For Quick Alerts
ALLOW NOTIFICATIONS  
For Daily Alerts

  ಮೂರನೇ ಕ್ಯಾಂಡಲ್‌ ಬೆಳಕಲ್ಲಿ ಚಿತ್ರಲೋಕ !

  By *ಎಸ್ಕೆ.ಶಾಮಸುಂದರ
  |

  'ಮೊದಲ ದಿನ ಬಂದ ಹಿಟ್ಸ್‌ ಸಂಖ್ಯೆ 13 ಸಾವಿರದ 664!'
  ಪ್ರಾರಂಭಿಕ ಪ್ರತಿಕ್ರಿಯೆ ನೋಡಿ ಗಾಬರಿಬಿದ್ದೆ . ಓದುಗರ ಪ್ರೋತ್ಸಾಹ ನಿರೀಕ್ಷಿಸಿದ್ದಕ್ಕಿಂತ ಅದ್ಭುತವಾಗಿತ್ತು . ಖುಷಿಯಲ್ಲಿ ಮೈ ಮರೆಯುವಂತಿರಲಿಲ್ಲ . ತಾನಾಗಿ ಹೊತ್ತುಕೊಂಡ ಜವಾಬ್ದಾರಿ ದೊಡ್ಡದಿತ್ತು . ಅದನ್ನು ನಾನೇ ಹೊತ್ತು ಸಾಗಬೇಕಿತ್ತು . ಪ್ರಾರಂಭದಲ್ಲಿ ವಾರಕ್ಕೊಮ್ಮೆ , ತಿಂಗಳಿಗೊಮ್ಮೆ ಅಪ್‌ಲೋಡ್‌ ಮಾಡಿದರಾಯಿತು ಅಂದುಕೊಂಡಿದ್ದೆ . ವರನಟ ರಾಜ್‌ ಕಿಡ್ನಾಪ್‌ ಎಲ್ಲ ಲೆಕ್ಕಾಚಾರಗಳನ್ನು ಬದಲಿಸಿತು. ಅಂತರ್ಜಾಲದ ಅಗಾಧ ಆಳ ಹರವಿನಂತೆಯೇ ವೆಬ್‌ ಓದುಗರ ನಿರೀಕ್ಷೆಗಳೂ ದೊಡ್ಡವು. ಅವರ ಭಾವನೆಗಳಿಗೆ ಓಗೊಡುತ್ತ , ನಿರೀಕ್ಷೆಗಳಿಗೆ ಸ್ಪಂದಿಸುತ್ತ ಸಾಗಿಬಂದಿದ್ದೇನೆ. ನನ್ನ ಮಹತ್ವಾಕಾಂಕ್ಷೆಯ ಕೂಸು ಚಿತ್ರಲೋಕಡಾಟ್‌ಕಾಂ ಈಗ ಮೂರನೆ ವರ್ಷದ ಹೊಸಿತಿಲಲ್ಲಿದೆ.'

  - ಕನ್ನಡ ಚಿತ್ರರಂಗದ ಮಾಹಿತಿ ಹಾಗೂ ಮನರಂಜನೆಯನ್ನು ವೆಬ್‌ ಓದುಗರಿಗೆ ನೀಡುವ ಉದ್ದೇಶದಿಂದ ಹುಟ್ಟಿಕೊಂಡ www.chitraloka.com ಮೂರನೇ ಹುಟ್ಟುಹಬ್ಬದ ಅಂಗವಾಗಿ ಏರ್ಪಾಡಾಗಿದ್ದ ಸಂತೋಷಕೂಟದಲ್ಲಿ ಕೆ.ಎಂ.ವೀರೇಶ್‌ ತಮ್ಮ ಸಾಗಿಬಂದ ಹಾದಿಯನ್ನು ಹಿಂತಿರುಗಿ ನೋಡಿದ್ದು ಹೀಗೆ.

  ಕಾರ್ಯಕ್ರಮ ನಡೆದದ್ದು ಜೂನ್‌ 26 ರ ಬುಧವಾರ ಸಂಜೆ- ಬೆಂಗಳೂರಿನ ಪ್ರೆಸ್‌ಕ್ಲಬ್‌ನಲ್ಲಿ . ಅಲ್ಲಿ ಹಿತೈಷಿಗಳಿದ್ದರು. ಅಭಿಮಾನಿಗಳಿದ್ದರು. ಗೆಳೆಯರಿದ್ದರು. ಪತ್ರಕರ್ತರಿದ್ದರು. ಕಾರ್ಯಕ್ರಮದ ಕೇಂದ್ರದಲ್ಲಿ ಯಶಸ್ವಿ ಎರಡು ವರ್ಷ ಪೂರೈಸಿದ ಚಿತ್ರಲೋಕ.ಕಾಂ ರೂವಾರಿ ಕೆ.ಎಂ.ವೀರೇಶ್‌!

  ಯೋಗಾಯೋಗ ಎನ್ನುವಂತೆ 'ಅಮೆರಿಕ ಕನ್ನಡ ಸಂಘಗಳ ಆಗರ' (ಅಕ್ಕ) ಅಧ್ಯಕ್ಷ ಅಮರ್‌ನಾಥ್‌ ಗೌಡ ಸಂತೋಷಕೂಟದಲ್ಲಿ ಹಾಜರಿದ್ದರು. ವಿಶ್ವಕನ್ನಡ ಸಮ್ಮೇಳನದ ಕಾರ್ಯ ನಿಮಿತ್ತ ಬೆಂಗಳೂರಿಗೆ ಆಗಮಿಸಿದ್ದ ಅವರು, ಗುರುವಾರ (ಜೂ.27) ರಾತ್ರಿಅಮೆರಿಕಾಗೆ ಹಿಂದಿರುಗುವ ತುರ್ತಿನ ನಡುವೆಯೂ ವೀರೇಶ್‌ ಕರೆಗೆ ಓಗೊಟ್ಟಿದ್ದರು. ಚಿತ್ರನಟ ಹಾಗೂ ಮಾಜಿ ಪೊಲೀಸ್‌ ಅಧಿಕಾರಿ ಬಿ.ಸಿಪಾಟೀಲ್‌, ನಿರ್ಮಾಪಕ ಧನರಾಜ್‌ ಶುಭಕೋರಲು ಆಗಮಿಸಿದ್ದರು. ಸುದ್ದಿಗಾರರ ವಲಯದಿಂದ- ಪ್ರಜಾವಾಣಿಯ ಗಂಗಾಧರ ಮೊದಲಿಯಾರ್‌, ಉದಯವಾಣಿಯ ಮುರಳೀಧರ ಖಜಾನೆ, ಕನ್ನಡಪ್ರಭದ ಉದಯ ಮರಕಿಣಿ, ಗಿರೀಶ್‌ರಾವ್‌ ಹಾಗೂ ರವಿ ಜಾದೂಗಾರ್‌, ಇಂಡಿಯನ್‌ ಎಕ್ಸ್‌ಪ್ರೆಸ್‌ನ ಕೆ.ಎಸ್‌.ವಾಸು, ಲಂಕೇಶ್‌ ಪತ್ರಿಕೆಯ ಸದಾಶಿವ ಶೆಣೈ, ಮತ್ತು ಹಿರಿಯ ಪತ್ರಕರ್ತ ಎ.ಎಸ್‌.ಮೂರ್ತಿ ಹಾಜರಿದ್ದರು.

  ಸಿನಿಮಾ ಕಾರ್ಯಕ್ರಮವಿರಲಿ, ಅಪಘಾತದ ಘಟನೆಯೇ ಇರಲಿ- ಸುದ್ದಿ ಇರುವೆಡೆಯಲ್ಲಿ ಹೆಗಲಿಗೊಂದು ಕೆಮರಾ ತೂಗಿಸಿಕೊಂಡ ವೀರೇಶ್‌ ಪ್ರತ್ಯಕ್ಷ . ಕನ್ನಡ ಪತ್ರಿಕಾ ಪ್ರಪಂಚದಲ್ಲಿ ಸಾಹಸಿ ಫೋಟೊಗ್ರಾಫರ್‌ ಎಂದೇ ವೀರೇಶ್‌ ಹೆಸರುವಾಸಿ. ಕನ್ನಡದ ಬಹುತೇಕ ಪತ್ರಿಕೆಗಳಿಗೆ, ನಿಯತಕಾಲಿಕೆಗಳಿಗೆ ಸಿನಿಮಾ ಛಾಯಾಚಿತ್ರಗಳನ್ನು ಪೂರೈಸುವವರು ಅವರೇ. ಮನಸ್ಸು ಮಾಡಿದ್ದರೆ, ಸುಮ್ಮನೆ ಫೋಟೊ ತೆಗೆಯುತ್ತ ವೀರೇಶ್‌ ನೆಮ್ಮದಿಯಾಗಿ ಇರಬಹುದಿತ್ತು . ಆದರೆ, ಹಾಗೆ ಸುಮ್ಮನಿರುವ ಜೀವವಲ್ಲ ಅದು ; ಏನಾದರೂ ಸಾಧಿಸಬೇಕು ಎಂದು ತಹತಹಿಸುವ ಉತ್ಸಾಹ. ಆ ಭರದಲ್ಲಿ ಹುಟ್ಟಿಕೊಂಡಿದ್ದು ಚಿತ್ರಲೋಕ.

