»   »  ಪ್ರತಿಭಾ ನವ ನವೋನ್ಮೇಶಶಾಲಿನಿ...

ಪ್ರತಿಭಾ ನವ ನವೋನ್ಮೇಶಶಾಲಿನಿ...

Posted By: *ಜಯಂತಿ
Subscribe to Filmibeat Kannada

ಹೆಸರು ಪ್ರತಿಭಾರಾಣಿ. ಮಾನವ ಸಂಪನ್ಮೂಲ ವಿಭಾಗದಲ್ಲಿ ಪದವಿ ವಿದ್ಯಾರ್ಥಿನಿ. ಸಿನಿಮಾದ ಬಗ್ಗೆ ಹುಚ್ಚು ಆಕರ್ಷಣೆ. ನಾಯಕಿಯಾಗಿ ಮಿಂಚಬೇಕು ಅನ್ನೋದು ಮಹತ್ವಾಕಾಂಕ್ಷೆ. ಹಾಗೆಂದು ಪ್ರತಿಭಾ ಕನಸು ಕಾಣುತ್ತಾ ಕೂರಲಿಲ್ಲ. ಅವಕಾಶ ಕೊಡಿ ಎಂದು ಹತ್ತಾರು ಸಿನಿಮಾ ಮಂದಿಗೆ ಫೋಟೊ ಕಳಿಸಿದರು. ಫೋಟೊ ತಾಗಿದ್ದು ಟಿ.ಎನ್.ನಾಗೇಶ್ ಅವರಲ್ಲಿ.

ಎಸ್.ನಾರಾಯಣ್ ಬಳಿ ಸಹಾಯಕರಾಗಿ ದುಡಿದು ಅನುಭವವಿರುವ ನಾಗೇಶ್ ತಮ್ಮ ಚೊಚ್ಚಲ ನಿರ್ದೇಶನದ ಚಿತ್ರಕ್ಕೆ ಹೊಸ ಮುಖಗಳ ತಲಾಷಿನಲ್ಲಿದ್ದರು. ಪ್ರತಿಭಾ ಫೋಟೊ ಅವರ ಗಮನ ಸೆಳೆಯಿತು. ಹುಡುಗಿಯನ್ನು ಮಾತನಾಡಿಸಿದ್ದೂ ಆಯಿತು. ಒಳಗೆಲ್ಲೋ ಪ್ರತಿಭೆಯ ಸೆಳಕುಗಳು ಇರಬಹುದು ಅನ್ನಿಸಿತು. ಈ ರೂಪವಾಗಿ ಪ್ರತಿಭಾರಾಣಿಗೆ 'ಒಲವೇ ವಿಸ್ಮಯ'ದ ನಾಯಕಿ ಪಟ್ಟ ಒಲಿದುಬಂತು.

ಪ್ರತಿಭಾ ಮಾತಿನಮಲ್ಲಿ. ಕ್ಯಾಮೆರಾ ಮುಂದೆ ನಿಲ್ಲುವಾಗ, ಪತ್ರಕರ್ತರನ್ನು ಎದುರಿಸುವಾಗ ಹೊಸ ಹುಡುಗಿಯರು ಅಳುಕುವುದು ಸಹಜ. ಆದರೆ ಪ್ರತಿಭಾ ಅವರಲ್ಲಿ ಅಂಥ ಅಳುಕು ಕಾಣಿಸುವುದಿಲ್ಲ. ಶೂಟಿಂಗ್ ಬಗ್ಗೆ ಅವರ ಅನಿಸಿಕೆ ಕೇಳಿ:

'ಶೂಟಿಂಗ್ ತುಂಬಾ ಮಜವಾಗಿತ್ತು. ಅದು ಹೇಗೆ ಮುಗಿಯಿತೋ ಗೊತ್ತೇ ಆಗುತ್ತಿಲ್ಲ. ವಿಸ್ಮಯದಿಂದಲೇ ಮೊದಲ ಸಿನಿಮಾ ಮುಗಿದಿದೆ'. ಇದು ಪ್ರತಿಭಾ ವರಸೆ.

ಚೊಚ್ಚಲ ಚಿತ್ರದಲ್ಲಿ ನನಗೆ ಸಿಕ್ಕಿರುವ ಪಾತ್ರ ಗಟ್ಟಿಯಾದದ್ದು. ಪ್ರತಿಭಾ ಪ್ರದರ್ಶನಕ್ಕೆ ಹೇಳಿಮಾಡಿಸಿದ ಪಾತ್ರ. ಇಂಥ ಪಾತ್ರ ಸಿಕ್ಕಿದ್ದು ನನ್ನ ಅದೃಷ್ಟ. ಅಲ್ಲದೆ, ಸಿನಿಮಾದಲ್ಲಿ ನನ್ನ ಅಪ್ಪನ ಪಾತ್ರದಲ್ಲಿ ನಟಿಸಿರುವ ಅನಂತನಾಗ್ ನಟನೆಯ ಟಿಪ್ಸ್ಗಳನ್ನು ಹೇಳಿಕೊಟ್ಟಿದ್ದು ನನಗೆ ತುಂಬಾ ಅನುಕೂಲವಾಯಿತು. ತಪ್ಪು ಮಾಡಿದಾಗ ಅವರು ಥೇಟ್ ಅಪ್ಪನಂತೆ ತಿದ್ದುತ್ತಿದ್ದರು...

ಪ್ರತಿಭಾ ಮಾತುಗಳಲ್ಲಿ ವಿಸ್ಮಯವಿತ್ತು, ಮುಗ್ಧತೆಯಿತ್ತು.

ಹೊಸ ಹುಡುಗಿ ಚಿನಕುರಳಿಯಂತೆ ಮಾತನಾಡುತ್ತಿದ್ದರೆ, ಆಕೆಗೆ ಜೋಡಿಯಾಗಿ ನಟಿಸಿರುವ ಧರ್ಮ ಕೀರ್ತಿರಾಜ್ ಕಣ್ಣುಗಳಲ್ಲಿ ಆತಂಕವಿತ್ತು. ಈಗಾಗಲೇ ನವಗ್ರಹ ಚಿತ್ರದಲ್ಲಿ ನಟಿಸಿದ್ದರೂ ಧರ್ಮ ಅಳುಕಿನಿಂದ ಹೊರಬಂದಿಲ್ಲ. 'ನವಗ್ರಹ' ಚಿತ್ರದ ಏಳು ನಾಯಕರಲ್ಲಿ ಒಬ್ಬನಾಗಿದ್ದೆ. ಈಗ ಸೋಲೊ ಹೀರೊ. ಆ ಕಾರಣದಿಂದಲೇ ಭಯ' ಎಂದರು ಧರ್ಮ.

ನಾಯಕನಿಗೆ ಭಯ! ನಾಯಕಿಗೆ ವಿಸ್ಮಯ! ಸಿನಿಮಾ ಹೆಸರು ಒಲವೇ ವಿಸ್ಮಯ!

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada