ಸಹಾಯಕ ನಿರ್ದೇಶಕ ಸದಾಶಿವಯ್ಯ ಮೃತದೇಹ ಪತ್ತೆ

ಅಂಬರ ಚಿತ್ರೀಕರಣಕ್ಕಾಗಿ ಲೊಕೇಷನ್ ನೋಡಲು ಬೋಟ್ ನಲ್ಲಿ ಹೋಗಿದ್ದಾಗ ಸದಾಶಿವಯ್ಯ ಆಯತಪ್ಪಿ ಗಂಗಾನದಿಗೆ ಬಿದ್ದಿದ್ದರು. ರಭಸವಾಗಿ ಹರಿಯುತ್ತಿದ್ದ ನೀರಿನಲ್ಲಿ ಅವರು ಕೊಚ್ಚಿಕೊಂಡು ಹೋಗಿದ್ದರು. ಈ ಘಟನೆಯನ್ನು ನಟ ಯೋಗೀಶ್ ಕಣ್ಣಾರೆ ಕಂಡಿದ್ದರು ಸಹ.
ಬಳಿಕ ಅವರ ದೇಹಕ್ಕಾಗಿ ತೀವ್ರ ಹುಡುಕಾಟ ನಡೆಸಲಾಯಿತು. ಆದರೆ ಅವರ ದೇಹ ಪತ್ತೆಯಾಗಿರಲಿಲ್ಲ. ಕಡೆಗೆ ಚಿತ್ರದ ನಿರ್ಮಾಪಕರು 11 ದಿನಗಳ ಬಳಿಕ ಸದಾಶಿವಯ್ಯ ಅಂತಿಮಕ್ರಿಯೆಗಳನ್ನು ಅವರ ಕುಟುಂಬಿಕರೊಂದಿಗೆ ನೇರವೇರಿಸಿದರು. ಈಗ ಅಂದರೆ 19 ದಿನಗಳ ಬಳಿಕ ಸದಾಶಿವಯ್ಯ ಅವರ ಮೃತದೇಹ ಪತ್ತೆಯಾಗಿದೆ ಎಂದು ಚಿತ್ರತಂಡಕ್ಕೆ ಕರೆಬಂದಿದೆ.
ಸಾಮಾನ್ಯವಾಗಿ ಗಂಗಾನದಿಯಲ್ಲಿ ಕೊಚ್ಚಿಹೋದವರ ಕಳೆಬರ ಸಿಗುವುದು ಬಹಳ ಅಪರೂಪ. ಈಗ ಸದಾಶಿವಯ್ಯ ಅವರ ಕಳೆಬರ ಸಿಕ್ಕಿದ್ದು ಅವರ ಕುಟುಂಬಿಕರು ಹಾಗೂ ಚಿತ್ರತಂಡ ಹರಿದ್ವಾರಕ್ಕೆ ಪಯಣ ಬೆಳೆಸುತ್ತಿದೆ. ಅಲ್ಲೇ ಅವರ ಅಂತಿಮ ಸಂಸ್ಕಾರ ನೆರವೇರಲಿದೆ.
ಕಳೆದ 20 ವರ್ಷಗಳಿಂದ ಸದಾಶಿವಯ್ಯ ಅವರು ಕಲಾ ನಿರ್ದೇಶನದಲ್ಲಿ ತೊಡಗಿಕೊಂಡಿದ್ದರು. ಶಶಿಧರ ಅಡಪ, ಹೊಸ್ಮನೆ ಮೂರ್ತಿ ಸೇರಿದಂತೆ ಹಲವಾರು ಕಲಾ ನಿರ್ದೇಶಕರ ಬಳಿ ಕೆಲಸ ಮಾಡಿ 400ಕ್ಕೂ ಹೆಚ್ಚು ಚಿತ್ರಗಳಿಗೆ ಕೆಲಸ ಮಾಡಿದ್ದಾರೆ. (ಏಜೆನ್ಸೀಸ್)


Click it and Unblock the Notifications











