For Quick Alerts
  ALLOW NOTIFICATIONS  
  For Daily Alerts

  ಕರಿಯಾ ಐ ಲವ್ ಯು, ಕರುನಾಡ ಮೇಲಾಣೆ!

  |

  ದುನಿಯಾ ವಿಜಯ್ ಇವತ್ತು ಸುದ್ದಿ ಮಾಡಿದ್ದಾರೆ. ಕನ್ನಡದ ಮೊದಲ ಸಾಲಿನ ನಾಯಕರಲ್ಲಿ ಒಬ್ಬರಾಗಿರುವ ವಿಜಯ್ ಹೆಸರಿನ ಹಿಂದೆ ದುನಿಯಾ ಸೇರಿಕೊಂಡಿದ್ದಕ್ಕೆ ಕಾರಣ ಅವರಿಗೆ ಅಪಾರ ಹೆಸರು, ಹಣ, ಕೀರ್ತಿ ತಂದುಕೊಟ್ಟ ಸೂರಿ ನಿರ್ದೇಶನದ ಸಿನಿಮಾ ದುನಿಯಾ.

  ಈ ದುನಿಯಾ ವಿಜಿ ಇವತ್ತು ಸುದ್ದಿ ಮಾಡಿರುವುದಕ್ಕೆ ಕಾರಣ ಕೌಟುಂಬಿಕ ಇಕ್ಕಟ್ಟು, ಬಿಕ್ಕಟ್ಟು. ಮದುವೆಯಾದ ಹದಿನಾಲ್ಕು ವರ್ಷಗಳ ನಂತರ, ಏಕೋ ಏನೋ ಅವರ ಸಂಸಾರದಲ್ಲಿ ಬಿರುಕು ಕಾಣಿಸಿಕೊಂಡಿದೆ. ಈ ಬಿರುಕಿಗೆ ಸಾಕ್ಷಿಯಾಗಿ ವಿಜಿ ವಿಚ್ಛೇದನಕ್ಕಾಗಿ ಗುರುವಾರ ಬೆಂಗಳೂರು ನ್ಯಾಯಾಲಯದಲ್ಲಿ ಅರ್ಜಿ ಗುಜರಾಯಿಸಿದ್ದಾರೆ.

  ಕೋರ್ಟಿನ ಸುದ್ದಿಯನ್ನು ಕೋರ್ಟಿಗೆ ಬಿಟ್ಟು, ವಿಜಿ ಸಂಸಾರದ ಸುದ್ದಿಗಳನ್ನು ಅವರ ಸಂಸಾರಕ್ಕೆ ಬಿಟ್ಟು ಒಬ್ಬ ಕಲಾವಿದನಾಗಿ ವಿಜಿ ಇಟ್ಟ ಹೆಜ್ಜೆಗಳನ್ನು ಗಮನಿಸೋಣ. ಈತನೊಬ್ಬ ಒಳ್ಳೆಯ ಕಲಾವಿದ, ಹೀರೋ ಎನ್ನುವುದರಲ್ಲಿ ಎರಡು ಮಾತಿಲ್ಲ. ವಿಜಿಯ ಐದು ಚಿತ್ರಗಳತ್ತ ಮತ್ತೆ ಕಣ್ಣು ಹಾಯಿಸೋಣ.

  ಅಂದಹಾಗೆ, ಮಾಸ್ ಚಿತ್ರಗಳಿಗೆ ತನ್ನದೇ ಆದ ಮಾಸ್ ಟಚ್ ನೀಡಿದ ಬ್ಲ್ಯಾಕ್ ಕೋಬ್ರಾ ದುನಿಯಾ ವಿಜಯ್ ಹುಟ್ಟಿದ್ದು ಬೆಂಗಳೂರು ಗ್ರಾಮಾಂತರ ಆನೇಕಲ್ ತಾಲೂಕಿನಲ್ಲಿ. ರುದ್ರಪ್ಪ ಮತ್ತು ನಾರಾಯಣಮ್ಮ ದಂಪತಿಗಳಿಗೆ ಜನಿಸಿದ ವಿಜಯ್ ಆರ್ಥಿಕವಾಗಿ ತಂದೆಗೆ ಕೈಲಾದ ಸಹಾಯ ಮಾಡಲು ಜಿಮ್ ಟ್ರೈನರ್ ಮತ್ತು ಸಹಾಯಕ ಸ್ಟಂಟ್ ಮ್ಯಾನ್ ಆಗಿ ಕೂಡಾ ಕೆಲಸ ಮಾಡಿದ್ದರು.

  ಓದುವುದರಲ್ಲಿ ಹಿಂದೆ ಓಡುವುದರಲ್ಲಿ ಮುಂದೆಯಾಗಿದ್ದ ವಿಜಯ್ ಬಣ್ಣದ ಲೋಕದ ಮೇಲೆ ಬಣ್ಣ ಬಣ್ಣದ ಕನಸನ್ನು ಕಂಡಿದ್ದರು. ಹಲವಾರು ಕನಸನ್ನು ಹೊತ್ತು ಬಂದಿದ್ದ ವಿಜಯ್ ಮುಂದೊಂದು ದಿನ ತಾನೂ ಒಬ್ಬ ಹೀರೋ ಆಗಬೇಕೆನ್ನುವ ಕನಸು ನನಸಾಗಲು ಸಾಕಷ್ಟು ಪರದಾಡಿದ್ದರು.

  2004ರಲ್ಲಿ ಕನ್ನಡದ ಸ್ಟಾರ್ ನಿರ್ದೇಶಕರಾದ ಯೋಗರಾಜ್ ಭಟ್ ಮತ್ತು ಸೂರಿಯವರನ್ನು ಭೇಟಿಯಾದ ವಿಜಯ್ ಸಣ್ಣ ಸಣ್ಣ ಪಾತ್ರದಲ್ಲಿ ನಟಿಸಲು ಆರಂಭಿಸಿದರು. ಎಂಟ್ರಿ ಕೊಟ್ಟ ಕೂಡಲೇ ಹೀರೋ ಆಗಬೇಕೆನ್ನುವ ಕನಸು ನನಸಾಗಲಿಲ್ಲ. ಯೋಗರಾಜ್ ಭಟ್ ನಿರ್ದೇಶನದ ರಂಗ SSLC ಚಿತ್ರದ ಮೂಲಕ ಬೆಳ್ಳಿತೆರೆಗೆ ಕಾಲಿಟ್ಟ ವಿಜಯ್ ಜೋಗಿ, ಶ್ರೀ, ರಾಜೀವ್ ಮುಂತಾದ ಚಿತ್ರಗಳಲ್ಲಿ ನಟಿಸಿದ್ದರು.

  ಚಂಡ

  ಚಂಡ

  ಎಸ್ ನಾರಾಯಣ್ ನಿರ್ಮಿಸಿ, ನಿರ್ದೇಶಿಸಿ, ಸಂಗೀತ ನೀಡಿದ ಚಿತ್ರ 'ಚಂಡ'. ವಿಜಯ್, ಶುಭಾ ಪೂಂಜಾ ಪ್ರಮುಖ ಭೂಮಿಕೆಯಲ್ಲಿರುವ ಈ ಚಿತ್ರ 2007ರಲ್ಲಿ ಬಿಡುಗಡೆಯಾಯಿತು. ತನ್ನದೇ ಯುಗ ಚಿತ್ರಕ್ಕೂ ಈ ಚಿತ್ರ ಬಿಡುಗಡೆಗೂ ಅಂತರ ಇರಬೇಕೆಂದು ವಿಜಯ್ ಮತ್ತು ಎಸ್ ನಾರಾಯಣ್ ನಡುವಣ ಕಲಹ ಚೇಂಬರ್ ಮೆಟ್ಟಲೇರಿತ್ತು.

  ದುನಿಯಾ

  ದುನಿಯಾ

  ಸೂರಿ ನಿರ್ದೇಶನದಲ್ಲಿ 2007ರಲ್ಲಿ ಬಿಡುಗಡೆಯಾದ ಈ ಚಿತ್ರ ಕನ್ನಡ ಚಿತ್ರಗಳಿಗೆ ರಾಷ್ಟ್ರೀಯ ಮಾರುಕಟ್ಟೆಯಲ್ಲಿ ಹೊಸ ಆಯಾಮ ನೀಡಿದ ಚಿತ್ರ. ರಶ್ಮಿ ನಾಯಕಿಯಾಗಿ ನಟಿಸಿ, ವಿ ಮನೋಹರ್ ಸಂಗೀತ ನೀಡಿದ ಚಿತ್ರದಲ್ಲಿ ವಿಜಯ್ ಶಿವಲಿಂಗು ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಟಿ ಪಿ ಸಿದ್ದರಾಜು ನಿರ್ಮಿಸಿದ್ದ ಈ ಚಿತ್ರ ಎರಡು ಕೋಟಿ ರೂಪಾಯಿ ಬಜೆಟಿನಲ್ಲಿ ನಿರ್ಮಾಣವಾಗಿತ್ತು. ಚಿತ್ರ 30 ಕೋಟಿಗೂ ಹೆಚ್ಚು ವಹಿವಾಟು ನಡೆಸಿತ್ತು. ಬೆಂಗಳೂರು ಮೈಸೂರು ರಸ್ತೆಯಲ್ಲಿರುವ ವಿನಾಯಕ ಚಿತ್ರಮಂದಿರದಲ್ಲಿ ಸೂಪರ್ ಸ್ಟಾರ್ ರಜನೀಕಾಂತ್ ಈ ಚಿತ್ರವನ್ನು ವೀಕ್ಷಿಸಿದ್ದರು.

  ಜಂಗ್ಲಿ

  ಜಂಗ್ಲಿ

  ಸೂರಿ ನಿರ್ದೇಶನದ ಈ ಚಿತ್ರ 2009ರಲ್ಲಿ ಬಿಡುಗಡೆಯಾಗಿತ್ತು. ಐಂದ್ರಿತಾ ರಾಯ್ ನಾಯಕಿಯಾಗಿರುವ ಈ ಚಿತ್ರಕ್ಕೆ ಸಂಗೀತ ನೀಡಿದವರು ವಿ ಹರಿಕೃಷ್ಣ. ಹಳೇ ಪಾತ್ರೆ ಹಳೇ ಕಬ್ಬಿಣ, ನೀ ನೆಂದರೆ ನನ್ನೊಳಗೆ ಏನೋ ಒಂದು ಸಂಚಲನ ಮುಂತಾದ ಹಾಡುಗಳು ಭಾರೀ ಜನಪ್ರಿಯಗೊಂಡಿತ್ತು. ರಾಕ್ಲೈನ್ ಬ್ಯಾನರ್ ನಲ್ಲಿ ಮೂಡಿ ಬಂದ ಚಿತ್ರ ನಿರ್ಮಾಪಕರಿಗೆ ಭರ್ಜರಿ ಬೆಳೆ ತಂದು ಕೊಟ್ಟಿತ್ತು.

   ಜಾನಿ ಮೇರಾ ನಾಮ್ ಪ್ರೀತಿ ಮೇರಾ ಕಾಮ್

  ಜಾನಿ ಮೇರಾ ನಾಮ್ ಪ್ರೀತಿ ಮೇರಾ ಕಾಮ್

  ಪ್ರೀತಂ ಗುಬ್ಬಿ ನಿರ್ದೇಶಿಸಿದ್ದ ಈ ಚಿತ್ರಕ್ಕೆ ಜಯಣ್ಣ ಮತ್ತು ಭೋಗೇಂದ್ರ ನಿರ್ಮಾಪಕರು. ವಿಜಯ್, ರಮ್ಯಾ, ರಂಗಾಯಣ ರಘು, ಸಾಧು ಕೋಕಿಲಾ ಪ್ರಮುಖ ತಾರಾಗಣದಲ್ಲಿರುವ ಈ ಚಿತ್ರ ಜೂನ್ 2011ರಲ್ಲಿ ಬಿಡುಗಡೆಯಾಗಿತ್ತು.ಹರಿಕೃಷ್ಣ ಸಂಗೀತ ನೀಡಿದ್ದ ಈ ಚಿತ್ರ ಗಲ್ಲಾ ಪೆಟ್ಟಿಗೆಯಲ್ಲಿ 16 ಕೋಟಿಗೂ ಹೆಚ್ಚು ವ್ಯಾಪಾರ ಮಾಡಿದೆ ಎನ್ನುವ ಸುದ್ದಿಯಿದೆ.

  ಭೀಮಾ ತೀರದಲ್ಲಿ

  ಭೀಮಾ ತೀರದಲ್ಲಿ

  ಮಾಸ್ ಡೈರೆಕ್ಟರ್ ಓಂ ಪ್ರಕಾಶ್ ರಾವ್ ನಿರ್ದೇಶನದ ಈ ಚಿತ್ರ ಪ್ರೇಕ್ಷಕರಿಂದ, ಮಾಧ್ಯಮಗಳಿಂದ ವ್ಯಾಪಕ ಪ್ರಶಂಸೆ ಗಳಿಸಿತ್ತು. ಚಿತ್ರ ಬಿಡುಗಡೆಯ ನಂತರ ಪತ್ರಕರ್ತ ರವಿ ಬೆಳಗೆರೆ ಮತ್ತು ಚಿತ್ರತಂಡದ ನಡುವಣ ಗುದ್ದಾಟ ತಾರಕಕ್ಕೇರಿತ್ತು. ವಿಜಯ್, ಪ್ರಣೀತಾ, ಉಮಾಶ್ರೀ, ಸುಚೇಂದ್ರ ಪ್ರಸಾದ್, ದೊಡ್ಡಣ್ಣ ಮುಂತಾದವರು ನಟಿಸಿರುವ ಈ ಚಿತ್ರ 2012ರಲ್ಲಿ ಬಿಡುಗಡೆಯಾಯಿತು, ಅಲ್ಲದೆ ಕಳೆದ ವರ್ಷದ ಹಿಟ್ ಚಿತ್ರಗಳಲ್ಲಿ ಇದೂ ಒಂದು.

  ವಿಜಯ್ ವೃತ್ತಿ ಜೀವನದ ಬದುಕು ದುನಿಯಾ ವಿಜಯ್ ಆಗಿದ್ದು ನಿರ್ದೇಶಕ ಸೂರಿಯಿಂದ. ಅವರ ನಿರ್ದೇಶನದ ದುನಿಯಾ ಚಿತ್ರವನ್ನು ಕರಿಯಾ ಐ ಲವ್ ಯು ಎಂದು ಕರುನಾಡಿನ ಜನತೆ ಸ್ವಾಗತಿಸಿ ಆಶೀರ್ವದಿಸಿದರು. ರಾತ್ರೋರಾತ್ರಿ ದುನಿಯಾ ವಿಜಯ್ ಕನ್ನಡ ಚಿತ್ರರಂಗದ ಟಾಪ್ ನಾಯಕರ ಪಟ್ಟಿಗೆ ಸೇರಿದರು.

  2007ರಲ್ಲಿ ಕಲಾಸಾಮ್ರಾಟ್ ನಿರ್ದೇಶನದ ಚಂಡ ಚಿತ್ರ ವಿವಿಧ ಕಾರಣಗಳಿಗೆ ಬಿಡುಗಡೆಗೆ ಮುನ್ನ ಮತ್ತು ನಂತರ ಭಾರೀ ವಿವಾದಕ್ಕೆ ಈಡಾಗಿತ್ತು. ಇದುವರೆಗೆ 15 ಚಿತ್ರಗಳಲ್ಲಿ ನಾಯಕನಾಗಿ ನಟಿಸಿರುವ ವಿಜಯ್ ಮುಂದಿನ ಚಿತ್ರ ರಜನೀಕಾಂತ ಬಿಡುಗಡೆಗೆ ಸಿದ್ದವಾಗಿದೆ. ಜಾನಿ ಮೇರಾ ನಾಮ್ ಪ್ರೀತಿ ಮೇರಾ ಕಾಮ್ 2 ಮತ್ತು ನನ್ನ ಶಕ್ತಿ ಚಿತ್ರದ ಶೂಟಿಂಗ್ ಚಾಲ್ತಿಯಲ್ಲಿದೆ.

  ಇದುವರೆಗೆ ಬಂದ ಅವರ 15 ಚಿತ್ರಗಳಲ್ಲಿ ದುನಿಯಾ, ಚಂಡ, ಜಾನಿ ಮೇರಾ ನಾಮ್ ಪ್ರೀತಿ ಮೇರಾ ಕಾಮ್, ಜಂಗ್ಲಿ ಮತ್ತು ಭೀಮಾ ತೀರದಲ್ಲಿ ಚಿತ್ರ ಯಶಸ್ಸು ಗಳಿಸಿದ್ದರೆ ಉಳಿದ ಚಿತ್ರಗಳು ಅಷ್ಟಾಗಿ ಕ್ಲಿಕ್ ಆಗಿಲ್ಲ. ಶಶಾಂಕ್ ನಿರ್ದೇಶಿಸಿದ್ದ ಜರಾಸಂಧ ಚಿತ್ರ ನಿರ್ಮಾಪಕರಿಗೆ ಎವರೇಜ್ ಲಾಭ ತಂದು ಕೊಟ್ಟಿತ್ತು.

  English summary
  Career graph of Duniya Vijay mass hero in Sandalwood. Nick named Black Cobra Vijays 5 most successful movies featured. He has acted in over 15 movies.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X