For Quick Alerts
  ALLOW NOTIFICATIONS  
  For Daily Alerts

  'ಈ ಸಂಜೆ' ಹೊತ್ತಲ್ಲಿ 'ಶ್ಲೋಕ'ದಲ್ಲಿ ಮುಳುಗಿರುವ ಸಂಜನಾ

  By * ಯಶ್
  |

  'ಗಂಡ ಹೆಂಡತಿ' ಚಿತ್ರ ಬಿಡುಗಡೆಯಾದ ನಂತರ ಇಲ್ಲಿಯವರೆಗೆ ಹೋದಲ್ಲೆಲ್ಲ ಬಂದಲ್ಲೆಲ್ಲ, ಪಾರ್ಟಿ ಶೂಟಿಂಗ್ ಗಳಲ್ಲೆಲ್ಲ ಗಂಡ ಹೆಂಡತಿ ಸಂಜನಾ ಎಂದೇ ನನ್ನನ್ನು ಗುರುತಿಸುತ್ತಿದ್ದರು. ಆದರೆ ಈಗ 'ಕುಣಿಯೋಣು ಬಾರಾ' ಸಂಜನಾ ಎಂದು ಗುರುತಿಸುತ್ತಿದ್ದಾರೆ" ಎಂದು ಹೇಳುವಾಗ ಸಂಜನಾ ಮಾತಿನಲ್ಲಿ ಪರೀಕ್ಷೆ ಮುಗಿಸಿ ರಿಸಲ್ಟು ನೋಡಿ ಪಾಸಾದಂಥ ನಿರಾಳ ಭಾವ.

  ಗಂಡ ಹೆಂಡತಿ ಚಿತ್ರದಲ್ಲಿ ಮನೆಮಂದಿಯಷ್ಟೇ ಅಲ್ಲ ರಸಿಕರೂ ಬೆಚ್ಚುವಂತೆ ನಟಿಸಿದ್ದ ಬೆಂಗಳೂರು ಬೆಡಗಿ ಸಂಜನಾ 'ವಯಸ್ಕರಿಗೆ' ಕನಸಿನ ಕನ್ಯೆಯಂತಾಗಿದ್ದರು. ಝೀ ಕನ್ನಡ ವಾಹಿನಿಯಲ್ಲಿ 'ಕುಣಿಯೋಣು ಬಾರಾ' ರಿಯಾಲಿಟಿ ಶೋದಲ್ಲಿ ಮಕ್ಕಳ ನೃತ್ಯ ನೋಡಿ, ತೀರ್ಪುಗಾರರಾಗಿ ತೀರ್ಪಿತ್ತ ನಂತರ ಮಕ್ಕಳ ಪಾಲಿನ 'ಡಾರ್ಲಿಂಗ್' ಆಗಿದ್ದಾರೆ. ಸದ್ಯಕ್ಕೆ ಅವರು ಹಿರಿಯರಿಂದ ಕಿರಿಯರವರೆಗೆ ಎಲ್ಲರಿಗೂ ನೆಚ್ಚಿನ ಸಿನೆಮಾ ತಾರೆ! ಅವರು ಶಾಸ್ತ್ರೋಕ್ತವಾಗಿ ನಾಟ್ಯವನ್ನೇನೂ ಕಲಿತಿಲ್ಲ, ಆದರೆ ಮಕ್ಕಳ ನೃತ್ಯವನ್ನು ಜಡ್ಜ್ ಮಾಡಲು ತಕರಾರೇನೂ ಇಲ್ಲ.

  ಹಿಂದಿ ಮಾತನಾಡುವ ಮನೆತನದಲ್ಲಿ ಹುಟ್ಟಿರುವ ಸಂಜನಾ ನಾಲ್ಕು ಕನ್ನಡ ಚಿತ್ರಗಳಲ್ಲಿ ಅಭಿನಯಿಸುವ ಹೊತ್ತಿಗೆ ಅರಳು ಹುರಿದಂತೆ ಕನ್ನಡ ಮಾತನಾಡುವ ಹಂತಕ್ಕೆ ತಲುಪಿದ್ದಾರೆ. ಕೆಲ ಕನ್ನಡ ನಟಿಯರಿಗೆ ಹೋಲಿಸಿದರೆ ಇದೊಂದು ಸಾಧನೆಯೇ. ಆದರೆ, ಚಿತ್ರರಂಗದಲ್ಲಿ ಸಾಧಿಸಿರುವುದು ಅಷ್ಟರಲ್ಲಿಯೇ ಇದೆ. ಅಭಿನಯಕ್ಕೆ ಒತ್ತು ನೀಡುವಂಥ ಪಾತ್ರಗಳು ಅವರನ್ನರಸಿ ಬರಲೇಯಿಲ್ಲ, ನಿರ್ಮಾಪಕರಿಗೂ ಅದು ಬೇಕಾಗಿರಲಿಲ್ಲ. ಸಿಕ್ಕಿದ್ದೇ ಮೃಷ್ಟಾನ್ನ ಎಂಬಂತೆ ನಾಲ್ಕಾರು ಚಿತ್ರಗಳಲ್ಲಿ ಬಂದುಹೋಗಿದ್ದಾರೆ.

  ಚಿತ್ರರಂಗದಲ್ಲಿ ಕಾಲಿಟ್ಟ ನಂತರ ಸಂಜನಾ ಈಗ ಆಗಿರುವ ರೀತಿಯಲ್ಲಿ ಎಂದೂ ಎಕ್ಸೈಟ್ ಆಗಿರಲಿಲ್ಲ. ಅದಕ್ಕೆ ಕಾರಣವೂ ಇದೆ. ತೆಲುಗಿನಲ್ಲಿ ಬಿಡುಗಡೆಯಾಗುತ್ತಿರುವ 'ಸಮುದ್ರುಡು' ಚಿತ್ರದಿಂದಾಗಿ ಸಂತದ ಕಡಲಲ್ಲಿ ತೇಲಾಡುತ್ತಿದ್ದಾರೆ. ಅಲ್ಲಿ ಸಂಜನಾ ತೋರಿರುವ ಗ್ಲಾಮರಸ್ ಅವತಾರವನ್ನು ನೋಡಿದರೆ ತೆಲುಗು ನಿರ್ದೇಶಕರು ಸಂಜನಾ ಅವರಿಂದ ನಿರೀಕ್ಷಿಸಿದ್ದೇನು ಎಂಬುದರ ಅರಿವಾಗುತ್ತದೆ. ರೋಗಿ ಬೇಡಿದ್ದು ಹಾಲು ಅನ್ನ ವೈದ್ಯ ನೀಡಿದ್ದು ಹಾಲು ಅನ್ನು ಎಂಬಂತೆ ನಿರ್ದೇಶಕರು ಮತ್ತು ಸಂಜನಾ ಇಬ್ಬರೂ ಸಂತುಷ್ಟರಾಗಿದ್ದಾರೆ.

  ಅದಕ್ಕೆ ಸಂಜನಾ ಹೇಳುವುದಿಷ್ಟು, "ತೆಲುಗು ಚಿತ್ರರಂಗ ನಿಂತಿರುವುದೇ ಗ್ಲಾಮರ್ ಮೇಲೆ. ಹೀಗಾಗಿ ಗ್ಲಾಮರಸ್ ಆಗಿ ಕಾಣಿಸಿಕೊಂಡಿರುವುದು ತಪ್ಪೇನೂ ಅಲ್ಲ. ನಟನೆಗೆ ಅಷ್ಟೊಂದು ಅವಕಾಶವಿಲ್ಲದಿದ್ದರೂ ಪ್ರಥಮ ಬಾರಿ ಪೂರ್ಣ ನಾಯಕಿಯಾಗಿ ಕಾಣಿಸಿಕೊಂಡಿದ್ದೇನೆ. ಅಲ್ಲದೆ, ಕೃಷ್ಣಂರಾಜು ಅಂಥವರೊಡನೆ ನಟಿಸುವ ಅವಕಾಶ ಸಿಕ್ಕದ್ದು ಅದೃಷ್ಟವೇ ಸರಿ." ಸಂಜನಾ ಅಷ್ಟೇ ಅಲ್ಲ ತೆಲುಗು ಪ್ರೇಕ್ಷಕರೂ ಎಕ್ಸೈಟ್ ಆಗಿದ್ದಾರೆ ಎಂದು ಬೇರೆಯಾಗಿ ಹೇಳಬೇಕಾಗಿಲ್ಲ.

  ಈ ಪರಿ ಎಕ್ಸೈಟ್ ಕನ್ನಡದಲ್ಲಿ ಆಗಿರಲಿಲ್ಲವೆ? ಎಂಬುದಕ್ಕೆ ಅವರ ಉತ್ತರ ಮಾತ್ರ ಊಹುಂ. ನಟನೆಗೆ ಅವಕಾಶವಿರುವ ಪಾತ್ರವನ್ನು ಕನ್ನಡ ನಿರ್ಮಾಪಕರು ಅವರಿಗೆ ನೀಡಲಿಲ್ಲ, ಗಂಡ ಹೆಂಡತಿಯಂತೆ ನಟಿಸಲು ಸಂಜನಾಗೆ ಬೇಕಾಗಿರಲಿಲ್ಲ. ಸದ್ಯಕ್ಕೆ ಅವರು ಹೇಳುವಂತೆ, ಈ ಸಂಜೆ ಬಗ್ಗೆ ಸಂಜನಾ ಭಾರೀ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಸುದೀಪ್ ಅವರ ಸಂಬಂಧಿ ಆರ್ಯ ಈ ಚಿತ್ರದಲ್ಲಿ ಸಂಜನಾಗೆ ಜೊತೆಯಾಗಿದ್ದಾರೆ. ಈ ಸಂಜೆ ಹೊರತುಪಡಿಸಿದರೆ ಸದ್ಯಕ್ಕೆ 'ಶ್ಲೋಕ'ದಲ್ಲಿ ಸಂಜನಾ ಮುಳುಗಿದ್ದಾರೆ. ನಾಲ್ವರು ಹೊಸಬರು ನಾಯಕರಿರುವ ಶ್ಲೋಕ ಹಾರರ್ ಚಿತ್ರ. ಆದರೆ, ಈ ಚಿತ್ರದ ಬಗ್ಗೆ ಸಂಜನಾಗೆ ಭಾರೀ ನಿರೀಕ್ಷೆಯೇನೂ ಇದ್ದಂತಿಲ್ಲ.

  ತೆಲುಗಿನಲ್ಲಿ ಮೊದಲಿಗೆ ಬುಜ್ಜಿಗಾಡು ನಂತರ ಸಮುದ್ರುಡು ಚಿತ್ರಗಳಲ್ಲಿ ನಟಿಸಿದ ನಂತರ ಅವರನ್ನು ತೆಲುಗಿನಲ್ಲಿ ಸಾಕಷ್ಟು ಅವಕಾಶಗಳು ಹುಡುಕಿಕೊಂಡು ಬರುತ್ತಿವೆ. ಸದ್ಯದಲ್ಲಿಯೇ ಅಮೆರಿಕದಲ್ಲಿರುವ ತೆಲುಗು ಸಂಘವೊಂದರ ಆಹ್ವಾನದ ಮೇರೆಗೆ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಅಮೆರಿಕಕ್ಕೆ ಹಾರಲಿದ್ದಾರೆ. ಅಲ್ಲಿ ಶಿಕಾಗೋ ಮತ್ತು ಫ್ಲಾರಿಡಾದಲ್ಲಿ ಅನಿವಾಸಿ ತೆಲುಗಿಗರ ತಾಳಕ್ಕೆ ಸಂಜನಾ ಕುಣಿಯಲಿದ್ದಾರೆ.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X