»   » ಅಂಬಿ ಕೈ ತಪ್ಪಲಿದೆ ಮಂಡ್ಯ, ಸಿನಿತಾರೆಯರ ಸ್ಪರ್ಧೆ ಕಂಡ್ಯಾ

ಅಂಬಿ ಕೈ ತಪ್ಪಲಿದೆ ಮಂಡ್ಯ, ಸಿನಿತಾರೆಯರ ಸ್ಪರ್ಧೆ ಕಂಡ್ಯಾ

Posted By:
Subscribe to Filmibeat Kannada

ಮಂಡ್ಯ, ಮಾ.24: ಮಂಡ್ಯ ವಿಧಾನಸಭಾ ಕ್ಷೇತ್ರದಿಂದ ಮಾಜಿ ಸಂಸದ ಡಾ.ಅಂಬರೀಷ್ ಸ್ಪರ್ಧಿಸುವುದು ಬೇಡ ಎಂದು ಮಾಜಿ ಸಚಿವ ಆತ್ಮಾನಂದ ಬೆಂಬಲಿಗರು ಪ್ರೀತಿಯ ಅಂಬಿಯಣ್ಣನಿಗೆ ಆಗ್ರಹಪೂರ್ವಕ ಮನವಿ ಮಾಡಿಕೊಂಡಿದ್ದಾರೆ. ಅಲ್ಲಿಗೆ ಅಂಬರೀಷ್ ಅವರ 'ಮಂಡ್ಯ ಮಿಷನ್' ಮತ್ತೊಂದು ತಿರುವು ಪಡೆದುಕೊಂಡಿದೆ.

ಮೈಸೂರಿನ ಖಾಸಗಿ ಹೊಟೇಲ್‌ನಲ್ಲಿ ತಂಗಿದ್ದ ನಟ ಅಂಬರೀಷ್ ಅವರನ್ನು ಶನಿವಾರ ಭೇಟಿ ಮಾಡಿದ ಮಂಡ್ಯ ಜಿಲ್ಲಾ ಕಾಂಗ್ರೆಸ್ ಮುಖಂಡರು, ನಗರಸಭಾ ಸದಸ್ಯರಿದ್ದ ನಿಯೋಗವು ಮಂಡ್ಯ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧೆ ಮಾಡುವುದು ಬೇಡ. ಕಳೆದ ಬಾರಿ ಸ್ಪರ್ಧಿಸಿದ್ದ ಶ್ರೀರಂಗಪಟ್ಟಣ ಕ್ಷೇತ್ರದಿಂದಲೇ ನೀವು ಕಣಕ್ಕೆ ಇಳಿಯಿರಿ ಅಥವಾ ಬೇರೆ ಕ್ಷೇತ್ರವನ್ನು ಆಯ್ದುಕೊಂಡರೂ ಒಳ್ಳೆಯದು ಎಂದು ಮನವಿ ಮಾಡಿದ್ದಾರೆ.

ಕಾಂಗ್ರೆಸ್ ತಯಾರಿಸಿರುವ ಮೊದಲ ಪಟ್ಟಿಯಂತೆ ಪ್ರತಿ ಕ್ಷೇತ್ರಕ್ಕೂ ಮೂವರು ಅಭ್ಯರ್ಥಿಗಳನ್ನು ಅಖೈರು ಮಾಡಲಾಗಿದೆ. ಈ ಪಟ್ಟಿಯಲ್ಲಿ ಡಾ.ಅಂಬರೀಷ್ ಜೊತೆಗೆ, ಮಾಜಿ ಸಚಿವ ಆತ್ಮಾನಂದ ಅವರು ಹೆಸರು ಇದೆ. ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಚಿದಂಬರ, ಹಿರಿಯ ಕಾಂಗ್ರೆಸ್ಸಿಗ ರಾಮಲಿಂಗಯ್ಯ ಹೆಸರು ಕೂಡ ಪಟ್ಟಿಗೆ ಸೇರ್ಪಡೆಯಾಗಿದೆ ಎಂಬ ಸುದ್ದಿಯಿದೆ.

ತವರಿಂದ ದೂರಾಗುತ್ತಿರುವ ನಾಯಕರ ಪೈಕಿ 'ಮಂಡ್ಯದ ಗಂಡು'ಅಂಬರೀಷ್ ಲೇಟೆಸ್ಟ್. ವೀರಭದ್ರಪ್ಪ ಅವರು ಬಳ್ಳಾರಿಯಿಂದ ರಾಜಾಜಿನಗರಕ್ಕೆ, ಮೂಡಿಗೆರೆಯ ಮೋಟಮ್ಮ ಅವರು ಹಾಸನಜಿಲ್ಲೆ ಸಕಲೇಶಪುರಕ್ಕೆ ಶಿಫ್ಟ್ ಆಗಲು ನಿರ್ಧರಿಸಿದ್ದಾರೆ. ಉಳಿದ ಸಿನಿತಾರೆಗಳು ಎಲ್ಲಿದ್ದಾರೆ? ಎಲ್ಲಿ ನಿಲ್ಲಲಿದ್ದಾರೆ ನೋಡೋಣ

ಅಂಬರೀಷ್

ಕಳೆದ ಬಾರಿ (2008ರ ವಿಧಾನಸಭೆ ಚುನಾವಣೆ) ಶ್ರೀರಂಗಪಟ್ಟಣ ಅಲ್ಪ ಮತಗಳಿಂದ ಸೋತಿದ್ರಿ, ನಿಮ್ಮ ಬಗ್ಗೆ ಅಲ್ಲಿನ ಜನರಿಗೆ ಸಹಜವಾಗಿ ಅನುಕಂಪವಿದೆ. ನೀವು ಶ್ರೀರಂಗಪಟ್ಟಣದಿಂದಲೇ ಸ್ಪರ್ಧಿಸಬೇಕು. ವೀರಪ್ಪ ಮೊಯ್ಲಿ ಕ್ಯಾಬಿನೆಟ್ ನಲ್ಲಿ ತೋಟಗಾರಿಕೆ ಸಚಿವರಾಗಿದ್ದ ಎಂ.ಎಸ್ ಆತ್ಮಾನಂದ ಅವರು ಮಂಡ್ಯ ನಗರದವರು. ಅವರು ಅಲ್ಲಿಂದಲೇ ಕಣಕ್ಕಿಳಿಯಬೇಕು. ಆಗ ಈ ಎರಡೂ ಕ್ಷೇತ್ರಗಳು ಕಾಂಗ್ರೆಸ್ ಪಾಲಾಗುತ್ತವೆ. ಇದರಿಂದ ಪಕ್ಷಕ್ಕೆ ಲಾಭವಾಗಲಿದೆ ಎಂದು ಮನವಿ ಮಾಡಿಕೊಳ್ಳಲಾಗಿದೆ.

ಮಯೂರ್ ಪಟೇಲ್

ನಟ, ನಿರ್ಮಾಪಕ ನಿರ್ದೇಶಕ ಮದನ್ ಪಟೇಲ್ ಅವರ ಪುತ್ರ ನಟ ಮಯೂರ್ ಪಟೇಲ್ ಅವರು ಬೆಂಗಳೂರಿನ ಮಹದೇವಪುರ ಕ್ಷೇತ್ರದಿಂದ ಬಿಎಸ್ ಆರ್ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿಯುವುದು ಖಚಿತವಾಗಿದೆ. ಸಚಿವ ಅರವಿಂದ ಲಿಂಬಾವಳಿ ಇವರ ಎದುರಾಳಿ.

