»   » ಪ್ರಾಣಿಬಲಿ ವಿರುದ್ಧ ಹ್ಯಾಟ್ರಿಕ್ ಹೀರೋ ಫೈಟ್

ಪ್ರಾಣಿಬಲಿ ವಿರುದ್ಧ ಹ್ಯಾಟ್ರಿಕ್ ಹೀರೋ ಫೈಟ್

Posted By:
Subscribe to Filmibeat Kannada

ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಭಿನಯಿಸುತ್ತಿರುವ 99ನೇ ಚಿತ್ರ ಮೈಲಾರಿ. ಈ ಚಿತ್ರದ ಚಿತ್ರೀಕರಣ ಶ್ರೀರಂಗಪಟ್ಟಣದಲ್ಲಿ ಭರದಿಂದ ಸಾಗುತ್ತಿದೆ. ಶಿವಣ್ಣನ ಜೊತೆ ನಟಿಸಲು ಶ್ರೀರಂಗಪಟ್ಟಣದ ತರಬೇತಿ ಪಡೆದ ಟಗರು ಸಿದ್ಧವಾಗಿತ್ತು. ಶ್ರೀರಂಗನಾಥ ಸ್ವಾಮಿ ದೇವಸ್ಥಾನದ ಮುಂದೆ ಟಗರಿನೊಂದಿಗೆ ಶಿವಣ್ಣ ಮನೋಜ್ಞ ಅಭಿನಯ ನೀಡಿದ್ದಾರೆ.

ಶ್ರೀರಂಗಪಟ್ಟಣ ಟಗರಿನ ಜೊತೆ ಚೆನ್ನೈಯಿಂದ ಕರೆಸಲಾದ ಮತ್ತೆರಡು ಟಗರುಗಳು ಜೊತೆಯಾಗಿದ್ದವು. ಟಗರುಗಳೊಂದಿಗೆ ಆರು ದಿನಗಳ ಕಾಲ ಚಿತ್ರೀಕರಣ ನಡೆಯಲಿದೆ. ಆರು ದಿನಗಳ ಚಿತ್ರೀಕರಣಕ್ಕೆ ಟಗರಿನ ಸಂಭಾವನೆ ರು.1 ಲಕ್ಷ. ಅಂದಹಾಗೆ ಚಿತ್ರದ ನಿರ್ಮಾಪಕರು ಕನಕಪುರ ಶ್ರೀನಿವಾಸ.

ಈ ಚಿತ್ರದಲ್ಲಿ ಟಗರಿನ ಸನ್ನಿವೇಶಕ್ಕೆ ತುಂಬ ಪ್ರಾಮುಖ್ಯತೆ ಇದೆಯಂತೆ. ಅಣ್ಣಾವ್ರ ನಟಿಸಿದ 'ಬಂಗಾರದ ಪಂಜರ' ಚಿತ್ರದಲ್ಲೂ ಟಗರನ್ನು ಬಳಸಿಕೊಳ್ಳಲಾಗಿತ್ತು. ಆ ಚಿತ್ರ ಸೂಪರ್ ಹಿಟ್ ಆಗಿತ್ತು. ಬಂಗಾರದ ಪಂಜರ ಚಿತ್ರದಲ್ಲಿ ಅಣ್ಣಾವ್ರು ತನ್ನ ಮುದ್ದಿನ ಟಗರನ್ನು 'ಮೈಲಾರಿ' ಎಂದು ಕರೆಯುತ್ತಿದ್ದರು. ಇದೀಗ ಅದೇ ಹೆಸರಿನಲ್ಲಿ ಚಿತ್ರ ತೆಗೆಯುತ್ತಿರುವುದು ಗಮನಾರ್ಹ ಅಂಶ. ಚಿತ್ರದ ನಾಯಕಿ ಸದಾ.

ಈಗಾಗಲೆ ಶೇ.75ರಷ್ಟು ಚಿತ್ರೀಕರಣ ಮುಗಿದಿದ್ದು ಆನೆಯೊಂದನ್ನು ಬಳಸಿಕೊಳ್ಳುವ ಯೋಚನೆ ನಿರ್ದೇಶಕ ಆರ್ ಚಂದ್ರು ಅವರಿಗಿದೆ. ಗಜರಾಜನನ್ನು ತುಮಕೂರಿನಿಂದ ಶ್ರೀರಂಗಪಟ್ಟಣಕ್ಕೆ ಕರೆತರಲಾಗುತ್ತಿದೆ. ಚಿತ್ರದಲ್ಲಿ ಗಜರಾಜನ ಆಶೀರ್ವಾದ ಇರುತ್ತದೆ. ತುಮಕೂರಿನ ಡಾ.ರಾಜ್ ಕುಮಾರ್ ಅಭಿಮಾನಿಗಳ ಸಂಘ ಈ ಆನೆಯನ್ನು ಕರೆತರುತ್ತಿದ್ದಾರೆ. ಗಜರಾಜನ ಸಾಗಾಣಿಕೆ ವೆಚ್ಚ ಭರಿಸಲಾಗುತ್ತಿದ್ದು ಉಳಿದಂತೆ ಗಜರಾಜನ ನಟನೆ ಉಚಿತ.

ಪ್ರಾಣಿಬಲಿ ಕೊಡುವುದು ತಪ್ಪು ಎಂಬ ಕಣ್ಣುತೆರೆಸುವ ಸಂದೇಶ ಚಿತ್ರದಲ್ಲಿದೆಯಂತೆ. ಟಗರನ್ನು ಬಲಿಕೊಡುವ ಸನ್ನಿವೇಶ ಮೈಲಾರಿಯಲ್ಲಿ ಬರುತ್ತದೆ. ಆಗ ಶಿವಣ್ಣನ ಊರಿನ ಜನಕ್ಕೆ ಬುದ್ಧಿ ಹೇಳಿ ಪ್ರಾಣಿಬಲಿ ಕೊಡುವುದು ತಪ್ಪು ಎಂದು ಹೇಳುತ್ತಾರೆ. ಬಳಿಕ ಟಗರನ್ನು ದತ್ತು ತೆಗೆದುಕೊಳ್ಳುವ ಮನಕರಗುವ ಸನ್ನಿವೇಶ ಚಿತ್ರದಲ್ಲಿದೆಯಂತೆ.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada