»   »  ನಿರ್ದೇಶಕ ಗುರುಪ್ರಸಾದ್ ಗೆ ಪಂಚಪ್ರಶ್ನೆ

ನಿರ್ದೇಶಕ ಗುರುಪ್ರಸಾದ್ ಗೆ ಪಂಚಪ್ರಶ್ನೆ

By: *ವಿನಾಯಕರಾಮ್ ಕಲಗಾರು
Subscribe to Filmibeat Kannada

1.ಕನ್ನಡ ಚಿತ್ರೋದ್ಯಮದ ಬಗ್ಗೆ ನಿಮ್ಮ ವಿಷನ್?
ಇಲ್ಲಿಯವರೆಗೆ ಬಂದ ಹೆಚ್ಚಿನ ಚಿತ್ರಗಳಲ್ಲಿ ಕಡಿಮೆ ಬಜೆಟ್ ಚಿತ್ರವೇ ಟ್ರೆಂಡ್ ಹುಟ್ಟುಹಾಕಿದೆ. ಇಲ್ಲಿ ಸಣ್ಣ ಮೀನಿನ ಸಹಾಯದಿಂದ ದೊಡ್ಡ ಮೀನು ಹಿಡಿಯ ಬೇಕು. ಆದಷ್ಟು ಖರ್ಚು ಕಡಿಮೆ ಮಾಡಿ, ಕ್ರಿಯಾಶೀಲತೆಗೆ ಮಹತ್ವ ಕೊಡಬೇಕು. ನಿರ್ಮಾಪಕರಿಂದ ಒಂದು ಕೋಟಿ ಖರ್ಚು ಮಾಡಿಸಿ, ಹಾಕಿದ ಬಂಡವಾಳ ಬರುವಂತೆ ಮಾಡಿದರೆ ಅವರು ಇನ್ನೊಂದು ಚಿತ್ರ ಮಾಡುತ್ತಾರೆ. ಇದೇ ಗೆಲುವಿನ ಗುಟ್ಟು!

2. ಅದು ನಿಮ್ಮ ಚಿತ್ರದಲ್ಲಿ ಹೇಗೆ ವರ್ಕ್ ಔಟ್ ಆಗಿದೆ?
ಮಠ ಚಿತ್ರ ಅದನ್ನು ಮಾಡಿತ್ತು. ಅತೀ ಕಡಿಮೆ ಬಜೆಟ್ ಚಿತ್ರ ಗೆದ್ದಿತ್ತು. ಅದನ್ನು ವೀಕ್ಷಿಸುವ ಹೊಸ ಪ್ರೇಕ್ಷಕ ಪಂಥ ಹುಟ್ಟಿಕೊಂಡಿತು. ಇಂದು ಎದ್ದೇಳು ಮಂಜುನಾಥಕ್ಕೆ ಅದ್ಧೂರಿ ಓಪನಿಂಗ್ ಸಿಗಲು ಆ ಪ್ರೇಕ್ಷಕರೇ ಕಾರಣ. ಸಿನಿಮಾ ಸೋಲಿಗೆ ಪ್ರೇಕ್ಷಕರು ಖಂಡಿತ ಕಾರಣರಲ್ಲ. ಅವರು ವರ್ಷಕ್ಕೆ ನೂರು ಕ್ರಿಯಾಶೀಲ ಚಿತ್ರಗಳನ್ನು ಕೊಟ್ಟರೂ ನೋಡುತ್ತಾರೆ. ಆದರೆ ಬಹುತೇಕ ಚಿತ್ರಗಳಲ್ಲಿಮೂಲ ಬಂಡವಾಳ'ವೇ ಶೂನ್ಯವಾಗಿರುತ್ತದೆ.

