»   » ಕ್ರೇಜಿಸ್ಟಾರ್ ಬರ್ತ್ ಡೇ ದಿನದ ಮಾತಿನ ಝಲಕ್

ಕ್ರೇಜಿಸ್ಟಾರ್ ಬರ್ತ್ ಡೇ ದಿನದ ಮಾತಿನ ಝಲಕ್

Posted By:
Subscribe to Filmibeat Kannada
ರವಿಚಂದ್ರನ್ ರೀಮೇಕ್ ವಿರೋಧಿ. ಇನ್ನು ಡಬ್ಬಿಂಗ್ ವಿರೋಧಿಸದೇ ಇರಲು ಸಾಧ್ಯವೇ? ಈ ವಿಷಯವಾಗಿ ರವಿಚಂದ್ರನ್ ಸಾಕಷ್ಟು ಆಳವಾಗಿ ಮಾತನಾಡಿದ್ದಾರೆ. ಮನಸ್ಸು ಬಿಚ್ಚಿ ತಮ್ಮ ಅನಿಸಿಕೆ ಹೇಳಿದ್ದಾರೆ. ಅವೆಲ್ಲಾ ಈಚೆ ಬಂದಿದ್ದು ಅವರ 51ನೇ ಹುಟ್ಟುಹಬ್ಬದ (ಮೇ 30, 2012) ಸಂದರ್ಭದಲ್ಲಿ. ಅವರದೇ ಮನೆಯಲ್ಲಿ ನಡೆದ ಮಾತುಕತೆಯಲ್ಲಿ.

ರವಿಚಂದ್ರನ್ ಹೇಳಿದ್ದಾರೆ..." ರೀಮೇಕ್ ಹಾಗೂ ಡಬ್ಬಿಂಗ್ ಎರಡೂ ಬೇಡ ಅನ್ನುವವನು ನಾನು. ಆದರೆ ನನ್ನನ್ನು ಯಾರು ಕೇಳುತ್ತಾರೆ. ಡಬ್ಬಿಂಗ್ ಸಿನಿಮಾಗಳನ್ನು ನೋಡೋದಕ್ಕಾಗಲ್ಲ, ನಾನು ನೋಡೋದೂ ಇಲ್ಲ. ನಾನು ಬೇರೆ ಭಾಷೆಯ ಚಿತ್ರಗಳ ಕಥೆಯಿಂದ ಸ್ಪೂರ್ತಿ ಪಡೆದು ಚಿತ್ರ ಮಾಡಿದ್ದಿದೆ. ಅದನ್ನು ನನ್ನದೇ ಕಲ್ಪನೆಯಲ್ಲಿ ಬೆಳೆಸಿ ಚಿತ್ರಕಥೆ ಮಾಡಿ ಸಿನಿಮಾ ನಿರ್ಮಿಸಿದ್ದೇನೆ, ನಿರ್ದೇಶಿಸಿದ್ದೇನೆ.

ರೀಮೇಕ್ ಮಾಡಿ ಅದನ್ನೇ ವಿರೋಧಿಸುತ್ತಿರುವವನು ನಾನಲ್ಲ. ನನಗೆ ರೀಮೇಕ್ ಮತ್ತು ಡಬ್ಬಿಂಗ್ ಎರಡನ್ನೂ ಮಾಡದೆಯೂ ಸಿನಿಮಾ ಮಾಡಲು ಗೊತ್ತಿದೆ. ಡಬ್ಬಿಂಗ್ ಬಂದರೂ, ರೀಮೇಕ್ ಇದ್ದರೂ ಅದಕ್ಕಿಂತಲೂ ಚೆನ್ನಾಗಿ ಚಿತ್ರಮಾಡಿ ತೋರಸುವ ತಾಕತ್ತು ನನಗಿದೆ. ನನಗೆ ಯಾವುದರಿಂದಲೂ ಸಮಸ್ಯೆ ಆಗುವುದಿಲ್ಲ. ನಾನು ನನಗಾಗಿ ಯಾವುದನ್ನೂ ವಿರೋಧಿಸುತ್ತಿಲ್ಲ" ಎಂದಿದ್ದಾರೆ ಕ್ರೇಜಿಸ್ಟಾರ್.

ಇಡೀ ಭಾರತೀಯ ಚಿತ್ರರಂಗವೇ ತಿರುಗಿ ನೋಡುವಂತ ಚಿತ್ರಗಳನ್ನು ಕೊಟ್ಟವರು ರವಿಚಂದ್ರನ್ ತಂದೆ ಎ. ವೀರಾಸ್ವಾಮಿ. ಅದೇ ಪರಂಪರೆಯನ್ನು ಮುಂದುವರಿಸಿಕೊಂಡು ಹೋಗಲು ಶತಪ್ರಯತ್ನ ಮಾಡುತ್ತಿದ್ದಾರೆ. ರವಿಚಂದ್ರನ್ ಅವರಿಗೆ ಸಿನಿಮಾವೇ ಪ್ರಪಂಚ. ಅದನ್ನು ಬಿಟ್ಟು ಬೇರೇನನ್ನೂ ಯೋಚಿಸುವವರಲ್ಲ ರವಿ. ಅವರ ಮಗ ಮನು ಕೂಡ ಈಗ ಚಿತ್ರ ನಿರ್ದೇಶನವನ್ನು ಕಲಿಯುತ್ತಿದ್ದಾರೆ.

ಕನ್ನಡದಲ್ಲಿ ಕೆಟ್ಟ ಸಿನಿಮಾಗಳು ಬರುತ್ತವೆ ಅಂತ ಹೇಳೋರು ಬೇರೆ ಭಾಷೆಯ ಚಿತ್ರಗಳನ್ನೂ ನೋಡಬೇಕು. ಆದರೆ ಹಾಗಾಗುತ್ತಿಲ್ಲ. ಅದಿರಲಿ, ಅಲ್ಲೂ ಕೆಟ್ಟದಿರುತ್ತೆ. ಆದರೆ ಅಂಥ ಸಿನಿಮಾಗಳು ಇಲ್ಲಿಯತನಕ ತಲುಪುವುದಿಲ್ಲ. ಅತ್ಯತ್ತಮವಾದ ಆರೇಳು ಸಿನಿಮಾಗಳು ಮಾತ್ರ ಇಲ್ಲಿಗೆ ಬರುತ್ತವೆ, ಅದನ್ನೇ ಇಲ್ಲಿರುವವರು ನೋಡುತ್ತಾರೆ. ಅದನ್ನೇ ಆಧಾರವಾಗಿಟ್ಟುಕೊಂಡು ಬೇರೆ ಭಾಷೆಯ ಚಿತ್ರಗಳು ಚೆನ್ನಾಗಿರುತ್ತವೆ ಎಂದರೆ ಏನರ್ಥ?

ಎಲ್ಲ ಭಾಷೆಯ ಎಲ್ಲಾ ಚಿತ್ರಗಳನ್ನು ನೋಡಿದರೆ, ಚಿತ್ರರಂಗದ ವ್ಯವಹಾರ ಗಮನಿಸಿದರೆ ಗೆಲ್ಲುತ್ತಿರುವುದು ನಮ್ಮ ಕನ್ನಡ ಸಿನಿಮಾಗಳೇ ಎಂಬುದು ಗೊತ್ತಿರಲಿ. ಪ್ರೇಕ್ಷಕರನ್ನು ವಂಚಿಸಿದರೆ ಬುದ್ಧಿ ಕಲಿಯಲೇ ಬೇಕಾಗುತ್ತದೆ. ಒಳ್ಳೆಯ ಚಿತ್ರಗಳನ್ನು ಕೊಟ್ಟರೆ ಪ್ರೇಕ್ಷಕರು ಬಂದೇ ಬರುತ್ತಾರೆ. ಅದಕ್ಕಾಗಿ ರೀಮೇಕ್ ಅಥವಾ ಡಬ್ಬಿಂಗ್ ಸಹವಾಸ ಮಾಡಬೇಕಿಲ್ಲ" ಎಂದು ಖಡಾಖಂಡಿತವಾಗಿ ನುಡಿದಿದ್ದಾರೆ ರವಿಚಂದ್ರನ್.

ಒಂದು ಸಿನಿಮಾವನ್ನು ಒಂದು ಕೋಟಿಗೂ, ಇನ್ನೊಂದನ್ನು ಹತ್ತು ಕೋಟಿಗೂ ಮಾಡೋದನ್ನು ನಿಲ್ಲಿಸಬೇಕು. ಎಲ್ಲಾ ಥಿಯೇಟರಿನಲ್ಲಿಯೂ ಬಿಡುಗಡೆ ಮಾಡುವ ಸಂಪ್ರದಾಯ ತೊಲಗಬೇಕು. ಹಾಗೇ ಒಂದು ಸಿನಿಮಾ ಗೆದ್ದ ತಕ್ಷಣ ನಾಯಕರನ್ನು ಅಟ್ಟಕ್ಕೆ ಹತ್ತಿಸಿ ಆಮೇಲೆ ಎರಡು ಸಿನಿಮಾ ಸೋತರೆ ಆತನನ್ನು ಕೆಳಗೆ ಜಗ್ಗುವ ಪ್ರಯತ್ನವೂ ತೊಲಗಬೇಕು. ಸಿನಿಮಾ ನಿರ್ಮಾಪಕನಿಗೆ ಸಿನಿಮಾ ಕಥೆ, ಮೇಕಿಂಗ್ ಬಗ್ಗೆ ಗೊತ್ತಿರಬೇಕು.

ಎಲ್ಲಾ ವಿಷಯಗಳ ಬಗ್ಗೆ ತಿಳಿದುಕೊಂಡು ಒಳ್ಳೆಯ ಸಿನಿಮಾ ಮಾಡಿ ಕೊಟ್ಟರೆ ಯಾಕೆ ಕನ್ನಡ ಪ್ರೇಕ್ಷಕರು ತಮಗೆ ಗೊತ್ತಿಲ್ಲದ ಭಾಷೆಯ ಚಿತ್ರಗಳನ್ನು ನೋಡುತ್ತಾರೆ? ಅದೆಲ್ಲಾ ಸುಳ್ಳು. ಮೊದಲು ನಾವು ಒಳ್ಳೆಯ ಚಿತ್ರಗಳನ್ನು ಮಾಡಿ ಪ್ರೇಕ್ಷಕರ ಮುಂದಿಡಬೇಕು. ಅದನ್ನು ಬಿಟ್ಟು ರೀಮೇಕ್ ಗೆ ಜೋತುಬೀಳುವುದು ಸರಿಯಲ್ಲ. ಡಬ್ಬಿಂಗ್ ಬೇಕೆ ಬೇಡವೇ ಎಂಬ ಚರ್ಚೆಯೂ ಅನಗತ್ಯ. ಯಾವುದೂ ಬೇಡ, ಕನ್ನಡದಲ್ಲಿ ಉತ್ತಮ ಚಿತ್ರಗಳು ಬರಲಿ, ಸಾಕು" ಎಂದಿದ್ದಾರೆ ರವಿಚಂದ್ರನ್. (ಒನ್ ಇಂಡಿಯಾ ಕನ್ನಡ)

English summary
Crazy Star Ravichandran told that he is fully against for Dubbing and Remake Movies too. According to Ravichandran, Kannada movies Industry has to do good quality movies. Then there is no need to dubbing or remake. 
 

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada