»   » ಐಶ್ವರ್ಯಾಗೆ ಬಿಸ್ಕೆಟ್ ಹಾಕಲಿರುವ ಚೇತನ್ ಚಂದ್ರ

ಐಶ್ವರ್ಯಾಗೆ ಬಿಸ್ಕೆಟ್ ಹಾಕಲಿರುವ ಚೇತನ್ ಚಂದ್ರ

By: ಶ್ರೀರಾಮ್ ಭಟ್
Subscribe to Filmibeat Kannada
Chetan Chndra
ಕನ್ನಡಕ್ಕೊಬ್ಬರೇ ಏಯ್ಟ್ ಪ್ಯಾಕ್ ನಟರಾಗಿರುವ ಚೇತನ್ ಚಂದ್ರ, ಮತ್ತೊಂದು ಸಿನಿಮಾಗೆ ಸಿದ್ಧರಾಗುತ್ತಿದ್ದಾರೆ. ತಿಂಗಳುಗಳ ಹಿಂದೆ ಚಿತ್ರೀಕರಣ ಪ್ರಾರಂಭಿಸಿದ್ದ ಕುಂಭರಾಶಿ, ಚಿತ್ರೀಕರಣದ ಅಂತಿಮ ಹಂತ ತಲುಪಿದೆ. ಅಷ್ಟರಲ್ಲಾಗಲೇ ಇನ್ನೊಂದು ಚಿತ್ರವು ಚೇತನ್ ಚಂದ್ರರನ್ನು ಕರೆದಿದೆ. ಬಿಸ್ಕೆಟ್ ಎಂಬ ಅತ್ಯಾಕರ್ಷಕ ಶೀರ್ಷಿಕೆಯ ಈ ಚಿತ್ರದ ಸದ್ಯದಲ್ಲೇ ಸೆಟ್ಟೇರಲಿದೆ.

ಈ ಚಿತ್ರಕ್ಕೆ ನಿರ್ದೇಶನ ಮಾಡಲಿರುವವರು ಕಿರುತೆರೆ ಹಾಗೂ ಹಿರಿತೆರೆಯ ಜನಪ್ರಿಯ ನಟ ರವಿತೇಜ. ಸದ್ಯಕ್ಕೆ 'ಪಾರ್ವತಿ ಪರಮೇಶ್ವರ' ಧಾರಾವಾಹಿಯ 'ಪರಮೇಶ್ವರ' ಪಾತ್ರದಲ್ಲಿ ಎಲ್ಲರನ್ನು ನಕ್ಕುನಗಿಸುತ್ತಿರುವ ರವಿತೇಜ, ಈ ಮೊದಲು ರಾಜಧಾನಿ ಸೇರಿದಂತೆ ಹಲವು ಚಿತ್ರಗಳಲ್ಲೂ ನಟಿಸಿದ್ದಾರೆ. ಅಂದಹಾಗೆ, ಬರಲಿರುವ ಬಿಸ್ಕೆಟ್ ಚಿತ್ರ ರವಿತೇಜರ ಮೊದಲ ನಿರ್ದೇಶನದ ಚಿತ್ರ. ರವಿತೇಜ, ಪ್ರೇಕ್ಷಕರ ಬಾಯಿಕೆ ಬಿಸ್ಕೆಟ್ ಹಾಕುವುದಿಲ್ಲ ಎಂಬ ಪಕ್ಕಾ ಮಾತು ಚಿತ್ರತಂಡದಿಂದ ಬಂದಿರುವುದು ಸಮಾಧಾನದ ಸಂಗತಿ. ಮಿಕ್ಕಂತೆ ಯಾರಿಗಾದರೂ ಬಿಸ್ಕೆಟ್ ಹಾಕಿಕೊಳ್ಳಲಿ ಬಿಡಿ!

ಈ ಚಿತ್ರಕ್ಕೆ ನಾಯಕಿಯಾಗಿ ಐಶ್ವರ್ಯಾ ನಾಗ್ ಆಯ್ಕೆಯಾಗಿದ್ದಾರೆ. ಇತ್ತೀಚಿಗಷ್ಟೇ ಸೆಟ್ಟೇರಿರುವ 'ಲೂಸುಗಳು' ಚಿತ್ರದ ನಾಯಕಿಯರಲ್ಲೊಬ್ಬರಾದ ಐಶ್ವರ್ಯಾ ನಾಗ್, ಈ ಚಿತ್ರವನ್ನೂ ತಮ್ಮ ಮಡಿಲಿಗೆ ಹಾಕಿಕೊಂಡಿದ್ದಾರೆ. ಬಹುಬೇಗ ಕನ್ನಡದಲ್ಲಿ ನೆಲೆನಿಲ್ಲುವ ಸೂಚನೆ ತೋರಿಸುತ್ತಿರುವ ಆಕರ್ಷಕ ಬೊಗಸೆ ಕಂಗಳ ಈ ನಟಿ, ಬಂದ ಅವಕಾಶಗಳನ್ನು ಹೇಗೆ ಉಪಯೋಗಿಸಿಕೊಂಡು ಎಷ್ಟು ಬೇಗ ಕನ್ನಡದ ಜನಪ್ರಿಯ ನಟಿಯರ 'ಲಿಸ್ಟ್' ಸೇರಿಕೊಳ್ಳಲಿದ್ದಾರೆ ಎಂಬುದಷ್ಟೇ ಸದ್ಯದ ಕುತೂಹಲ.

'ಬಿಸ್ಕೆಟ್' ಚಿತ್ರದ ಟ್ಯಾಗ್ ಲೈನ್ 'ಹುಡುಗಿ ಸ್ವೀಟ್...ಹುಡುಗ ಸಾಲ್ಟ್.... ಶಿರ್ಷಿಕೆ ಹಾಗೂ ಈ ಟ್ಯಾಗ್ ಲೈನ್ ನೋಡಿದರೆ ಚಿತ್ರ ಯಾವ ರೀತಿಯ ಕಥೆ ಹೊಂದಿದೆ ಎಂಬುದನ್ನು ಊಹಿಸಬಹುದಾದರೂ ನಿರ್ದೇಶಕ ರವಿತೇಜ ಬಾಯ್ಬಿಡುವ ತನಕ ಕಾಯುವುದೇ ಒಳ್ಳೆಯದು. ಸದ್ಯಕ್ಕಂತೂ ರವಿತೇಜ ಅವರಾಗಲೀ ಅಥವಾ ಚಿತ್ರತಂಡದ ಯಾರೊಬ್ಬರೂ ಕೂಡ ಈ ಚಿತ್ರದ ಕಥೆಯ ಗುಟ್ಟು ಬಿಟ್ಟುಕೊಟ್ಟಿಲ್ಲ. ಈ ಚಿತ್ರವನ್ನು ನಿರ್ಮಿಸಲಿರುವವರು ಕೆ. ರಾಮಸ್ವಾಮಿ.

'ಬಿಸ್ಕೆಟ್' ಚಿತ್ರಕ್ಕೆ ಸಂಗೀತ ನೀಡಲಿರುವವರು ಮಣಿಕಾಂತ್ ಕದ್ರಿ. ಈ ಮೊದಲು ಕನ್ನಡದಲ್ಲಿ 'ಸವಾರಿ', 'ಪೃಥ್ವಿ', 'ಮದುವೆಮನೆ', 'ಕ್ರೇಜಿಲೋಕ' ಸೇರಿದಂತೆ ಹಲವು ಚಿತ್ರಗಳಿಗೆ ಸಂಗೀತ ನೀಡಿರುವ ಇವರು ಬರಲಿರುವ ಜಗ್ಗೇಶ್ ಅಭಿನಯದ 'ಕೂಲ್ ಗಣೇಶ್' ಹಾಗೂ 'ಚಮಕ್' ಹೆಸರಿನ ಇನ್ನೊಂದು ಚಿತ್ರಕ್ಕೆ ಸಂಗೀತ ನಿರ್ದೇಶನ ಮಾಡುತ್ತಿದ್ದಾರೆ. ಕನ್ನಡ ಸೇರಿದಂತೆ ತಮಿಳು, ತೆಲುಗು ಹಾಗೂ ಹಿಂದಿಯಲ್ಲೂ ಸಂಗೀತ ನೀಡಿರುವ ಹಿರಿಮೆ ಮಣಿಕಾಂತ್ ಕದ್ರಿಯವರಿಗಿದೆ. ಚಿತ್ರಕ್ಕೆ ಜೈ ಆನಂದ್ ಛಾಯಾಗ್ರಹಣವಿದೆ. (ಒನ್ ಇಂಡಿಯಾ ಕನ್ನಡ)

English summary
Eight Packed Kannada actor 'PUC' fame Chetan Chandra to act in attractive titled movie 'Biscuite'. Raviteja is the Director for the movie and Manikanth Kadri to compose Music for this. 
 
Please Wait while comments are loading...