For Quick Alerts
  ALLOW NOTIFICATIONS  
  For Daily Alerts

  ಅಂಬರಕ್ಕೆ ಲಗ್ಗೆಯಿಟ್ಟ ಅಂಬರೀಷ್ ಅರುವತ್ತರ ಸಂಭ್ರಮ

  By * ಶ್ರೀರಾಮ್ ಭಟ್
  |

  ರೆಬೆಲ್ ಸ್ಟಾರ್ ಅಂಬರೀಷ್ ಅವರಿಗೆ ನಿನ್ನೆ (ಮೇ 29, 2012) ಅರುವತ್ತರ ಸಂಭ್ರಮ. ಅವರ ಹುಟ್ಟುಹಬ್ಬವನ್ನು ಅರಮನೆ ಮೈದಾನದಲ್ಲಿ ತುಂಬಾ ವಿಜೃಂಭಣೆಯಿಂದ ಆಚರಿಸಲಾಯಿತು. ಕನ್ನಡ ಚಿತ್ರರಂಗದ ಎಲ್ಲಾ ನಟ-ನಟಿಯರು, ನಿರ್ಮಾಪಕ, ನಿರ್ದೇಶಕರು ಅಲ್ಲಿ ಸೇರಿದ್ದರು. ಅರಮನೆ ಮೈದಾನ ನಿನ್ನೆ ಅಕ್ಷರಶಃ ಚಿತ್ರರಂಗದ ಸಕಲ ಜನರ ಹಾಗೂ ಸಿನಿಅಭಿಮಾನಿಗಳ ಸಮಾಗಮಕ್ಕೆ ಸಾಕ್ಷಿಯಾಯಿತು.

  ಕೇವಲ ಕನ್ನಡ ಚಿತ್ರರಂಗವಲ್ಲದೇ ನೆರೆ-ಪರಭಾಷೆಯ ಚಿತ್ರರಂಗವೂ ಈ ಅದ್ದೂರಿ ಸಮಾರಂಭದಲ್ಲಿ ಪಾಲ್ಗೊಂಡಿತ್ತು. ತಮಿಳು, ತೆಲುಗು ,ಮಲೆಯಾಳಂ ಹಾಗೂ ಬಾಲಿವುಡ್ ಚಿತ್ರರಂಗದ ದಿಗ್ಗಜರು ಅಂಬಿ ಸಂಭ್ರಮದಲ್ಲಿ ಪಾಲ್ಗೊಂಡಿದ್ದು ವಿಶೇಷದಲ್ಲಿ ವಿಶೇಷ ಎನಿಸಿತು. ಮಂಗಳವಾರ ಸಂಜೆ ಬೆಂಗಳೂರಿನ ಅರಮನೆ ಮೈದಾನ ಸಂಪೂರ್ಣವಾಗಿ ಅಂಬಿಯ ಬಿಂಬವಾಗಿತ್ತು.

  ಸೂಪರ್ ಸ್ಟಾರ್ ರಜನಿಕಾಂತ್, ಮೆಗಾ ಸ್ಟಾರ್ ಚಿರಂಜೀವಿ, ಶತ್ರುಘ್ನ ಸಿನ್ಹಾ, ಮೋಹನ್ ಬಾಬು, ಸುನೀಲ್ ಶೆಟ್ಟಿ, ನಂದಮೂರಿ ಬಾಲಕೃಷ್ಣ, ಜಾಕಿಶ್ರಾಫ್, ದಿಲೀಪ್ ಕುಮಾರ್ , ಖ್ಯಾತ ಗಾಯಕ ಎಸ್ ಪಿ ಬಾಲಸುಬ್ರಮಣ್ಯಂ, ಹೀಗೆ ಚಿತ್ರರಂಗದ ಅತಿರಥಮಹಾರಥರು ಅಲ್ಲಿ ಆಸೀನರಾಗಿದ್ದರು. ಅಂಬಿ ಅಜಾತಶತ್ರು, ಎಲ್ಲರ ಸ್ನೇಹಿತ, ಕಲಿಯುಗ ಕರ್ಣ ಎಂಬ ಗುಣಗಾನ ಎಲ್ಲರಿಂದ ಸುರಿಮಳೆಯಾಯಿತು.

  ಖ್ಯಾತ ನಟಿಯರಾದ ಜಯಪ್ರದಾ, ಜಯಮಾಲಾ, ಖುಷ್ಬೂ, ಅಂಬಿಕಾ, ಲಕ್ಷ್ಮೀ, ಜಯಂತಿ, ಭಾರತಿ, ಹೀಗೆ ಅಂಬರೀಷ್ ಚಿತ್ರಗಳಲ್ಲಿ ನಟಿಸಿದ್ದ ಹಾಗೂ ಆ ಕಾಲದ ಪ್ರಸಿದ್ಧ ನಟನಟಿಯರು ಅಂಬಿ ಸಂಭ್ರಮದಲ್ಲಿ ಮನಃಪೂರ್ವಕವಾಗಿ ಸಂಭ್ರಮಿಸಿದರು. ಜಯಪ್ರದಾ ಅವರು ಅಂಬರೀಷ್ ಗುಣಗಾನ ಮಾಡಿದರು.

  ಹಿನ್ನೆಲೆಯಲ್ಲಿ 'ಚಳಿಚಳಿ ತಾಳೆನು ಈ ಚಳಿಯಾ...' ಎಂಬ ಹಾಡು ಬರುತ್ತಿದ್ದಂತೆ ಕ್ಯಾಮರಾ ಕಣ್ಣು ಅಂಬಿಕಾ ಕಡೆ ತಿರುಗಿ ಅವರನ್ನು ಸೆರೆಹಿಡಿದು ಪ್ರೇಕ್ಷಕರ ಚಕ್ರವ್ಯೂಹದೊಳಕ್ಕೆ ಬಿಟ್ಟಿದ್ದು ಎಲ್ಲರಲ್ಲೂ ಖುಷಿಯ ಜತೆ ಚಳಿಯ ಅನುಭವ ನೀಡಿತು. ನೆರೆದಿದ್ದ ಅಂಬಿ ಅಭಿಮಾನಿಗಳು ಕ್ಷಣಕಾಲ ಚಕ್ರವ್ಯೂಹ ಚಿತ್ರದ ಅಂದಿನ ಕಾಲಕ್ಕೆ ಸಂಪೂರ್ಣವಾಗಿ ಮರಳಿದರು.

  ಪ್ರಕಾಶ್ ರೈ ನಾರದನ ಪಾತ್ರದ ಮೂಲಕ ಅಂಬಿ ಸಾಧನೆಯ ಮೈಲಿಗಲ್ಲುಗಳನ್ನು ಹಿನ್ನೆಲೆಯಲ್ಲಿ ಹೇಳುತ್ತಿದ್ದರು, ಅದಕ್ಕೆ ಸಂಬಂಧಪಟ್ಟ ವಿಡಿಯೋ ಚಿತ್ರಗಳು ತೆರೆಯ ಮೇಲೆ ಮೂಡಿಬರುತ್ತಿದ್ದವು. ನೆರೆದಿದ್ದ ಪ್ರೇಕ್ಷಕರು ಪ್ರಕಾಶ್ ರೈ ಅವರ ಕಂಚಿನ ಕಂಠ ಹಾಗೂ ಅಂಬಿ ಸಾಧನೆಯನ್ನು ಬೆರಗಿನಿಂದ ಕಣ್ಣು-ಕಿವಿ ತುಂಬಿಕೊಂಡು ರೋಮಾಂಚಿತರಾದರು.

  ಅರ್ಜುನ್ ಸರ್ಜಾ ನೃತ್ಯದಿಂದ ಪ್ರಾರಂಭವಾದ ಕಾರ್ಯಕ್ರಮ, ದರ್ಶನ್, ಸುದೀಪ್, ಉಪೇಂದ್ರ-ಪ್ರಿಯಾಂಕಾ, ತರುಣ್-ನೀತು, ದಿಗಂತ್-ಐಂದ್ರಿತಾ, ಶಿವರಾಜ್ ಕುಮಾರ್-ಹರಿಪ್ರಿಯಾ, ಗಣೇಶ್-ರಾಧಿಕಾ ಪಂಡಿತ್, ಅಜಯ್ ರಾವ್, ಯಶಸ್ ಸೂರ್ಯ, ಯೋಗೇಶ್, ಯಶ್, ಚಿರಂಜೀವಿ ಸರ್ಜಾ ಹೀಗೆ ನಟ-ನಟಿಯರ ಸಾಲುಸಾಲು ನೃತ್ಯ ಪ್ರದರ್ಶನಗಳಿಂ್ ಪ್ರೇಕ್ಷಕರಿಗೆ ರಸದೌತಣ ನೀಡಿತು.

  ಅಷ್ಟೇ ಅಲ್ಲದೇ ರಮೇಶ್ ಅರವಿಂದ್, ರಂಗಾಯಣ ರಘು, ದುನಿಯಾ ವಿಜಯ್, ಸಾಧು ಕೋಕಿಲ, ಲವ್ಲಿ ಸ್ಟಾರ್ ಪ್ರೇಮ್, ಲೂಸ್ ಮಾದ ಯೋಗೇಶ್ ಮುಂತಾದವರ ಕಾಮಿಡಿ ಸೋ ಕೂಡ ಸಖತ್ ಸಾಥ್ ನೀಡಿತು. ಒಬ್ಬಬ್ಬರೋ ಒಂದೊಂದು ರೀತಿಯಲ್ಲಿ ವಿಶೇಷ ಕಾರ್ಯಕ್ರಮ ನೀಡಲು ಸಜ್ಜಾಗಿ ಬಂದಿದ್ದು ವಿಶೇಷವಾಗಿ ಗಮನಸೆಳೆಯುವಂತಿತ್ತು.

  ಒಟ್ಟಿನಲ್ಲಿ ನಿನ್ನೆ ಅರಮನೆ ಮೈದಾನ ಅಕ್ಷರಶಃ ಅಂಬರೀಷ್ ಅಭಿಮಾನಿಗಳ ಸಂಭ್ರಮದ ಗೂಡಾಗಿತ್ತು. ಇಡೀ ಕನ್ನಡ ಚಿತ್ರರಂಗವನ್ನು ಒಗ್ಗೂಡಿಸಿತ್ತು. ನೆರೆಭಾಷೆಯ ಚಿತ್ರರಂಗದವರನ್ನೂ ಕನ್ನಡ ನೆಲಕ್ಕೆ ಕರೆಸಿತ್ತು. 'ಅಜಾತ ಶತ್ರು' ಎಂಬ ಅಂಬಿಗೆ ಸಿಕ್ಕಿರುವ ಬಿರುದಿಗೆ ಪಕ್ಕಾ ಸಾಕ್ಷಿಯಾಗಿತ್ತು. ಅಂಬಿಯ ಅರವತ್ತರ ಸಂಭ್ರಮ ಮುಗಿಲಿಗೆ ಲಗ್ಗೆ ಇಟ್ಟಿತ್ತು. (ಒನ್ ಇಂಡಿಯಾ ಕನ್ನಡ)

  English summary
  Rebel Star Ambarish's 60th Birthday Celebrated at Bangalore Palace Ground yesterday, on 29th May 2012. Super Star Rajinikanth, Mega Star Chiranjeevi, Nandamoori Balakrishna, shatrughna Sinha, Jockie Shroff, Mohanlal and others presented. All Kannada movie industry participated in this Grand celebration.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X