»   » ಹನ್ನೆರಡು ವರ್ಷಗಳ ಹಿಂದೆ: ಈ ದಿನ ಕರಾಳ ದಿನ

ಹನ್ನೆರಡು ವರ್ಷಗಳ ಹಿಂದೆ: ಈ ದಿನ ಕರಾಳ ದಿನ

Posted By:
Subscribe to Filmibeat Kannada
Dr Rajkumar kidnap and Amavasya
ಕನ್ನಡ ಚಿತ್ರರಂಗದಲ್ಲಿ ಎಂದೆಂದಿಗೂ ಮರೆಯಲಾಗದ ಕರಾಳ ನೆನಪು ಇದು. ಈ ದಿನ ಬಂತೆಂದರೆ ಸಾಕು ಕಾಲಚಕ್ರ 12 ವರ್ಷಗಳ ಹಿಂದಕ್ಕೆ ಹೊರಳುತ್ತದೆ. ಅಂದು ಭೀಮನ ಅಮಾವಾಸ್ಯೆ. ಪತಿಯೇ ಪರದೈವ ಎಂದು ಭಾವಿಸಿರುವ ಮಹಿಳೆಯರ ಪಾಲಿಗೆ ಪವಿತ್ರ ದಿನವದು. ಇಂತಹ ಪವಿತ್ರ ದಿನದಂದು ಈ ರೀತಿ ನಡೆಯುತ್ತದೆ ಎಂದು ಯಾರೂ ಊಹಿಸಿರಲಿಲ್ಲ.

ಈ ಘಟನೆ ನಡೆದದ್ದು ಜುಲೈ 30, 2000ನೇ ವರ್ಷದಲ್ಲಿ. ಅಂದು ಭೀಮನ ಅಮಾವಾಸ್ಯೆ. ಸಾಮಾನ್ಯವಾಗಿ ಗಂಡನ ಪೂಜೆ ಎಂದು ಕರೆಯುತ್ತಾರೆ. ವರ್ಷದ ಮುನ್ನೂರೈವತ್ತು ದಿನವೂ ಗಂಡನಿಗೆ ಪ್ರತಿ ದಿನವೂ ಪೂಜೆ ಮಾಡುವ ಪತಿವ್ರತೆಯರು ಈ ದಿನ ಗಂಡನಿಗೆ ಊದುಬತ್ತಿ ಹೊತ್ತಿಸಿ ವಿಶೇಷ ಪೂಜೆ ಮಾಡುವ ಪದ್ಧತಿ ಇದೆ.

ಹೆಣ್ಣು ಮಕ್ಕಳು ಮದುವೆಯಾದ ಬಳಿಕ ಒಂಭತ್ತು ವರ್ಷ ಈ ವ್ರತಾಚರಣೆ ಮಾಡಿದರೆ ಒಳ್ಳೆಯದಾಗುತ್ತದೆ ಎಂಬ ನಂಬಿಕೆ ಹಿಂದೂ ಸಂಪ್ರದಾಯದಲ್ಲಿದೆ. ಇಂತಹ ಗಂಡನ ಪೂಜೆ ದಿನ ಕನ್ನಡಿಗರ ಕಣ್ಮಣಿ ವರನಟ ಡಾ. ರಾಜ್ ಕುಮಾರ್ ಅವರನ್ನು ನರಹಂತಕ ವೀರಪ್ಪನ್ ಅಪಹರಿಸಿ ಕಾಡಿಗೆ ಕದ್ದೊಯ್ದರೆ ಆ ಮಹಾ ಸಾಧ್ವಿ ಪಾರ್ವತಮ್ಮನವರಿಗೆ ಹೇಗಾಗಿರಬೇಡ?

ಇನ್ನು ತನ್ನ ಅಭಿಮಾನಿ ದೇವರುಗಳ ಪಾಡು ಹೇಗಾಗಿರಬಹುದು. ಕನ್ನಡ ಚಿತ್ರರಸಿಕರ ಪಾಲಿಗೆ ಮರೆಯಲಾಗದ ದುರಂತ ದಿನ. ಈ ಭೀಮನ ಅಮಾವಾಸ್ಯೆಗೆ ರಾಜ್ ಅಪಹರಣವಾಗಿ ಸರಿಯಾಗಿ ಹನ್ನೆರಡು ವರ್ಷಗಳು ತುಂಬುತ್ತವೆ. ಕನ್ನಡಿಗರು ಮರೆಯಲಾಗದ ಕಪ್ಪು ದಿನಕ್ಕೆ ಈ ಅಮಾವಾಸ್ಯೆಯ ದಿನ ಸೇರ್ಪಡೆಯಾಗಿದೆ. [ರಾಜ್ ಅಪಹರಣವಾಗಿದ್ದು ಹೀಗೆ]

ಈ ಸಂದರ್ಭಕ್ಕೆ ರಾಜ್ ಅಪಹರಣದ ಸುದ್ದಿಯ ಕೆಲವು ಸುದ್ದಿ ಚಿತ್ರಗಳು ಈಗಲೂ ನಮ್ಮ ಕಣ್ಣಿಗೆ ಕಟ್ಟಿದಂತಿವೆ. ಸುಸಜ್ಜಿತ ಮನೆಯಲ್ಲಿ, ಸಂಸಾರ ಸಮೇತ ಬಾಳುತ್ತಿದ್ದ ಒಬ್ಬ ಸುಸಂಸ್ಕೃತ ವ್ಯಕ್ತಿ ಕಾಡುಮೇಡುಗಳಲ್ಲಿ 108 ದಿನ ಅಲೆಯಬೇಕಾದ ವಿಧಿ ವಿಚಿತ್ರವನ್ನು ಊಹಿಸಿಕೊಂಡರೆ ಎಂಥಹವರಿಗೂ ಮೈ ಝುಂ ಎನ್ನದೇ ಇರುವುದಿಲ್ಲ.

ಭೀಮನ ಅಮಾಸ್ಯೆಯಂದು ರಾಜ್ ಅವರ ಸ್ಮರಣೆ ಮಾಡುವುದು ಅನೇಕ ದೃಷ್ಟಿಕೋನಗಳಿಂದ ಅರ್ಥಪೂರ್ಣವಾಗುತ್ತದೆ. ದಕ್ಷಿಣ ಭಾರತದಲ್ಲಿ ತಾಂಡವವಾಡುತ್ತಿದ್ದ ಭಯೋತ್ಪಾದನೆ, ಆನೆಗಳ ಸಾವು, ದಂತ ಕಳ್ಳತನ, ಶ್ರೀಗಂಧದ ಮರ ಕಳ್ಳ ಸಾಗಾಣಿಕೆ ಮತ್ತು ಎಲ್ಲಕ್ಕಿಂತ ಹೆಚ್ಚಾಗಿ ನಿರಪರಾಧಿ, ಕರ್ತವ್ಯ ನಿರತ ಪೊಲೀಸ್ ಮತ್ತು ಅಮಾಯಕ ಪ್ರಜೆಗಳ ದಾರುಣ ಹತ್ಯೆಯನ್ನು ಸಾಂಕೇತಿಕವಾಗಿ ವಿರೋಧಿಸುವ ಸಂದರ್ಭ ಇದಾಗಿದೆ.

ಅಲ್ಲದೆ, ಶಿಸ್ತಿಗೆ ಕಾರ್ಯತತ್ಪರತೆಗೆ, ಅಭಿನಯಕ್ಕೆ ಮತ್ತು ಸರಳ ಜೀವನಕ್ಕೆ ಇನ್ನೊಂದು ಹೆಸರಾಗಿದ್ದ ರಾಜ್ ಕುಮಾರ್ ಅವರ ವೃತ್ತಿ ಮತ್ತು ಜೀವನದ ಆದರ್ಶಗಳನ್ನು ಮೈಗೂಡಿಸಿಕೊಳ್ಳುವುದರತ್ತ ಪ್ರತಿಜ್ಞೆ ಮಾಡುವುದಕ್ಕೆ ಕನ್ನಡ ಚಿತ್ರೋದ್ಯಮಕ್ಕೆ ಈ ದಿನಕ್ಕಿಂತ ಒಳ್ಳೆಯ ಇನ್ನೊಂದು ಸುದಿನ ಇರಲಾರದು. ಒಂದು ಚಿತ್ರದಲ್ಲಿ ಕೆಲಸಮಾಡಿ, ಐದು ನಿಮಿಷದ ಟಿವಿ ಸಂದರ್ಶನ ಕೊಟ್ಟವರೆಲ್ಲ ಬಹಳ ಸಾಧಿಸಿದವರಂತೆ ಭಾವಿಸುವ ಮನೋಭಾವ ಅಳಿಯಬೇಕು.

ಕಲಾಸೇವೆ, ಜತೆಗಾರರ ಚಿತ್ರ ಕರ್ಮಿಗಳಿಗೆ ಗೌರವ ಮತ್ತು ಉತ್ತಮ ಸಂದೇಶ ಬೀರುವ ಕೌಟುಂಬಿಕ ಚಿತ್ರಗಳನ್ನು ನಿರ್ಮಿಸದೆ ಅದೇ ಕಚಪಚ ಚಿತ್ರಗಳನ್ನು ತೆಗೆಯುತ್ತಾ ಹೋಗುತ್ತಿದ್ದರೆ ಕನ್ನಡದ ಹಿರಿಯ ಚಿತ್ರ ಕರ್ಮಿಗಳಿಗೆ ನಿಜವಾದ ಗೌರವ ತೋರಿದಂತಾಗುವುದಿಲ್ಲ. ಭೀಮನ ಅಮಾವಾಸ್ಯೆಯ ಕತ್ತಲೆ ದಾರಿ ದೂರ, ಇನ್ನೂ ದೂರ ಆಗುತ್ತದೆ, ಅಷ್ಟೆ. (ಒನ್ ಇಂಡಿಯಾ ಕನ್ನಡ)

English summary
Kannada matinee idol Dr. Rajkumar was kidnapped on Bheemana Amavasya day (30th July 2000) which has completed 12 years. How do you think these two-Mr. Veerappan and Dr. Rajkumar who were of opposite in character stayed along and spent 108 days in the thick forest only with a radio to entertain. How was the daily routine of Dr. Raj.
Please Wait while comments are loading...