»   » 'ಜೋಗಯ್ಯ'ನಿಗೆ ಸಿಎಂ ಶುಭ ಕಾಮನೆಗಳು

'ಜೋಗಯ್ಯ'ನಿಗೆ ಸಿಎಂ ಶುಭ ಕಾಮನೆಗಳು

Posted By:
Subscribe to Filmibeat Kannada

ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರ 100ನೇ ಚಿತ್ರ 'ಜೋಗಯ್ಯ'ನಿಗೆ ತಾಜ್ ವೆಸ್ಟೆಂಡ್ ಹೋಟೆಲ್ ನಲ್ಲಿ ಭಾನುವಾರ(ಜ.24) ಸಂಜೆ ಮುನ್ನುಡಿ ಬರೆಯಲಾಯಿತು. ರಕ್ಷಿತಾ ಪ್ರೇಮ್ ಅವರ ಚೊಚ್ಚಲ ನಿರ್ಮಾಣದ ಚಿತ್ರಕ್ಕೆ ಭರ್ಜರಿ ಆರಂಭ ಸಿಕ್ಕಿದೆ. ಭಾನುವಾರ ನಡೆದ 'ಜೋಗಯ್ಯ' ಚಿತ್ರದ ಪತ್ರಿಕಾಗೋಷ್ಠಿಗೆ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರು ಆಗಮಿಸಿದ್ದರು.

ಅತ್ಯಂತ ಯಶಸ್ವಿ ಚಿತ್ರ'ಜೋಗಿ'ಯನ್ನು ನಾನು ನೋಡಿದ್ದೇನೆ. 'ಜೋಗಯ್ಯ' ಚಿತ್ರವೂ ಯಶಸ್ವಿಯಾಗಲಿ ಎಂದು ಆಶಿಸುತ್ತೇನೆ. 'ಜೋಗಿ' ಚಿತ್ರದಲ್ಲಿ ಶಿವರಾಜ್ ಕುಮಾರ್ ಅವರ ಅಭಿಯನ ಅಮೋಘವಾಗಿತ್ತು. "ಜೋಗಯ್ಯ" ಚಿತ್ರವೂ ಪ್ರೇಕ್ಷಕರಿಗೆ ಇಷ್ಟವಾಗುತ್ತದೆ ಎಂಬ ವಿಶ್ವಾಸವನ್ನು ಯಡಿಯೂರಪ್ಪ ಈ ಸಂದರ್ಭದಲ್ಲಿ ವ್ಯಕ್ತಪಡಿಸಿದರು.

ರೆಬಲ್ ಸ್ಟಾರ್ ಅಂಬರೀಷ್ ಮಾತನಾಡುತ್ತಾ, ಅಯ್ಯಾ ಎಂದರೆ ತಾತಾ ಎಂದರ್ಥ. 'ಜೋಗಿ' ಚಿತ್ರದ ತಾತನ ತರಹ 'ಜೋಗಯ್ಯ' ಇರುತ್ತದೆ ಎಂದು ತಮ್ಮದೇ ಆದ ಶೈಲಿಯಲ್ಲಿ ಹೇಳಿದರು. ಈ ಚಿತ್ರದ ಬಗ್ಗೆ ನನಗೂ ಸಾಕಷ್ಟು ಕುತೂಹಲವಿದೆ. 'ಜೋಗಯ್ಯ್ಯ' ಕನ್ನಡ ಚಿತ್ರರಂಗದಲ್ಲಿ ಹೊಸ ಮೈಲಿಗಲ್ಲು ಸ್ಥಾಪಿಸಲಿದೆ ಎಂದರು.

'ಜೋಗಿ' ಚಿತ್ರದಲ್ಲಿ ನಿರ್ದೇಶಕ ಪ್ರೇಮ್ ಅವರು ನನಗೆ ಸಣ್ಣ ಪಾತ್ರವೊಂದನ್ನು ಕೊಟ್ಟಿದ್ದರು. 'ಜೋಗಯ್ಯ' ಚಿತ್ರದಲ್ಲೂ ನನಗೊಂದು ಪಾತ್ರ ಕೊಡುತ್ತಾರೆ ಎಂಬ ನಿರೀಕ್ಷೆಯಲ್ಲಿದ್ದೇನೆ ಎಂದು ನಟ ವಿಜಯ್ ಹೇಳಿದರು. ಮುಹೂರ್ತ ದಿನದಿಂದಲೂ ಪ್ರೇಮ್ ತಮ್ಮ 'ಜೋಗಯ್ಯ' ಚಿತ್ರವನ್ನು ಹಲವು ವಿಶೇಷತೆಗಳಿಂದ ಗಮನ ಸೆಳೆಯುತ್ತಿದ್ದಾರೆ. ಚಿತ್ರದ ಬಗ್ಗೆ ನಾನೂ ಸಹ ಕುತೂಹಲಗೊಂಡಿದ್ದೇನೆ ಎಂದು ನಿರ್ದೇಶಕ ಎಸ್ ನಾರಾಯಣ್ ಹೇಳಿದರು.

'ಜೋಗಿ' ಚಿತ್ರದ ಎಲ್ಲ ದಾಖಲೆಗಳನ್ನು 'ಜೋಗಯ್ಯ' ಅಳಿಸಲಿದೆ ಎಂಬ ಮಾತು ಪುನೀತ್ ರಾಜ್ ಕುಮಾರ್ ಅವರಿಂದ ಕೇಳಿಬಂತು. ಕಾರ್ಯಕ್ರಮದಲ್ಲಿ ವಾರ್ತಾ ಸಚಿವ ಕಟ್ಟಾ ಸುಬ್ರಹ್ಮಣ್ಯ ನಾಯ್ಡು, ಮಾಜಿ ಸಚಿವೆ ಶೋಭಾ ಕರಂದ್ಲಾಜೆ, ವಿ ರವಿಚಂದ್ರನ್, ಗೋಲ್ಡನ್ ಸ್ಟಾರ್ ಗಣೇಶ್, ಶಿಲ್ಪಾ ಗಣೇಶ್, ಡಾ.ಜಯಮಾಲಾ, ಶರ್ಮಿಳಾ ಮಾಂಡ್ರೆ, ಮಮತಾ ರಾವ್, ಐಂದ್ರಿತಾ ರೇ, ರಾಧಿಕಾ ಪಂಡಿತ್, ಸಾರಾ ಗೋವಿಂದು, ಜಗ್ಗೇಶ್, ಜೈ ಜಗದೀಶ್, ವಿಜಯಲಕ್ಷ್ಮಿ ಸಿಂಗ್, ಎನ್ ಎಂ ಸುರೇಶ್, ರಘುರಾಮ್, ಸಂಗೀತ ನಿರ್ದೇಶಕ ವಿ ಹರಿಕೃಷ್ಣ ಮುಂತಾದವರು ಉಪಸ್ಥಿತರಿದ್ದರು.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada