For Quick Alerts
  ALLOW NOTIFICATIONS  
  For Daily Alerts

  ಕಡೆಗೂ ದರ್ಶನ್ ಗೆ ಸಿಕ್ಕಿದಳು ಬುಲ್ ಬುಲ್ ರಚಿತಾ

  By Rajendra
  |

  ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ 'ಬುಲ್ ಬುಲ್' ಚಿತ್ರಕ್ಕೆ ಕಡೆಗೂ ನಾಯಕಿ ಸಿಕ್ಕಿದ್ದಾರೆ. ಈ ಚಿತ್ರಕ್ಕೆ ರಮ್ಯಾ ನಾಯಕಿ ಎಂದೇ ಬಿಂಬಿಸಲಾಗಿತ್ತು. ಈ ಬಗ್ಗೆ ಚಿತ್ರತಂಡ ಕೂಡ ಯಾವುದನ್ನೂ ಸ್ಪಷ್ಟೀಕರಣ ನೀಡದೆ ಮುಗುಮ್ಮಾಗಿದ್ದುಬಿಟ್ಟಿತ್ತು. ಈ ರೀತಿ ಸುದ್ದಿ ಹಬ್ಬಿದಾಗಲೆಲ್ಲಾ ಅದನ್ನು ತಳ್ಳಿಹಾಕುವುದಾಗಲಿ, ಪುರಸ್ಕರಿಸುವುದಾಗಲಿ ಮಾಡದೆ ಮತ್ತಷ್ಟು ಗೊಂದಲಕ್ಕೆ ಕಾರಣವಾಗಿತ್ತು.

  ಈ ಚಿತ್ರಕ್ಕೆ ಒಮ್ಮೆ ರಮ್ಯಾ ನಾಯಕಿ ಎಂದರೆ ಮತ್ತೊಮ್ಮೆ ಬೆಂಗಳೂರು ಬೆಡಗಿ ಅನುಷ್ಕಾ ಶೆಟ್ಟಿ ಎನ್ನಲಾಗಿತ್ತು. ಇನ್ನೇನು ಕಾಜಲ್ ಅಗರವಾಲ್ ಬಂದೇ ಬಿಟ್ಟರು ಎಂಬ ಸುದ್ದಿಯೂ ಇತ್ತು. ಈಗ 'ಬುಲ್ ಬುಲ್' ಚಿತ್ರಕ್ಕೆ ನಾಯಕಿ ಪಕ್ಕಾ ಆಗಿದ್ದಾರೆ. ಈಕೆಯ ಹೆಸರು ರಚಿತಾ ರಾಮ್.

  ಈಕೆ ಕನ್ನಡಿಗರ ಕಣ್ಮಣಿ ಜೀ ಕನ್ನಡದ 'ಅರಸಿ' ಧಾರಾವಾಹಿಯಲ್ಲಿ ಅಭಿನಯಿಸಿದ್ದಾರೆ. ಈಕೆಯ ಮೂಲ ಹೆಸರು ಬಿಂದಿಯಾ ರಾಮ್. ಆದರೆ ಈಗಾಗಲೆ ಬಿಂದಿಯಾ ಎಂಬ ತಾರೆ ಕನ್ನಡಲ್ಲಿರುವ ಇರುವ ಕಾರಣ ಈಕೆ ತಮ್ಮ ಹೆಸರನ್ನು ರಚಿತಾ ಎಂದು ಬದಲಾಯಿಸಿಕೊಂಡಿದ್ದಾರೆ.

  ದರ್ಶನ್ ಎತ್ತರಕ್ಕೆ ಸರಿಸಾಟಿಯಾಗಿ ನಿಲ್ಲುವ 5.7 ಅಡಿ ಎತ್ತರ ಈಕೆಯದು. ಭರತನಾಟ್ಯ ಪ್ರವೀಣೆ. ಇದುವರೆಗೂ 50ಕ್ಕೂ ಹೆಚ್ಚು ಪ್ರದರ್ಶನಗಳನ್ನು ನೀಡಿದ್ದಾರೆ. ಇವರ ತಂದೆ ರಾಮ್ ಅವರು ಭರತನಾಟ್ಯ ಕಲಾವಿದರು. ಅವರು ಇದುವರೆಗೂ 500ಕ್ಕೂ ಹೆಚ್ಚು ಪ್ರದರ್ಶನಗಳನ್ನು ನೀಡಿದ್ದಾರೆ.

  'ಬುಲ್ ಬುಲ್' ಚಿತ್ರದ ನಿರ್ದೇಶಕ ಎಂ ಡಿ ಶ್ರೀಧರ್ ಹಾಗೂ ದರ್ಶನ್ ಅವರ ಸಹೋದರ ದಿನಕರ್ ಅವರು ಸ್ಕೀನಿಂಗ್ ಟೆಸ್ಟ್ ನಲ್ಲಿ ಈಕೆಯ ಪ್ರತಿಭೆಗೆ ಮಾರುಹೋದರಂತೆ. ಒಟ್ಟಿನಲ್ಲಿ ಕನ್ನಡಕ್ಕೆ ಒಬ್ಬ ಎತ್ತರದ ಬೆಡಗಿ ಸಿಕ್ಕಂತಾಗಿದೆ.

  ಸಾಹಿತ್ಯ ಹಾಗೂ ಸಂಭಾಷಣೆಯ ಜವಾಬ್ದಾರಿಯನ್ನು ಕವಿರಾಜ್ ಅವರು ಹೊತ್ತಿದ್ದಾರೆ. ರಚಿತಾರ ಡೈಲಾಗ್ ಡೆಲೆವರಿ ಕೂಡ ಅದ್ಭುತ ಎಂಬ ಮಾತುಗಳು ಚಿತ್ರತಂಡದಿಂದ ಕೇಳಿಬಂದಿವೆ. ಈ ಚಿತ್ರದ ವಿಶೇಷ ಪಾತ್ರದಲ್ಲಿ ರೆಬೆಲ್ ಸ್ಟಾರ್ ಅಂಬರೀಶ್ ಅವರು ಅಭಿನಯಿಸುತ್ತಿದ್ದಾರೆ.

  ಅಂಬಿ ಸಂಭ್ರಮದಲ್ಲಿ ದರ್ಶನ್ ಜೊತೆ ರಮ್ಯಾ ಹೆಜ್ಜೆ ಹಾಕಿದ್ದರು. "ಮೇರೆ ಸಪ್‌ನೋಂಕಿ ರಾಣಿ, ಏಯ್ ಬುಲ್ ಬುಲ್ ಮಾತಾಡಾಕಿಲ್ವಾ" ಎಂದು 'ನಾಗರಹಾವು' ಚಿತ್ರದಲ್ಲಿ ಆರತಿಗೆ ಅಂಬರೀಷ್ ಕಿಚಾಯಿಸುತ್ತಾರೆ. ಇದೇ ಸನ್ನಿವೇಶವನ್ನು ಅಂಬಿ ಹುಟ್ಟುಹಬ್ಬ ಸಂಭ್ರಮದಲ್ಲಿ ದರ್ಶನ್ ಹಾಗೂ ರಮ್ಯಾ ಮಾಡಿದ್ದರು.

  ಅವರಿಬ್ಬರ ದೃಶ್ಯ ನೋಡಿದ 'ಬುಲ್ ಬುಲ್' ನಿರ್ಮಾಪಕರು ಈಗ ರಮ್ಯಾರನ್ನೇ ನಾಯಕಿಯಾಗಿ ಆಯ್ಕೆ ಮಾಡಲು ನಿರ್ಧರಿಸಿದ್ದರು. ಈ ಬಗ್ಗೆ ರಮ್ಯಾ ಕೂಡ ಟ್ವೀಟಿಸಿದ್ದು, "ಬುಲ್ ಬುಲ್ ಚಿತ್ರದ ಪಾತ್ರಕ್ಕಾಗಿ ನಿರ್ಮಾಪಕರು ನಮ್ಮನ್ನು ಸಂಪರ್ಕಿಸಿದ್ದು ನಿಜ. ಆದರೆ ಇನ್ನೂ ಅಂತಿಮವಾಗಿಲ್ಲ" ಎಂದಿದ್ದರು. ಕಡೆಗೂ 'ಬುಲ್ ಬುಲ್' ಚಿತ್ರದ ನಾಯಕಿ ಯಾರು ಎಂಬ ಬಗ್ಗೆ ತೆರೆಬಿದ್ದಿದೆ.

  ತೆಲುಗು ಚಿತ್ರ 'ಡಾರ್ಲಿಂಗ್', ಕನ್ನಡದಲ್ಲಿ 'ಬುಲ್ ಬುಲ್' ಎಂಬ ಹೆಸರಿನಲ್ಲಿ ರೀಮೇಕ್ ಆಗಿ ಬರಲಿದೆ. ತೆಲುಗಿನಲ್ಲಿ ಸೂಪರ್ ಹಿಟ್ ಆಗಿದ್ದ ಈ ಚಿತ್ರವನ್ನು ಕನ್ನಡದಲ್ಲಿ ನಿರ್ದೇಶಿಸುತ್ತಿದ್ದಾರೆ ಎಂ ಡಿ ಶ್ರೀಧರ್. ಬುಲ್ ಬುಲ್ ಚಿತ್ರ ದರ್ಶನ್ ಹೋಮ್ ಬ್ಯಾನರ್ ನಲ್ಲಿ ನಿರ್ಮಾಣವಾಗುತ್ತಿದ್ದು, ನಿರ್ಮಾಪಕನ ಸ್ಥಾನದಲ್ಲಿ ಸಹಜವಾಗಿ ದರ್ಶನ್ ತಮ್ಮ ಹಾಗೂ ಸಾರಥಿ ನಿರ್ದೇಶಕ ದಿನಕರ್ ಕುಳಿತಿದ್ದಾರೆ. ವಿ ಹರಿಕೃಷ್ಣ, ಬುಲ್ ಬುಲ್ ಚಿತ್ರದ ಸಂಗೀತ ನಿರ್ದೇಶಕ. (ಏಜೆನ್ಸೀಸ್)

  English summary
  Challenging Star Darshan's upcoming film Bul Bul confirms heroine. Actress Rachitha Ram who had worked in the popular Television serial Arasi will be the heroine.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X