29 ವರ್ಷ ವಯಸ್ಸಿನ ಮಯೂರ್ ಸುಮಾರು 20ಕ್ಕೂ ಅಧಿಕ ಕನ್ನಡ, ತೆಲುಗು, ತಮಿಳು ಚಿತ್ರದಲ್ಲಿ ನಟಿಸಿದ್ದಾರೆ. ಅಂದ ಹಾಗೆ ಇಂದಿರಾನಗರ ನಿವಾಸಿ ಅಪ್ಪ ಮದನ್ ಅವರು ಚಾಮರಾಜನಗರ ಜಿಲ್ಲೆಯಲ್ಲಿ ಸ್ಪರ್ಧಿಸುವ ಮಾತಾಡಿದ್ದಾರೆ. ಸದ್ಯಕ್ಕಂತೂ ಯಾರಿವನು? ಚಿತ್ರ ಜನರಿಗೆ ತಲುಪಿಸುವಲ್ಲಿ ಬ್ಯುಸಿ

ಉಮಾಶ್ರೀ

ತೇರದಾಳ ಕ್ಷೇತ್ರದಿಂದ ಸ್ಪರ್ಧಿಸಲು ಮಾಜಿ ಕಾಪ್ ಶಂಕರ್ ಬಿದರಿ ಇಚ್ಛೆ ವ್ಯಕ್ತಪಡಿಸಿರುವುದರಿಂದ ನಟಿ ಉಮಾಶ್ರೀ ಅವರು ಬೇರೆ ಕ್ಷೇತ್ರ ಹುಡುಕಬೇಕಾಗಿದೆ. 2008ರಲ್ಲಿ 56 ವರ್ಷದ ಉಮಾಶ್ರೀ ಅವರು ಬಿಜೆಪಿಯ ಸಿದ್ದು ಸವದಿ ವಿರುದ್ಧ 12ಸಾವಿರ ಚಿಲ್ಲರೆ ಮತಗಳಿಂದ ಸೋತಿದ್ದರು. ಆದರೂ ಉಮಾಶ್ರೀ ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ, ಬಿಜಾಪುರ ಜಿಲ್ಲೆ ಉಸ್ತುವಾರಿ, ಚುನಾವಣಾ ಸಮಿತಿಯ ವಿಶೇಷ ಆಹ್ವಾನಿತೆ ಎಂಬುದನ್ನು ಮರೆಯುವಂತಿಲ್ಲ.

ರಕ್ಷಿತಾ ಪ್ರೇಮ್

ನಟಿ ರಕ್ಷಿತಾ ಪ್ರೇಮ್ ಅವರನ್ನು ಗದಗ ಜಿಲ್ಲೆಯ ನರಗುಂದ, ಬಾಗಲಕೋಟೆಯ ಬಾದಾಮಿ ಅಥವಾ ಹುನಗುಂದ ಕ್ಷೇತ್ರದಿಂದ ಕಣಕ್ಕಿಳಿಸುವ ಸಾಧ್ಯತೆಗಳಿವೆ.ಬೆಂಗಳೂರಿನ ರಾಜರಾಜೇಶ್ವರಿ ನಗರದಲ್ಲೇ ಸ್ಪರ್ಧಿಸುತ್ತಾರೆ ಎಂಬ ಸುದ್ದಿ ಬಹುತೇಕ ಸತ್ತಿದೆ. ಉತ್ತರ ಕರ್ನಾಟಕದಲ್ಲೇ ಸ್ಪರ್ಧೆ ಖಚಿತವಾಗಿದೆ.

ಪೂಜಾಗಾಂಧಿ

ರಾಜಕಾರಣಿಗಳು ನಾಚುವಂತೆ ಮುರ್ನಾಲ್ಕು ತಿಂಗಳುಗಳಲ್ಲೇ ಪಕ್ಷದಿಂದ ಪಕ್ಷಕ್ಕೆ ಹಾರಿದ ಸಾಧನೆ ತೋರಿದ ಮಳೆ ಹುಡುಗಿ ಪೂಜಾಗಾಂಧಿ ಒಂದು ವೇಳೆ ರಾಯಚೂರು ಒಲ್ಲೆ ಎಂದರೆ ಬೆಂಗಳೂರಿನ ಯಶವಂತಪುರ, ರಾಜರಾಜೇಶ್ವರಿ ನಗರದಿಂದ ಅಖಾಡ ಒದಗಿಸುವ ಸುದ್ದಿ ಸಿಕ್ಕಿದೆ.

ರಮ್ಯಾ ಅಥವಾ ಅವರ ಅಮ್ಮ

ಗೋಲ್ಡನ್ ಗರ್ಲ್, ಲಕ್ಕಿಸ್ಟಾರ್, ಯುವ ಕಾಂಗ್ರೆಸ್ ನಾಯಕಿ, ನಟಿ ರಮ್ಯಾ ಅವರ ಸ್ಪರ್ಧೆ ಬಗ್ಗೆ ಅನೇಕ ಸುದ್ದಿಗಳು ಹರಡಿದ್ದರೂ ರಮ್ಯಾ ಸದ್ಯಕ್ಕೆ ಸ್ಪರ್ಧಿಸುವ ಇಚ್ಛೆ ವ್ಯಕ್ತಪಡಿಸಿಲ್ಲ.

ರಮ್ಯಾ ಬದಲಿಗೆ ಅವರ ತಾಯಿ ರಂಜಿತಾ ಕಾಂಗ್ರೆಸ್ ಟಿಕೆಟ್ ಬಯಸಿರುವುದು ಖಚಿತವಾಗಿದೆ. ಬೆಂಗಳೂರು ನಗರ ವ್ಯಾಪ್ತಿಯ ರಾಜಾಜಿನಗರ ಅಥವಾ ಹೆಬ್ಬಾಳ ಕ್ಷೇತ್ರದಿಂದ ಸ್ಪರ್ಧಿಸಲು ಬಯಸಿದ್ದಾರೆ.

ಶಶಿಕುಮಾರ್

ನಟ ಮತ್ತು ರಾಜಕಾರಣಿ ಶಶಿಕುಮಾರ್ ವಿಧಾನಸಭೆ ಚುನಾವಣಾ ಕಣಕ್ಕೆ ಇಳಿಯಲು ಉತ್ಸುಕರಾಗಿದ್ದಾರೆ. 1999ರಲ್ಲಿ ಚಿತ್ರದುರ್ಗ ಕ್ಷೇತ್ರದಲ್ಲಿ ಜೆಡಿಯು ಟಿಕೆಟಿನಿಂದ ಸ್ಪರ್ಧಿಸಿ ಜಯಭೇರಿ ಬಾರಿ ಲೋಕಸಭೆಗೆ ಆಯ್ಕೆಯಾಗಿದ್ದರು. ಈ ಬಾರಿ ಚಳ್ಳಕೆರೆ ಕ್ಷೇತ್ರದಲ್ಲಿ ಸ್ಪರ್ಧಿಸಲು ಬಯಸಿದ್ದಾರೆ.

ಮಹೇಂದರ್

ನಟ, ನಿರ್ದೇಶಕ ಮತ್ತು ನಿರ್ಮಾಪಕ ಎಸ್ ಮಹೇಂದರ್ ಕೊಳ್ಳೇಗಾಲ ಕ್ಷೇತ್ರದಿಂದ ಸ್ಪರ್ಧಿಸಲು ಬಯಸಿದ್ದಾರೆ. ಆದರೆ, ಕಾಂಗ್ರೆಸ್ ಟಿಕೆಟ್ ಸಿಗೋದು ಕಷ್ಟವೆನಿಸಿದೆ.

ಮೀನಾ ತೂಗುದೀಪ

ಹಿರಿಯ ಖಳ ನಟ ದಿವಂಗತ ತೂಗುದೀಪ ಶ್ರೀನಿವಾಸ್ ಅವರ ಪತ್ನಿ ಮತ್ತು ಚಾಲೆಂಜಿಂಗ್ ಸ್ಟಾರ್ ದರ್ಶನ್ ತೂಗುದೀಪ್ ಅವರ ತಾಯಿ ಮೀನಾ ತೂಗುದೀಪ್ ಬೆಂಗಳೂರು ನಗರ ರಾಜರಾಜೇಶ್ವರಿ ಕ್ಷೇತ್ರದಿಂದ ಸ್ಪರ್ಧಿಸಲು ಇಚ್ಛಿಸಿದ್ದಾರೆ. ಆದರೆ, ಸುದ್ದಿ ಇನ್ನೂ ಖಚಿತವಾಗಿಲ್ಲ. ದರ್ಶನ್ ಸ್ಪರ್ಧೆ ಬಗ್ಗೆ ಗಾಳಿ ಸುದ್ದಿ ಹಬ್ಬಿತ್ತಾದರೂ ಅದು ನಿಜವಾಗಲು ಕಾಲ ಪಕ್ವವಾಗಿಲ್ಲ.

ಮುನಿರತ್ನಂ ನಾಯ್ಡು

ಕಾಂಗ್ರೆಸ್ ಪಕ್ಷದ ನಿಷ್ಠಾವಂತ ಸದಸ್ಯ. ಕನ್ನಡ ಚಿತ್ರರಂಗದ ಪ್ರಮುಖ ನಿರ್ಮಾಪಕ ಅಲ್ಲದೆ ಬಿಬಿಎಂಪಿ ಯಶವಂತಪುರ ವಾರ್ಡಿನ ಕಾರ್ಪೊರೇಟರ್ ಆಗಿರುವ ಮುನಿರತ್ನಂ ನಾಯ್ಡು ಅವರು ಕಣಕ್ಕಿಳಿಯಲು ಸಜ್ಜಾಗಿದ್ದಾರೆ. ಮುನಿರತ್ನಂ ಅವರು ಕೂಡಾ ಬೆಂಗಳೂರು ನಗರ ವ್ಯಾಪ್ತಿಯ ರಾಜರಾಜೇಶ್ವರಿ ನಗರ ಕ್ಷೇತ್ರದಿಂದ ಸ್ಪರ್ಧಿಸಲು ಬಯಸಿದ್ದಾರೆ.

ದೊಡ್ಡಣ್ಣ

ಕರ್ನಾಟಕ ಜನತಾ ಪಕ್ಷ ಸೇರಿದ ದೊಡ್ಡಣ್ಣ ಅವರು ಯಾವುದೇ ಕ್ಷೇತ್ರ ಬೇಕು ಎಂದು ಡಿಮ್ಯಾಂಡ್ ಮಾಡಿಲ್ಲ. ಹೀಗಾಗಿ ಸಿಕ್ಕ ಕ್ಷೇತ್ರದಲ್ಲಿ ಸ್ಪರ್ಧಿಸಲು ರೆಡಿಯಾಗಿದ್ದಾರೆ.

ಉಳಿದವರ ಪಾಡು

ಜೆಡಿಎಸ್ ಸೇರಿರುವ ನಟಿ ಮಾಳವಿಕ ಅವಿನಾಶ್, ನಿರ್ದೇಶಕ ಎಸ್ ನಾರಾಯಣ್ ಹಾಗೂ ಕಿರುತೆರೆ ನಿರ್ದೇಶಕ, ನಟ ರವಿಕಿರಣ್ ಅವರ ಸ್ಪರ್ಧೆ ಬಗ್ಗೆ ಖಚಿತ ಮಾಹಿತಿ ಬಂದಿಲ್ಲ.

English summary
Contesting from Mandya town may not be that easy for actor Ambareesh, who prefers that constituency to Srirangapatna, where he contested in 2008 and lost. A section of the supporters of Atmananda walked up to Ambareesh and requested him not to think about Mandya,
Please Wait while comments are loading...