»   »  ಪ್ರಕಾಶ್ ರೈ ನಿರ್ದೇಶನದಲ್ಲಿ 'ನಾನು ನನ್ನ ಕನಸು'

ಪ್ರಕಾಶ್ ರೈ ನಿರ್ದೇಶನದಲ್ಲಿ 'ನಾನು ನನ್ನ ಕನಸು'

Subscribe to Filmibeat Kannada

ರಾಷ್ಟ್ರೀಯ ಚಲನಚಿತ್ರ ಪುರಸ್ಕೃತ ನಟ ಪ್ರಕಾಶ್ ರೈ ಕನ್ನಡಚಿತ್ರವೊಂದಕ್ಕೆ ಆಕ್ಷನ್, ಕಟ್ ಹೇಳಲಿದ್ದಾರೆ. ಚಿತ್ರಕ್ಕೆ 'ನಾನು ನನ್ನಕನಸು' ಎಂದು ಹೆಸರಿಡಲಾಗಿದೆ. ತಮಿಳಿನ 'ಅಭಿಯುಂ ನಾನುಂ' ಚಿತ್ರದ ರೀಮೇಕ್ ಇದಾಗಿದೆ. ತೆಲುಗಿನಲ್ಲಿ ಈಗಾಗಲೇ 'ಆಕಾಶಮಂತ' ಎಂಬ ಹೆಸರಿನಲ್ಲಿ ಈ ಚಿತ್ರಬಿಡುಗಡೆಯಾಗಿ ಯಶಸ್ಸನ್ನು ದಾಖಲಿಸಿದೆ.

ಬರಹಗಾರ,ಕಿರುತೆರೆ ಮತ್ತು ಸಿನಿಮಾ ನಿರ್ದೇಶಕ ಬಿ.ಸುರೇಶ್ ಅವರೊಂದಿಗೆ ಸೇರಿ ಪ್ರಕಾಶ್ ರೈ ಸಹ ಈ ಚಿತ್ರಕ್ಕೆ ಹಣ ತೊಡಗಿಸುತ್ತಿರುವುದು ವಿಶೇಷ. ಈ ಚಿತ್ರವನ್ನು ಯಥಾವತ್ತಾಗಿ ಕನ್ನಡಕ್ಕೆ ಭಟ್ಟಿ ಇಳಿಸುತ್ತಿಲ್ಲ. ಇಲ್ಲಿನ ಸನ್ನಿವೇಶಕ್ಕೆ ತಕ್ಕಂತೆ ಕೆಲವೊಂದು ಬದಲಾವಣೆಗಳನ್ನು ಮಾಡಿಕೊಳ್ಳಲಾಗುತ್ತದೆ. ಕೊಡಗು ಸಂಪ್ರದಾಯದ ಹಿನ್ನೆಲೆಯಲ್ಲಿ ಕತೆ ಸಾಗುತ್ತದೆ ಎಂದು ಪ್ರಕಾಶ್ ರೈ ತಿಳಿಸಿದ್ದಾರೆ.

ಚಿತ್ರಕ್ಕೆ ಹಂಸಲೇಖ ಅವರ ಸಂಗೀತ, ಅನಂತ್ ಅರಸ್ ಛಾಯಾಗ್ರಹಣ ಮತ್ತು ಅರುಣ್ ಸಾಗರ್ ಅವರ ಕಲಾ ನಿರ್ದೇಶನವಿರುತ್ತದೆ. ''ಯಾವ ಭಾಷೆಯಿಂದ ಚಿತ್ರ ನಿರ್ದೇಶನವನ್ನು ಆರಂಭಿಸಲಿ ಎಂದು ಬಹಳ ದಿನಗಳಿಂದ ಆಲೋಚಿಸುತ್ತಿದ್ದೆ. 'ನಾನು ಮತ್ತು ನನ್ನ ಕನಸು' ಮೂಲಕ ಕನ್ನಡದಲ್ಲೇ ನಿರ್ದೇಶಿಸಲಿದ್ದೇನೆ.'' ಎಂದರು ಪ್ರಕಾಶ್ ರೈ.

ಸ್ವರ್ಣಕಮಲ ಪ್ರಶಸ್ತಿ ವಿಜೇತ 'ಕಾಂಚಿವರಂ' ಚಿತ್ರದ ಪ್ರದರ್ಶನವನ್ನು ಮಲ್ಲೇಶ್ವರಂನ ಜಿಎಂ ರಿಜಾಯ್ಸ್ ಸಭಾಂಗಣದಲ್ಲಿ ಏರ್ಪಡಿಸಲಾಗಿತ್ತು. ಈ ಸಂದರ್ಭದಲ್ಲಿ ಪ್ರಕಾಶ್ ಅವರು 'ನಾನು ನನ್ನ ಕನಸು' ಚಿತ್ರದ ವಿವರಗಳನ್ನು ನೀಡಿದರು. ಈ ಚಿತ್ರದಲ್ಲಿ ಪ್ರಕಾಶ್ ಅವರದು ತಂದೆಯ ಪಾತ್ರ. ಮಗಳ ಪಾತ್ರದಲ್ಲಿ ರಮ್ಯಾ ಕಾಣಿಸಲಿದ್ದಾರೆ.

ನಾನು ನನ್ನ ಕನಸಿನ ಚಿತ್ರೀಕರಣ ನವೆಂಬರ್ ಅಥವಾ ಡಿಸೆಂಬರ್ ಮೊದಲ ವಾರದಲ್ಲಿ ಆರಂಭವಾಗಲಿದೆ. ನನ್ನದೇ ಚಿತ್ರವನ್ನು ನಾನು ರೀಮೇಕ್ ಮಾಡಿಕೊಳ್ಳುತ್ತಿದ್ದೇನೆ ಎಂದರು ಪ್ರಕಾಶ್ ರೈ. ರೀಮೇಕ್ ಚಿತ್ರಗಳನ್ನು ವಿರೋಧಿಸುತ್ತಿದ್ದ ಹಂಸಲೇಖ ಮತ್ತು ಬಿ ಸುರೇಶ್ ಈ ಚಿತ್ರವನ್ನು ಒಪ್ಪಿಕೊಂಡಿರುವುದು ವಿಶೇಷ. ಈ ಚಿತ್ರದಲ್ಲಿ ಸಾಕಷ್ಟು ಬದಲಾವಣೆಗಳನ್ನು ಮಾಡಿರುವ ಕಾರಣ ಚಿತ್ರವನ್ನು ಒಪ್ಪಿಕೊಂಡಿದ್ದೇನೆ ಎಂಬುದು ಅವರ ವಿವರಣೆ.

(ದಟ್ಸ್ ಕನ್ನಡ ಚಿತ್ರವಾರ್ತೆ)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada