For Quick Alerts
  ALLOW NOTIFICATIONS  
  For Daily Alerts

  ದರ್ಶನ್ ಮೇಲೆ ಚಪ್ಪಲಿ ಎಸೆತ ವಿವಾದ ಕುರಿತು ಪ್ರತಿಕ್ರಿಯಿಸಿದ ದುನಿಯಾ ವಿಜಯ್

  |

  ಹೊಸಪೇಟೆಯಲ್ಲಿ ನಡೆದ ಕ್ರಾಂತಿ ಚಿತ್ರದ ಎರಡನೇ ಹಾಡು ಬಿಡುಗಡೆ ಕಾರ್ಯಕ್ರಮದ ವೇಳೆ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಮೇಲೆ ಕಿಡಿಗೇಡಿಯೋರ್ವ ಚಪ್ಪಲಿ ಎಸೆದದ್ದು ಸದ್ಯ ಚಂದನವನವನ್ನು ಅಲ್ಲೋಲ ಕಲ್ಲೋಲವಾಗುವಂತೆ ಮಾಡಿದೆ. ಹಾಡು ಬಿಡುಗಡೆಗೂ ಮುನ್ನ ದರ್ಶನ್ ಹಾಗೂ ಪುನೀತ್ ರಾಜ್‌ಕುಮಾರ್ ಅಭಿಮಾನಿಗಳ ನಡುವೆ ಫ್ಯಾನ್ ವಾರ್ ನಡೆದಿದ್ದ ಕಾರಣ ಈ ಕೃತ್ಯವನ್ನೂ ಸಹ ಪುನೀತ್ ರಾಜ್‌ಕುಮಾರ್ ಅಭಿಮಾನಿಗಳೇ ಎಸಗಿದ್ದಾರೆ ಎಂದು ದರ್ಶನ್ ಅಭಿಮಾನಿಗಳು ಆರೋಪಿಸಿದ್ದಾರೆ. ಆದರೆ ಈ ಕೆಲಸವನ್ನು ಪುನೀತ್ ರಾಜ್‌ಕುಮಾರ್ ಅಭಿಮಾನಿಗಳು ಮಾಡಿದ್ದಲ್ಲ, ಯಾರೋ ಮೂರನೇ ವ್ಯಕ್ತಿಗಳು ಮಾಡಿ ತಂದಿಟ್ಟು ತಮಾಷೆ ನೋಡುತ್ತಿದ್ದಾರೆ ಎಂದು ಅಪ್ಪು ಅಭಿಮಾನಿಗಳು ಪ್ರತಿವಾದಿಸುತ್ತಿದ್ದಾರೆ. ಸದ್ಯ ಈ ವಿಚಾರ ಕೂಡ ಇಬ್ಬರ ಅಭಿಮಾನಿಗಳ ನಡುವೆ ವಾರ್‌ಗೆ ಕಾರಣವಾಗಿದೆ.

  ಈ ವಿಕೃತ ಘಟನೆ ಕುರಿತು ಚಂದನವನದ ಬಹುತೇಕ ಎಲ್ಲಾ ನಟ ಹಾಗೂ ನಟಿಯರೂ ಸಹ ಮಾತನಾಡಿದ್ದು, ಕಿಡಿಗೇಡಿಯ ವಿರುದ್ಧ ಕಿಡಿಕಾರಿ ದರ್ಶನ್ ಬೆಂಬಲಕ್ಕೆ ನಿಂತಿದ್ದಾರೆ. ನಟನೋರ್ವನಿಗೆ ತೊಂದರೆಯಾದಾಗ ಘನತೆಗೆ ಕೆಡುಕಾದಾಗ ವೈಮನಸ್ಸನ್ನೂ ಮೀರಿ ಸ್ನೇಹಿತರು ಬೆನ್ನ ಹಿಂದೆ ನಿಲ್ಲುತ್ತಾರೆ ಎಂಬುದಕ್ಕೆ ಕಿಚ್ಚ ಸುದೀಪ್ ದರ್ಶನ್ ಅವರನ್ನು ಬೆಂಬಲಿಸಿ ಮಾಡಿದ್ದ ಟ್ವೀಟ್ ಸಾಕ್ಷಿ. ಇದೇ ಸಾಲಿಗೆ ಇದೀಗ ದುನಿಯಾ ವಿಜಯ್ ಸಹ ಸೇರ್ಪಡೆಗೊಂಡಿದ್ದಾರೆ.

  ಹೌದು, ಈ ಹಿಂದೆ ಕುಚಿಕು ಗೆಳೆಯರಾಗಿದ್ದ ದುನಿಯಾ ವಿಜಯ್ ಹಾಗೂ ದರ್ಶನ್ ಇತ್ತೀಚೆಗಿನ ದಿನಗಳಲ್ಲಿ ಹೆಚ್ಚಾಗಿ ಒಟ್ಟಿಗೆ ಕಾಣಿಸಿಕೊಂಡಿರಲಿಲ್ಲ ಹಾಗೂ ಮೊದಲಿನ ಹಾಗೆ ಸ್ನೇಹ ಸಂಬಂಧವನ್ನು ತೋರಿಸಿಕೊಂಡಿರಲಿಲ್ಲ. ಆದರೆ ಈ ಘಟನೆ ನಡೆದ ನಂತರ ದುನಿಯಾ ವಿಜಯ್ ಘಟನೆಯ ಬಗ್ಗೆ ಬರೆದುಕೊಳ್ಳುವುದರ ಮೂಲಕ ದರ್ಶನ್ ಅವರ ಬೆಂಬಲಕ್ಕೆ ನಿಂತಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿನ ತಮ್ಮ ಅಧಿಕೃತ ಖಾತೆಯಲ್ಲಿ ಟ್ವೀಟ್ ಮಾಡಿರುವ ದುನಿಯಾ ವಿಜಯ್ ಹೊಸಪೇಟೆಯಲ್ಲಿ ನಡೆದ ಘಟನೆ ಮನಸ್ಸಿಗೆ ನೋವುಂಟು ಮಾಡಿದೆ ಎಂದು ಬರೆದುಕೊಂಡಿದ್ದಾರೆ.

  ದುನಿಯಾ ವಿಜಯ್ ತಮ್ಮ ಖಾತೆಯಲ್ಲಿ ಈ ರೀತಿ ಬರೆದುಕೊಂಡಿದ್ದಾರೆ:

  "ಹೊಸಪೇಟೆಯಲ್ಲಿ ನಡೆದ ಅಮಾನವೀಯ ಘಟನೆ ನಿಜಕ್ಕೂ ಮನಸ್ಸಿಗೆ ತುಂಬಾನೇ ನೋವುಂಟು ಮಾಡಿದೆ. ನಾವು ಕಲಾವಿದರು.. ಹಾಡುತ್ತೇವೆ ಕುಣಿಯುತ್ತೇವೆ ಏಳುತ್ತೇವೆ ಬೀಳುತ್ತೇವೆ ಎಲ್ಲವನ್ನೂ ಮಾಡುವುದು ಅಭಿಮಾನಿಗಳನ್ನು ರಂಜಿಸಲು ಮಾತ್ರ. ಕಲಾವಿದರ ಮಧ್ಯೆ ಅಣ್ಣತಮ್ಮಂದಿರ ಸಂಬಂಧವಿದ್ದರೆ , ಕಲಾವಿದರು ಮತ್ತು ಅಭಿಮಾನಿಗಳ ಮಧ್ಯೆ ಅವ್ವ ಮಕ್ಕಳ ಸಂಬಂಧವಿರುತ್ತದೆ . ಹೌದು ಅಭಿಮಾನಿಗಳು ಅಂದ್ರೆ ನಮ್ಮ ತಟ್ಟೆಗೆ ಅನ್ನ ಬಡಿಸುವ ಅವ್ವಂದಿರೇ . ಯಾರೋ ಒಬ್ಬ ಸಣ್ಣಮನಸ್ಸಿನ ವ್ಯಕ್ತಿಯು ಮಾಡಿದ ಹೇಯ ಕೃತ್ಯದಿಂದ ಈ ಅನ್ಯೋನ್ಯ ಸಂಬಂಧ ಹಾಳಾಗಬಾರದು. ನಾನು ನಿಮ್ಮಲ್ಲಿ ಕೈಮುಗಿದು ಕೇಳಿಕೊಳ್ಳುತ್ತೇನೆ.. ದಯವಿಟ್ಟು ನಮ್ಮ ನಡುವೆಯೇ ಆಗಲಿ ನಮ್ಮ ಅಭಿಮಾನಿಗಳ ಮಧ್ಯೆಯೇ ಆಗಲಿ ದ್ವೇಷವನ್ನು ಹರಡದಿರಿ"

  English summary
  Duniya Vijay reacted about slipper throw on Darshan incident. Read on
  Tuesday, December 20, 2022, 21:00
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X