twitter
    For Quick Alerts
    ALLOW NOTIFICATIONS  
    For Daily Alerts

    ಕಿತ್ತೂರಿನಲ್ಲಿ ಅಬ್ಬರಿಸಲಿದ್ದಾರೆ ಸಂಗೊಳ್ಳಿ ರಾಯಣ್ಣ

    By Rajendra
    |

    ಐತಿಹಾಸಿಕ ಚಿತ್ರ ಎಂದರೆ ಕೋಟಿಗಟ್ಟಲೆ ಬಜೆಟ್ ಲೆಕ್ಕಾಚಾರ ನಡೆಯುತ್ತದೆ. ಚಾಲೆಂಜಿಂಗ್ ಸ್ಟಾರ್ ದರ್ಶನ್ ಮುಖ್ಯಭೂಮಿಕೆಯಲ್ಲಿರುವ 'ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ' ಚಿತ್ರವನ್ನು ಬರೋಬ್ಬರಿ ರು.12 ಕೋಟಿ ಬಜೆಟ್‌ನಲ್ಲಿ ನಿರ್ಮಿಸುತ್ತಿದ್ದಾರೆ ಆನಂದ್ ಅಪ್ಪುಗೋಳ್.

    ನವೆಂಬರ್ 19ರಂದು 'ರಾಯಣ್ಣ' ಬೆಳಗಾವಿ ಜಿಲ್ಲೆಯ ಕಿತ್ತೂರಿನಲ್ಲಿ ಸೆಟ್ಟೇರಲಿದ್ದಾನೆ. 'ರಾಯಣ್ಣ'ನ ಸ್ವಾಗತಕ್ಕಾಗಿ ಈಗಾಗಲೆ ಕಿತ್ತೂರಿನಲ್ಲಿ ವೇದಿಕೆ ಸಜ್ಜಾಗಿದೆ. ದರ್ಶನ್ ಅವರ ವೃತ್ತಿಜೀವನದಲ್ಲಿ 'ರಾಯಣ್ಣ' ಚಿತ್ರ ಪ್ರಮುಖ ಮೈಲುಗಲ್ಲಾಗಲಿದೆ ಎಂದಿದ್ದಾರೆ ನಿರ್ಮಾಪಕರು.

    ನಿರ್ದೇಶಕ ನಾಗಣ್ಣ ಅವರ ಏಳು ವರ್ಷಗಳ ಕನಸಿನ ಕೂಸು 'ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ'. ಮೊದಲು ಚಿತ್ರಕಥೆ ಸಿದ್ಧಪಡಿಸಿಕೊಂಡು ಶೀರ್ಷಿಕೆಯನ್ನು ನೋಂದಾಯಿಸಲು ಹೋದಾಗ ನಾಗಣ್ಣ ಅವರಿಗೆ ಅಲ್ಲೊಂದು ನಿರಾಸೆ ಕಾದಿತ್ತು. ಅದಾಗಲೆ ಯಾರೋ ಅದೇ ಶೀರ್ಷಿಕೆಯನ್ನು ನೋಂದಾಯಿಸಿಕೊಂಡಿದ್ದರು.

    ವಿಧಿಯಿಲ್ಲದೆ ನಾಗಣ್ಣ ರಾಯಣ್ಣನನ್ನು ಕೈಬಿಟ್ಟಿದ್ದರು. ಎರಡು ವರ್ಷಗಳ ಬಳಿಕ ಆನಂದ್ ಅಪ್ಪುಗೋಳ್ ಇದೇ ಸಬ್ಜೆಕ್ಟನ್ನು ನಾಗಣ್ಣ ಬಳಿ ಪ್ರಸ್ತಾಪಿಸಿದರು. ಇದಕ್ಕೆ ಬರಹಗಾರ ಕೇಶವಾದಿತ್ಯ ಕೂಡ ಕೈಜೋಡಿಸಿದರು. ಆಗ ನೆನೆಗುದಿಗೆ ಬಿದ್ದಿದ್ದ 'ರಾಯಣ್ಣ' ಕಥೆಗೆ ಮತ್ತೆ ಜೀವಬಂತು ಎನ್ನುತ್ತಾರೆ ನಾಗಣ್ಣ.

    ಐತಿಹಾಸಿಕ ಚಿತ್ರವಾದ ಕಾರಣ ಸಾಹಸ ನಿರ್ದೇಶಕ ರವಿ ವರ್ಮ ಅವರು ವಿಶೇಷ ಕಾಳಜಿ ವಹಿಸುತ್ತಿದ್ದಾರೆ. ಚಿತ್ರದಲ್ಲಿ ಸುಮಾರು 500 ಮಂದಿ ಸಾಹಸ ಕಲಾವಿದರನ್ನು ಬಳಸಿಕೊಂಡಿದ್ದೇವೆ ಎನ್ನುತ್ತಾರೆ ರವಿ ವರ್ಮ. ಚಿತ್ರದಲ್ಲಿ 100ಕ್ಕೂ ಅಧಿಕ ಸಾಹಸ ನಿರ್ದೇಶಕರಿದ್ದು 'ರಾಯಣ್ಣ' ಹೊಸ ದಾಖಲೆ ನಿರ್ಮಿಸಲಿದೆ ಎನ್ನುತ್ತಾರೆ ಅವರು.

    ಯಶೋವರ್ಧನ್ (ರಾಜು ಉಪೇಂದ್ರಕುಮಾರ್) ಸಂಗೀತ ಚಿತ್ರಕ್ಕಿದೆ. ದೇಶಭಕ್ತಿ ಗೀತೆ, ಯುಗಳ ಗೀತೆ, ಶೋಕಗೀತೆ, ಕ್ರಾಂತಿಗೀತೆ ಸೇರಿದಂತೆ ಒಟ್ಟು ಐದು ಹಾಡುಗಳು ಚಿತ್ರದಲ್ಲಿರುತ್ತವೆ. ಕೇಶವಾದಿತ್ಯ ಅವರ ಸಾಹಿತ್ಯ, ಕತೆ ಮತ್ತು ಸಂಭಾಷಣೆ ಇದಕ್ಕೆ ಜೊತೆಯಾಗಲಿದೆ.

    ರಮೇಶ್ ಬಾಬು ಛಾಯಾಗ್ರಹಣ, ಗೋವರ್ಧನ್ ಸಂಕಲನ, ಚಿನ್ನಿ ಕೃಷ್ಣ ಹಾಗೂ ಶಿವಶಂಕರ್ ಅವರ ನೃತ್ಯ ನಿರ್ದೇಶನವಿದೆ. ನಿರ್ದೇಶಕ ನಾಗಣ್ಣ ಹಾಗೂ ಕೇಶವಾದಿತ್ಯ ಜಂಟಿಯಾಗಿ ಚಿತ್ರಕಥೆಯನ್ನು ಹೆಣೆದಿದ್ದಾರೆ. ಕಿತ್ತೂರು ರಾಣಿ ಚೆನ್ನಮ್ಮನಾಗಿ ಡಾ.ಜಯಪ್ರದ ಅಭಿನಯಿಸಲಿದ್ದಾರೆ.

    ನವೆಂಬರ್ 19ರಂದು ಕಾಂಗ್ರೆಸ್ ಮುಖಂಡ ಸಿದ್ದರಾಮಯ್ಯ ಕ್ಯಾಮೆರಾ ಸ್ವಿಚ್ ಆನ್ ಮಾಡುವ ಮೂಲಕ 'ರಾಯಣ್ಣ' ಚಿತ್ರೀಕರಣಕ್ಕೆ ಚಾಲನೆ ನೀಡಲಿದ್ದಾರೆ. ಇದೇ ಸಂದರ್ಭದಲ್ಲಿ ಕೃಷಿ ಸಚಿವ ಉಮೇಶ್ ಕತ್ತಿ ಅವರು ಕ್ಲಾಪ್ ಮಾಡಲಿದ್ದಾರೆ. 'ರಾಯಣ್ಣ' ದರ್ಶನ್‌ಗೆ ನಿಖಿತಾ ಸಾಥ್ ನೀಡಲಿದ್ದಾರೆ.

    Wednesday, November 17, 2010, 12:07
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X