For Quick Alerts
  ALLOW NOTIFICATIONS  
  For Daily Alerts

  ಟಿ.ಎನ್. ಸೀತಾರಾಮ್ ಹಂಚಿಕೊಂಡ ತಾಯಿಯೊಬ್ಬಳ ಹೃದಯಕಲಕುವ ಪತ್ರ

  |

  ಬೆಂಗಳೂರು-ಕುಂದಾಪುರ ಖಾಸಗಿ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ಉಡುಪಿಯ ಬಳ್ಕೂರು ಗ್ರಾಮದ ನಿವಾಸಿ ಸುಹಾಸ್ ಎಸ್. ಮಯ್ಯ (22) ಎಂಬುವವರು ಮಾರ್ಚ್ 8ರ ಭಾನುವಾರ ರಾತ್ರಿ ಬಸ್‌ನಲ್ಲಿಯೇ ಹೃದಯಾಘಾತದಿಂದ ಮೃತಪಟ್ಟಿದ್ದರು. ಈ ಘಟನೆಗೆ ಖ್ಯಾತ ಕಿರುತೆರೆ ನಿರ್ದೇಶಕ ಟಿ.ಎನ್. ಸೀತಾರಾಂ ಮನಮಿಡಿದಿದ್ದಾರೆ.

  ಬೆಂಗಳೂರಿನಲ್ಲಿ ಎಂಜಿನಿಯರಿಂಗ್ ಓದುತ್ತಿರುವ ಅವರು ಊರಿಗೆ ತೆರಳುತ್ತಿದ್ದಾಗ ಹೃದಯಾಘಾತವಾಗಿತ್ತು. ಕುಂದಾಪುರದ ಮೂರುಕೈ ಬಳಿ ಬಸ್ಸಿನಲ್ಲಿದ್ದ ಎಲ್ಲ ಪ್ರಯಾಣಿಕರು ಇಳಿದರೂ ಸುಹಾಸ್ ಅವರು ತಮ್ಮ ಸೀಟಿನಲ್ಲಿಯೇ ಕುಳಿತಿದ್ದರು. ಇದನ್ನು ಗಮನಿಸಿದ ಬಸ್ ನಿರ್ವಾಹಕರು ಅವರು ಮಲಗಿದ್ದಾರೆಂದು ಭಾವಿಸಿ ಎಬ್ಬಿಸಲು ಹೋದಾಗ ಅವರು ಮೃತಪಟ್ಟಿರುವುದು ಗೊತ್ತಾಗಿತ್ತು. ಸುಹಾಸ್ ಅವರು ಪ್ರಯಾಣದ ಮಧ್ಯೆ ಎದೆ ನೋವಿನ ಅನುಭವ ಆಗುತ್ತಿದ್ದುದ್ದನ್ನು ಎರಡು ಬಾರಿ ನಿರ್ವಾಹಕರಿಗೆ ತಿಳಿಸಿದ್ದರು. ಆದರೂ ಅವರು ನಿರ್ಲಕ್ಷ್ಯವಹಿಸಿದರು. ಸಮಸ್ಯೆ ಹೇಳಿಕೊಂಡಾಗ ಬಸ್‌ಅನ್ನು ಆಸ್ಪತ್ರೆಯತ್ತ ಕೊಂಡೊಯ್ದು ದಾಖಲು ಮಾಡಿದ್ದರೆ ಅವರನ್ನು ಬದುಕಿಸಬಹುದಾಗಿತ್ತು ಎಂದು ಅವರ ತಾಯಿ ಅಲವತ್ತುಕೊಂಡಿದ್ದಾರೆ.

  ಸುಹಾಸ್ ತಾಯಿ ಉಡುಪಿ ಜಿಲ್ಲಾಧಿಕಾರಿಗೆ ಬರೆದ ಕರುಳು ಹಿಂಡುವಂತಹ ಪತ್ರವನ್ನು ಟಿ.ಎನ್. ಸೀತಾರಾಮ್, ಹಂಚಿಕೊಂಡಿದ್ದಾರೆ. ಆ ಪತ್ರದಲ್ಲಿ ಏನಿದೆ? ಮುಂದೆ ಓದಿ...

  ಮೌನ ಹೆಪ್ಪುಗಟ್ಟಿದೆ

  ಮೌನ ಹೆಪ್ಪುಗಟ್ಟಿದೆ

  ಮಾನ್ಯರಾದ ಉಡುಪಿಯ ದಕ್ಷ , ಪ್ರಾಮಾಣಿಕ ಜಿಲ್ಲಾಧಿಕಾರಿಯವರಿಗೊಂದು..... ಇದ್ದೊಬ್ಬ ಮಗನನ್ನು ಕಳೆದುಕೊಂಡು ಪುತ್ರ ಶೋಕದಲ್ಲಿರುವ ತಾಯಿಯೊಬ್ಬಳ ಬಹಿರಂಗ ಪತ್ರ.....

  ಸರ್ ನಮಸ್ತೇ,

  ಇವನು ನನ್ನ ಒಬ್ಬನೇ ಮಗ ಸುಹಾಸ್ ಎಸ್. ಮಯ್ಯ, 22 ವರ್ಷ. "ಪ್ರೆಸಿಡೆನ್ಸಿ ಯೂನಿವರ್ಸಿಟಿ ರಾಜನಕುಂಟೆ ಬೆಂಗಳೂರು" ಇಲ್ಲಿ 4ನೇ ವರ್ಷದ ಇಂಜಿನಿಯರಿಂಗ್ ಓದುತ್ತಿದ್ದ. ಮಾರ್ಚ್ 7 ರಂದು ಬೆಂಗಳೂರಿಂದ ಕುಂದಾಪುರಕ್ಕೆ ರಾತ್ರಿ 9:45 ರ ದುರ್ಗಾಂಬಾ ಬಸ್ಸಿನಲ್ಲಿ ಹೊರಟಿದ್ದ. ರಾತ್ರಿ 12:20 ಸಮಯಕ್ಕೆ ಹೋಟೆಲೊಂದರ ಬಳಿ ಬಸ್ ನಿಲ್ಲಿಸಿದಾಗ ಸುಹಾಸ್ ಚಹಾ ಕುಡಿದು ಮಿನರಲ್ ವಾಟರ್ ಬಾಟಲಿಯನ್ನು ತೆಗೆದುಕೊಂಡು ಬಂದಿದ್ದನಂತೆ.

  ಎದೆನೋವು ಎಂದರೂ ನಿರ್ವಾಹಕ ನಿರ್ಲಕ್ಷ್ಯ

  ಎದೆನೋವು ಎಂದರೂ ನಿರ್ವಾಹಕ ನಿರ್ಲಕ್ಷ್ಯ

  ಅಲ್ಲಿಯವರೆಗೂ ಚೆನ್ನಾಗಿಯೇ ಇದ್ದ ನನ್ನ ಮಗ ದಾರಿ ಮಧ್ಯೆ ಸುಸ್ತಾಗಿ ಎದೆ ನೋವು ಬರುತ್ತಿದೆ ಎಂದು ನಿರ್ವಾಕಹನ ಬಳಿ ಎರಡೆರಡು ಬಾರಿ ಹೇಳಿದ್ದಾನೆ. ಆದರೆ ದುರ್ಗಾಂಬಾ ಬಸ್ಸಿನ ನಿರ್ವಾಹಕ ಅವನ ಮಾತನ್ನು ತುಂಬಾ ಲಘುವಾಗಿ ತೆಗೆದುಕೊಂಡಿದ್ದಾನೆ. ಅಲ್ಲದೆ ಬಸ್ಸನ್ನು ನಿಲ್ಲಿಸಿ ಆಸ್ಪತ್ರೆಗೆ ಕರೆದುಕೊಂಡು ಹೋಗುವ ಯಾವುದೇ ಪ್ರಯತ್ನವನ್ನು ಮಾಡಲಿಲ್ಲ. ಆದ್ದರಿಂದಲೇ ನನ್ನ ಮಗ ದುರ್ಗಾಂಬಾ ಬಸ್ಸಿನ ನಿರ್ವಾಹಕರ ನಿರ್ಲಕ್ಷ್ಯದಿಂದ ಎದೆನೋವು ಜಾಸ್ತಿಯಾಗಿ ಹೃದಯಾಘಾತದಿಂದ ಮಾರ್ಗ ಮಧ್ಯದಲ್ಲೇ ಅಸುನೀಗಿದ್ದಾನೆ. ನನ್ನ ಮಗ ಎದೆ ನೋವು ಎಂದು ದುರ್ಗಾಂಬಾ ಬಸ್ಸಿನವರಲ್ಲಿ ಹೇಳುವಾಗ ಬಸ್ ಬಂಟ್ವಾಳ ದಲ್ಲಿತ್ತು ಎಂದು ಸಹ ಪ್ರಯಾಣಿಕರೇ ನನ್ನೊಂದಿಗೆ ಹೇಳಿಕೊಂಡಿದ್ದಾರೆ. ಇಂತಹ ಸಮಯ ಮತ್ತು ಸ್ಥಳದಲ್ಲಿ ದುರ್ಗಾಂಬ ಬಸ್ಸಿನವರು ಅಲ್ಲಿಯೇ ಯಾವುದಾದರೊಂದು ಆಸ್ಪತ್ರೆಗೆ ಕರೆದುಕೊಂಡು ಹೋಗಿ ನಂತರ ನಮಗೆ ತಿಳಿಸಬಹುದಿತ್ತು,

  ಬಸ್‌ನವರಿಂದ ಅಸಡ್ಡೆ ಉತ್ತರ

  ಬಸ್‌ನವರಿಂದ ಅಸಡ್ಡೆ ಉತ್ತರ

  ನನ್ನ ಮಗ ಕಾಲ್ ಮಾಡಿದರೆ ರಿಸೀವ್ ಮಾಡಿರಲಿಲ್ಲ. ಅದಕ್ಕೆ ಬಸ್ ಸೀಟ್ ಬುಕ್ ಮಾಡಿದ ಆಫೀಸ್‌ಗೆ ಸತತ ಅರ್ಧ ಗಂಟೆಯಷ್ಟು ಕಾಲ ಕರೆ ಮಾಡಿದರೂ ಆ ಕಡೆಯಿಂದ ಯಾವುದೇ ರೆಸ್ಪಾನ್ಸ್ ಇರಲಿಲ್ಲ,

  ಸುಮಾರು 45 ನಿಮಿಷದ ಬಳಿಕ ಅಂದರೆ ಬೆಳಿಗ್ಗೆ 6:30 ಕ್ಕೆ ಕಾಲ್ ಪಿಕ್ ಮಾಡಿ Bus On The Way ಇದೆ

  ಅಂತ ಮಾತನಾಡಲು ಅವಕಾಶ ಕೊಡದೆ ಜೋರು ಮಾಡಿ ಕಾಲ್ ಡಿಸ್ಕನೆಕ್ಟ್ ಮಾಡಿ ಬಿಟ್ಟರು. ಆದರೆ ಮಗ ಕಾಲ್ ರಿಸೀವ್ ಮಾಡದೇ ಇದ್ದಾಗ ಭಯದಿಂದಲೇ ಪುನಃ ಬುಕ್ಕಿಂಗ್ ಆಫೀಸ್‌ಗೆ ಕಾಲ್ ಮಾಡಿದೆ.

  ಕೇಳುವ ತಾಳ್ಮೆ ಇರಲಿಲ್ಲ

  ಕೇಳುವ ತಾಳ್ಮೆ ಇರಲಿಲ್ಲ

  ನಾನು ಈ ಕಡೆಯಿಂದ ಹೇಳುತ್ತಲೇ ಇದ್ದೆ ನನ್ನ ಮಗ ಕಾಲ್ ಪಿಕ್ ಮಾಡ್ತಾ ಇಲ್ಲ ದಯವಿಟ್ಟು ಬಸ್ಸಿನ ನಿರ್ವಾಹಕನ ಮೊಬೈಲ್ ನಂಬರ್ ಕೊಡಿ ಅಂತ ಎಷ್ಟೇ ರಿಕ್ವೆಸ್ಟ್ ಮಾಡಿದರು ಕೊಡಲಿಲ್ಲ. ಪುನಃ ಪದೇ ಪದೇ ಕಾಲ್ ಮಾಡ್ತಾನೇ ಇದ್ದೆ ಆದರೂ ಯಾವುದೇ ಸಕಾರಾತ್ಮಕ ಉತ್ತರ ಕೊಡುವ ಗೋಜಿಗೆ ಬಸ್ ಸಿಬ್ಬಂದಿ ಹೋಗಲಿಲ್ಲ. ತದನಂತರ ಬೆಳಿಗ್ಗೆ ಸುಮಾರು 6:50ರ ಸಮಯಕ್ಕೆ ಕಾಲ್ ಮಾಡಿ ಕೋಟೇಶ್ವರದಲ್ಲಿ ಇದ್ದೇವೆ ಅಂತ ಅಂದ್ರು, ಕೇಳೋ ತಾಳ್ಮೆ ಅವರಲ್ಲಿ ಇರಲಿಲ್ಲ.

  ಮಗ ಕಂಡಿದ್ದು ಹೆಣವಾಗಿ

  ಮಗ ಕಂಡಿದ್ದು ಹೆಣವಾಗಿ

  ಮತ್ತೆ ಅದೇ ಪ್ರಯತ್ನ, ಆದರೆ ರಿಸೀವ್ ಮಾಡಲೇ ಇಲ್ಲ, ನನ್ನ ಮಗನ ಸೀಟ್ ಬುಕ್ ಮಾಡಿಕೊಂಡ ದುರ್ಗಾಂಬ ಬಸ್ಸಿನವರು. ನನ್ನ ಗಂಡ ಇವಾಗ ಬಸ್ ಬಂದಿರಬಹುದು ಬಸ್ ಹತ್ತಿರ ಹೋಗುತ್ತೇನೆ ಅಂತ ಹೋಗಿ 20 ನಿಮಿಷಕ್ಕೆ ಬೇರೆ ಮೊಬೈಲ್ ನಂಬರ್‌ನಿಂದ ಕಾಲ್ ಮಾಡಿ 'ನಿಮ್ಮ ಮಗ ಮಾತಾಡ್ತಾ ಇಲ್ಲ' ಅಂತ ಹೇಳಿದರು. ಹೆತ್ತ ಕರುಳಿಗೆ ಹೇಗಾಗಬೇಡ ಸರ್.....?

  ಬೆಳಿಗ್ಗೆ 7:49ಕ್ಕೆ ಮತ್ತೆ ನನ್ನ ಗಂಡನಿಗೆ ತಿಳಿಸಿ ಕುಂದಾಪುರ ಶಾಸ್ತ್ರೀ ಪಾರ್ಕ್ ಹತ್ತಿರ ನಾವು ನನ್ನ ಮಗನನ್ನು ಬಸ್ಸಿನಲ್ಲಿ ಕಂಡಿದ್ದು ಹೆಣವಾಗಿ. ತುಂಬಾ ಒಳ್ಳೆಯ ಮಗ ಸುಹಾಸ್. ಅವನ ಗುಣ ನಡತೆಯಿಂದ ಸ್ಕೂಲ್‌ನಿಂದ ಹಿಡಿದು ಎಲ್ಲಾ ಕಡೆಯೂ ಒಳ್ಳೆಯ ಹೆಸರು ತೆಗೆದುಕೊಂಡಿದ್ದ. ನನ್ನ ಮಗನನ್ನು ನಾನು ಕಳೆದುಕೊಂಡೆ. ನನಗಾದ ಶಿಕ್ಷೆ ಇನ್ನೂ ಯಾವ ತಾಯಿಗೂ ಬೇಡ.

  ನನ್ನ ಸಂಕಟ ಅವರಿಗೆ ತಟ್ಟದಿರದು

  ನನ್ನ ಸಂಕಟ ಅವರಿಗೆ ತಟ್ಟದಿರದು

  ಅದಕ್ಕೆ ದಕ್ಷರಾದ, ಸಹೃದಯರಾದ ನಿಮ್ಮಲ್ಲಿ ನನ್ನದೊಂದು ಕಿರು ಮನವಿ..... ದುರ್ಗಾಂಬಾ ಸೇರಿದಂತೆ ಎಲ್ಲಾ ಬಸ್ಸಿನವರಿಗೂ ಸರಿಯಾದ ಬುದ್ಧಿ ಕಲಿಸಲು ನಿಮ್ಮಿಂದ ಸಾಧ್ಯ ಸರ್. ಇನ್ನೂ 100...200 ಹೆಚ್ಚು ಹಣ ತೆಗೆದುಕೊಂಡರು ಪರವಾಗಿಲ್ಲ. ಆದರೆ ಹೀಗೆ ನಿರ್ಲಕ್ಷ್ಯ ಮಾಡಿ ಜೀವ ತೆಗೆಯೋದು ಯಾವ ನ್ಯಾಯ ಸರ್ ?

  ಎಲ್ಲಾ ಮುಗಿದ ಮೇಲೆ ಸಾರಿ ಕೇಳುತ್ತಾರೆ ಸರ್..... ಹೆತ್ತ ತಾಯಿಯ ಹೊಟ್ಟೆ ಎಷ್ಟು ಉರಿಯುತ್ತಿದೆ ಅನ್ನೋದು ಬಸ್ ಮಾಲೀಕರಿಗೆ ಗೊತ್ತಾ....ಇರುವ ಒಬ್ಬನೇ ಮಗನನ್ನು ಕಳೆದುಕೊಂಡ ನನ್ನ ಸಂಕಟ ಅವರಿಗೆ ತಟ್ಟದೇ ಇರುವುದಿಲ್ಲ.

  ಎಲ್ಲಾ ಬಸ್ಸಿವರಿಗೂ ಒಂದು ಖಡಕ್ ಸಂದೇಶ ನಿಮ್ಮ ಕಡೆಯಿಂದ ರವಾನಿಸಿ. ಹೆತ್ತವರು ಮಕ್ಕಳ ಬಗ್ಗೆ ಏನೇನೋ ಆಸೆ ಆಕಾಂಕ್ಷೆ ಇಟ್ಟುಕೊಂಡಿರುತ್ತಾರೆ.....ಈ ಹೆತ್ತಬ್ಬೆಯ ಸಂಕಟ ಅವರನ್ನು ಸುಮ್ಮನೆ ಬಿಡುವುದಿಲ್ಲ..... ನಮಗಾದ ಅನ್ಯಾಯ ಇನ್ಮುಂದೆ ಯಾರಿಗೂ ಆಗಬಾರದು ಸರ್.

  ಕಣ್ಮುಚ್ಚಿದರೆ ಅವನೇ ಬರುತ್ತಾನೆ

  ಕಣ್ಮುಚ್ಚಿದರೆ ಅವನೇ ಬರುತ್ತಾನೆ

  ಇದೆಲ್ಲಾ ಸನ್ನಿವೇಶಗಳು ನಡೆದು ಒಂದು ವಾರ ಆಯ್ತು ಸರ್. ಪುತ್ರ ಶೋಕ ನಿರಂತರಂ ಎನ್ನುವಂತೆ ಅವನ ಅಗಲಿಕೆಯ ನೋವು ನಮಗೆಂದಿಗೂ ಹೋಗುವುದಿಲ್ಲ. ಹೋದ ಶನಿವಾರ ನನ್ನ ಹತ್ತಿರ ಚೆನ್ನಾಗಿ ಮಾತಾಡಿ ಹೊರಟಿದ್ದ ಮಗು ಇಂದು ನಮ್ಮೊಂದಿಗೆ ಇಲ್ಲ ಎಂದರೆ ಯಾವ ತಾಯಿ ಅರಗಿಸಿಕೊಳ್ಳುತ್ತಾಳೆ ಹೇಳಿ ಸರ್? ಇವತ್ತಿಗೂ ಊಟ ಮಾಡೋಕೆ ಆಗೊಲ್ಲ, ನಿದ್ರೇನೂ ಸರಿಯಾಗಿ ಬರ್ತಾ ಇಲ್ಲ. ಕಣ್ಮುಚ್ಚಿದರೆ ಅವನು ಕಣ್ಮುಂದೆ ಬಂದಂತೆ ಭಾಸವಾಗುತ್ತದೆ ಸರ್ ನಮಗೆ.

  ನಮಗಾದ ಅನ್ಯಾಯ ಇನ್ಯಾರಿಗೂ ಆಗಬಾರದು ಎಂಬುದೇ ನನ್ನ ಉದ್ದೇಶ ಸರ್. ಮಾನ್ಯ ಉಡುಪಿ ಜಿಲ್ಲೆಯ ಜಿಲ್ಲಾಧಿಕಾರಿಗಳಾದ ಜಗದೀಶ್ ಸರ್....ನೀವು ನನ್ನ ಮಗನ ಸಾವಿನ ವಿಷಯದಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುತ್ತೀರೆಂದು ನಂಬಿದ್ದೇನೆ. ನಿರೀಕ್ಷೆ ಜಾರಿಯಲ್ಲಿದೆ.....!!

  ನಿಮ್ಮ ಕ್ರಮದ ನಿರೀಕ್ಷೆಯಲ್ಲಿ....

  ನೊಂದ ತಾಯಿ

  English summary
  Director TN Seetharam has shared a heart rending letter by a mother who lost his young son by heart attack in a bus.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X