ಕರ್ನಾಟಕದ ಅಭಿಮಾನಿಗಳಿಗೆ ಮಾಲಾಶ್ರೀ ಕೃತಜ್ಞತೆ
ಹಿಂದೊಮ್ಮೆ ಕನ್ನಡ ಚಿತ್ರರಂಗವನ್ನು ಏಳು ವರ್ಷಗಳ ಕಾಲ ಅಕ್ಷರಶಃ ಆಳಿದ್ದ, ಇಂದಿಗೂ ಬೇಡಿಕೆ ಉಳಿಸಿಕೊಂಡಿರುವ ನಟಿ ಕನಸಿನ ರಾಣಿ ಮಾಲಾಶ್ರೀ, ಇದೀಗ ಬಿಡುಗಡೆ ಆಗಿರುವ ತಮ್ಮ ಚಿತ್ರ 'ಶಕ್ತಿ' ಪ್ರಚಾರಕ್ಕಾಗಿ ಕರ್ನಾಟಕದ ತುಂಬೆಲ್ಲ ಸಂಚರಿಸುತ್ತಿದ್ದಾರೆ. ಮೊನ್ನೆ ದಾವಣೆಗೆರೆಗೆ ಹೋಗಿದ್ದಾಗ ಬೆಣ್ಣೆದೋಸೆ ತಿಂದು ಸುದ್ದಿಯಾಗಿದ್ದ ಮಾಲಾಶ್ರೀ ನಿನ್ನೆ ಮೈಸೂರಿನಲ್ಲಿ ಅಭಿಮಾನಿಗಳ 'ಹೂಮಾಲೆ'ಗೆ ಕೊರಳೊಡ್ಡಿದ್ದಾರೆ.
ತಮ್ಮ ಚಿತ್ರಗಳಲ್ಲಿ ಸಮಾಜ ಸುಧಾರಣೆಯನ್ನೇ ಪ್ರಮುಖ ವಿಷಯವಾಗಿ ಬಿಂಬಿಸುವ ಮಾಲಾಶ್ರೀಗೆ ರಾಜಕೀಯ ಸೇರುವ ಯಾವುದೇ ಅಭಿಲಾಶೆ ಇಲ್ಲವಂತೆ. ಅದನ್ನು ತಮ್ಮ ಪ್ರಚಾರದ ವೇಳೆ ಸ್ಪಷ್ಟಪಡಿಸಿರುವ ಮಾಲಾಶ್ರೀ, ತಮ್ಮದೇನಿದ್ದರೂ ಸಿನಿಮಾ ನಟನೆ ಹಾಗೂ ನಿರ್ಮಾಣದ ಮೂಲಕ ಮಾಡುವ ಸಮಾಜ ಸೇವೆ ಎಂದಿದ್ದಾರೆ. ಕನ್ನಡ ಸಿನಿಮಾಗಳನ್ನು ಹೆಚ್ಚು ಹೆಚ್ಚು ನೋಡುವಂತೆ ಜನರಿಗೆ ಕರೆಕೊಟ್ಟಿದ್ದಾರೆ.
ಕರ್ನಾಟಕದಾದ್ಯಂತ ಸಂಚರಿಸುತ್ತಿರುವ ಮಾಲಾಶ್ರೀಗೆ ಜನ ತಮ್ಮನ್ನು ಈಗಲೂ ಮೊದಲಿನಷ್ಟೇ ಇಷ್ಟಪಡುತ್ತಿದ್ದಾರೆ ಎಂಬ ವಿಷಯವನ್ನು ನಂಬಲಿಕ್ಕೆ ತುಂಬಾ ಕಷ್ಟವಾಗುತ್ತಿದೆಯಂತೆ. ಎಲ್ಲಾ ಕಡೆ ಜನ ಪ್ರೀತಿ, ಅಭಿಮಾನಿಗಳ ಮಳೆಯನ್ನೇ ಸುರಿಸುತ್ತಿದ್ದಾರೆ ಎಂದಿರುವ ಮಾಲಾಶ್ರೀ ನಿನ್ನೆ ಮೈಸೂರಿನಲ್ಲಿ ಅಭಿಮಾನಿಗಳು ತಮಗೆ ಹೂವಿನ ಹಾರ ಹಾಕಿದ್ದನ್ನು ಸ್ಮರಿಸಿಕೊಂಡರು. (ಒನ್ ಇಂಡಿಯಾ ಕನ್ನಡ)


Click it and Unblock the Notifications











