»   » ವಿಷ್ಣು ಅಭಿಮಾನಿಗಳಿಗೆ ನಟಿ ಭಾರತಿ ವಿಷ್ಣುವರ್ಧನ್ ಬರೆದ ಬಹಿರಂಗ ಪತ್ರ

ವಿಷ್ಣು ಅಭಿಮಾನಿಗಳಿಗೆ ನಟಿ ಭಾರತಿ ವಿಷ್ಣುವರ್ಧನ್ ಬರೆದ ಬಹಿರಂಗ ಪತ್ರ

By: ಭಾರತಿ ವಿಷ್ಣುವರ್ಧನ್
Subscribe to Filmibeat Kannada

ಆತ್ಮೀಯ ವಂದನೆಗಳೊಂದಿಗೆ ಸಹೃದಯರೇ...

ನಿಮ್ಮ ಇದುವರೆಗಿನ ಆತ್ಮೀಯ ಸ್ಪಂದನಕ್ಕೆ ಧನ್ಯವಾದಗಳು. ತಮ್ಮೆಲ್ಲರಿಗೂ ತಿಳಿದಿರುವಂತೆ, ನಮ್ಮ ಯಜಮಾನರ ಸ್ಮಾರಕ ನಿರ್ಮಾಣಕ್ಕೆ ಸಂಬಂಧಿಸಿದಂತೆ, ಅಭಿಮಾನ್ ಸ್ಟುಡಿಯೋದಲ್ಲಿನ ಜಾಗದ ವಿವಾದ ಏಳು ವರ್ಷವಾದರೂ ಇನ್ನೂ ಇತ್ಯರ್ಥವಾಗಿರುವುದಿಲ್ಲ.

ಸ್ಮಾರಕ ಇಲ್ಲಿಯೇ ಆಗಬೇಕೆಂಬುದೇ ನಮ್ಮೆಲ್ಲರ ಅಭಿಲಾಷೆಯೂ ಆಗಿತ್ತು. ಆದರೆ, ನಿರಂತರವಾಗಿ ಏಳು ವರ್ಷಗಳಿಂದ ತುಂಬಾ ತಾಳ್ಮೆಯಿಂದ ನಾವು ಎಲ್ಲಾ ರೀತಿಯ ಪ್ರಯತ್ನ ಮಾಡಿದರೂ ಇದು ಸಾಧ್ಯವಾಗಲೇ ಇಲ್ಲ. ಯಾವುದಾದರೊಂದು ಅಡಚಣೆಗಳು ಬರುತ್ತಲೇ ಇತ್ತು. ಹೀಗಾಗಿ, ಮೈಸೂರಿನಲ್ಲಿ ಸ್ಮಾರಕ ನಿರ್ಮಿಸುವ ನಿರ್ಧಾರಕ್ಕೆ ಬರಬೇಕಾಯಿತು. ಇಲ್ಲಿ ಖಂಡಿತಾ ವ್ಯಾಪಾರಿ ದೃಷ್ಟಿಯಿಲ್ಲ ಮತ್ತು ಇದರ ಅಗತ್ಯವೂ ನಮಗಿಲ್ಲ.

Bharathi Vishnuvardhan writes letter addressing Vishnu Fans

ನಮ್ಮ ಉದ್ದೇಶ ನಮ್ಮ ಯಜಮಾನರ ಆಸೆಯಂತೆ ಜನರಿಗೆ ಉಪಯೋಗವಾಗುವಂಥ, ಅವರಿಗೆ ಖುಷಿ ಕೊಡುವಂಥ ಕೆಲಸವಾಗಬೇಕು. [ಸೆ.18ಕ್ಕೆ ಡಾ.ವಿಷ್ಣುವರ್ಧನ್ ಹುಟ್ಟುಹಬ್ಬ: ಭುಗಿಲೆದ್ದ ಹೊಸ ವಿವಾದ ಏನು?]

ಮುಖ್ಯವಾಗಿ ಹೇಳಬೇಕೆಂದರೆ, ಈ ಸ್ಮಾರಕ ನಿರ್ಮಾಣವು ಸರ್ಕಾರವೇ ಸ್ಥಾಪಿಸಿರುವಂಥ ಡಾ.ವಿಷ್ಣುವರ್ಧನ ಪ್ರತಿಷ್ಠಾನ ಟ್ರಸ್ಟ್ ಮೂಲಕ ಲೋಕಾರ್ಪಣೆಯಾಗುತ್ತದೆ. ಮಾನ್ಯ ಮುಖ್ಯಮಂತ್ರಿಗಳೂ ಈ ಟ್ರಸ್ಟ್ ಮುಖ್ಯಸ್ಥರಾಗಿರುತ್ತಾರೆ. ಇದರಲ್ಲಿ ನಾನೂ ಸಹ ಒಬ್ಬ ಟ್ರಸ್ಟಿಯಾಗಿ ಕಾರ್ಯ ನಿರ್ವಹಿಸುತ್ತೇನೆ.

ಮುಂದೆ ನಾವು ಇಲ್ಲಿ ರೂಪಿಸುವ ಯಾವುದೇ ಇನ್ ಸ್ಟಿಟ್ಯೂಟ್ ಅಥವಾ ಸ್ಮಾರಕದ ಅಭಿವೃದ್ಧಿ ಯೋಜನೆಗಳಿಂದ ಬರುವಂಥ ಎಲ್ಲಾ ಆದಾಯವೂ ಸರ್ಕಾರದ ಅಧೀನದಲ್ಲಿರುತ್ತದೆ. ಸರ್ಕಾರ ಮಾರ್ಗದರ್ಶನ ಜೊತೆಗೆ ನಾವು ಸಹಭಾಗಿಯಾಗಿ ಕಾರ್ಯ ನಿರ್ವಹಿಸುತ್ತೇವೆ.

ಇಲ್ಲಿ ನಮ್ಮ ವೈಯುಕ್ತಿಕ ಲಾಭ ಅಥವಾ ಹಣದ ವ್ಯಾಮೋಹ, ಸ್ವಾರ್ಥ ಇರುವುದಿಲ್ಲ. ಹೀಗಾಗಿ ಯಾರೂ ತಪ್ಪಾಗಿ ಭಾವಿಸಬೇಕಾಗಿಲ್ಲ.

ಇಲ್ಲಿನ ಬೆಳವಣಿಗೆ ನೋಡಿ ನಮಗೆ ಬಹಳ ನೋವಾಗಿದೆ. ಮನಸ್ಸಿಗೆ ಕಷ್ಟವಾಗಿದೆ. ನಮ್ಮ ಯಜಮಾನರ ಸ್ಮಾರಕ ನಿರ್ಮಾಣಕ್ಕಾಗಿ ನಾವು ಇನ್ನೆಷ್ಟು ಕಾಯಬೇಕು? ಇದು ನನ್ನ ಜವಾಬ್ದಾರಿ ಮತ್ತು ಕರ್ತವ್ಯ ಅಲ್ಲವೇ? ಅಭಿಮಾನಿಗಳ ಆಸೆಯಂತೆಯೂ ಬಹಳಷ್ಟು ಸಮಯ ಸಹನೆಯಿಂದ ಕಾದು ನೋಡಿದೆವು. ಆದರೆ, ಯಾವುದೇ ಪರಿಹಾರ ಸಿಗುವ ಸೂಚನೆ ಕಾಣಿಸಲಿಲ್ಲ. ಅನಿವಾರ್ಯವಾಗಿ ಮೈಸೂರಿಗೆ ಹೋಗಬೇಕಾಯಿತು.

ನಮಗೆ ಯಾರನ್ನೂ ನೋಯಿಸುವ ಉದ್ದೇಶವಿಲ್ಲ. ಮೈಸೂರಿನಲ್ಲಿ ನಿರ್ಮಾಣವಾಗುವ ಸ್ಮಾರಕ್ಕೆ ಸಂಬಂಧಿಸಿದಂತೆ ದಯವಿಟ್ಟು ಯಾರೂ ಅನ್ಯತಾ ಭಾವಿಸಬಾರದು ಎಂದು ಈ ಮೂಲಕ ತಮ್ಮಲ್ಲಿ ವಿನಂತಿಸುತ್ತೇನೆ.

ಧನ್ಯವಾದಗಳು
ಭಾರತಿ ವಿಷ್ಣುವರ್ಧನ್

English summary
Kannada Actress Bharathi Vishnuvardhan has written letter addressing fans with regard to the shift of Dr.Vishnuvardhan memorial to Mysuru.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada