ಬೆಂಗಳೂರಲ್ಲಿ 'ರಣವಿಕ್ರಮ' ಗ್ಲಾಮರ್ ಗೊಂಬೆ ಅಂಜಲಿ
ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ 'ರಣವಿಕ್ರಮ' ಚಿತ್ರ ಈ ವರ್ಷದ ಬಹುನಿರೀಕ್ಷಿತ ಚಿತ್ರಗಳಲ್ಲಿ ಒಂದು. ಈ ಚಿತ್ರದಲ್ಲಿ ಇಬ್ಬರು ನಾಯಕಿಯರು ಎಂಬುದು ಗೊತ್ತೇ ಇದೆ. ಅವರಲ್ಲಿ ಒಬ್ಬರು ಅಂಜಲಿಯಾದರೆ ಇನ್ನೊಬ್ಬರು ಆದಾ ಶರ್ಮಾ. ಟಾಲಿವುಡ್ ನಲ್ಲಿ ತಮ್ಮ ಮೈಮಾಟ ಹಾಗೂ ಅಭಿನಯದಿಂದ ಗಮನಸೆಳೆಯುತ್ತಿರುವ ಬೆಡಗಿ ಅಂಜಲಿ.
ಇತ್ತೀಚೆಗೆ ಬೆಂಗಳೂರಿಗೆ ಬಂದು 'ರಣವಿಕ್ರಮ' ಚಿತ್ರದಲ್ಲಿನ ತಮ್ಮ ಭಾಗದ ಸನ್ನಿವೇಶಗಳಿಗೆ ಡಬ್ಬಿಂಗ್ ಹೇಳಿ ಹೋಗಿದ್ದಾರೆ. ಭರ್ಜರಿ ಆಕ್ಷನ್ ಚಿತ್ರದಲ್ಲಿ ಅಂಜಲಿ ಅವರ ಪಾತ್ರ ಏನು ಎತ್ತ ಎಂಬುದು ಗೊತ್ತಾಗಬೇಕಾದರೆ ಸ್ವಲ್ಪ ದಿನ ಕಾಯಲೇಬೇಕು. ['ಮಿಸ್ಸಿಂಗ್ ನಟಿ' ಅಂಜಲಿ ಸುತ್ತ ಮತ್ತೊಂದು ವಿವಾದ]

ಇದೇ ಮೊದಲ ಬಾರಿಗೆ ಪುನೀತ್ ರಾಜ್ ಕುಮಾರ್ ಅವರು ರಫ್ ಅಂಡ್ ಟಪ್ ಪೊಲೀಸ್ ಅಧಿಕಾರಿಯಾಗಿ ಖಾಕಿ ಖದರ್ ತೋರುತ್ತಿರುವ ಚಿತ್ರ. 'ಗೋವಿಂದಾಯ ನಮಃ' ಹಾಗೂ 'ಗೂಗ್ಲಿ' ಚಿತ್ರಗಳ ಮೂಲಕ ಗೆಲುವಿನ ಹಾದಿಯಲ್ಲಿರುವ ಪವನ್ ಒಡೆಯರ್ ಅವರ ಆಕ್ಷನ್ ಕಟ್ ನಲ್ಲಿ ಮೂಡಿಬರುತ್ತಿರುವ ಚಿತ್ರ 'ರಣವಿಕ್ರಮ'.
ಅಂದಹಾಗೆ ಅಂಜಲಿ ಅವರು ಅಭಿನಯಿಸುತ್ತಿರುವ ಚೊಚ್ಚಲ ಕನ್ನಡ ಚಿತ್ರ ಇದಲ್ಲ. ಈ ಹಿಂದೆ ಅವರು ಪ್ರಜ್ವಲ್ ದೇವರಾಜ್ ಅವರ 'ಹೊಂಗನಸು' (2008) ಚಿತ್ರದಲ್ಲಿ ಅಭಿನಯಿಸಿದ್ದರು. ಇದೀಗ ಪವರ್ ಸ್ಟಾರ್ ಜೊತೆಗಿನ ಚಿತ್ರದ ಮೂಲಕ ಗ್ರ್ಯಾಂಡ್ ಎಂಟ್ರಿ ಕೊಟ್ಟಿದ್ದಾರೆ.
ಯುಗಾದಿ (ಮಾ.20) ಹಬ್ಬದ ಉಡುಗೊರೆಯಾಗಿ 'ರಣವಿಕ್ರಮ' ಆಡಿಯೋಗಳು ಪುನೀತ್ ಅಭಿಮಾನಿಗಳ ಕೈಸೇರಿವೆ. ಈ ವರ್ಷದ ಬಿಗ್ ಬಜೆಟ್ ಚಿತ್ರಗಳಲ್ಲಿ ಇದೂ ಒಂದು ಎಂಬುದು ವಿಶೇಷ. ಪುನೀತ್ ಅಭಿಮಾನಿಗಳು ಕಾತುರದಿಂದ ಚಿತ್ರವನ್ನು ನಿರೀಕ್ಷಿಸುವಂತಾಗಿದೆ. (ಫಿಲ್ಮಿಬೀಟ್ ಕನ್ನಡ)


Click it and Unblock the Notifications











