»   » 'ಭಕ್ತ ಅಂಬರೀಷ'ನಿರ್ಮಿಸಲು ಪಾರ್ವತಮ್ಮ ವಿಶ್ವಾಸ

'ಭಕ್ತ ಅಂಬರೀಷ'ನಿರ್ಮಿಸಲು ಪಾರ್ವತಮ್ಮ ವಿಶ್ವಾಸ

Posted By: *ಪೂರ್ಣಚಂದ್ರ ಗುಪ್ತ
Subscribe to Filmibeat Kannada

ವರನಟ ಡಾ.ರಾಜಕುಮಾರ್ ಅವರ ಕನಸು 'ಭಕ್ತ ಅಂಬರೀಷ' ಕಡೆಗೂ ನೆರವೇರಲಿಲ್ಲ. ಇದೀಗ 'ಭಕ್ತ ಅಂಬರೀಷ' ಚಿತ್ರವನ್ನು ಪುನೀತ್, ರಾಘವೇಂದ್ರ ಮತ್ತು ಶಿವರಾಜ್ ಕುಮಾರ್ ಅವರೊಂದಿಗೆ ಮಾಡುವುದಾಗಿ ಕನ್ನಡ ಚಿತ್ರರಂಗದ ಹಿರಿಯ ನಿರ್ಮಾಪಕಿ ಪಾರ್ವತಮ್ಮ ರಾಜ್ ಕುಮಾರ್ ಆಶಾಭಾವ ವ್ಯಕ್ತಪಡಿಸಿದ್ದಾರೆ.

ಕರ್ನಾಟಕ ಚಲನಚಿತ್ರ ಅಕಾಡೆಮಿ ಆಯೋಜಿಸಿದ್ದ ವಿಶಿಷ್ಟ ಕಾರ್ಯಕ್ರಮ 'ಬೆಳ್ಳಿ ಹೆಜ್ಜೆ'ಯಲ್ಲಿ ಪಾರ್ವತಮ್ಮ ತಮ್ಮ ಮನದಾಳದ ಮಾತುಗಳನ್ನು ಸಹೃದಯರೊಂದಿಗೆ ಹಂಚಿಕೊಂಡು ಖುಷಿಪಟ್ಟರು. ಕನ್ನಡ ಚಿತ್ರರಂಗದೊಂದಿಗಿನ ಐದು ದಶಕಗಳ ಒಡನಾಟವನ್ನು ಪಾರ್ವತಮ್ಮ ಒಂದಾಗಿ ನೆನಪಿಸಿಕೊಂಡರು.

ಆರು ವರ್ಷಗಳ ಹಿಂದೆ 'ಭಕ್ತ ಅಂಬರೀಷ' ಚಿತ್ರದ ಎಂಟು ಹಾಡುಗಳಿಗಾಗಿ ರು.30 ಲಕ್ಷ ವೆಚ್ಚ ಮಾಡಲಾಗಿತ್ತು. ಜತೆಗೆ ಎರಡು ಕಂದ ಪದ್ಯಗಳನ್ನೂ ಚಿತ್ರದಲ್ಲಿ ಸೇರಿಸಲಾಗಿತ್ತು.ಸಂಗೀತ ನಿರ್ದೇಶಕ ಹಂಸಲೇಖ ಅವರ ನೇತೃತ್ವದಲ್ಲಿ ಹಾಡುಗಳ ಸಂಯೋಜನೆ ನಡೆಯುತ್ತಿತ್ತು. ನರಹಂತಕ ವೀರಪ್ಪನ್ ಅಪರಹಣದ ನಂತರ 'ಭಕ್ತ ಅಂಬರೀಷ' ಚಿತ್ರ ನೆನಗುದಿಗೆ ಬಿದ್ದ ದುರಂತವನ್ನು ಪಾರ್ವತಮ್ಮ ಹೇಳಲು ಮರೆಯಲಿಲ್ಲ.

ಪೂಜಾ ಕಾರ್ಯಕ್ರಮಕ್ಕಾಗಿ ಡಾ.ರಾಜ್ ಕುಮಾರ್ ಅವರು ಗಾಜನೂರಿಗೆ ಹೋಗಬೇಕಾಗಿತ್ತು. ಆಗಲೇ ರಾಜ್ ಅವರನ್ನು ನರಹಂತಕ, ದಂತಚೋರ ವೀರಪ್ಪನ್ ಅಪಹರಿಸಿದ್ದು. ನಂತರ ಕಾಡಿನಿಂದ ನಾಡಿಗೆ ರಾಜ್ ಹಿಂತಿರುಗಿದ ಬಳಿಕ ಮಂಡಿ ನೋವಿನಿಂದ ಬಳಲುತ್ತಿದ್ದರು. ನಂತರದ ದಿನಗಳಲ್ಲಿ ಮಂಡಿ ನೋವು ತೀವ್ರವಾಗಿ ಕಡೆಗೂ ಭಕ್ತ ಅಂಬರೀಷ್ ಚಿತ್ರದಲ್ಲಿ ನಟಿಸಲು ಸಾಧ್ಯವಾಗಲೇ ಇಲ್ಲ ಎಂದು ಪಾರ್ವತಮ್ಮ ಮೆಲುಕು ಹಾಕಿದರು.

ಭಕ್ತ ಅಂಬರೀಷ ಚಿತ್ರವನ್ನು ಮಕ್ಕಳು ಮಾಡಲಿ ಎಂಬ ಮಾತಿಗೆ ರಾಜ್ ಅವರೂ ಒಪ್ಪಿಗೆ ಸೂಚಿಸಿದ್ದರು ಎಂದು ಪಾರ್ವತಮ್ಮ ನೆನಪಿನ ಬುತ್ತಿ ಬಿಚ್ಚಿದರು. ಚೆನ್ನೈನಲ್ಲಿ ಚಿತ್ರೀಕರಣ ನಡೆಯುತ್ತಿದ್ದ ದಿನಗಳಲ್ಲಿ ಕನ್ನಡ ಚಿತ್ರಗಳಿಗೆ ಅಷ್ಟಾಗಿ ಪ್ರಾಮುಖ್ಯತೆ ಇರಲಿಲ್ಲ. ರಾತ್ರಿಯ ವೇಳೆ ಚಿತ್ರೀಕರಿಸಿಕೊಳ್ಳಲು ಕನ್ನಡ ಚಿತ್ರಗಳಿಗೆ ಅವಕಾಶ ಕೊಡುತ್ತಿದ್ದರು. ಆಗ ಚೆನ್ನೈನ ಗುಗ್ಗ್ಗು ಮಹಲ್ ನ ಸಣ್ಣ ಕೊಠಡಿಯಲ್ಲಿ ತಾವು ಉಳಿದುಕೊಂಡಿದ್ದಾಗಿ ಪಾರ್ವತಮ್ಮ ಹಳೆಯ ದಿನಗಳಿಗೆ ಹೊರಳಿದರು.

ತಮ್ಮ ಬಾಲ್ಯದ ದಿನಗಳು, ಚೆನ್ನೈನಲ್ಲಿನ ಜೀವನ, ರಣಧೀರ ಕಂಠೀರವ ಮಾಡಿದ್ದು, ಆಗ ಕೇವಲ ಒಂದು ಲಕ್ಷದಲ್ಲಿ ಕನ್ನಡ ಚಿತ್ರಗಳನ್ನು ನಿರ್ಮಿಸುತ್ತಿದ್ದದ್ದು, ಗೀತ ಸಾಹಿತಿ ಚಿ ಉದಯಶಂಕರ್ ಅವರ ನೆನಪು, ಚಿತ್ರ ವಿತರಣೆಯಿಂದ ನಿರ್ಮಾಣಕ್ಕೆ ಕೈಹಾಕಿದ್ದು, ಡಾ.ರಾಜ್ ಅವರು ರು.500 ಮತ್ತು ರು.1000 ನೋಟುಗಳನ್ನು ನೋಡದೇ ಇದ್ದದ್ದು... ಹೀಗೆ ನೆನಪುಗಳ ಮೆರವಣಿಗೆ ಸಭಿಕರ ಮುಂದೆ ಸಾಗಿದ್ದು ವಿಶಿಷ್ಟವಾಗಿತ್ತು.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada