For Quick Alerts
  ALLOW NOTIFICATIONS  
  For Daily Alerts

  ಬಿಪಾಶ ಗೆಜ್ಜೆ ನಾದಕ್ಕೆ ಕುಣಿವ ಕಾಂಚನ

  By * ಮಹೇಶ್ ಮಲ್ನಾಡ್
  |

  ಹೊಸ ವರ್ಷ ಹತ್ತಿರಾಗುತ್ತಿರುವಂತೆಯೇ ನಟ ನಟಿಯರಿಗೆ ಬೇಡಿಕೆ ಹೆಚ್ಚಾಗುತ್ತಿದೆ. ಆದರೆ, ಬೇಡಿಕೆ ಬರುತ್ತಿರುವುದು ನಿರ್ಮಾಪಕರಿಂದಲ್ಲ. ರೆಸಾರ್ಟ್, ಕ್ಲಬ್ ಮಾಲೀಕರಿಂದ. ಖ್ಯಾತನಾಮರೆಲ್ಲರನ್ನು ಒಂದೆಡೆ ಗುಡ್ಡೆ ಹಾಕಿಕೊಂಡು ಪಡ್ಡೆ ಹುಡುಗರಿಗೆ ಕಿಕ್ ಕೊಡುವಂಥ ಹಾಡುಗಳ ಹಿಮ್ಮೇಳದಲ್ಲಿ ಪ್ರಸಿದ್ಧ ನಟ ನಟಿಯರನ್ನು ಕುಣಿಸಿ, ನೆರದವರ ಮನತಣಿಸಿ, ಹೊಸವರ್ಷವನ್ನು ಸ್ವಾಗತಿಸಿ ಕೈ ತುಂಬಾ 'ಮನಿ ' ಕಲೆಕ್ಟ್ ಮಾಡುವ ರೆಸಾರ್ಟ್ ಮಾಲೀಕರ ಐಡಿಯಾಕ್ಕೆ ತಲೆಬಾಗಲೇಬೇಕು.

  ಹಿಂದೆಲ್ಲಾ ಬಾಲಿವುಡ್ ನಟ ನಟಿಯರಿಗೆ ಮೀಸಲಾಗಿದ್ದ 'ನ್ಯೂ ಇಯರ್ ಪಾರ್ಟಿ ಇನ್ ರೆಸಾರ್ಟ್ 'ಈಗ ಸ್ಯಾಂಡಲ್ ವುಡ್ ಗೂ ಒಗ್ಗಿಬಿಟ್ಟಿದೆ. ಕೆಲ್ಸ ವಿಲ್ಲದೆ ಕೂತ ನಟಿಯರಿಗೆ ರೆಸಾರ್ಟ್ ನಲ್ಲಿ ಹಾಡಿ ಕುಣಿದು ಹೆಚ್ಚಿನ ಹಣಗಳಿಸುವುದು ಮಾಮೂಲಿಯಾಗಿದೆ. ಆದರೆ, ಸಾಹಸಸಿಂಹ ವಿಷ್ಣುವರ್ಧನ್ ಅವರ ಅಕಾಲಿಕ ಮರಣದಿಂದ ದಿಗ್ಭ್ರಾಂತಿಗೊಳಗಾಗಿರುವ ಕನ್ನಡ ಚಿತ್ರಮಂದಿ ಈ ವರ್ಷ ಹೊಸವರ್ಷಾಚರಣೆ ಮಾಡುವುದು ಕಷ್ಟ. ಸೂತಕದ ಮನೆಯಲ್ಲಿ ಹಬ್ಬದ ವಾತಾವರಣ ಹೇಗೆ ತಾನೇ ಸರಿ ಕಾಣುತ್ತದೆ.

  ಆದರೆ, ಈ ರೀತಿ ಹೊಸವರ್ಷವನ್ನು ಸ್ವಾಗತಿಸಲು ಬರುವ ಕನ್ನಡ ತಾರೆಯರ ಗೌರವ ಧನದ ಮೊತ್ತ ಎಂದು ಕೂಡ ಲಕ್ಷ ರು. ದಾಡಿದ ವರದಿಯಾಗಿಲ್ಲ. ಈ ಪಟ್ಟಿಯಲ್ಲಿ ಅಗ್ರಪಂಕ್ತಿ ಕಾದುಕೊಂಡಿರುವುದು ಬೆಂಗಾಳಿ ಬೆಡಗಿ ಬಿಪಾಶ ಬಸು. ಕಳೆದ ವರ್ಷ ಮುಂಬೈನ ಸಹಾರ ಸ್ಟಾರ್ ಹೋಟೆಲಿನಲ್ಲಿ ಡಿ.31ರ ಮಧ್ಯರಾತ್ರಿ ಕುಣಿದಾಡಲು 1.5 ಕೋಟಿ ರುಗಳನ್ನು ಈಕೆ ಪಡೆದಿದ್ದರು. ಈ ಬಾರಿ ಕನಿಷ್ಠವೆಂದರೂ 2 ಕೋಟಿ ಕಮ್ಮಿ ಪಡೆಯುವುದು ಸಾಧ್ಯವಿಲ್ಲ. ಹಣಕಾಸಿನ ವ್ಯವಹಾರದಲ್ಲಿ ಸ್ವಲ್ಪ ವ್ಯತ್ಯಯವಾದರೂ ಕಾಲಿಗೆ ಗೆಜ್ಜೆ ಕಟ್ಟಲಾರೆ ಎಂದು ಬಿಪ್ಸ್ ಗಡಕ್ ಉತ್ತರ ನೀಡಿದ್ದಾರಂತೆ. ಗೆಳೆಯ ಜಾನ್ ಅಬ್ರಹಾಂ ನಿರ್ಮಾಪಕನಾಗುತ್ತಿರುವ ವೇಳೆಯಲ್ಲಿ ಒಂದಿಷ್ಟು ದುಡ್ಡು ಕೂಡಿಡುವ ಆಲೋಚನೆ ಬಿಪ್ಸ್ ತಲೆಯಲ್ಲಿದೆ ಎನ್ನುತ್ತಿದ್ದರೆ ನಮ್ಮ ಬಾಲಿವುಡ್ ಬಾತ್ಮಿದಾರರು.

  ಇನ್ನೊಂದು ಪ್ಯಾಕೇಜ್ ಪ್ರಕಾರ ಬಿಪ್ಸ್ ಜೊತೆ ಅಬ್ರಹಾಂ ಬೇಕು ಅಂದ್ರ ಪ್ರತಿ ನಿಮಿಷ(ಸುಮಾರು 3.5ಲಕ್ಷ/ನಿ)ಕ್ಕೆ ಇಷ್ಟು ಲಕ್ಷ ಎಂದು ಹಣ ನೀಡಬೇಕಾಗುತ್ತದೆ. ಇದ್ದುದ್ದರಲ್ಲಿ ಅಮೃತಾರಾವ್, ಮೊನಿಷಾ ಕೊಯಿರಾಲಾ, ಅಮಿಷಾ ಪಟೇಲ್, ಡಿನೋ ಮಾರಿಯೋ, ಮುಗ್ಧಾ ಘೋಡ್ಸೆ, ನೇಹಾ ದುಪಿಯಾ ಮುಂತಾದವರು ಪ್ರತಿ ನಿಮಿಷಕ್ಕೆ ಲಕ್ಷಕ್ಕಿಂತ ಕಡಿಮೆ ಕೇಳುತ್ತಾರೆ. ಸಲ್ಲು ಮಿಯಾ ಕತ್ರೀನಾ ಜೋಡಿ ರೇಟ್ ಕೂಡ ಪ್ರತಿ ನಿಮಿಷಕ್ಕೆ 4 ಲಕ್ಷಕ್ಕಿಂತ ಕಮ್ಮಿಯಿಲ್ಲ.

  ಈಗ ನಮ್ಮ ಸ್ಯಾಂಡಲ್ ವುಡ್ ಕಡೆ ನೋಡಿದರೆ, ಇರುವ ಒಂದೆರಡು 5 ಸ್ಟಾರ್ ರೇಂಜಿನ ರೆಸಾರ್ಟ್ ಗಳಲ್ಲಿ ಈಗಾಗಲೇ ಸೋನು, ಶಂಕರ್, ಶ್ರೇಯಾ, ಶಿವಮಣಿ.. ಪ್ರಿಯಾಮಣಿ.. ರಮಣಿ ಎಂದು ಪರವೂರಿನ ಸಂಗೀತಗಾರರನ್ನು ಒಟ್ಟುಗೂಡಿಸುವುದರಲ್ಲಿ ರೆಸಾರ್ಟ್ ಮಾಲೀಕರು ನಿರತರಾಗಿದ್ದಾರೆ. ಕನ್ನಡದ ರಾಕ್ ಸ್ಟಾರ್ ತಾನೇ ಎಂದು ಕೊಂಡಿರುವ ಗುರುಕಿರಣ್ , ರಾಕ್ ಜೊತೆ ಜನಪದ ಸೇರಿದ ಕಾಕ್ ಟೈಲ್ ಸಂಗೀತಗಾರನಾಗಿ ಜನಪ್ರಿಯಗೊಂಡಿರುವ ರಘು ದೀಕ್ಷಿತ್ ಇರುವವರಲ್ಲಿ ಸ್ವಲ್ಪ ಬೇಡಿಕೆಯುಳ್ಳವರು ಎನ್ನಬಹುದು. ನಮ್ಮ ಸ್ಯಾಂಡಲ್ ವುಡ್ ನ ನಟನಾಮಣಿಯರಿಗೆ ತಮಾಷೆಗೂ ಕಾಲ್ ಮಾಡಿಲ್ಲ ಎಂಬುದು ದುರಂತ ಆದರೂ ಸತ್ಯ.

  ಕಳೆದ ವರ್ಷ ಭಾವನಾ, ಪೂಜಾಗಾಂಧಿ,ಡೈಸಿ, ರಮ್ಯಾ, ಉಪೇಂದ್ರ ಸೇರಿದಂತೆ ಕೆಲವರಿಗೆ ಗಾಳಹಾಕಿದ್ದ ರೆಸಾರ್ಟ್ ಓನರ್ ಗಳು ಈ ಬಾರಿ ಖ್ಯಾರೆ ಅಂದಿಲ್ಲ,. ಉಪ್ಪಿಗೆ ತನ್ನದೇ ಆದ ರೆಸಾರ್ಟ್ ಇದೆ. ಮಿಕ್ಕ ಕನ್ನಡ ಗೋಲ್ಡನ್ , ಪವರ್ , ಲಿಟಲ್ , ಮಾಸ್ಟರ್ , ರೆಬೆಲ್ , ಬ್ಲ್ಯಾಕ್ ಸ್ಟಾರ್ ಗಳು ಇನ್ನೂ ರೇಟು ಫಿಕ್ಸ್ ಮಾಡಿಕೊಂಡಿಲ್ಲ. ಕೆಲವರು ಮನೆಯಲ್ಲೇ ಕೂತು , ಮತ್ತೆ ಕೆಲವರು ಶೂಟಿಂಗ್ ಯೂನಿಟ್ ಜೊತೆ ಕೂತು ವರ್ಷಾಂತ್ಯವನ್ನು ಎದುರು ನೋಡುವ ಸಂಭವವೇ ಹೆಚ್ಚು. ಒಟ್ಟಿನಲ್ಲಿ ಸ್ಥಳೀಯರ ರೆಸಾರ್ಟ್ ಗಳಲ್ಲಿ ಪರವೂರಿನವರ ದರ್ಬಾರು, ಇಲ್ಲಿರುವ ಅಸಂಖ್ಯಾತ ಪರಭಾಷಿಗರಿಗೆ ರಸದೌತಣ, ನಮ್ಮವರಿಗೆ ಜನವರಿ 1 ಮುಂಜಾನೆ ಅದೇ ರೋಡ್ ಸೈಡ್ ಚಿತ್ರಾನ್ನ ತಪ್ಪಿದ್ದಲ್ಲ.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X