For Quick Alerts
  ALLOW NOTIFICATIONS  
  For Daily Alerts

  Vijayanand Trailer : 'ವಿಜಯಾನಂದ' ಟ್ರೈಲರ್: ಉದ್ಯಮಿಯ ಯಶಸ್ಸಿನ ಹೋರಾಟಕ್ಕೆ ದೃಶ್ಯರೂಪ

  |

  ವಿಆರ್ಎಲ್‌ ಸಮೂಹದ ಸಂಸ್ಥಾಪಕ, ಖ್ಯಾತ ಉದ್ಯಮಿ, ರಾಜಕಾರಣಿ ವಿಜಯ್ ಸಂಕೇಶ್ವರ್ ಅವರ ಜೀವನ ಆಧರಿಸಿದ 'ವಿಜಯಾನಂದ' ಸಿನಿಮಾ ತೆರೆಗೆ ಬರಲು ಸಜ್ಜಾಗಿದ್ದು, ಸಿನಿಮಾದ ಟ್ರೈಲರ್ ಇದೀಗ ಬಿಡುಗಡೆ ಆಗಿದೆ.

  ಸಾಮಾನ್ಯವಾಗಿ ಸಿನಿಮಾ ನಟರ ಜೀವನ ಕತೆಗಳ ಬಗ್ಗೆ ಜನರಿಗೆ ಹೆಚ್ಚು ಆಸಕ್ತಿ. ಅದಕ್ಕಿಂತಲೂ ಹೆಚ್ಚು ಸ್ಪೂರ್ತಿದಾಯಕವಾದ ಉದ್ಯಮಿಗಳ ಜೀವನ ಕತೆ, ಉದ್ಯಮ ಕಟ್ಟಲು ಅವರು ಪಟ್ಟ ಪಾಡು, ಮಾಡಿದ ಹೋರಾಟಗಳು ಕರ್ನಾಟಕದಲ್ಲಿ ದಾಖಲಾಗಿರುವುದು ಕಡಿಮೆ. ಸಿನಿಮಾಗಳಲ್ಲಿಯಂತೂ ಬಹುತೇಕ ಇಲ್ಲವೆಂದೇ ಹೇಳಬೇಕು.

  ಇಂಥಹಾ ಸಂದರ್ಭದಲ್ಲಿ ಸಣ್ಣ ಕುಟುಂಬದಿಂದ ಬಂದು ಕೇವಲ ಒಂದು ಲಾರಿಯಿಂದ ಆರಂಭಿಸಿ ವಿಆರ್‌ಎಲ್ ಎಂಬ ದೊಡ್ಡ ಸಮೂಹವನ್ನು ಕಟ್ಟಿ ಬೆಳೆಸಿದ ಉದ್ಯಮಿ ವಿಜಯ್ ಸಂಕೇಶ್ವರ್ ಜೀವನ ಕತೆಯನ್ನು ಸಿನಿಮಾ ಮಾಡಿರುವುದು ಇಂಥಹಾ ಇನ್ನಷ್ಟು ಕರ್ನಾಟಕದ ಉದ್ಯಮಿಗಳ ಕತೆ ಸಿನಿಮಾ ರೂಪತಾಳಲು ಪ್ರೇರಕ.

  'ವಿಜಯಾನಂದ' ಸಿನಿಮಾದ ಟ್ರೈಲರ್ ಬಿಡುಗಡೆ ಆಗಿದ್ದು, ಈ ಸಿನಿಮಾ ಬಯೋಪಿಕ್ ಆಗಿದ್ದರೂ ಸಿನಿಮಾದಲ್ಲಿ ಮಾಸ್, ಕಮರ್ಷಿಯಲ್ ಅಂಶಗಳನ್ನು ಅಡಕ ಮಾಡಿರುವುದನ್ನು ಟ್ರೈಲರ್‌ ಸಾರಿ ಹೇಳುತ್ತಿದೆ. ಸಿನಿಮಾದಲ್ಲಿ ಆಕ್ಷನ್, ರೊಮಾನ್ಸ್‌, ಹಾಡು, ಭರ್ಜರಿ ಡೈಲಾಗ್‌ಗಳಿಗೂ ಜಾಗ ಮಾಡಿಕೊಟ್ಟಿರುವುದು ಟ್ರೈಲರ್‌ನಿಂದ ತಿಳಿದು ಬರುತ್ತಿದೆ.

  ಆದರೆ ಒಟ್ಟಾರೆಯಾಗಿ ಟ್ರೈಲರ್‌ ಅನ್ನು ಗಮನಿಸಿದಾಗ ಸಿನಿಮಾವನ್ನು, 'ಪ್ರೊಮೋಷನಲ್ ಟೂಲ್' ಆಗಿ ಮಾತ್ರವೇ ಪರಿಗಣಿಸದೆ ಚೆನ್ನಾಗಿಯೇ ಕಟ್ಟಿಕೊಟ್ಟಿದ್ದಾರೆಂಬ ಕುರುಹು ಟ್ರೈಲರ್‌ನಲ್ಲಿ ಕಾಣ ಸಿಗುತ್ತದೆ. ಆ ಮೂಲಕ ಸಿನಿಮಾ ಬಗ್ಗೆ ಕುತೂಹಲ ಹೆಚ್ಚಿಸುತ್ತಿದೆ ಟ್ರೈಲರ್.

  ವಿಜಯ್ ಸಂಕೇಶ್ವರ್ ಅವರ ಬಾಲ್ಯ, ಯೌವ್ವನ, ಅವರ ಕುಟುಂಬ, ವಿಜಯ್‌ರ ತಂದೆ, ಉದ್ಯಮ ಕಟ್ಟಲು ಅವರು ಎದುರಿಸಿದ ಅಡ್ಡಿ ಆತಂಕಗಳು, ಅವರಿಗೆ ಸಹಾಯ ನೀಡಿದವರು ಇನ್ನಿತರೆ ವಿಷಯಗಳು ಸಿನಿಮಾದಲ್ಲಿ ಕಾಣ ಸಿಗಲಿವೆ ಎಂಬುದು ಟ್ರೈಲರ್‌ನಲ್ಲಿಯೇ ತಿಳಿದುಬರುತ್ತಿದೆ.

  ಲಾಜಿಸ್ಟಿಕ್ ಉದ್ಯಮ ಮಾತ್ರವೇ ಅಲ್ಲದೆ, ಸಂಕೇಶ್ವರ್ ಅವರು ಪತ್ರಿಕೋದ್ಯಮಕ್ಕೆ ಪ್ರವೇಶಿಸಿದ, ಅಲ್ಲಿ ತಮ್ಮದೇ ರೀತಿಯಲ್ಲಿ ದರ ಕ್ರಾಂತಿ ಮಾಡಿದ ವಿಷಯಗಳ ಬಗ್ಗೆಯೂ ಸಿನಿಮಾದ ಟ್ರೈಲರ್‌ನಲ್ಲಿ ಗ್ಲಿಂಪ್ಸ್‌ ಕಾಣಲು ಸಿಗುತ್ತದೆ. ವಿಜಯ್ ಸಂಕೇಶ್ವರ್ ಹಾಗೂ ರಾಜಕಾರಣಿಯೊಬ್ಬರ ನಡುವಿನ ಜಿದ್ದಾ-ಜಿದ್ದಿಯ ತುಣುಕುಗಳು ಸಹ ಟ್ರೈಲರ್‌ನಲ್ಲಿವೆ.

  ಸಿನಿಮಾದಲ್ಲಿ ನಿಹಾಲ್, ವಿಜಯ್ ಸಂಕೇಶ್ವರ್ ಪಾತ್ರದಲ್ಲಿ ನಟಿಸಿದ್ದಾರೆ. ಭರತ್ ಬೋಪಣ್ಣ, ವಿಜಯ್ ಸಂಕೇಶ್ವರ್ ಪುತ್ರ ಆನಂದ್ ಸಂಕೇಶ್ವರ್ ಪಾತ್ರದಲ್ಲಿ ನಟಿಸಿದ್ದಾರೆ. ಅನಂತ್ ನಾಗ್, ವಿಜಯ್ ಸಂಕೇಶ್ವರ್ ತಂದೆಯ ಪಾತ್ರದಲ್ಲಿ ನಟಿಸಿದ್ದಾರೆ. ಪ್ರಕಾಶ್ ಬೆಳವಾಡಿ ಆರ್‌ಆರ್‌ ಹೆಸರಿನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಶೈನ್ ಶೆಟ್ಟಿ, ನಿರ್ದೇಶಕ ದಯಾಳ್ ಪದ್ಮನಾಭ್ ಇನ್ನೂ ಕೆಲವರು ಕೆಲವು ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದು, ಟ್ರೈಲರ್‌ನಲ್ಲಿಯೂ ಕಾಣಿಸಿಕೊಂಡಿದ್ದಾರೆ.

  ಸಿನಿಮಾವನ್ನು ರಿಷಿಕಾ ಶರ್ಮಾ ನಿರ್ದೇಶನ ಮಾಡಿದ್ದು, ನಿರ್ಮಾಣ ಮಾಡಿರುವುದು ವಿಜಯ್ ಸೇಂಕೇಶ್ವರ್ ಪುತ್ರ ಆನಂದ್ ಸಂಕೇಶ್ವರ್. ಸಂಗೀತ ಗೋಪಿ ಸುಂದರ್. ಸಿನಿಮಾವು ಡಿಸೆಂಬರ್ 09 ರಂದು ತೆರೆಗೆ ಬರಲಿದೆ ಎನ್ನಲಾಗಿದೆ.

  English summary
  Businessman Vijay Sankeshwar's biopic Vijayandanda trailer released. Movie will release on December 09.
  Monday, November 21, 2022, 13:15
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X