3.ಪ್ರೇಕ್ಷಕರನ್ನು ಹೇಗೆ ಡಿವೈಡ್ ಮಾಡುತ್ತೀರಿ?
ಇಲ್ಲಿ ಮಾಸ್, ಕ್ಲಾಸ್ ಎಲ್ಲಾ ಬರೀ ಬೋಗಸ್. ಕೆಲ ನಿರ್ಮಾಪಕರು ಮಾಸ್ ಪ್ರೇಕ್ಷಕರಿಗೆ ಮಾತ್ರ ಸಿನಿಮಾ ಮಾಡುತ್ತೇವೆ ಎಂದು ಕ್ವಾಲಿಟಿಯನ್ನು ಇಳಿಸುತ್ತಾರೆ. ಮಚ್ಚು, ಲಾಂಗು ತೋರಿಸಿ, ತಮ್ಮ ಜೇಬು ತುಂಬಿಸಿಕೊಳ್ಳಲು ಯೋಚಿಸುತ್ತಿದ್ದಾರೆ. ಇದು ನಿಜವಾದ ಕ್ವಾಲಿಟಿ ಜೀವನವಾ? ಈ ಪ್ರಶ್ನೆಗೆ ಆದಷ್ಟು ಬೇಗ ಉತ್ತರ ಕಂಡುಕೊಂಡರೆ ಚಿತ್ರರಂಗ ಮತ್ತೆ ಚೇತರಿಸಿಕೊಂಡೀತು. ಪ್ರೇಕ್ಷಕರ ಕಿವಿಗೆ ಹೂವು ಇಡುವ ಪ್ರಕ್ರಿಯೆ ನಿಂತೀತು.

4.ಮಂಜುನಾಥನ ಸೈಡ್ ಎಫೆಕ್ಟ್ ಹೇಗಿದೆ?
ನಮ್ಮ ನಮ್ಮಲ್ಲಿ ಮೊದಲು ಬೇಸರ ಇತ್ತು, ಆದರೆ ಈಗ ಎಲ್ಲ ಶಾಂತಿನಿವಾಸವಾಗಿದೆ. ನನ್ನ, ಜಗ್ಗೇಶ್ ನಡುವೆ ಯಾವುದೇ ಆಂತರಿಕ ಕಲಹಗಳಿಲ್ಲ. ನಿರ್ಮಾಪಕ ಸನತ್ ಕುಮಾರ್‌ರೊಂದಿಗೆ ಸಾತ್ವಿಕ, ಮೌಲಿಕ ಭಿನ್ನಾ ಭಿಪ್ರಾಯಗಳನ್ನು ಹೊರತು ಪಡಿಸಿ ಉಳಿದದ್ದೆಲ್ಲಾ ಬಗೆ ಹರಿದಿದೆ. ಎದ್ದೇಳು ಮಂಜುನಾಥನ ಗೆಲುವಿನ ನಂತರ 14 ನಿರ್ಮಾಪಕರು ಆಫರ್ ಕೊಟ್ಟಿದ್ದಾರೆ. ಯಾರು ಸಿನಿಮಾ, ನನ್ನನ್ನು ಹೆಚ್ಚು ಪ್ರೀತಿಸಿ, ಹೆಚ್ಚು ಪೇಮೆಂಟ್ ಕೊಡುತ್ತಾರೋ ಅವರಿಗೆ ಸಿನಿಮಾ ಮಾಡುತ್ತೇನೆ.

5. ಜಗ್ಗೇಶ್ ಜತೆ ಮತ್ತೆನಾದರೂ ಸಿನಿಮಾ...
ನೋಡಿ ಸ್ವಾಮಿ, ನನಗೆ ಸುದೀಪ್, ದರ್ಶನ್, ಉಪೇಂದ್ರರಂಥ ಸ್ಟಾರ್‌ಗಳ ಜತೆ ಕೆಲಸ ಮಾಡಲು ಇಷ್ಟವಿಲ್ಲ. ಕೋಮಲ್, ರಂಗಾಯಣ ರಘು, ತಬಲಾ ನಾಣಿಯಂಥ ಕಲಾವಿದರ ಜತೆ ಇದ್ದು, ಕತೆ, ಪಾತ್ರಕ್ಕೆ ತಕ್ಕಂತೆ ಅವರನ್ನು ತಿದ್ದಿಕೊಂಡು, ಸಿನಿಮಾ ಮಾಡಲು ಇಷ್ಟಪಡುತ್ತೇನೆ. ಜಗ್ಗೇಶ್ ಹಾಗೂ ನನ್ನ ನಡುವಿನ ಕೆಮಿಸ್ಟ್ರಿ ತುಂಬಾ ಚೆನ್ನಾಗಿ ಮ್ಯಾಚ್ ಆಗುತ್ತಿತ್ತು. ಅದಕ್ಕೇ ಎರಡೂ ಚಿತ್ರಗಳು ಗೆದ್ದವು. ಮುಂದೇನಾಗುತ್ತೆ ಎನ್ನುವುದು ಆ ಮಂಜುನಾಥನಿಗೆ ಬಿಟ್ಟಿದ್ದು !

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada