»   »  ಯೋಗೀಶ್ ಹಯಬುಸಾ ಬೈಕ್ ಗೆ ಆಕ್ಸಿಡೆಂಟ್!

ಯೋಗೀಶ್ ಹಯಬುಸಾ ಬೈಕ್ ಗೆ ಆಕ್ಸಿಡೆಂಟ್!

Subscribe to Filmibeat Kannada
Yogish's Hayabusa bike is out of action
ಯೋಗೀಶ್ ಯಾನೆ ಲೂಸ್ ಮಾದ ದುಬಾರಿ ಹಯಬುಸಾ ಬೈಕ್ ನಲ್ಲಿ ಓಡಾಡುತ್ತಿರುವುದು ಗೊತ್ತೇ ಇದೆ. ಆ ಬೈಕ್ ತೆಗೆದುಕೊಂಡು ಇನ್ನೂ ಒಂದು ತಿಂಗಳೂ ಕಳೆದಿಲ್ಲ ಆಗಲೇ ಅದನ್ನು ಕೆಡಿಸಿ ಗುಜರಿ ಸೇರಿಸಿದ್ದಾರೆ. ಹಯಬುಸಾ ಬೈಕಿನ ಹಿಂದಿನ ಸೀಟು ಕೇವಲ ನಮ್ಮ ತಾಯಿಗೆ ಮಾತ್ರ ಮೀಸಲು ಎಂದು ಹೇಳಿ ನಟಿ ರಮ್ಯಾರನ್ನು ಹಿಂದಿನ ಸೀಟಿನಲ್ಲಿ ಕೂರಿಸಿಕೊಂಡು ಸವಾರಿ ಹೊರಟಿದ್ದು ಗಾಂಧಿನಗರದಲ್ಲಿ ಸಖತ್ ಸುದ್ದಿಯಾಗಿದೆ.

ಪ್ರಸ್ತುತ ಚಿತ್ರೀಕರಣ ಒಂದರಲ್ಲಿ ಬ್ಯುಸಿಯಾಗಿರುವ ಯೋಗೀಶ್ ಪ್ರತಿದಿನ ಹಯಬುಸಾ ಬೈಕಿನಲ್ಲಿ ಇನ್ನೋವೇಟೀವ್ ಫಿಲ್ಮ್ ಸಿಟಿಗೆ ಹೋಗಿ ಬರುತ್ತಿದ್ದಾರೆ. ಆದರೆ ಈಗ ಆ ಬೈಕ್ ಮೂಲೆ ಸೇರಿದೆ. ಅಜಾಗರೂಕತೆಯಿಂದ ಓಡಿಸಿರುವುದೇ ಇಷ್ಟೆಲ್ಲಾ ಅವಾಂತರಕ್ಕೆ ಕಾರಣವಂತೆ. ಸಿಕ್ಕಾಪಟ್ಟೆ ವೇಗವಾಗಿ ಬೈಕ್ ಓಡಿಸಿ ಅಪಘಾತ ಮಾಡಿದ್ದಾರೆ ಎನ್ನುತ್ತವೆ ಕನ್ನಡ ಚಿತ್ರರಂಗದ ಮೂಲಗಳು. ಈಗ ಕೆಟ್ಟು ನಿಂತಿರುವ ಬೈಕನ್ನು ದುರಸ್ತಿಗೊಳಿಸುವುದೂ ಕಷ್ಟ ಎನ್ನುತ್ತಾರೆ.

ಈ ಕುರಿತು ಪ್ರತಿಕ್ರಿಯಿಸಿರುವ ಯೋಗೀಶ್, ಹೆಚ್ಚಿಗೇನು ಇಲ್ಲ ಸಣ್ಣ ಅಪಘಾತವಾಗಿದೆ ಅಷ್ಟೆ. ಬೈಕ್ ಓಡಿಸುತ್ತಿರಬೇಕಾದರೆ ಹುಡುಗನೊಬ್ಬ ಹಠಾತ್ ಅಡ್ಡ ಬಂದ. ಅವನನ್ನು ತಪ್ಪಿಸಲು ಸಡನ್ನಾಗಿ ಬ್ರೇಕ್ ಹಾಕಿದೆ ಆಯತಪ್ಪಿ ಬಿದ್ದುಬಿಟ್ಟೆ. ಚೇತರಿಸಿಕೊಂಡು ಎದ್ದು ನಿಂತುಕೊಳ್ಳುವಷ್ಟರಲ್ಲಿ ಆ ಹುಡುಗ ಪರಾರಿಯಾಗಿಬಿಟ್ಟ ಎನ್ನುತ್ತಾರೆ. ಯೋಗೀಶ್ ಗೆ ಸಣ್ಣಪುಟ್ಟ ಗಾಯಗಳು ಆಗಿವೆ. ಒಟ್ಟಿನಲ್ಲಿ ಯೋಗೀಶ್ ಸಿಕ್ಕಾಪಟ್ಟೆ ಅಸಮಾಧಾನಗೊಂಡಿದ್ದಾರೆ.

''ನಮ್ಮ ತಂದೆಯವರು ಸಿಕ್ಕಾಪಟ್ಟೆ ಸಿಟ್ಟಾಗಿದ್ದಾರೆ. ಅವರು ಈ ಬೈಕ್ ಗಾಗಿ ಬಹಳಷ್ಟು ಖರ್ಚು ಮಾಡಿದ್ದಾರೆ. ಹಯಬುಸಾ ಬೈಕನ್ನು ಹೆಂಡತಿ ತರಹ ನೋಡಿಕೊಳ್ಳುತ್ತಿದ್ದೆ. ಈಗ ಅವಳಿಗೆ ಅಪಘಾತವಾಗಿದೆ ನನ್ನ ಮನಸಿಗೆ ತುಂಬಾ ನೋವಾಗಿದೆ. ಹೇಗಾದರೂ ಮಾಡಿ ಮೊದಲಿದ್ದ ಹಾಗೆ ರಿಪೇರಿ ಮಾಡಿಸುತ್ತೇನೆ ಎಂದು ತಂದೆಗೆ ಮಾತು ಕೊಟ್ಟಿದ್ದೇನೆ'' ಎನ್ನುತ್ತಾರೆ ಯೋಗೀಶ್.

19ರ ಹರೆಯದ ಯೋಗೀಶ್ ಅಪಘಾತಕ್ಕೀಡಾಗುತ್ತಿರುವುದು ಇದೇ ಮೊದಲಲ್ಲ. ಈ ಹಿಂದೆ ಸೈಕಲ್ ನಲ್ಲಿ ಬಿದ್ದ ಗಾಯದ ಗುರುತು ಮುಖದ ಮೇಲಿದೆ. ರಮ್ಯಾ ನಟನೆಯ ಚಿತ್ರವೊಂದರ ಪೋಸ್ಟರ್ ಕಡೆನೋಡಿಕೊಳ್ಳುತ್ತಾ ಹೋಗಿ ಯೋಗೀಶ್ ಮ್ಯಾನ್ ಹೋಲ್ ಗೂ ಬಿದ್ದಿದ್ದ ಎಂಬ ಸುದ್ದಿಯೂ ಇದೆ. ರಮ್ಯಾರನ್ನು ಮತ್ತೊಮ್ಮೆ ನನ್ನ ಬೈಕಿನಲ್ಲಿ ಕೂರಿಸಿಕೊಂಡು ಹೋಗುತ್ತೇನೆ ಎಂದು ಶಪಥ ಮಾಡಿರುವ ಯೊಗೀಶ್ ಬೈಕ್ ಸದ್ಯಕ್ಕೆ ಮೂಲೆ ಸೇರಿದೆ.

(ದಟ್ಸ್ ಕನ್ನಡ ಚಿತ್ರವಾರ್ತೆ)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada