ಧ್ರುವ ಸರ್ಜಾ ವಿರುದ್ಧ ₹9.58 ಕೋಟಿ ವಂಚನೆ ಆರೋಪ, FIR ದಾಖಲು; ದೂರ ಕೊಟ್ಟಿದ್ಯಾರು?
ಸ್ಯಾಂಡಲ್‌ವುಡ್‌ನಲ್ಲಿ ಮತ್ತೊಬ್ಬ ಸ್ಟಾರ್ ನಟ ವಿವಾದಕ್ಕೆ ಸಿಕ್ಕಿಕೊಂಡಿದ್ದಾರೆ. ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ವಿರುದ್ಧ ಮುಂಬೈನಲ್ಲಿ ₹9.58 ಕೋಟಿ ವಂಚಿಸಿದ ಆರೋಪ ಮೇಲೆ ಎಫ್‌ಐಆರ್ ದಾಖಲಾಗಿದೆ. ಮುಂಬೈನ ಅಂಬೋಲಿ ಪೊಲೀಸ್ ಠಾಣೆಯಲ್ಲಿ ಬಹುಕೋಟಿ ವಂಚನೆ ಮಾಡಿರುವ ಆರೋಪ ಹೊರಿಸಿ ದೂರನ್ನು ದಾಖಲು ಮಾಡಲಾಗದೆ. ಈ ಸುದ್ದಿ ಕನ್ನಡ ಚಿತ್ರರಂಗದಲ್ಲಿ ದೊಡ್ಡ ಸಂಚಲನವನ್ನೇ ಸೃಷ್ಟಿಸಿದೆ.
ಧ್ರುವ ಸರ್ಜಾ ವಂಚನೆ ಆರೋಪ ಮಾಡಿ ದೂರು ದಾಖಲಿಸಿರುವವರು ಮತ್ಯಾರು ಅಲ್ಲ. ಅದು 'ಜಗ್ಗುದಾದ' ಸಿನಿಮಾದ ನಿರ್ಮಾಪಕ ಕಮ್ ನಿರ್ದೇಶಕ ರಾಘವೇಂದ್ರ ಹೆಗಡೆ. ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟಿಸಿದ ಈ ಸಿನಿಮಾ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದರು. 'ಜಗ್ಗುದಾದ' ಬಳಿಕ ಧ್ರುವ ಸರ್ಜಾಗೆ ರಾಘವೇಂದ್ರ ಹೆಗಡೆ ಸಿನಿಮಾ ಮಾಡುತ್ತಾರೆಂಬ ಸುದ್ದಿ ಹಬ್ಬಿತ್ತು. ಆದರೆ, ಅಲ್ಲಿಂದ ಇಲ್ಲಿಗೂ ಆ ಸಿನಿಮಾ ಬಗ್ಗೆ ಸುಳಿವು ಇರಲಿಲ್ಲ. ಈಗ ಅದೇ ನಿರ್ಮಾಪಕ ಧ್ರುವ ಸರ್ಜಾ ವಿರುದ್ಧ ದೂರನ್ನು ದಾಖಲಿಸಿದ್ದಾರೆ.

2016ರಲ್ಲಿ ರಾಘವೇಂದ್ರ ಹೆಗಡೆ ತಮ್ಮ ಮೊದಲ ಸಿನಿಮಾ ಯಶಸ್ವಿಯಾದ ಬಳಿಕ ಇನ್ನೊಂದು ಸಿನಿಮಾ ಮಾಡುವ ತಯಾರಿಯಲ್ಲಿದ್ದರು. ಆ ವೇಳೆ ಧ್ರುವ ಸರ್ಜಾ ಇವರ ಕಚೇರಿಗೆ ತೆರಳಿ ಸಿನಿಮಾ ಮಾಡುವ ಇಚ್ಛೆ ವ್ಯಕ್ತಪಡಿಸಿದ್ದರು ಎಂದು ನಿರ್ದೇಶಕ ಕಮ್ ನಿರ್ಮಾಪಕ ರಾಘವೇಂದ್ರ ಹೆಗಡೆ ಅಂಬೋಲಿ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ. 2016 ರಿಂದ 2018ರವರೆಗೆ ಧ್ರುವ ಸರ್ಜಾ ನಿರಂತರವಾಗಿ ಸಿನಿಮಾ ಮಾಡುವುದಕ್ಕೆ ಒತ್ತಾಯ ಮಾಡಿದ್ದರು. ಅಷ್ಟೇ ಅಲ್ಲದೆ 'ದಿ ಸೋಲ್ಜರ್' ಎಂಬ ಸಿನಿಮಾದ ಸ್ಕ್ರಿಪ್ಟ್ ಕೊಟ್ಟಿದ್ದರು ಎಂದು ರಾಘವೇಂದ್ರ ಹೆಗಡೆ ಹೇಳಿದ್ದಾರೆ.
ಧ್ರುವ ಸರ್ಜಾ ನಿರಂತರ ಒತ್ತಾಯ ಮಾಡಿದ ಬಳಿಕ ರಾಘವೇಂದ್ರ ಹೆಗಡೆ ಈ ಪ್ರಾಜೆಕ್ಟ್ ಮಾಡುವುದಕ್ಕೆ ಒಪ್ಪಿಕೊಂಡಿದ್ದರು. ಇವರಿಬ್ಬರ ಪ್ರಾಜೆಕ್ಟ್‌ಗೆ ಸಹಿ ಹಾಕುವುದಕ್ಕೂ ಮುನ್ನ ₹3 ಕೋಟಿ ಅಡ್ವಾನ್ಸ್ ನೀಡುವಂತೆ ಧ್ರುವ ಸರ್ಜಾ ಕೇಳಿದ್ದರು. ಈ ಹಣದಿಂದ ಧ್ರುವ ಸರ್ಜಾ ಅವರು ಫ್ಲಾಟ್ ಖರೀದಿಸಿರಬಹುದು ಎಂದು ರಾಘವೇಂದ್ರ ಹೆಗಡೆ ದೂರಿನಲ್ಲಿ ಹೇಳಿದ್ದಾರೆ. ಅಡ್ವಾನ್ಸ್ ಪಡೆದ ವೇಳೆ ಧ್ರುವ ಸರ್ಜಾ ಶೀಘ್ರದಲ್ಲೇ ಸಿನಿಮಾ ಆರಂಭಿಸುವುದಾಗಿ ಭರವಸೆ ನೀಡಿದರು ಎಂದೂ ಹೇಳಿಕೊಂಡಿದ್ದಾರೆ.ಸ
ಹೀಗಾಗಿ ಧ್ರುವ ಸರ್ಜಾ ಅವರಿಗೆ ತಮ್ಮ ಆರ್‌ಎಚ್ ಎಂಟರ್‌ಟೈನ್‌ಮೆಂಟ್, ಆರ್‌ಎಸ್ 9 ಎಂಟರ್‌ಟೈನ್‌ಮೆಂಟ್ ನಿರ್ಮಾಣ ಸಂಸ್ಥೆಗಳ ಮೂಲಕ ಹಾಗೂ ವೈಯಕ್ತಿಕವಾಗಿ ಸುಮಾರು ₹3.15 ಕೋಟಿ ಹಣವನ್ನು ಧ್ರುವ ಸರ್ಜಾಗೆ ನೀಡಲಾಗಿದೆ. ಅಲ್ಲದೆ ಈ ಹಣವನ್ನು ಹೆಚ್ಚಿನ ಬಡ್ಡಿ ದರದಲ್ಲಿ ಸಾಲ ಪಡೆದು ನೀಡಲಾಗಿತ್ತು. ಫೆಬ್ರುವರಿ 21, 2019ರಂದು ಈ ಒಪ್ಪಂದಕ್ಕೆ ಸಹಿ ಹಾಕುವ ಮೊದಲೇ ಅಡ್ವಾನ್ಸ್ ರೂಪದಲ್ಲಿ ಹಣವನ್ನು ವರ್ಗಾವಣೆ ಮಾಡಲಾಗಿತ್ತು. ಈ ಒಪ್ಪಂದದ ಪ್ರಕಾರ, ಜನವರಿ 2020ರಲ್ಲಿ ಶೂಟಿಂಗ್ ಆರಂಭ ಆಗಿ, ಜೂನ್ 2020ರೊಳಗೆ ಮುಗಿಯಬೇಕಿತ್ತು ಎಂದು ದೂರಿನಲ್ಲಿ ತಿಳಿಸಿದ್ದಾರೆ.

ಆದರೆ, ಹಣವನ್ನು ಪಡೆದ ಬಳಿಕ ಧ್ರುವ ಸರ್ಜಾ ಪದೇ ಪದೇ ಶೂಟಿಂಗ್ ಅನ್ನು ಮುಂದಕ್ಕೆ ಹಾಕಿದ್ದರು. ಬಳಿಕ ತಮ್ಮ ಕರೆಗಳಿಗೆ ಪ್ರತಿಕ್ರಿಯೆ ನೀಡುವುದನ್ನೇ ನಿಲ್ಲಿಸಿದ್ದರು ಎಂದು ರಾಘವೇಂದ್ರ ಹೆಗಡೆ ದೂರಿನಲ್ಲಿ ಆರೋಪ ಮಾಡಿದ್ದಾರೆ. ಕೊವಿಡ್ ಬಳಿಕವೂ ಧ್ರುವ ಸರ್ಜಾ ಸಿನಿಮಾ ಮಾಡುವ ಬಗ್ಗೆ ಮಾತಾಡಲಿಲ್ಲ. ಜೊತೆಗೆ ಸ್ಕ್ರಿಪ್ಟ್‌ರೈಟರ್‌ಗಳು ಹಾಗೂ ಪಬ್ಲಿಸಿಟಿ ಮಾಡುವವರಿಗೆ ಹೆಚ್ಚು ಹಣವನ್ನು ನೀಡುವಂತೆ ಒತ್ತಾಯ ಮಾಡಿದ್ದರು. ಇದರಿಂದ ಒಟ್ಟು ವೆಚ್ಚ ₹3.43 ಕೋಟಿಗಿಂತಲೂ ಹೆಚ್ಚಾಗಿತ್ತು ಎಂದಿದ್ದಾರೆ.
ಕೊನೆಗೆ ಈ ಪ್ರಾಜೆಕ್ಟ್‌ನಿಂದ ಧ್ರುವ ಸರ್ಜಾ ಹಿಂದೆ ಸರಿದರು. ಈ ಪ್ರಾಜೆಕ್ಟ್‌ನಲ್ಲಿ ನಟಿಸುವುದಿಲ್ಲ ಎಂದು ಹೇಳಿದರು. ಇದರಿಂದ 2018ರಿಂದ 18 ಪ್ರತಿಶತ ಬಡ್ಡಿಯಂತೆ ತಮಗಾದ ನಷ್ಟವು ₹9.58 ಕೋಟಿ ಆಗಿದೆಯೆಂದು ರಾಘವೇಂದ್ರ ಹೆಗಡೆ ಹೇಳೀದ್ದಾರೆ. ಈ ಸಂಬಂಧ ಮುಂಬೈನ ಅಂಬೋಲಿಯುಲ್ಲಿ ಧ್ರುವ ಸರ್ಜಾ ವಿರುದ್ಧ ಭಾರತೀಯ ನ್ಯಾಯ ಸಂಹಿತೆ (BNS) ಸೆಕ್ಷನ್ 316(2) ಮತ್ತು 318(4)ರ ನಂಬಿಕೆ ದ್ರೋಹ, ವಂಚನೆ ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ದೂರ ಸ್ವೀಕರಿಸಿದ ಬಳಿಕ ಧ್ರುವಗೆ ಎರಡು ಬಾರಿ ಸಮನ್ಸ್ ಕಳುಹಿಸಲಾಗಿದೆ ಎಂದು ಅಂಬೋಲಿ ಪೊಲೀಸ್ ಠಾಣೆಯ API ಪ್ರದೀಪ್ ಫುಂಡೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ.
ಆ ಬಳಿಕ ಧ್ರುವ ಸರ್ಜಾ ಬೆಂಗಳೂರು ನ್ಯಾಯಾಲಯದಿಂದ 10 ದಿನಗಳ ಟ್ರಾನ್ಸಿಟ್ ನಿರೀಕ್ಷಣಾ ಜಾಮೀನು ಪಡೆದಿದ್ದಾರೆ. ಹಾಗೇ ಜುಲೈ 30ರಂದು ಡಿಂಡೋಷಿ ಸೆಷನ್ಸ್ ನ್ಯಾಯಾಲಯದಲ್ಲಿ ನಿರೀಕ್ಷಣಾ ಜಾಮೀನು ಕೋರಿದ್ದು, ಆಗಸ್ಟ್ 5ರಂದು ಸಂಬಂಧಪಟ್ಟ ಪೊಲೀಸ್ ಠಾಣೆ ತಮ್ಮ ಹೇಳಿಕೆ ಸಲ್ಲಿಸುವವರೆಗೆ ನ್ಯಾಯಾಲಯವು ಮಧ್ಯಂತರ ರಕ್ಷಣೆ ನೀಡಿದೆ. ಈ ಪ್ರಕರಣ ಈಗ ಆಗಸ್ಟ್ 14, 2025ಕ್ಕೆ ಮುಂದೂಡಲಾಗಿದೆ ಎಂದು ವರದಿಯಾಗಿದೆ.


Click it and Unblock the Notifications











