್ಲಿ ಕಾಣಬಹುದಾಗಿತ್ತು. ಸಿನಿಮಾ ನಿರ್ಮಾಣದ ಸಾಧಕ ಬಾಧಕಗಳ ಬಗ್ಗೆ ಅರಿವಿದ್ದಂತಹ ಬೆರಳೆಣಿಕೆಯ ಪತ್ರಕರ್ತರಲ್ಲಿ ಶ್ರೀನಿವಾಸ ಮೂರ್ತಿ ಮೊದಲಿಗರಾಗಿದ್ದರು.

  ಇತ್ತೀಚೆಗೆ ಗಾಯನ ಸಮಾಜ ಆಯೋಜಿಸಿದ್ದ 'ದ್ವಾರಕೀಶ್ ಗೆಳಯರ ಗುಂಪು' ಉದ್ಘಾಟನಾ ಸಮಾರಂಭದಲ್ಲಿ ಅವರು ಕಾಣಿಸಿಕೊಂಡಿದ್ದರು. ಅಷ್ಟೊಂದು ಗೆಲುವಾಗಿದ್ದಅವರ ಕೊನೆಯ ಕಾರ್ಯಕ್ರಮ ಇದೇ ಎಂದರೆ ನಂಬಲು ಸಾಧ್ಯವಾಗುತ್ತಿಲ್ಲ. ಅವರ ನಿಧನದಿಂದ ಕನ್ನಡ ಚಿತ್ರರಂಗ ಒಬ್ಬ ಪ್ರತಿಭಾವಂತ ಪತ್ರಕರ್ತ, ವಿಮರ್ಶಕ, ಶ್ರೇಯೋಭಿಲಾಶಿಯನ್ನು ಕಳೆದುಕೊಂಡಂತಾಗಿದೆ.

  ಸಿನಿಮಾ ಪತ್ರಕರ್ತರಿಗೆ ದಾರಿದೀಪವಾಗಿದ್ದ ಅವರ ಸಾವು ನುಂಗಲಾರದ ತುತ್ತಾಗಿದೆ. ಅವರ ನಿಧನಕ್ಕೆ ಇಡೀ ಕನ್ನಡ ಚಿತ್ರರಂಗ, ಸಿನಿಮಾ ಪತ್ರಕರ್ತರು ಕಂಬನಿ ಮಿಡಿದ್ದಾರೆ. ಇಂದು ಮಧ್ಯಾಹ್ನ 11 ಗಂಟೆಗೆ ಅವರ ಅಂತ್ಯ ಸಂಸ್ಕಾರ ಬನಶಂಕರಿಯ ಚಿತಾಗಾರದಲ್ಲಿ ನಡೆಯಲಿದೆ.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X