6 ತಿಂಗಳಲ್ಲಿ ಬಾಕ್ಸ್ ಆಫೀಸ್ ಚಿಂದಿ ಉಡಾಯಿಸಿದ ಚಿತ್ರಗಳು

ಓದುಗ ಮಹಾಪ್ರಭುಗಳು ಇಲ್ಲಿ ಗಮನಿಸಬೇಕಾದ ಅಂಶವೇನಂದರೆ ಈ ಪಟ್ಟಿ ಮಾಧ್ಯಮದಲ್ಲಿ ಬಂದ ವರದಿಗಳು, ಚಿತ್ರತಂಡ ನೀಡಿದ ಪತ್ರಿಕಾ ಹೇಳಿಕೆ, ಬಾಯಿ ಇಂದ ಬಾಯಿಗೆ ಹರಡಿದ ಸುದ್ದಿಗಳು ಮತ್ತು ನಮ್ಮ ಪತ್ರಿಕಾ ವರದಿಗಾರರು ನೀಡಿದ ವರದಿ ಆಧರಿಸಿ ಬರೆಯಲಾಗಿದೆ.
ಈ ಆರು ತಿಂಗಳಲ್ಲಿ 54 ಚಿತ್ರಗಳು ಬಿಡುಗಡೆಗೊಂಡಿದ್ದವು. ಇದರಲ್ಲಿ ಎರಡು ಬ್ಲಾಕ್ ಬಸ್ಟರ್, ಮೂರು ಹಿಟ್ ಮತ್ತು ನಾಲ್ಕು ಎವರೇಜ್ ಹಿಟ್ ಚಿತ್ರಗಳನ್ನು ಚಿತ್ರರಂಗ ಕಂಡಿದೆ.
ಬ್ಲಾಕ್ ಬಸ್ಟರ್ ಸಿನಿಮಾಗಳು
1. ಕೆಂಪೇಗೌಡ: ತಮಿಳಿನ ಸಿಂಗಂ ಚಿತ್ರದ ರಿಮೇಕ್. ಸುದೀಪ್, ರವಿಶಂಕರ್, ರಾಗಿಣಿ ಮುಖ್ಯ ಭೂಮಿಕೆಯಲ್ಲಿರುವ ಈ ಚಿತ್ರ ನಾಡಿನ ಉದ್ದಗಲಕ್ಕೂ ಭರ್ಜರಿ ಸದ್ದು ಮಾಡಿತ್ತು.
2. ಹುಡುಗ್ರು: ತಮಿಳಿನ ನಾಡೋಡಿಗಳ್ ಚಿತ್ರದ ರಿಮೇಕ್. ಪುನೀತ್ ಮುಖ್ಯಭೂಮಿಕೆ ಯಲ್ಲಿರುವ ಚಿತ್ರ ಎಂದ ಮೇಲೆ ಹಿಟ್ ಗ್ಯಾರಂಟಿ ಅನ್ನುವ ಟ್ರೆಂಡ್ ಈ ಚಿತ್ರದಲ್ಲಿ ಕೂಡ ಮುಂದುವರಿದಿದೆ. ಪುನೀತ್ ಜೊತೆ ಶ್ರೀನಗರ ಕಿಟ್ಟಿ ಮತ್ತು ಯೋಗೀಶ್ ಯಾನೆ ಲೂಸ್ ಮಾದಾ ಅಭಿನಯದ ಚಿತ್ರ. ಯೋಗೀಶ್ ನಟನೆ ವ್ಯಾಪಕ ಪ್ರಶಂಸೆಗೆ ಒಳಗಾಗಿತ್ತು.
ಹಿಟ್ ಚಿತ್ರಗಳು
1. ಒಲವೇ ಮಂದಾರ: ಜಯತೀರ್ಥ ನಿರ್ದೇಶನದ ಶ್ರೀಕಾಂತ್, ಆಕಾಂಕ್ಷ, ಶರಣ್ ಮುಖ್ಯ ಭೂಮಿಕೆಯಲ್ಲಿರುವ ಚಿತ್ರ ಸದ್ದಿಲ್ಲದೇ ಗೆದ್ದು ದಕ್ಷಿಣ ಭಾರತದಲ್ಲಿ ಒಳ್ಳೆ ಹೆಸರು ಮಾಡಿತ್ತು. ಈ ಚಿತ್ರ ತಮಿಳು ಮತ್ತು ತೆಲುಗು ಭಾಷೆಗೆ ರಿಮೇಕ್ ಆಗುತ್ತಿದೆ.
2. ಸಂಜು ವೆಡ್ಸ್ ಗೀತಾ: ಒಂದು ಚಿತ್ರ ಹಿಟ್ ಆಗಲು ಹಾಡು ಬಹಳ ಮುಖ್ಯ ಎಂದು ತೋರಿಸಿ ಕೊಟ್ಟ ಸದಭಿರುಚಿಯ ಸ್ವಮೇಕ್ ಚಿತ್ರ. ಚಿತ್ರದ ಎಲ್ಲಾ ಹಾಡುಗಳು ಜನಪ್ರಿಯತೆಯ ಉತ್ತುಂಗಕ್ಕೆ ಏರಿತ್ತು. ಶ್ರೀನಗರ ಕಿಟ್ಟಿ, ರಮ್ಯಾ ಮುಖ್ಯ ಭೂಮಿಕೆಯಲ್ಲಿರುವ ಈ ಚಿತ್ರವನ್ನು ನಾಗಶೇಖರ್ ನಿರ್ದೇಶಿಸಿದ್ದರು. ಈ ಚಿತ್ರಕ್ಕೆ ಜೆಸ್ಸಿ ಗಿಫ್ಟ್ ಸಂಗೀತ ಸಂಗೀತ ನೀಡಿದ್ದರು.
3. ಕಿರಾತಕ: ಮತ್ತೊಂದು ರಿಮೇಕ್. ತಮಿಳಿನ ಕಲಾವಾಣಿ ಚಿತ್ರದ ರಿಮೇಕ್ ಆಗಿರುವ ಚಿತ್ರದಲ್ಲಿ ಯಶ್, ಒವಿವಾ ಹೆಲನ್ ಪ್ರಮುಖ ತಾರಾಗಣದಲ್ಲಿದ್ದರು. ಚಿತ್ರ ಉತ್ತಮ ಒಪನಿಂಗ್ ಪಡೆಯದಿದ್ದರೂ ಎಲ್ಲರೂ ಹುಬ್ಬೇರಿಸುವಂತೆ ಹಿಟ್ ಚಿತ್ರದ ಪಟ್ಟಿಗೆ ಸೇರ್ಪಡೆಯಾಯಿತು.
ಎವರೇಜ್ ಹಿಟ್ ಚಿತ್ರಗಳು
1. ಬಾಸ್ : ದರ್ಶನ್, ನವ್ಯಾ ನಾಯರ್, ರೇಖಾ ಮತ್ತು ತಮಿಳಿನ ಪ್ರಭು ನಟನೆಯ ಸಿನಿಮಾ, ಎಂದಿನಂತೆ ದರ್ಶನ್ ಚಿತ್ರಕ್ಕೆ ಸಿಗುವ ಹಾಗೆ ಅದ್ದೂರಿ ಒಪನಿಂಗ್ ಪಡೆದಿತ್ತು. ಮೊದಲ ಎರಡು ವಾರ ಉತ್ತಮ ಗಳಿಕೆ ಕಂಡ ಚಿತ್ರ.
2. ಕೋಟೆ: ಪ್ರಜ್ವಲ್ ದೇವರಾಜ್, ಡಿಂಪಲ್ ನಟನೆಯ ಈ ಚಿತ್ರವನ್ನು ಶ್ರೀನಿವಾಸ್ ರಾಜು ನಿರ್ದೇಶಿಸಿದ್ದರು. ಪ್ರಮುಖವಾಗಿ ಉತ್ತರ ಕರ್ನಾಟಕದ ಭಾಗದಲ್ಲಿ ಬಿಡುಗಡೆಗೊಂಡ ಎಲ್ಲಾ ಥಿಯೇಟರ್ ಗಳಲ್ಲಿ ಚಿತ್ರ ಒಳ್ಳೆ ಕಲೆಕ್ಷನ್ ಪಡೆದಿತ್ತು.
3. ಕಳ್ ಮಂಜ: ಮಲಯಾಳಂ ಚಿತ್ರದ ರಿಮೇಕ್. ಕೋಮಲ್ ಕುಮಾರ್, ಉದಯತಾರಾ ಅಭಿನಯದ ಚಿತ್ರ ಎವರೇಜ್ ಹಿಟ್ ಆಗಿದ್ದು ಕೋಮಲ್ ಗೆ ಒಂದು ರೀತಿಯಲ್ಲಿ ಬೇರೆ ರೀತಿಯ ಪ್ರಾತ್ರಕ್ಕೆ ಅವಕಾಶ ಸಿಕ್ಕಿದಂತಾಯಿತು.
4. ಡಬಲ್ ಡೆಕ್ಕರ್: ಹಿಂದಿಯ ಸ್ಯಾಂಡ್ ವಿಚ್ ಚಿತ್ರದ ರಿಮೇಕ್. ಜಗ್ಗೇಶ್, ಶ್ರದ್ದಾ ಆರ್ಯಾ ನಟನೆಯ ಈ ಚಿತ್ರ ಪ್ರೇಕ್ಷಕರನ್ನು ಸೆಳೆಯುವಲ್ಲಿ ಸುಮಾರಾಗಿ ಯಶಸ್ವಿಯಾಗಿತ್ತು.


Click it and Unblock the Notifications











