'ಸೆಂಟ್ರಲ್ ಜೈಲ್'ನಲ್ಲಿ ಒಲವೇ ಮಂದಾರ ಶ್ರೀಕರ್
'ಒಲವೇ ಮಂದಾರ' ಚಿತ್ರದ ಮೂಲಕ ಗಮನಸೆಳೆದ ನಾಯಕ ನಟ ಶ್ರೀಕಿ (ಶ್ರೀಕರ್) 'ಸೆಂಟ್ರಲ್ ಜೈಲು' ಸೇರಿದ್ದಾರೆ. ಆದರೆ ಶ್ರೀಕಿ ಜೈಲು ಸೇರುವಂತಹ ತಪ್ಪೇನು ಮಾಡಿಲ್ಲ. ಅವರು ಅಭಿನಯಿಸುತ್ತಿರುವ ಚಿತ್ರದ ಹೆಸರೇ ಸೆಂಟ್ರಲ್ ಜೈಲ್!
ಚಿತ್ರದ ನಾಯಕ ಯಾವುದೋ ಕಾರಣಕ್ಕಾಗಿ ಜೈಲು ಸೇರಿರುತ್ತಾನೆ. ಜೈಲಿನಲ್ಲಿ ಆತನಿಗೆ ವ್ಯಕ್ತಿಯೋರ್ವನ ಪರಿಚಯವಾಗುತ್ತದೆ. ಜೈಲಿನಿಂದ ಬಂದ ತಕ್ಷಣ ನಾಯಕ ತಾನು ಜೈಲಿಗೆ ಹೋಗಲು ಕಾರಣನಾದವನ ಜೊತೆ ಹೊಡೆದಾಡುತ್ತಾನೆ. ಈ ಸನ್ನಿವೇಶವನ್ನು ತಾವರಕೆರೆ ಭೂತಬಂಗಲೆಯಲ್ಲಿ ಶ್ರೀಪ್ರೊಡಕ್ಷನ್ ಲಾಂಛನದಲ್ಲಿ ಜಾನಕೀರಾಂ ಅವರು ನಿರ್ಮಿಸುತ್ತಿರುವ ಸೆಂಟ್ರಲ್ ಜೈಲ್ ಚಿತ್ರಕ್ಕಾಗಿ ನಿರ್ದೇಶಕ ಬಲರಾಂ ಚಿತ್ರಿಸಿಕೊಂಡರು.
ಶ್ರೀಕಾಂತ್, ನೀನಾಸಂ ಅಶ್ವತ್, ಶರತ್ ಲೋಹಿತಾಶ್ವಾ ಈ ಭಾಗದ ಚಿತ್ರೀಕರಣದಲ್ಲಿ ಭಾಗವಹಿಸಿದ್ದರು. ವಿ.ಮನೋಹರ್ ಸಂಗೀತವಿರುವ ಈ ಚಿತ್ರಕ್ಕೆ ಜನಾರ್ದನ್ ಅವರ ಛಾಯಾಗ್ರಹಣವಿದೆ. ಶ್ಯಾಂ ಸಂಕಲನಕಾರರಾಗಿರುವ ಈ ಚಿತ್ರದ ತಾರಾಬಳಗದಲ್ಲಿ ಶ್ರೀಕಾಂತ್, ಗಮ್ಯ, ಶರತ್‌ಲೋಹಿತಾಶ್ವಾ, ವಿನಯಾಪ್ರಸಾದ್, ನಿನಾಸಂ ಅಶ್ವತ್, ಹರೀಶ್ ರಾಯ್ ಮುಂತಾದವರಿದ್ದಾರೆ. (ಒನ್‌ಇಂಡಿಯಾ ಕನ್ನಡ)


Click it and Unblock the Notifications