  ಡಾಟ್‌ಕಾಂ ಮಾಡುತ್ತೇನೆ ಎಂದು ಹೊರಟ ಮಗನ ಬೆನ್ನು ತಟ್ಟಿ ಬೆಂಗಾಲಾದವರು ಕೆ.ಎಸ್‌.ಮಲ್ಲಪ್ಪ . ಇವತ್ತು ಬೆಳೆದುನಿಂತಿರುವ ಚಿತ್ರಲೋಕದ ಹಿಂದಿನ ಚೇತನ ಶಕ್ತಿಯೇ ಅವರು ಎಂದು ವೀರೇಶ್‌ ತಂದೆಯನ್ನು ನೆನಪಿಸಿಕೊಳ್ಳುತ್ತಾರೆ. ದುರಾದೃಷ್ಟವಶಾತ್‌ ಮಗನ ಬೆಳವಣಿಗೆಯನ್ನು ನೋಡಲು ಅವರು ಬದುಕಿಲ್ಲ . ಅವರ ಆಶೀರ್ವಾದ, ತೋರಿದ ಹಾದಿಯೇ ವೀರೇಶ್‌ಗೆ ಸ್ಫೂರ್ತಿ. ವೀರೇಶ್‌ ಸಾಧನೆಯ ಹಿಂದಿನ ಇನ್ನೊಬ್ಬರು ಡಾ.ಜೋಶಿ.

  ಕನ್ನಡ ಮಹಾಜನತೆಯಿರಲಿ, ಅನೇಕ ಪತ್ರಕರ್ತರಿಗೂ ಡಾಟ್‌ಕಾಂ ಎನ್ನುವುದು ಕುರುಡರು ಮುಟ್ಟಿದ ಆನೆಯಂತಿದ್ದ ಸಂದರ್ಭದಲ್ಲಿ ವೀರೇಶ್‌ ಡಾಟ್‌ಕಾಂ ಸಾಗರಕ್ಕೆ ಧುಮುಕಿದರು. ಈ ಮನುಷ್ಯ ಇದೇನು ಮಾಡುತ್ತಿದ್ದಾನೆ ಎಂದು ಅನೇಕರು ಪಿಸುಪಿಸು ಅನ್ನುತ್ತಿರುವ ನಡುವೆಯೇ ವೀರೇಶ್‌ ತಣ್ಣಗೆ, ಡಾಟ್‌ಕಾಂ ಕಟ್ಟತೊಡಗಿದರು. ಪರಿಣಾಮವಾಗಿ ಇವತ್ತು ದೇಶವಿದೇಶಗಳಲ್ಲಿ ಕನ್ನಡಿಗರ ಹಾಗೂ ಕನ್ನಡ ಚಿತ್ರೋದ್ಯಮದ ಕೊಂಡಿಯಾಗಿ ಚಿತ್ರಲೋಕ ಗುರ್ತಿಸಿಕೊಂಡಿದೆ. 'ಪರಿಶ್ರಮದಿಂದ ಸಾಗಿಬಂದ ಎರಡು ವರ್ಷಗಳ ಹಾದಿಯನ್ನ , ಹಿನ್ನೋಟವನ್ನು ಗಮನಿಸಿದರೆ ನನಗೇ ಆಶ್ಚರ್ಯವಾಗುತ್ತದೆ. ಚಿತ್ರಲೋಕ ಯಾವತ್ತೂ ಅಧಿಕೃತ ಮಾಹಿತಿಯನ್ನೇ ಬಯಸುತ್ತದೆ. ಊಹಾಪೋಹಕ್ಕಿಲ್ಲಿ ಅವಕಾಶವಿಲ್ಲ' ಎಂದರು ವೀರೇಶ್‌. ಆ ಸಾಧನೆ- ಆಶ್ಚರ್ಯ ಡಾಟ್‌ಕಾಂ ಒಳಹೊರಗು ಬಲ್ಲವರಿಗೆ ಅರ್ಥವಾಗುವಂಥದ್ದು .

  ಡಾಟ್‌ಕಾಂ ಗುಳ್ಳೆ ಠುಸ್ಸಾಗಿ ಬೃಹತ್‌ ಕಂಪನಿಗಳು ಬಾಗಿಲು ಹಾಕಿದ ಹೊತ್ತಿನಲ್ಲೂ ಚಿತ್ರಲೋಕವನ್ನು ಏಕಾಂಗಿಯಾಗಿ ನಡೆಸಿದ ವೀರೇಶ್‌ ಅವರ ಸಾಧನೆ ಸಣ್ಣದಲ್ಲ . ಅದೆಲ್ಲಾ ಸರಿ, ಇದೆಲ್ಲ ಮಾಡಿದ್ದು ಹಣಕ್ಕಾ ? ಕೀರ್ತಿಗಾ? ಯಾಕಾಗಿ?

  ಪ್ರಶ್ನೆಗಳು ಹುಟ್ಟುತ್ತಾ ಹೋದಂತೆ ಉತ್ತರಗಳು ದಕ್ಕುವುದಿಲ್ಲ . ಇವತ್ತು ದಟ್ಸ್‌ಕನ್ನಡ.ಕಾಂ ಉದಾಹರಣೆಯನ್ನೇ ನೋಡಿ- ಅಮೆರಿಕ, ದುಬೈ ಮುಂತಾದ ದೇಶಗಳ ಸಾವಿರಾರು ಜನರ ಮಾತು ಬಿಡಿ, ಪಾಕಿಸ್ತಾನದಲ್ಲಿನ 12 ಮಂದಿ ಪ್ರತಿದಿನ ವೆಬ್‌ಸೈಟ್‌ಗೆ ಭೇಟಿಕೊಡುತ್ತಾರೆ. ಆಸ್ಟ್ರೇಲಿಯಾದಲ್ಲಿ ಮತ್ತೆ ಯಾರೋ, ಲಂಡನ್‌ನಲ್ಲಿ ಮತ್ತಷ್ಟು ಕನ್ನಡ ಮನಸ್ಸುಗಳು... ವಿಶ್ವದ ವಿವಿಧ ಭಾಗಗಳ ಕನ್ನಡ ಮನಸ್ಸುಗಳು ಒಂದೆಡೆ ಸೇರಲು ದಟ್ಸ್‌ಕನ್ನಡ ವೇದಿಕೆಯಾಗಿದೆ. ಕರ್ನಾಟಕದ ಸತ್ಯದರ್ಶನದ ಕನ್ನಡಿಯಾಗಿದೆ. ಇದಕ್ಕಿಂಥ ಸಾರ್ಥಕತೆ ಇನ್ನೇನು ಬೇಕು. ವೀರೇಶ್‌ ಅನುಭವಿಸುತ್ತಿರುವ ಧನ್ಯತೆ ಕೂಡ ಇಂಥದ್ದೇ!

  ಸಾಗಿಬಂದಿರುವ ದಾರಿ ಪರಿಶ್ರಮದ್ದು , ಗಮನಾರ್ಹವಾದದ್ದು ನಿಜ. ಆದರೆ, ಸಾಗಬೇಕಾಗಿರುವ ಹಾದಿ ಇನ್ನಷ್ಟು ದೂರದ್ದು , ದುರ್ಗಮವಾದದ್ದು . ಅದರ ಅರಿವು ವೀರೇಶ್‌ಗೂ ಇದೆ. ಆ ದಾರಿಯನ್ನು ಸವೆಸುವ ಶಕ್ತಿಯೂ ಅವರಿಗಿದೆ.
  ಚಿತ್ರಲೋಕ.ಕಾಂಗೆ ಹುಟ್ಟುಹಬ್ಬದ ಶುಭಾಶಯಗಳು.
  ವಾರ್ತಾ ಸಂಚಯ

  English summary
  K.M.Veereshs venture chitraloka enters year 3

  Kannada Photos

  Go to : More Photos

  ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Filmibeat sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Filmibeat website. However, you can change your cookie settings at any time. Learn more