»   » ಕನ್ನಡಕ್ಕೆ ಸ್ಲಂಡಾಗ್ ಮಿಲಿಯನೇರ್ ತಾರೆ 'ತನ್ವಿ'

ಕನ್ನಡಕ್ಕೆ ಸ್ಲಂಡಾಗ್ ಮಿಲಿಯನೇರ್ ತಾರೆ 'ತನ್ವಿ'

Posted By:
Subscribe to Filmibeat Kannada

ಆಸ್ಕರ್ ಪ್ರಶಸ್ತಿ ಪುರಸ್ಕೃತ 'ಸ್ಲಂಡಾಗ್ ಮಿಲಿಯನೇರ್' ಚಿತ್ರದ ಬಾಲ ಕಲಾವಿದೆ ತನ್ವಿ ಕನ್ನಡಕ್ಕೆ ಪದಾರ್ಪಣೆ ಮಾಡಿದ್ದಾರೆ. ಮಾಸ್ಟರ್ ಕಿಶನ್ ಮುಖ್ಯಭೂಮಿಕೆಯಲ್ಲಿರುವ '15...ಈ ವಯಸ್ಸೇ ಒಂಥರಾ' ಚಿತ್ರಕ್ಕೆ ತನ್ವಿ ಅಡಿಯಿಟ್ಟಿದ್ದಾರೆ. ಈ ಚಿತ್ರಕ್ಕೆ ಕಿಶನ್ ಅವರ ತಂದೆ ಶ್ರೀಕಾಂತ್ ಆಕ್ಷನ್, ಕಟ್ ಹೇಳುತ್ತಿದ್ದಾರೆ.

ತನ್ವಿ ಶಿವಾನಿ ಚಿಕ್ಕ ವಯಸ್ಸಿನಲ್ಲೇ ಹಲವಾರು ಜಾಹೀರಾತುಗಳಲ್ಲಿ ಕಾಣಿಸಿಕೊಂಡವರು. ವೊಡಾಫೋನ್, ಕ್ಲಿನಿಕ್ ಪ್ಲಸ್, ಹಾರ್ಲಿಕ್ಸ್ ಮತ್ತು ಹಲವಾರು ಜನಪ್ರಿಯ ಉತ್ಪನ್ನಗಳ ಜಾಹೀರಾತುಗಳಲ್ಲಿ ಕಾಣಿಸಿಕೊಂಡಿದ್ದರು. ಹಿಂದಿಯ ಡಾರ್, ವಾದಾ ರಹಾ ಚಿತ್ರಗಳಲ್ಲೂ ಬಾಲ ಕಲಾವಿದೆಯಾಗಿ ಅಭಿನಯಿಸಿದ್ದಾರೆ.

ಮಾಸ್ಟರ್ ಕಿಶನ್ ಇದುವರೆಗೂ 70ಕ್ಕೂ ಅಧಿಕ ಚಿತ್ರಗಳಲ್ಲಿ ಅಭಿನಯಿಸಿದ್ದು, ಅವರ 'ಕೇರ್ ಆಫ್ ಫುಟ್ ಪಾತ್' ಚಿತ್ರ ಗಿನ್ನಿಸ್ ದಾಖಲೆಗೆ ಸೇರ್ಪಡೆಯಾಗಿದೆ. ಅವರ ತಂದೆ ಎಚ್ ಆರ್ ಶ್ರೀಕಾಂತ್ ಮಾಜಿ ಆದಾಯ ತೆರಿಗೆ ಅಧಿಕಾರಿ. ಸದ್ಯಕ್ಕೆ ಕಿಶನ್ ಎಸ್ಸೆಸ್ಸೆಲ್ಸಿ ಓದುತ್ತಿದ್ದು ಗ್ರಾಫಿಕ್ಸ್ ಮತ್ತು ಅನಿಮೇಷನ್‌ನಲ್ಲಿ ತರಬೇತಿಯನ್ನು ಪಡೆದಿದ್ದಾರೆ.

ಇದುವರೆಗೂ 70ಕ್ಕೂ ಹೆಚ್ಚು ಜಾಹೀರಾತುಗಳಲ್ಲಿ ಅಭಿನಯಿಸಿರುವ ಮುಂಬೈನ ಋಷಿತಾ ಸಹ ಈ ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಈಕೆಗೂ ವಯಸ್ಸು ಇನ್ನೂ ಕೇವಲ 15. ಹಿಂದಿಯ 'ಪರಿಣೀತಾ' ಚಿತ್ರದಲ್ಲಿ ವಿದ್ಯಾ ಬಾಲನ್ ಜೊತೆ ನಟಿಸಿದ್ದರು. ಪಿಯರ್ಸ್, ಮ್ಯಾಗಿ ಆಕೆ ನಟಿಸಿದ ಕೆಲವು ಜನಪ್ರಿಯ ಜಾಹೀರಾತುಗಳು.

'15...ಈ ವಯಸ್ಸೇ ಒಂಥರಾ' ಚಿತ್ರದ ಚಿತ್ರೀಕರಣ ಅಕ್ಟೋಬರ್ 20 ರಿಂದ ನವೆಂಬರ್ 11ರ ತನಕ ನಡೆಯಲಿದೆ. ಸಾಲ್ಟ್ ಅಂಡ್ ಪೆಪ್ಪರ್ ಎಂಟರ‍್ಟೈನ್‌ಮೆಂಟ್ ಪ್ರೈ.ಲಿ ಲಾಂಛನದಲ್ಲಿ ಈ ಚಿತ್ರವನ್ನು ಶ್ರೀಕಾಂತ್ ನಿರ್ಮಿಸುತ್ತಿದ್ದಾರೆ. ಚಿತ್ರದ ಉಳಿದ ಪಾತ್ರವರ್ಗದಲ್ಲಿ ವಿ ಮನೋಹರ್, ತಬಲಾ ನಾಣಿ, ಬೇಬಿ ಶ್ರೀಜಾನಿ, ಮಾಸ್ಟರ್ ಲಕ್ಷ್ಮಣ್, ಜಯಶ್ರೀರಾಜ್ ಅಭಿನಯಿಸಿದ್ದಾರೆ.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada