ಪತ್ತೆದಾರ ಸಾಹಸಸಿಂಹ ಇನ್ನೊಂದು ರಹಸ್ಯ ಭೇದಿಸಬೇಕಾಗಿದೆ!
ಪತ್ತೆದಾರಿ ಕಥೆಗಳೆಂದರೆ ಯಾರಿಗೆ ತಾನೆ ಇಷ್ಟವಿಲ್ಲ ಹೇಳಿ? ಚಿಕ್ಕಮಕ್ಕಳಿಂದ ಹಿಡಿದು ದೊಡ್ಡವರ ತನಕ ಎಲ್ಲರನ್ನೂ ಆದಿಯಿಂದ ಅಂತ್ಯದವರೆಗೂ ಓದಿಸಿಕೊಂಡು ಹೋಗುವ ಶಕ್ತಿ ಆ ಪುಸ್ತಕಗಳಿಗಿದೆ. ಅದರಲ್ಲೂ ನಮ್ಮ ನೆಚ್ಚಿನ ನಾಯಕನಟರ ಪತ್ತೆದಾರಿ ಕಥೆಗಳು ಕಾಮಿಕ್ ರೂಪದಲ್ಲಿ ಬಂದರೆ ಹೇಗೆ? ಅಭಿಮಾನಿಗಳಿಗೆ ಇದಕ್ಕಿಂತ ಖುಷಿ ಸಂಗತಿ ಇನ್ನೇನು ಇರಲಿಕ್ಕೆ ಸಾಧ್ಯ.
ಸಾಹಸಸಿಂಹ ಡಾ ವಿಷ್ಣುವರ್ಧನ್ ಅವರ ಕಾಮಿಕ್ ಸರಣಿಯ ಎರಡನೇ ಪುಸ್ತಕ ಇದೀಗ ಮಾರುಕಟ್ಟೆಯಲ್ಲಿ ಲಭ್ಯ. ಡಾ.ವಿಷ್ಣುವರ್ಧನ್ ಅವರ ಈ ಬಾರಿಯ ವಾರ್ಷಿಕ ಪುಣ್ಯ ಸ್ಮರಣೆಯಲ್ಲಿ (ಡಿಸೆಂಬರ್ 30) 'ಪತ್ತೇದಾರ ಸಾಹಸಸಿಂಹ - ಅರಣ್ಯದಲ್ಲಿ ಸಾಹಸ' ಕಾಮಿಕ್ ಸರಣಿಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಬಿಡುಗಡೆ ಮಾಡಿದ್ದಾರೆ. [ಕಾಮಿಕ್ ಸ್ಟ್ರಿಪ್ ನಲ್ಲಿ ಮತ್ತೆ ಹುಟ್ಟಿಬಂದ ವಿಷ್ಣುವರ್ಧನ್]

ಕನ್ನಡ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಹೊರತಂದಿರುವ 'ಪತ್ತೆದಾರ ಸಾಹಸಸಿಂಹ - ಅರಣ್ಯದಲ್ಲಿ ಸಾಹಸ' (Detective Sahasasimha - The Jungle Adventure) ಕಾಮಿಕ್ ಸರಣಿಯ ಎರಡನೇ ಭಾಗಕ್ಕೂ ನಾಡಿನಾದ್ಯಂತ ಅದ್ಭುತ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ ಎನ್ನುತ್ತಾರೆ ನಟ ಅನಿರುದ್ಧ್.

ಈ ಕಾಮಿಕ್ ಸರಣಿಯ ಬಹುತೇಕ ಕಂತುಗಳು ಸಾಮಾಜಿಕ ಸಮಸ್ಯೆಗಳಿಗೆ ಪರಿಹಾರ ಹುಡುಕುವುದೇ ಆಗಿದೆ. ಈ ಮೂಲಕ ಮಕ್ಕಳಿಗೆ ಮನರಂಜನೆ ಜೊತೆಗೆ ಶಿಕ್ಷಣ ನೀಡುವುದೇ ಆಗಿದೆ ಎನ್ನುತ್ತಾರೆ ಅನಿರುದ್ಧ್. ಇನ್ನೇಕೆ ತಡ ನಡುರಾತ್ರಿಯ ದರೋಡೆಗಳು ಮತ್ತು ಕಾಣೆಯಾದ ನಾಯಿಗಳ ನಿಗೂಢವನ್ನು ಬಯಲು ಮಾಡಲು ಸಾಹಸಸಿಂಹ ಅವರು ಅರಣ್ಯದ ಮಧ್ಯೆ ನಡೆಸುವ ಶೋಧದಲ್ಲಿ ನೀವೂ ಭಾಗಿಯಾಗಿ. (ಫಿಲ್ಮಿಬೀಟ್ ಕನ್ನಡ)


Click it and Unblock the Notifications











