»   »  ಹುಬ್ಬಳ್ಳಿಯಲ್ಲಿ ಜೋಶ್ ಗೆ ಅದ್ಭುತ ಪ್ರತಿಕ್ರಿಯೆ!

ಹುಬ್ಬಳ್ಳಿಯಲ್ಲಿ ಜೋಶ್ ಗೆ ಅದ್ಭುತ ಪ್ರತಿಕ್ರಿಯೆ!

Posted By: * ಜಯಂತಿ
Subscribe to Filmibeat Kannada

ಕಿರುತೆರೆಯಲ್ಲಿರುವ ಸಂವಾದ ಸಂಸ್ಕೃತಿ ಸಿನಿಮಾಗೂ ಲಗ್ಗೆ ಇಟ್ಟಿದೆ. ಜೋಶ್ ಚಿತ್ರದ ನಿರ್ದೇಶಕ ಶಿವಮಣಿ ಇಂಥದೊಂದಯ ಯೋಚನೆ ಮಾಡಿ ಯಶಸ್ವಿಯಾಗಿದ್ದಾರೆ. ಜೋಶ್ ಚಿತ್ರ ನೂರು ದಿನ ಓಡಿದ ಸಂತೋಷ ಹಂಚಿಕೊಳ್ಳಲು ಅವರು ಔತಣಕೂಟ ಏರ್ಪಡಿಸಿದ್ದರು. ಆಗ ಹೊಮ್ಮಿದ ಮಾತಿನಲ್ಲಿ ಸಂವಾದದ್ದೇ ಹೈಲೈಟು.

ಹುಬ್ಬಳ್ಳಿ, ಬೆಂಗಳೂರು ಹಾಗೂ ಮೈಸೂರಿನಲ್ಲಿ ಅವರು ಸಂವಾದ ನಡೆಸಿದ್ದಾರೆ. ಜೋಶ್ ಸಿನಿಮಾ ನೋಡಿದ ಅನೇಕರು ಬಂದು ಸಿನಿಮಾ ಬಗ್ಗೆ ಚರ್ಚೆ ನಡೆಸಿದ್ದಾರೆ. ಕೆಲವರು ಭಾವುಕರಾಗಿ ಅತ್ತಿದ್ದಾರೆ. ತಮ್ಮ ಮನೆಯಲ್ಲಿ ತಮ್ಮ ಮಗ ಕೂಡ ಹಾಗೆಯೇ ಹಾಳಾಗುತ್ತಿದ್ದ. ಈ ಸಿನಿಮಾ ಕಣ್ಣು ತೆರೆಸಿತು ಅಂತ ಹೇಳಿದವರಿದ್ದಾರೆ. ತಂದೆಯನ್ನು ಮಗನಿಂದ ಅಷ್ಟೊಂದು ಬೈಸಿದ್ದು ಸರಿಯೇ ಅಂತ ಪ್ರಶ್ನಿಸಿದ್ದಾರೆ. ಕೆಲವು ಪ್ರಶ್ನೆಗಳಿಗೆ ಉತ್ತರ ಕೊಡಲು ಚಿತ್ರತಂಡ ತಡಕಾಡಿದೆ. ಇನ್ನು ಕೆಲವಕ್ಕೆ ಸಂವಾದದಲ್ಲಿ ಭಾಗವಹಿಸಿದ್ದ ಪ್ರೇಕ್ಷಕರೇ ಉತ್ತರ ತಂತಮ್ಮ ನಡುವೆ ಮಾತನಾಡಿ ಉತ್ತರಕಂಡುಕೊಂಡಿದ್ದಾರೆ.

ಹುಬ್ಬಳ್ಳಿಯಲ್ಲಿ ಜೋಶ್‌ಗೆ ಅದ್ಭುತ ಪ್ರತಿಕ್ರಿಯೆ ಸಿಕ್ಕಿದೆಯಂತೆ. ಅಲ್ಲಿನ ಜ್ಯೋತಿ ಚಿತ್ರಮಂದಿರದಲ್ಲಿ ಈಗಲೂ ಕಲೆಕ್ಷನ್ ಶೇ 80ಕ್ಕಿಂತ ಹೆಚ್ಚಾಗಿರುವುದೇ ಇದಕ್ಕೆ ಸಾಕ್ಷಿ ಎಂದು ತಂಡ ಹೇಳಿಕೊಂಡಿತು. ಅಲ್ಲಿ ನಡೆದ ಸಂವಾದಕ್ಕೂ ಕಿಕ್ಕಿರಿದು ಜನ ಬಂದಿದ್ದರಂತೆ. ಸಂವಾದ ನಡೆದ ಹೋಟೆಲಿನ ಒಳಗಿದ್ದಷ್ಟೇ ಜನ ಹೊರಗೂ ಇದ್ದದ್ದು ಅಚ್ಚರಿ. ಪೊಲೀಸ್ ಪಹರೆಯ ನಡುವೆ ಸಂವಾದ ನಡೆಸಬೇಕಾಗಿ ಬಂದಿದ್ದು ಚಿತ್ರದ ಯಶಸ್ಸಿಗೆ ಸಾಕ್ಷಿ ಎಂದು ನಿರ್ಮಾಪಕ ಎಸ್.ವಿ.ಬಾಬು ಹೆಮ್ಮೆಯಿಂದ ಹೇಳಿದರು. ಆಗಸ್ಟ್‌ನಲ್ಲಿ ಅಲ್ಲಿಯೇ ದೊಡ್ಡ ಮೈದಾನದಲ್ಲಿ ಶತದಿನೋತ್ಸವ ಸಮಾರಂಭ ಆಚರಿಸುವ ಚಿಂತನೆ ಅವರದ್ದು.

ಜೋಶ್ ಸೋತರೆ ಇನ್ನು ಚಿತ್ರನಿರ್ಮಾಣ ಮಾಡುವುದೇ ಇಲ್ಲ ಎಂದಿದ್ದ ಬಾಬು ಈಗ ನೆಮ್ಮದಿಯ ನಿಟ್ಟುಸಿರಿಟ್ಟಿದ್ದಾರೆ. ಹಾಕಿದ ಹಣ ಈಗಾಗಲೇ ವಾಪಸ್ ಬಂದಿದೆ. ಇನ್ನುಮುಂದೆ ಬರುವುದೆಲ್ಲಾ ಲಾಭ. ಇನ್ನೊಂದು ಸಿನಿಮಾ ಮಾಡುವ ತರಾತುರಿ ಅವರಿಗಿಲ್ಲ. ಈ ಸಲ ಮತ್ತೆ ಅವರು ನಿಧಾನವೇ ಪ್ರಧಾನ ಎಂಬ ಧಾಟಿಗೆ ಇಳಿದಿದ್ದಾರೆ.

ನಾವು ಜನರನ್ನು ತುಂಬಾ ಅಂಡರ್‌ಎಸ್ಟಿಮೇಟ್ ಮಾಡ್ತೀವಿ. ಸುಮ್ಮನೆ ಒಂದಾದಮೇಲೆ ಒಂದರಂತೆ ಫಾರ್ಮುಲಾ ಸಿನಿಮಾಗಳನ್ನೇ ಕೊಡ್ತೀವಿ. ಇದನ್ನು ನಿಲ್ಲಿಸಿ, ಇದ್ದುದರಲ್ಲೇ ಮೂವ್ ಮಾಡುವಂಥ ಯೋಚನೆಯ ಚಿತ್ರಗಳನ್ನು ಮಾಡಿದರೆ ನಿಜಕ್ಕೂ ಪ್ರೇಕ್ಷಕರು ಬಂದು ನೋಡ್ತಾರೆ. ಜೋಶ್ ಸಂವಾದದಲ್ಲಿ ಇದು ನಮಗೆ ಸ್ಪಷ್ಟವಾಯಿತು ಎಂದವರು ಚಿತ್ರಸಾಹಿತಿ ಕವಿರಾಜ್. ಒಟ್ಟಿನಲ್ಲಿ ಸಂವಾದ ಸಂಸ್ಕೃತಿ ಈಗ ಹಿರಿತೆರೆಗೂ ಕಾಲಿಟ್ಟ ಹಾಗಾಯಿತು.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada