»   »  ಮತ್ತೊಂದು ರಿಮೇಕ್ ಚಿತ್ರಕ್ಕೆ ಪುನೀತ್ ಆಯ್ಕೆ

ಮತ್ತೊಂದು ರಿಮೇಕ್ ಚಿತ್ರಕ್ಕೆ ಪುನೀತ್ ಆಯ್ಕೆ

By: * ನಿಸ್ಮಿತಾ
Subscribe to Filmibeat Kannada

ಮತ್ತೊಂದು ರಿಮೇಕ್ ಚಿತ್ರವನ್ನು ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಒಪ್ಪಿಕೊಂಡಿರುವ ಸುದ್ದಿ ಗಾಂಧಿನಗರದ ಗಲ್ಲಿನಿಂದ ಬಂದಿದೆ. ನಮ್ಮ ಪಕ್ಕದ್ಮನೆಯಲ್ಲಿ ಸ್ಟಾರ್ ನಟರಿಲ್ಲದ ಪ್ರತಿಭೆಯಾಧಾರಿತ ಚಿತ್ರವೊಂದು ಹಣದೋಚುತ್ತಿರುವ ಸುದ್ದಿ ತಿಳಿದ ಗಾಂಧಿನಗರದ ನಿರ್ಮಾಪಕರು ಚಿತ್ರದ ಹಕ್ಕು ಪಡೆದು ಪುನೀತ್ ಗೆ ಗಾಳ ಹಾಕಿದ್ದಾರೆ.

ಹೌದು, ತಮಿಳಿನಲ್ಲಿ ನಾಡೋಡಿಗಳ್ ಚಿತ್ರ ಈ ಪರಿ ಯಶಸ್ಸು ಗಳಿಸುತ್ತದೆ ಎಂದು ಸ್ವತಃ ನಿರ್ದೇಶಕ ಸಮುತ್ತಿರ ಕನಿಗೆ ಅಚ್ಚರಿ ಮೂಡಿಸಿದೆ. ಆದರೂ, ಸುಬ್ರಮಣ್ಯಪುರಂ ನಂತಹ ಯಶಸ್ವಿ ಚಿತ್ರದಲ್ಲಿ ನಟಿಸಿದ್ದ ಶಶಿಕುಮಾರ್ ಮೇಲೆ ಭರವಸೆ ಇಟ್ಟಿದ್ದ ಸಮುತ್ತಿರಕನಿಗೆ ನಿರಾಶೆ ಆಗಲಿಲ್ಲ. ಶಶಿಕುಮಾರ್, ವಿಜಯ್ ವಸಂತ್, ಭರಣಿ ಮೂವರು ಪಾತ್ರಕ್ಕೆ ಜೀವ ತುಂಬಿ ಚಿತ್ರವನ್ನು ಶತದಿನದತ್ತ ಕರೆದೊಯ್ಯುತ್ತಿದ್ದಾರೆ. ತಂಗಿ ಪಾತ್ರದಲ್ಲಿ ಅಭಿನಯ, ನಾಯಕಿ ಅನನ್ಯ ಕೂಡಪೂರಕವಾಗಿ ನಟಿಸಿದ್ದಾರೆ.

ಸುಮಾರು 7.40 ಕೋಟಿ ವೆಚ್ಚದ ಈ ನಾಡೋಡಿಗಳ್ ಚಿತ್ರ, ಶತದಿನ ತಲುಪುವ ಸಮಯದಲ್ಲಿ ಸುಮಾರು 30 ಕೋಟಿಯಂತೂ ಗಳಿಸುವುದು ಗ್ಯಾರಂಟಿ . ಸುಮಾರು 168 ಕೇಂದ್ರಗಳಲ್ಲಿ ತುಂಬಿದ ಗೃಹ ಪ್ರದರ್ಶನ ಕಾಣುತ್ತಿದೆ ಎನ್ನುತ್ತಾರೆ ನಿರ್ದೇಶಕ ಕನಿ. ಕನ್ನಡ, ತೆಲುಗು ಹಾಗೂ ಹಿಂದಿಯಲ್ಲಿ ಈ ಚಿತ್ರವನ್ನು ನಿರ್ದೇಶಿಸಲು ಯೋಜನೆ ಹಾಕಿಕೊಂಡಿದ್ದಾರೆ. ತೆಲುಗಿನಲ್ಲಿ ರವಿತೇಜ ನಾಯಕರಾದರೆ, ಹಿಂದಿಯಲ್ಲಿ ಆಸ್ಕರ್ ವಿಜೇತ ಸ್ಲಂಡಾಗ್ ಮಿಲೇನಿಯರ್ ಚಿತ್ರದ ನಾಯಕ ದೇವ್ ಪಟೇಲ್ ನಟಿಸಲಿದ್ದಾರೆ. ಕನ್ನಡ ಆವೃತ್ತಿಯಲ್ಲಿ ಪುನೀತ್ ಮುಖ್ಯಭೂಮಿಕೆಯಲ್ಲಿದ್ದು, ಉಳಿದ ತಾರಾಗಣದ ಬಗ್ಗೆ ತಿಳಿದುಬಂದಿಲ್ಲ, ಡಿಸೆಂಬರ್ ವೇಳೆಗೆ ಕನ್ನಡ ಅವೃತ್ತಿಯ ಚಿತ್ರೀಕರಣ ಆರಂಭವಾಗಲಿದೆ.

ಸಣ್ಣ ಊರೊಂದರ ಕರುಣಾ(ಶಶಿಕುಮಾರ್), ಚಂದನ್(ವಿಜಯ್ ವಸಂತ್) ಹಾಗೂ ಪಾಂಡಿಯನ್ (ಭರಣಿ) ಮೂವರು ಯುವಕರ ಸ್ನೇಹ, ಬಿರುಕು ಕುರಿತ ನವಿರಾದ ಕಥೆ ಯನ್ನು ನಾಡೋಡಿಗಳ್ ಚಿತ್ರ ಹೊಂದಿದೆ.ಕಿವುಡಿ, ಮೂಕಿಯಾಗಿರುವ ಅಭಿನಯ ಮನಸ್ಸಿನಲ್ಲಿ ಉಳಿಯುತ್ತಾರೆ.ಅನನ್ಯ ಹಾಗೂ ಶಾಂತಿನಿ ಇನ್ನಿಬ್ಬರು ನಟಿಯರು ಇದ್ದಾರೆ. ನಾಡೋಡಿಗಳ್ ಎಂದರೆ ಅಲೆಮಾರಿ ಎಂದರ್ಥ. ದುಡಿಮೆಯನ್ನರಸಿ ಊರೂರು ಅಲೆವ ಯುವ ಪೀಳಿಗೆಯ ನೋವು ನಲಿವುಗಳೇ ಇಲ್ಲಿ ಕಥೆಯಾಗಿದೆ.

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada