»   »  ಅರ್ಧ ಶತಕ ಬಾರಿಸಿದ ವಿಜಯ್ 'ತಾಕತ್'

ಅರ್ಧ ಶತಕ ಬಾರಿಸಿದ ವಿಜಯ್ 'ತಾಕತ್'

Subscribe to Filmibeat Kannada

ಜನಪ್ರಿಯ ಜೋಡಿ ವಿಜಯ್ ಮತ್ತು ಶುಭಾ ಪೂಂಜಾ ಅಭಿನಯದ 'ತಾಕತ್ ಚಿತ್ರ ಅರ್ಧ ಶತಕ ಬಾರಿಸಿದೆ. ಈ ಮೂಲಕ ದುನಿಯಾ ವಿಜಯ್ ಮತ್ತೊಮ್ಮೆ ತಮ್ಮ 'ತಾಕತ್' ಪ್ರದರ್ಶಿಸಿದ್ದಾರೆ. 24 ಫ್ರೇಮ್ಸ್ ಪ್ರೊಡಕ್ಷನ್ ನಿರ್ಮಾಣದ ಈ ಚಿತ್ರ 15 ಕೇಂದ್ರಗಳಲ್ಲಿ ಯಶಸ್ವಿ 50 ದಿನಗಳನ್ನು ಪೂರೈಸಿದೆ. ಗೆಲುವಿನ ಸಂಭ್ರಮ ನಿರ್ದೇಶಕ ಎಂ ಎಸ್ ರಮೇಶ್ ಮುಖ ಲಾಸ್ಯವಾಡುತ್ತಿದೆ.

''ಚಿತ್ರದಲ್ಲಿನ ಸಾಹಸ ಪ್ರಧಾನ ಮತ್ತು ಸೆಂಟಿಮೆಂಟ್ ಅಂಶಗಳು 'ತಾಕತ್' ನ್ನು ನೂರರ ಗಡಿ ಮುಟ್ಟಿಸುತ್ತದೆ. ಕನಿಷ್ಠ 10 ಕೇಂದ್ರಗಳಲ್ಲಿ ಶತಕ ಬಾರಿಸುವುದು ಗ್ಯಾರಂಟಿ'' ಎಂಬ ವಿಶ್ವಾಸವನ್ನು ನಿರ್ದೇಶಕ ರಮೇಶ್ ವ್ಯಕ್ತಪಡಿಸಿದ್ದಾರೆ. ತಾಕತ್ ಚಿತ್ರ 50 ದಿನಗಳನ್ನು ಪೂರೈಸಿದ್ದಕ್ಕೆ ಬೆಂಗಳೂರು ಆರ್ ಟಿ ನಗರದ ಪಟೇಲ್ ಇನ್ ನಲ್ಲಿ ಕಾರ್ಯಕ್ರಮ ಏರ್ಪಡಿಸಲಾಗಿತ್ತು.

ಕ್ರೇಜಿ ಸ್ಟಾರ್ ವಿ ರವಿಚಂದ್ರನ್, ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ಕಲಾವಿದರು ಮತ್ತು ತಂತ್ರಜ್ಞರಿಗೆ 'ತಾಕತ್ 50'ರ ಪಾರಿತೋಷಕಗಳನ್ನು ವಿತರಿಸಿದರು. ಇದೇ ಸಂದರ್ಭದಲ್ಲಿ ಮಾತನಾಡಿದ ಚಿತ್ರದ ನಿರ್ಮಾಪಕರಲ್ಲಿ ಒಬ್ಬರಾದ ರಾಜಶೇಖರ್ ನಾಯ್ಡು, ತಾವು ಈ ಹಿಂದೆ ನಿರ್ಮಿಸಿದ್ದ 'ಬೆಳದಿಂಗಳಾಗಿ ಬಾ' ಚಿತ್ರದಲ್ಲಿ ಕಳೆದೊಂಡ ಹಣ ತಾಕತ್ ಚಿತ್ರದ ಮೂಲಕ ಸಂದಾಯವಾಗಿದೆ ಎಂದರು.

ಏತನ್ಮಧ್ಯೆ ಎಸ್ ನಾರಾಯಣ್ ನಿರ್ದೇಶನದ 'ಚಂಡ' ಚಿತ್ರ 105 ದಿನಗಳನ್ನು ಪೂರೈಸಿದೆ. ಪ್ರೇಕ್ಷಕರು ಕೊಡುವ ಮಾರ್ಕ್ಸ್ ಕಾರ್ಡ್ ತುಂಬ ಮುಖ್ಯ ಎಂದರು ವಿಜಯ್. ಇದೇ ಸಂದರ್ಭದಲ್ಲಿ ವಿಜಯ್ ರೊಂದಿಗೆ ಮತ್ತೊಂದು ಸಿನಿಮಾ ಮಾಡುವುದಾಗಿ ನಿರ್ದೇಶಕ ರಮೇಶ್ ಪ್ರಕಟಿಸಿದರು. ಈ ಚಿತ್ರವನ್ನು ಕೆ ಮಂಜು ನಿರ್ಮಿಸಲಿದ್ದು ಚಿತ್ರಕ್ಕೆ 'ಕಾಲ ಭೈರವ' ಅಥವಾ 'ಅಶ್ವತ್ಥಾಮ' ಎಂದು ಹೆಸರಿಡುವುದಾಗಿ ತಿಳಿಸಿದರು.

(ದಟ್ಸ್ ಕನ್ನಡ ಚಿತ್ರವಾರ್ತೆ)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada